ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಹುಭಾಷಾ ಒಡನಾಟದಿಂದ ಕನ್ನಡ ಸತ್ವಪೂರ್ಣ'

Last Updated 8 ಏಪ್ರಿಲ್ 2013, 8:55 IST
ಅಕ್ಷರ ಗಾತ್ರ

ಮಂಗಳೂರು: `ಕರಾವಳಿಯಲ್ಲಿ ಕನ್ನಡ ಜತೆ ತುಳು, ಕೊಂಕಣಿ, ಬ್ಯಾರಿ ಭಾಷೆಗಳೂ ಆಡುನುಡಿಗಳು. ಬಹು ಭಾಷೆಗಳ ಒಡನಾಟದಿಂದಾಗಿಯೇ ಇಲ್ಲಿನ ಕನ್ನಡ ಹೆಚ್ಚು ಸತ್ವಪೂರ್ಣವಾಗಿದೆ' ಎಂದು ಲೇಖಕಿ ಲೀಲಾವತಿ ಎಸ್.ರಾವ್ ಅಭಿಪ್ರಾಯಪಟ್ಟರು.

ಕುಳಾಯಿಯಲ್ಲಿ ಭಾನುವಾರ ನಡೆದ ಮಂಗಳೂರು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಇಂದಿನದು ತಂತ್ರಜ್ಞಾನದ ಯುಗ. ಇಂಟರ್ನೆಟ್‌ನಲ್ಲಿ ಕುಳಿತಲ್ಲಿಂದಲೇ ಜಗತ್ತಿನ ಎಲ್ಲ ಆಗುಹೋಗುಗಳನ್ನು ಕಾಣಬಹುದು. ಯಾವ ಶುಲ್ಕವನ್ನೂ ನೀಡದೆ ಬೇಕಾದ ಮಾಹಿತಿಯನ್ನೂ ಪಡೆಯಬಹುದು. ಪುಸ್ತಕಗಳನ್ನು ಜಾಲಾಡಬಹುದು. ಭಾಷಾಂತರವನ್ನೂ ತಕ್ಷಣವೇ ಪಡೆಯಬಹುದು. ಕೃತಿಗಳನ್ನು ಪ್ರಕಟಿಸಿ ಮಾರಾಟವನ್ನೂ ಮಾಡಬಹುದು. ಕಿಂಡಲ್ ಇ ಬುಕ್ ರೀಡರ್‌ನಲ್ಲಿ ಸಾವಿರದಷ್ಟು ಪುಸ್ತಕಗಳನ್ನು ಸೇರಿಸಬಹುದು. ಯಾವುದೇ ಬರಹವನ್ನು ಯಾವಾಗ ಬೇಕಾದರೂ ಓದಿಕೊಳ್ಳಬಹುದು' ಎಂದರು.

`ಈಗ ಯಾರಿಗೂ ಪುರುಸೊತ್ತಿಲ್ಲ. ಅದಕ್ಕಾಗಿ ಧ್ವನಿಮುದ್ರಿತ ಪುಸ್ತಕ ಅಥವಾ ಓದು ಕಾದಂಬರಿಗಳು ಬಂದಿವೆ. ಪ್ರಯಾಣಿಸುವಾಗ, ಅನ್ಯ ಕೆಲಸ ನಿರತರಾಗಿದ್ದಾಗಲೂ ಕತೆ, ಕಾದಂಬರಿ, ಕವನ ನಾಟಕಗಳನ್ನು ಆಲಿಸಬಹುದು. ಸ್ನೇಹಿತರೆಲ್ಲಾ ಒಟ್ಟಾಗಿ ಪುಸ್ತಕವನ್ನು ಆಲಿಸಿ ವಿಮರ್ಶಿಸಬಹುದು.

ಇದೊಂದು ರೀತಿ ಹಿಂದಿನ ಕಾವ್ಯವಾಚನ ಪದ್ಧತಿಯಂತೆ. ತಂತ್ರಜ್ಞಾನದಿಂದ ಎಷ್ಟೇ ಅನುಕೂಲಗಳಿದ್ದರೂ ಭಾಷೆ ಸಂಸ್ಕೃತಿಯ ಅಳಿವು- ಉಳಿವಿನ ಪ್ರಶ್ನೆ ಎದುರಾದಾಗ ನಾವು ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.

`ಸಮೂಹಮಾಧ್ಯಮಗಳು ಯುವಜನತೆ ಹಾಗೂ ಮಕ್ಕಳ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿವೆ. ಟಿ.ವಿ ಭರಾಟೆಯಲ್ಲಿ ಸಾಹಿತ್ಯ, ಜನಪದ ಪ್ರಕಾರಗಳು ಸಂಪ್ರದಾಯದ ಹಾಡುಗಳು, ಸೋಬಾನೆ ಪದಗಳು, ಜನಪದ ಕ್ರೀಡೆಗಳು ಕಣ್ಮರೆಯಾಗಿವೆ. ಸಾಮಾಜಿಕ ಸಂಬಂಧ ಕಡಿದುಹೋಗುತ್ತಿದೆ. ಟಿ.ವಿ. ಹಾಗೂ ಎಫ್.ಎಂ.ರೇಡಿಯೊಗಳಿಂದ ಕನ್ನಡ ಕಂಗ್ಲಿಷ್ ಆಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

`ಗಡಿಪ್ರದೇಶದ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ತಮಿಳುನಾಡು ಸರ್ಕಾರ ತಳೆದಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯ ನೆಪ ಹೇಳಿ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಾವಲು ಸಮಿತಿ ರಕ್ಷಣಾ ವೇದಿಕೆಗಳಿದ್ದರೂ ಇಂತಹ ಬೆಳವಣಿಗೆಗಳು ನಡೆಯುತ್ತವೆ. ಕನ್ನಡಿಗನ ಬದುಕನ್ನು ಕಟ್ಟಿಕೊಡಲು ಸರ್ಕಾರ ಮತ್ತು ಸಮಾಜ ಕಟಿಬದ್ಧವಾಗದ ಹೊರತು ಇಂತಹ ಸಮಸ್ಯೆಗಳಿಗೆ ಮುಕ್ತಿ ಇಲ್ಲ' ಎಂದು ಎಚ್ಚರಿಸಿದರು.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕುಳಾಯಿ ವೆಂಕಟರಮಣ ಶಾಲೆಯಿಂದ ಕನ್ನಡ ಭೂವನೇಶ್ವರ ದಿಬ್ಬಣ ನಡೆಯಿತು. ಸಮ್ಮೇಳನಾಧ್ಯಕೆ ಲೀಲಾವತಿ ರಾವ್ ಅವರನ್ನು ಹಳೆಯ ಕಾರಿನಲ್ಲಿ (1932ರ ಮಾಡೆಲ್) ಮೆರವಣಿಗೆಯಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT