ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತವಿದ್ದು ಸೋತ ರಾಜೀವ್: ಅಲ್ಪಮತದಲ್ಲೂ ಗೆದ್ದ ರಾವ್

Last Updated 12 ಜನವರಿ 2014, 19:30 IST
ಅಕ್ಷರ ಗಾತ್ರ

ದು 1988ನೇ ಇಸ್ವಿ. ಆಗ ಕರ್ನಾಟಕ­ದಲ್ಲಿ­ದ್ದುದು ಜನತಾ ಪಕ್ಷದ ಸರ್ಕಾರ. ಒಂದು ವರ್ಷದ ಹಿಂದಷ್ಟೇ ಜಾರಿಗೆ ತಂದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾ­ಯತ್ ಪ್ರಯೋಗ ದೇಶ­ವ್ಯಾಪಿ­ಯಾಗಿ ಹೆಸರು ಮಾಡಿತ್ತು. ಎಸ್.ಎಸ್. ಮೀನಾಕ್ಷಿ ಸುಂದರಂ ಪಂಚಾಯತ್‌ ರಾಜ್ ಇಲಾ­ಖೆಯ ಕಾರ್ಯ­ದರ್ಶಿ­ಗಳಾಗಿದ್ದರು. ಒಂದು ದಿನ ಅವರ ಫೋನ್ ರಿಂಗಣಿಸಿತು. ಕರೆಮಾಡಿದವರು ಆಗ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯ­ದರ್ಶಿಯಾಗಿದ್ದ ವಿನೋದ್ ಪಾಂಡೆ- “ಮೀನಾಕ್ಷಿ ನೀವೊಮ್ಮೆ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಭೇಟಿಯಾಗ­ಬೇಕಂತೆ” ಎಂದರು.

ರಾಜ್ಯ ಸರ್ಕಾರದ ಇಲಾಖಾ ಕಾರ್ಯದರ್ಶಿ­ಯೊಬ್ಬ­ರನ್ನು ಪ್ರಧಾನಮಂತ್ರಿ ನೇರವಾಗಿ ಭೇಟಿಗೆ ಕರೆಯು­ವುದು ಅನಿರೀಕ್ಷಿತವಷ್ಟೇ ಅಲ್ಲ, ಬಹಳ ಅಪ­ರೂಪವೂ ಹೌದು. ಸಹಜವಾಗಿಯೇ ಮೀನಾಕ್ಷಿ ಸುಂದರಂ ಚಿಂತೆಗೀಡಾದರು. ಇದನ್ನು ಗ್ರಹಿಸಿದವ­ರಂತೆ ವಿನೋದ್ ಪಾಂಡೆ ಪ್ರಧಾನಿ ಆಹ್ವಾನದ ಉದ್ದೇಶ ತಿಳಿಸಿದರು. “ನಿಮ್ಮ ರಾಜ್ಯ­ದಲ್ಲಿ ಜಾರಿ­ಯಾಗಿ­ರುವ ಪಂಚಾಯತ್‌ ರಾಜ್ ವ್ಯವಸ್ಥೆಯ ಬಗ್ಗೆ ನೀವೊಮ್ಮೆ ಬಂದು ರಾಜೀವ್ ಗಾಂಧಿಯವರಿಗೆ ವಿವರಿಸಬೇಕಂತೆ” “ಸರಿ ಮತ್ತೆ ತಿಳಿಸುತ್ತೇನೆ” ಎಂದ ಮೀನಾಕ್ಷಿ ಸುಂದರಂ ಬಹುಮಹಡಿ ಕಟ್ಟಡದಲ್ಲಿರುವ ತಮ್ಮ ಕಚೇರಿ­ಯಿಂದ ಕೆಳ ಬಂದು ಕಾರು ಹತ್ತಿ ವಿಧಾನ­ಸೌಧದಲ್ಲಿ ಬಂದಿಳಿದರು.

ನೇರವಾಗಿ ಪಂಚಾಯತ್ ರಾಜ್ ಮಂತ್ರಿ ಅಬ್ದುಲ್ ನಜೀರ್ ಸಾಬ್ ಅವರನ್ನು ಕಂಡರು. ಪ್ರಧಾನಿಯಿಂದಲೇ ಬಂದಿರುವ ಆಹ್ವಾನದ ಕುರಿತು ಏನು ಹೇಳಬೇಕೆಂದು ನಜೀರ್ ಸಾಬ್ ಅವ­ರಿಗೂ ಆ ಕ್ಷಣಕ್ಕೆ ಹೊಳೆಯಲಿಲ್ಲ.  ಸ್ವಲ್ಪ ಯೋಚಿಸಿ  ಮೀನಾಕ್ಷಿ ಸುಂದರಂ ಅವರನ್ನೂ ಕರೆದುಕೊಂಡು ಮುಖ್ಯ­ಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಭೇಟಿ­ಯಾ­ದರು.

ಎಲ್ಲಾ ವಿವರಗಳನ್ನೂ ಕೇಳಿಸಿಕೊಂಡ  ರಾಮಕೃಷ್ಣ ಹೆಗಡೆ ಮೀನಾಕ್ಷಿ ಸುಂದರಂ ಅವರತ್ತ ನೋಡಿ: “ಕರ್ನಾಟಕದಲ್ಲಿ ನಾವು ಮಾಡುತ್ತಿರು­ವುದು ಕೇವಲ ಆಡಳಿತದ ವಿಕೇಂದ್ರಿಕರಣವಲ್ಲ; ನಾವು ಮಾಡುತ್ತಿ­ರುವುದು ರಾಜಕೀಯ ವಿಕೇಂದ್ರೀಕ­ರಣ.  ಆಡಳಿತದ ವಿಕೇಂದ್ರೀಕರಣವಾಗಿದ್ದರೆ ನೀವು ಹೋಗು­ವುದು ಸರಿಯಿತ್ತು. ರಾಜಕೀಯ ವಿಕೇಂದ್ರೀಕ­ರಣವನ್ನು ರಾಜ­ಕಾರಣಿಯಾದ ನಾನು ಪ್ರಧಾನಿಗೆ ವಿವರಿಸು­ವುದೇ ಸರಿ. ಈ ವಿಷಯ­ವನ್ನು ಸಂಬಂಧಪಟ್ಟವರಿಗೆ ತಿಳಿಸಿ. ಅವರ­ದನ್ನು ಪ್ರಧಾನಿಗೇ ತಿಳಿಸಲಿ. ನಾನೇ ದೆಹಲಿಗೆ ಹೋಗುತ್ತೇನೆ” ಎಂದರು.

“ಸರ್ ನೀವೇ ಹೋಗ್ತೀರಾ?” ಎಂದು ಸ್ವಲ್ಪ ಆತಂಕ­ದಿಂದಲೇ ಕೇಳಿದರು ನಜೀರ್ ಸಾಬ್. ಹೆಗಡೆ­ಯವರು ರಾಜೀವ್ ಗಾಂಧಿಗಿಂತ ಹಿರಿಯ ರಾಜ­ಕಾರಣಿ. ಮಾತ್ರವಲ್ಲ ಜನತಾಪಕ್ಷದ ಮುಂಚೂಣಿ ನಾಯಕ­ರಾಗಿದ್ದು ಕಾಂಗ್ರೆಸ್ ರಾಜ­ಕಾರಣ­ವನ್ನು ವಿರೋಧಿ­ಸುತ್ತಾ ಬಂದವರು. ಆದು­ದರಿಂದ ಹೆಗಡೆ­ಯವ­ರೇಕೆ ರಾಜೀವ್ ಗಾಂಧಿಯವರ ಮುಂದೆ ಹೋಗಿ ವಿವರಿಸಬೇಕು ಎಂಬುದು ನಜೀರ್ ಸಾಬ್ ಅವರ ಅಳುಕು. ಆದರೆ ಹೆಗಡೆಯವರಿಗೆ ಅದರ ಬಗ್ಗೆ ಏನೂ ಬೇಸರವಿರಲಿಲ್ಲ. “ಹೌದು ಕರೆದರೆ ನಾನೇ ಹೋಗುತ್ತೇನೆ” ಎಂದರು. ರಾಜೀವ್ ಗಾಂಧಿಯವರಿಂದ ಕರೆ ಬರಲಿಲ್ಲ. ಹೆಗಡೆಯವರು ಹೋಗಲಿಲ್ಲ.

64ನೇ ತಿದ್ದುಪಡಿಯ ಸೋಲು
ಸ್ಥಳೀಯಾಡಳಿತಕ್ಕೆ (ಅಂದರೆ ಪಂಚಾಯತ್ ರಾಜ್ ಮತ್ತು ನಗರ ಪಾಲಿಕೆಗಳಿಗೆ) ಸಾಂವಿಧಾ­ನಿಕ ಸ್ಥಾನ ಮಾನವನ್ನು ನೀಡುವ ನಿಟ್ಟಿನಲ್ಲಿ ರಾಜೀವ್ ಗಾಂಧಿ­ಯವರ ಕಾಲದಲ್ಲಿ ನಡೆದ ಪ್ರಯತ್ನ­ವನ್ನು ಮೆಲುಕು ಹಾಕುತ್ತಾ ಒಬ್ಬರು ನಿವೃತ್ತ ಅಧಿಕಾರಿ ಹೇಳಿ­ದರು: “ರಾಜೀವ್ ಗಾಂಧಿ­ಯವರಲ್ಲಿ ಒಂದು ಗುಣ ಇರ­ಲಿಲ್ಲ ನೋಡಿ. ಅದು ರಾಜಕೀಯವಾಗಿ ಹೊಂದಾ­­ಣಿಕೆ ಮಾಡಿಕೊಳ್ಳುವ, ಎಲ್ಲಾ ಪಕ್ಷದವರ ವಿಶ್ವಾಸ­ಗಳಿಸಿಕೊಳ್ಳುವ ಗುಣ. ಅದೊಂದು ಇದ್ದಿದ್ದರೆ ತಮ್ಮ ಅಧಿಕಾರ­ವಧಿ­ಯಲ್ಲೇ ಆಡಳಿತ ವಿಕೇಂದ್ರಿಕ­ರ­ಣಕ್ಕೆ ಸಂವಿ­ಧಾನಕ್ಕೆ ಮಾನ್ಯತೆ ತಂದು ಕೊಡಲು ಅವರಿಗೆ ಸಾಧ್ಯ­ವಾಗುತಿತ್ತು.” 

ಹೆಗಡೆಯವ­ರನ್ನು ಕರೆಯಿಸಿ­ಕೊಳ್ಳದೇ ಹೋದ ಅವರ ನಿರ್ಧಾರದ ಹಿಂದೆ ಕೂಡಾ ಈ ರಾಜಕೀಯ ಅಪಕ್ವತೆಯೇ ಕೆಲಸ ಮಾಡಿರಬೇಕು. ಅಭೂತ­ಪೂರ್ವ ಬಹುಮತದ ಸರ್ಕಾರ ನಡೆಸುತ್ತಿದ್ದ ರಾಜೀವ್ ಗಾಂಧಿಯವರಿಗೆ ಉಳಿದ ಸಂದರ್ಭದ­ಲ್ಲಾ­ದರೆ ಒಂದಷ್ಟು ರಾಜಕೀಯ ಅಪಕ್ವತೆ­ಯಿದ್ದರೂ ಅದ­ರಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಆದರೆ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿ­ಧಾನಿಕ ಮಾನ್ಯತೆ ದೊರಕಿಸಿ ಚರಿತ್ರೆ ಸೃಷ್ಟಿಸಲು ಹೊರಟಿ­ದ್ದರು. ಅದು ಅವರು ಅಂದು ಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ.

ಒಂದು ರೀತಿಯಲ್ಲಿ ಅವರಿ­ಗಿಂತ ದೊಡ್ಡ ಮುತ್ಸದ್ಧಿಯಾಗಿದ್ದ ಅವರ ಅಜ್ಜ ನೆಹರೂ ಅವರಿಗೆ ಕೂಡಾ ಈ ಕ್ಷೇತ್ರದಲ್ಲಿ ಅಂದುಕೊಂಡ­ದ್ದನ್ನು ಮಾಡಲಾಗಿರಲಿಲ್ಲ. ಉಳಿದ ಪಕ್ಷಗಳ ವಿಚಾರ ಬಿಡಿ. ಕಾಂಗ್ರೆಸ್ಸಿ­ನೊಳಗೇ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಭದ್ರಪಡಿಸು­ವು­ದಕ್ಕೆ ನೆಹರೂ ಕಾಲದಿಂದಲೇ ವಿರೋಧವಿತ್ತು. ಎಲ್ಲಿಯ­ವರೆಗೆ ಅಂದರೆ ನೆಹರೂ ಕಾಲವಾದ ನಂತರ ಸದ್ದಿಲ್ಲದೆ ಅವರು ಸೃಷ್ಟಿಸಿದ್ದ ಪಂಚಾಯತ್ ರಾಜ್ ಮಂತ್ರಾಲಯ­ವನ್ನು ಕಿತ್ತು ಹಾಕಲಾಗಿತ್ತು.

ರಾಜೀವ್ ಗಾಂಧಿ ತನ್ನ ಪಕ್ಷದವರನ್ನು ಹೇಗೋ ಈ ವಿಚಾರದಲ್ಲಿ ನಿಭಾಯಿಸಿದ್ದರು. ಪಂಚಾಯತ್ ರಾಜ್‌­ಗೊಂದು ಕಾಯಕಲ್ಪ ಮಾಡಿಯೇ ಸಿದ್ಧ ಎಂದು ಹೊರಟಿ­ದ್ದರು. ಅಧಿ­ಕಾರಕ್ಕೆ ಬಂದ ದಿನದಿಂದಲೇ ದೇಶ ಸುತ್ತಿದರು. ಆ ತನಕ ಪಂಚಾಯತ್ ರಾಜ್‌ಗೆ ಸಂಬಂಧಿಸಿ­ದಂತೆ ನೀಡಲಾದ ವರದಿಗಳನ್ನು (ಮುಖ್ಯವಾಗಿ ೧೯೫೭ ರ ಬಲವಂತ್ ರಾಯ್ ಮೆಹ್ತಾ ಸಮಿತಿ ಮತ್ತು ೧೯೭೮ ರ ಅಶೋಕ್ ಮೆಹ್ತಾ ಸಮಿತಿ ವರದಿಗಳನ್ನು) ಪರಿಶೀಲಿಸಿದರು. ಹೈದರಾ­ಬಾದ್‌ನ ರಾಷ್ಟ್ರೀಯ ಗ್ರಾಮೀ ಗ್ರಾಮೀಣಾ­ಭಿ­ವೃದ್ಧಿ ಅಧ್ಯ­ಯನ ಸಂಸ್ಥೆ (ಎನ್.ಐ.ಆರ್.ಡಿ) ಯಲ್ಲಿ ದೇಶದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಕರೆದು ಸಮಾಲೋಚಿಸಿ­ದರು. ೧೯೮೫ರಲ್ಲಿ ಅವರ ಸರ್ಕಾರ ನೇಮಿಸಿದ ಜಿ.ವಿ.ಕೆ. ರಾವ್ ಸಮಿತಿ ಗ್ರಾಮೀಣ ಪ್ರದೇಶದಲ್ಲಿ ಆಡಳಿತ­ವನ್ನು ಹೇಗೆ ಜನಪರಗೊಳಿಸಬಹುದು ಎಂಬ ನಿಟ್ಟಿ­ನಲ್ಲಿ ವಿಸ್ತೃತ ವರದಿ ನೀಡಿತ್ತು.

೧೯೮೬ರಲ್ಲಿ ನೇಮಿ­ಸ­ಲಾದ ಎಲ್.ಎಂ. ಸಿಂಘ್ವಿ ಸಮಿತಿ ಪಂಚಾ­ಯತ್ ರಾಜ್ ವ್ಯವಸ್ಥೆ ಭದ್ರವಾಗಬೇಕಾದರೆ ಅದಕ್ಕೆ ಸಾಂವಿಧಾ­ನಿಕ ಮಾನ್ಯತೆ ಸಿಗಲೇಬೇಕು ಎಂದು ಹೇಳಿತ್ತು. ಇವೆಲ್ಲಾ ಸಿದ್ದತೆಯೊಂದಿಗೆ ರಾಜೀವ್ ಗಾಂಧಿ ೬೪ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಸಿದ್ದಪ­ಡಿಸಿದರು. ಸ್ವತಃ ಅವರೇ ಲೋಕ­ಸಭೆ­ಯಲ್ಲಿ ಮಂಡಿಸಿ­ದರು. ಭಾವಪೂರ್ಣ ಮತ್ತು ವಿದ್ವತ್ಪೂರ್ಣ­ವಾಗಿ ಮಾತನಾಡಿದರು. ಅಕ್ಟೋಬರ್ ೧೩, ೧೯೮೯ ರಂದು ಲೋಕಸಭೆ ಅಸ್ತು ಎಂದಿತು. ರಾಜ್ಯ ಸಭೆ­ಯಲ್ಲಿ ಪರಿಸ್ಥಿತಿ ಭಿನ್ನ­ವಾಗಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರ­ಗಳಿದ್ದ ಕಾರಣ ರಾಜ್ಯ­ಸಭೆಯಲ್ಲಿ ಕಾಂಗ್ರೆಸ್ ಬಲ ಕಡಿಮೆ ಇತ್ತು.

ಅಲ್ಲಿ ೬೪ ನೇ ತಿದ್ದುಪಡಿ­ಯನ್ನು ವಿರೋಧ ಪಕ್ಷಗಳು ಸೋಲಿಸಿ­ದವು. ಸಂವಿಧಾನಕ್ಕೆ ಚಾರಿತ್ರಿಕ ತಿದ್ದುಪಡಿ­ಯೊಂದನ್ನು ತಂದ ಕೀರ್ತಿ ಪೂರ್ಣವಾಗಿ ರಾಜೀವ್ ಗಾಂಧಿಯ­ವರಿಗೆ ಸಿಗುವ ಅವಕಾಶ ಆ ಮೂಲಕ ತಪ್ಪಿ ಹೋಯಿತು. ರಾಜೀವ್ ಗಾಂಧಿ­ಯವರು ಸ್ವಲ್ಪ ಮುತ್ಸದ್ಧಿ­ತನ ತೋರಿ ವಿರೋಧ ಪಕ್ಷ­ಗಳನ್ನು ವಿಶ್ವಾಸಕ್ಕೆ ತೆಗೆದು­ಕೊಂಡು ವ್ಯವಹ­ರಿಸಿ­ದ್ದರೂ ತಿದ್ದುಪಡಿ ಆಗಿಯೇ ಬಿಡುತಿತ್ತು.

ವಿಘ್ನಗಳಲ್ಲಿ ಅರಳಿದ ವಿಕೇಂದ್ರೀಕರಣ
ಆ ಮುತ್ಸದ್ದಿತನ ತೋರಿಸಿದ್ದು ರಾಜೀವ್ ಗಾಂಧಿ­ಯ­ವರ ಮರಣಾನಂತರ ಅಕಸ್ಮಿಕವಾಗಿ ಪ್ರಧಾನಿ­ಯಾದ ಪಿ.ವಿ. ನರಸಿಂಹ ರಾವ್. ಅವರಿಗಿಂತ ಮೊದಲು ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಕೂಡಾ ಈ ನಿಟ್ಟಿ­ನಲ್ಲಿ ಒಂದು ಪ್ರಯತ್ನ ಮಾಡಿದರೂ ಅವರು ಮಂಡಿ­ಸಿದ ವಿಧೇಯಕ (ಸೆಪ್ಟಂಬರ್ ೧೯೯0) ಚರ್ಚೆಗೆ ಬರುವುದಕ್ಕೆ ಮೊದಲೇ ಸರ್ಕಾರ ಬಿದ್ದುಹೋಯಿತು.

ರಾಜೀವ್ ಗಾಂಧಿಯವರ ಕನಸನ್ನು ನನಸು ಮಾಡು­ವಲ್ಲಿ ನರಸಿಂಹ ರಾವ್ ಎದುರಿಸಿದ ಸಂಕ­ಷ್ಟ­­ಗಳು ಒಂದೆರಡಲ್ಲ. ಒಳಗೊಳಗಿಂದ ಎಲ್ಲಾ ಪಕ್ಷಗಳ ಸಂಸದರೂ ವಿಧೇಯಕವನ್ನು ಹೇಗಾ­ದರೂ ಮಾಡಿ ಬಲಹೀನ­ಗೊಳಿಸ­ಬೇಕೆಂದು  ಹುನ್ನಾರ ನಡೆಸುತ್ತಿದ್ದರು. ತಮ್ಮ ಅಸ್ತಿತ್ವವೇ ಅಪ್ರಸ್ತುತವಾಗು­ತ್ತದೆ ಎಂದು ಗೋಳಿಟ್ಟ ಲೋಕಸಭೆ ಮತ್ತು ರಾಜ್ಯ­ಸಭೆಯ ಸದಸ್ಯ­ರಿಗೆ ಸಂಸದರ ನಿಧಿ ಸ್ಥಾಪಿಸಿ ನರಸಿಂಹ ರಾವ್ ಸಮಾಧಾನಪಡಿಸಿದರು. ಕರ್ನಾಟಕ­ದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ೧೯೮೩ರ ಕರ್ನಾ­ಟಕ ಪಂಚಾಯತ್ ರಾಜ್ ವಿಧೇಯಕ­ವನ್ನು ಜಾರಿಗೆ ತರಲು ಹೊರಟಾಗಲೂ ಇಂತ­ಹದ್ದೇ ವಿರೋಧ ಶಾಸಕ­ರಿಂದ ಬಂದಿತ್ತು. ಆಗ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿ­ಸುವ ಪದ್ಧತಿಯನ್ನು ಜಾರಿಗೆ ತಂದಿದ್ದರು.

ಸಂಸದರು ತಮ್ಮನ್ನು ಸ್ಥಳೀಯ ಸಂಸ್ಥೆಗಳ ಪದ­ನಿಮಿತ್ತ ಸದಸ್ಯರನ್ನಾಗಿ ಮಾಡಬೇಕು ಎಂದು ನರ­ಸಿಂಹ ರಾವ್ ಅವರ ಬಳಿ ಹಠ ಹಿಡಿದರು. ನರ­ಸಿಂಹ ರಾವ್ ಅದಕ್ಕೂ ಹೂಂಗುಟ್ಟುವುದರಲ್ಲಿ­ದ್ದರು. ಆದರೆ ಕೆಲ ಅಧಿಕಾರಿಗಳಿಗೆ ಸಂಸದರು ಮತ್ತು ಶಾಸಕರು  ಪಂಚಾಯತ್‌ಗಳಲ್ಲಿ ಮತ್ತು ನಗರ ಸ್ಥಳೀಯಾ­ಡಳಿತ ಸಂಸ್ಥೆಗಳಲ್ಲಿ ಕುಳಿತು ಅಧಿ­ಕಾರ ಚಲಾಯಿ­ಸುವುದು ಸರಿತೋರಲಿಲ್ಲ. ಅವರೆಲ್ಲಾ ನರಸಿಂಹ ರಾವ್ ಅವರನ್ನು ಭೇಟಿ ಮಾಡಿ ಇದೊಂದಕ್ಕೆ ಅನುವು ಮಾಡಿಕೊಡ­ಬಾ­ರದು ಎಂದು ಕೇಳಿ­ಕೊಂಡರು. ರಾಜೀವ್ ಗಾಂಧಿ­ಯ­ವರ ಕಾಲ­ದಿಂದಲೂ ಈ ವಿಧೇಯಕ್ಕಾಗಿ ತುಂಬ ಬದ್ಧತೆ­ಯಿಂದ ದುಡಿದಿದ್ದ ಈ ಅಧಿ­ಕಾರಿ­ಗಳ ಅಭಿಪ್ರಾಯ­ವನ್ನು ಅಷ್ಟೊಂದು ಸುಲಭ­ದಲ್ಲಿ ಕಡೆಗಣಿಸು­ವಂತಿ­ರ­ಲಿಲ್ಲ.

ನರಸಿಂಹ ರಾವ್ ಒಂದು ರಾತ್ರಿ ಅವರನ್ನೆಲ್ಲಾ ತಮ್ಮ ಮನೆಗೆ ಕರೆದು ಹೇಳಿದರು: “ಅತ್ಯುತ್ತಮವಾದ ವ್ಯವ­ಸ್ಥೆಯೇ ಬೇಕೆಂದು ಕಾಯುತ್ತಾ ಕುಳಿತರೆ ಉತ್ತ­ಮ­ವಾದ ಒಂದು ವ್ಯವಸ್ಥೆಯನ್ನು ತರುವ ಅವ­ಕಾಶ­ವನ್ನೂ ನಾವು ಕಳೆದುಕೊಳ್ಳುತ್ತೇವೆ. Best is the enemy of good. ಸದ್ಯಕ್ಕೆ ಸಂಸದರು ಮತ್ತು ಶಾಸಕರನ್ನು ಪಂಚಾಯತ್‌ನಲ್ಲಿ ಸದಸ್ಯ­ರಾ­ಗಲು ಅವಕಾಶ ನೀಡೋಣ. ಬೇಕಾದರೆ ಅಂತಿಮ ನಿರ್ಣಯ­ವನ್ನು ಆಯಾ ರಾಜ್ಯಗಳಿಗೆ ಬಿಡೋಣ. ಅದು ಸರಿಯಲ್ಲ ನಿಜ.

ಆದರೆ ನಾವು ಹಾಗೆ ಮಾಡದೇ ಹೋದರೆ, ಈ ವಿಧೇಯಕ ಈಗಲೂ ಒಪ್ಪಿಗೆ ಪಡೆಯುವುದಿಲ್ಲ. ಒಳ್ಳೆ­ಯದೋ ಕೆಟ್ಟದೋ ಒಂದು ಬದಲಾವಣೆ ಬಂದು ಬಿಡಲಿ. ಆ ನಂತರ ಅದನ್ನು ಸುಧಾರಿ­ಸು­ವುದು ಇದ್ದೇ ಇದೆ. ಇಷ್ಟೊಂದು ಬಾರಿ ಸಂವಿ­ಧಾನ­ವನ್ನೇ ತಿದ್ದಿದ್ದೇವೆ ಎಂದ ಮೇಲೆ ಪಂಚಾ­ಯತ್ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ತರು­ವುದು ಕಷ್ಟವೇನಲ್ಲ. ಕಾಲ ಪಕ್ವವಾದಾಗ ಅದನ್ನು ಮುಂದಿನ ತಲೆಮಾರು ಮಾಡೀತು.”

ಇದನ್ನು ಕೇಳಿದ ಅಧಿಕಾರಿಗಳು ಸುಮ್ಮನಾ­ದರು. ಆದರೆ ಸಂಕಷ್ಟ ಅಲ್ಲಿಗೆ ಮುಗಿಯಲಿಲ್ಲ. ತಮಿಳುನಾಡಿನಲ್ಲಿ ಎಂದೂ ಒಂದಾಗದ ಡಿಎಂಕೆ ಮತ್ತು ಎಐಎಡಿಎಂಕೆ ಪಂಚಾಯತ್ ರಾಜ್ ವಿಧೇಯಕ­ವನ್ನು ವಿರೋಧಿಸುವಲ್ಲಿ ಮಾತ್ರ ಒಂದೇ ಸ್ವರದಲ್ಲಿ ಮಾತನಾಡಲಾರಂಭಿ­ಸಿ­ದವು. ಯಾವ ಕಾರಣಕ್ಕೂ ಈ ವಿಧೇಯಕ ಜಾರಿ­ಗೊಳ್ಳಬಾರದು ಎಂದು ಹಠ ಹಿಡಿದವು. ಹೇಳಿ ಕೇಳಿ ನರಸಿಂಹ ರಾವ್ ಅವ­ರದ್ದು ಅಲ್ಪ­ಮತದ ಸರ್ಕಾರ. ಅವರು ಯಾರನ್ನೂ ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿ­ರ­ಲಿಲ್ಲ. ನರಸಿಂಹ ರಾವ್ ಗ್ರಾಮೀಣ ಅಭಿವೃದ್ಧಿ ಮಂತ್ರಾ­ಲಯದ ತಮಿಳುನಾಡು ಮೂಲದ ಹಿರಿಯ ಐಎಎಸ್ ಅಧಿಕಾರಿ­ಯೊಬ್ಬರನ್ನು ಕರೆದು ಹೇಳಿದರು: “ನಿಮ್ಮ ರಾಜ್ಯದ ಸಂಸದರಿಗೆ ನಾವೇನು ಬದ­ಲಾವಣೆ ತರ­ಹೊರಟಿದ್ದೇವೆ ಎನ್ನುವ ಪೂರ್ಣ ಕಲ್ಪನೆ ಇಲ್ಲ.

ನೀವು ಅವರ ಜತೆ ತಮಿಳಿನಲ್ಲಿ ಮಾತನಾಡಿ. ಎಲ್ಲ­ವನ್ನೂ ಎಳೆಎಳೆಯಾಗಿ ವಿವರಿಸಿ. ಮುಂದಿನದ್ದನ್ನು ನಾನು ನಿಭಾಯಿಸು­ತ್ತೇನೆ”. ಚಾಣಕ್ಷರಾದ ಆ ಅಧಿ­ಕಾರಿ ತಮಿಳು­ನಾಡಿನ ಸಂಸದರಿಗೆ ಮನವರಿಕೆ­ಯಾಗು­ವಂತೆ ವಿಕೇಂದ್ರೀಕರಣದ ಬಗ್ಗೆ ಹೇಳಿದರು. ಅದನ್ನು ಕೇಳಿಸಿ­­­ಕೊಂಡ ತಮಿಳು ಸಂಸದರು “ಎಲ್ಲಾ ಸರಿ. ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾ­­ಯತ್‌­ಗಳು ಬೇಕಾದರೆ ಇರಲಿ. ಆದರೆ ಜಿಲ್ಲಾ ಪಂಚಾ­ಯತ್‌­ಗಳ ಸ್ಥಾಪನೆಗೆ ಈ ವಿಧೇಯಕ ಅನುವು ಮಾಡಿ­ಕೊಡು­ವುದಾದರೆ ನಾವು ಅದನ್ನು ವಿರೋಧಿ­ಸು­ತ್ತೇವೆ” ಎಂದರು.

ಈ ಹೊತ್ತಿಗಾಗಲೇ ಕೆಲ ವಿರೋಧ ಪಕ್ಷಗಳು ಜನಾ­ಭಿಪ್ರಾಯಕ್ಕೆ ಹೆದರಿ ವಿಧೇಯಕ­ವನ್ನು ಬೆಂಬಲಿಸುವ ನಿರ್ಣಯ ತೆಗೆದು­ಕೊಂಡಾಗಿತ್ತು. ನರಸಿಂಹ­ರಾವ್ ತಮಿಳುನಾಡಿನ ಸಂಸದ­ರನ್ನು ಕರೆದು ಹೇಳಿದರು. “ಎಲ್ಲರೂ ಈಗ ವಿಧೇಯ­ಕದ ಪರವಾಗಿದ್ದಾರೆ. ನೀವು ವಿರೋಧಿಸಿ­ದರೂ ವಿಧೇ­ಯಕ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಆದು­ದರಿಂದ ನೀವು ವಿರೋಧಿಸಬೇಡಿ. ಬೇಕಾ­ದರೆ ವಿಧೇಯಕವನ್ನು ಮತಕ್ಕೆ ಹಾಕುವ ಹೊತ್ತಿಗೆ ಕಲಾಪ ಬಹಿಷ್ಕರಿಸಿ ಹೊರ ಹೋಗಿ. ಹಾಗೆ ಮಾಡಿ­ದರೆ ನಿಮ್ಮ ಮಾನವೂ ಉಳಿಯಿತು, ನಮಗೂ ಸಹಾಯವಾ­ದೀತು” ಎಂದರು. ತಮಿಳು ಸಂಸದರಿಗೆ ಬೇರೆ ದಾರಿ ಇರಲಿಲ್ಲ. ಒಪ್ಪಿದರು.

ಎಲ್ಲ ವಿಘ್ನಗಳೂ ನಿವಾರಣೆಯಾದವು. ಗ್ರಾಮೀಣಾ­­­ಭಿವೃದ್ಧಿ ಸಚಿವಾಲಯದ ಹಿರಿಯ ಅಧಿ­ಕಾರಿ­ಗಳು ವಿಧೇಯಕದಲ್ಲಿ ಕೊನೆಯ ಕ್ಷಣದ ಕೆಲ ಮಾರ್ಪಾಡು­ಗಳನ್ನು ಮಾಡಿ ಸಂಸತ್ತಿನಲ್ಲಿ ಮಂಡನೆಗೆ ತಯಾರಿ ನಡೆಸುತ್ತಿದ್ದರು. ಅಧಿ­ಕಾರಿ­ಗಳ ಕೊನೆಯ ಸಭೆ ಇನ್ನೇನು ಮುಗಿಯಬೇಕು ಎನ್ನುವಾಗ ಬಂದದ್ದು ಬಾಬರಿ ಮಸೀದಿ ನೆಲ­ಸಮ­ವಾದ ಸುದ್ದಿ. ಇದನ್ನು ಕೇಳು­ತ್ತಲೇ ಮೇಲೆದ್ದ ಆಗಿನ ಗ್ರಾಮೀಣಾಭಿವೃದ್ಧಿ ಕಾರ್ಯ­ದರ್ಶಿ ಅಲ್ಲಿದ್ದ ಅಧಿಕಾರಿಗಳ ಬಳಿ ಹೇಳಿದರಂತೆ: “ಇದೊಂದು ಶಾಪಗ್ರಸ್ತ ವಿಧೇಯಕ. ಬಹುಶಃ ಇದು ಎಂದೆಂದಿಗೂ ಜಾರಿಯಾಗುವುದಿಲ್ಲ”
ಆದರೆ ನರಸಿಂಹ ರಾವ್ ಬಿಡಲಿಲ್ಲ.

ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಉಂಟಾದ ರಾಜ­­ಕೀಯ ಬಿಕ್ಕಟ್ಟಿನ ನಡುವೆಯೇ ಸಂಸತ್ತು ಸೇರಿದಾಗ ಗ್ರಾಮೀಣಾ­ಭಿವೃದ್ಧಿ ಸಚಿವ ಜಿ.­ವೆಂಕಟ­­ಸ್ವಾಮಿಯ ಅವರ ಕೈಯಲ್ಲಿ ೭೩ನೇ ಸಂವಿ­ಧಾನ ತಿದ್ದುಪಡಿ ವಿಧೇಯಕ ಮಂಡಿಸಿಯೇ­ಬಿಟ್ಟರು. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿ­ಧಾನಿಕ ಮಾನ್ಯತೆ ನೀಡುವ ೭೪ನೇ ತಿದ್ದು­ಪಡಿ ವಿಧೇಯಕವೂ ಮಂಡನೆ­ಯಾಯಿತು. ಡಿಸಂಬರ್ 22, 1992 ರಂದು ಲೋಕ­ಸಭೆ ಉಭಯ ವಿಧೇಯಕಗಳಿಗೂ ಅನು­ಮೋದನೆ ನೀಡಿತು. ಮರುದಿನ ರಾಜ್ಯ ಸಭೆಯೂ ಅನು­ಮೋದನೆ ನೀಡಿತು. ಎಂದೂ ನಗದ ನರಸಿಂಹ ರಾವ್ ಅವರ ಮುಖದಲ್ಲಿ ಸಣ್ಣ ಮುಗುಳ್ನಗೆ­ಯೊಂದು ಸುಳಿದು ಮಾಯವಾಯಿತು. ಕೇಂದ್ರ, ರಾಜ್ಯ ಸರ್ಕಾರಗಳಿರುವ ಸಾಂವಿಧಾನಿಕ ಮಾನ್ಯತೆ ಸ್ಥಳೀಯ ಸರ್ಕಾರವಾದ ಪಂಚಾ­ಯತ್ ರಾಜ್ ಸಂಸ್ಥೆಗಳಿಗೂ ಬಂತು.

ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ೭೩ನೇ ತಿದ್ದು­­ಪಡಿ ವಿಧೇಯಕ ಎಪ್ರಿಲ್ ೨೩, ೧೯೯೩ರಂದು ಜಾರಿಗೆ ಬಂತು. ೭೪ನೇ ತಿದ್ದುಪಡಿ ಜೂನ್ ೧, ೧೯೯೩ರಂದು ಜಾರಿಗೆ ಬಂತು. ಸಂವಿ­ಧಾನಕ್ಕೆ ಪಂಚಾ­ಯತು­ಗಳು ಎಂಬ ಶೀರ್ಷಿಕೆಯ ಭಾಗ IX ಮತ್ತು ಪುರ­ಸಭೆಗಳು (Municipalities) ಎಂಬ ಶೀರ್ಷಿಕೆಯ ಭಾಗ IXA ಸೇರ್ಪಡೆಯಾದವು.

(ಭಾರತದಲ್ಲಿ ಆಡಳಿತ ಸುಧಾರಣೆಗಳ ರಾಜ­ಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮ­ಗಳ ಚಾರಿತ್ರಿಕ ಅಧ್ಯಯನದಲ್ಲಿ ತೊಡಗಿಸಿ­ಕೊಂಡಿ­ರುವ ಲೇಖಕರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ­ದಲ್ಲಿ ಸಹ ಪ್ರಾಧ್ಯಾಪಕರು.)

ಸಂಸದರು ಮತ್ತು ಶಾಸಕರ ಅಭದ್ರತೆ
ಪಂಚಾಯತ್ ರಾಜ್ ವ್ಯವಸ್ಥೆಯ ಪರಿಕಲ್ಪನೆ ಮೂಡಿದಂದಿನಿಂದಲೂ ಅದನ್ನು ಜಾರಿಗೆ ತರಲು ದೊಡ್ಡ ಸವಾಲಾಗಿದ್ದದ್ದು ಶಾಸಕರು ಮತ್ತು ಸಂಸದರ ಅಭದ್ರತೆ. ಇದನ್ನು ನಿವಾರಿಸುವುದಕ್ಕಾಗಿ ರಾಮಕೃಷ್ಣ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ಪರಿಪಾಠ ಆರಂಭಿಸಿ ‘ಅಧಿಕಾರ ನಿಮ್ಮ ಕೈಯಲ್ಲೂ ಇದೆ’ ಎಂಬ ಭರವಸೆಯನ್ನು ಶಾಸಕರಿಗೆ ನೀಡಿದರು.

ಪಿ.ವಿ.ನರಸಿಂಹ ರಾವ್ ಅವರು ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯ ಪರಿಪಾಠ ಆರಂಭಿಸಿ ‘ಅಭಿವೃದ್ಧಿಗೆ ನೀವೂ ಹಣ ಮಂಜೂರು ಮಾಡಬಹುದು’ ಎಂದು ಸಂಸದರಲ್ಲಿ ಧೈರ್ಯ ತುಂಬಿದರು. ಗ್ರಾಮಸಭೆಗಳಿಗೆ, ವಾರ್ಡ್ ಸಭೆಗಳಿಗೆ ಶಕ್ತಿ ತುಂಬುವ ವಿಚಾರ ಕೂಡಾ ಈ ಸಂಧಾನ ಪ್ರಕ್ರಿಯೆಯಿಂದಾಗಿ ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ.

ಬರಹಗಳಿಗೆ ಸ್ವಾಗತ
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಕ್ರಿಯ­ರಾಗಿ­ರು­ವ­ವರು, ಅಧ್ಯಯನ–-ಸಂಶೋಧನೆ­ಗಳಲ್ಲಿ ತೊಡಗಿ­ರುವ­ವರು, ಈ ಕ್ಷೇತ್ರದ ಕುರಿತ ಆಸಕ್ತಿ ಇರುವ ಎಲ್ಲರೂ ‘ಪಂಚಾಯತ್ ರಾಜ್–20’ ವಿಶೇಷ ಪುಟ­ದಲ್ಲಿ ನಡೆಯುವ ಚರ್ಚೆ, ವಿಶ್ಲೇಷಣೆಗಳಲ್ಲಿ ಭಾಗಿ­ಯಾ­ಗಬಹುದು. ನೀವು ಏನನ್ನು ಬರೆಯ­ಬಯಸು­ತ್ತೀರಿ ಎಂಬುದರ ಕುರಿತಂತೆ ಈ ಕೆಳಗಿನ ಇ–ಮೇಲ್ ವಿಳಾಸ ಅಥವಾ ಅಂಚೆ ವಿಳಾಸಕ್ಕೆ ಒಂದು ಸಂಕ್ಷಿಪ್ತ ಪ್ರಸ್ತಾವನೆಯನ್ನು ಕಳುಹಿಸಿದರೆ ನಮ್ಮ ಸಂಪಾದಕೀಯ ಬಳಗದ ಸದಸ್ಯರು ನಿಮ್ಮನ್ನು ಸಂಪರ್ಕಿ­ಸುತ್ತಾರೆ.

ನಿಮ್ಮ ಪ್ರಸ್ತಾವನೆಗಳನ್ನು ಕಳುಹಿ­ಸ­­ಬೇಕಾದ ವಿಳಾಸ. ಸಂಪಾದಕರು, ಪಂಚಾಯತ್ ರಾಜ್-20, ಪ್ರಜಾವಾಣಿ, ನಂ.75, ಮಹಾತ್ಮಾ­ಗಾಂಧಿ ರಸ್ತೆ, ಬೆಂಗಳೂರು–560001, ಇ–ಮೇಲ್: panchayathraj20@prajavani.co.in

ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರದ ಪ್ರಯೋಗಗಳು
ಕರ್ನಾಟಕದ ಮಟ್ಟಿಗೆ ಸ್ಥಳೀಯ ಸರ್ಕಾರ ಎಂಬ ಪರಿಕಲ್ಪನೆ ಹೊಸ­ತಲ್ಲ. ಸಂವಿಧಾನದ 73ನೇ ತಿದ್ದುಪಡಿಯ ತನಕ ಕರ್ನಾಟಕ­ದಲ್ಲಿ ಆದ ಪ್ರಯೋಗ­ಗಳು ಹಲವು. ಅವುಗಳ ಸ್ಥೂಲ ಚಿತ್ರಣ ಇಲ್ಲಿದೆ.

1862: ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ಲೋಕಲ್ ಫಂಡ್ (ಸ್ಥಳೀಯ ನಿಧಿ) ಎಂಬ ಪರಿಕಲ್ಪನೆ ಅನುಷ್ಠಾನಕ್ಕೆ ಬಂತು. ಇದರ ಅನ್ವಯ ಗ್ರಾಮಗಳಿಗೆ ತಮ್ಮದೇ ಸಂಪನ್ಮೂಲ ಸಂಗ್ರಹಣೆ ಮತ್ತು ವೆಚ್ಚ ಮಾಡುವ ಅಧಿಕಾರ ದತ್ತವಾಯಿತು. ರೈತರ ಉಳುಮೆ ಕರ, ದೋಣಿ ಕಡವಿನ ತೆರಿಗೆ, ಬೀಗಿ ದನಗಳ ಮಾರಾಟ, ಜಾನುವಾರುಗಳ ಅತಿಕ್ರಮಕ್ಕೆ ಹಾಕುತ್ತಿದ್ದ ದಂಡ ಇತ್ಯಾದಿ­ಗಳನ್ನು ರಾಜ್ಯದ ಸಾಮಾನ್ಯ ನಿಧಿಯಿಂದ ಪ್ರತ್ಯೇಕಿಸಿ ಗ್ರಾಮಗಳೇ ತಮ್ಮ ರಸ್ತೆ ಇತ್ಯಾದಿ ಕಾಮಗಾರಿಗೆ ಬಳಸುವ ಅವಕಾಶ ಕಲ್ಪಿಸಲಾಯಿತು.

1884: ಲೋಕಲ್ ಫಂಡ್ ಸಮಿತಿಗಳು ರೂಪುಗೊಂಡವು. ಇವು ಜಿಲ್ಲಾ ಮಟ್ಟದಲ್ಲಿದ್ದ ಸ್ಥಳೀಯ ಸರ್ಕಾರಗಳು. ಇದರಲ್ಲಿ ಆಡ­ಳಿತ ವ್ಯವಸ್ಥೆಯ ಪ್ರತಿನಿಧಿಯಾಗಿ ಜಿಲ್ಲಾ ಕಮಿಷನರ್ ಇರು­ತ್ತಿದ್ದರು. ಇದರ ಸದಸ್ಯರಾಗಿ ಸಹಾಯಕ ಕಮಿಷನರ್, ಕಾರ್ಯ­ನಿರ್ವಾಹ ಇಂಜಿನಿಯರ್, ಎಲ್ಲಾ ಅಮಲ್ದಾರರು, ನಾಮ­ಕರಣ­ಗೊಳ್ಳು­ತ್ತಿದ್ದ ಜನಪ್ರತಿಧಿಗಳು, ಆಯ್ದ ಭೂಮಾಲಿಕರು ಸದಸ್ಯರಾಗಿ­ರುತ್ತಿ­ದ್ದರು. ಇದರ ಸಭೆ ವರ್ಷದಲ್ಲಿ ಎರಡು ಬಾರಿ ಮಾತ್ರ ನಡೆಯುತ್ತಿದ್ದವು.

1903: ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್-1902. ಈ ಕಾಯ್ದೆ ಅನುಷ್ಠಾನಕ್ಕೆ ಬಂದದ್ದು 1903ರಲ್ಲಿ. ಈ ಕಾಯಿದೆ­ಯನ್ವಯ ಜಿಲ್ಲಾ ಮಂಡಳಿ, ತಾಲೂಕು ಮಂಡಳಿ ಮತ್ತು ಪಂಚಾ­ಯಿತಿ ಸಂಘಟನೆ ಎಂಬ ಮೂರು ಹಂತದ ಸ್ಥಳೀಯ ಸರ್ಕಾರ ರೂಪುಗೊಂಡಿತು. ಇದರಲ್ಲಿ ಸದಸ್ಯರಾಗಿರುವ ಅಧಿಕಾರಿ­ಗಳ ಸಂಖ್ಯೆಯನ್ನು ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟಕ್ಕೆ ಮಿತಿಗೊಳಿಸಲಾಯಿತು. ಇದಕ್ಕೆ ಜಿಲ್ಲಾ ಮಂಡಳಿಗೆ ಎಲ್ಲಾ ತಾಲೂಕುಗಳಿಂದ ಒಬ್ಬೊಬ್ಬ ಸದಸ್ಯರು ಚುನಾಯಿತರಾಗು­ತ್ತಿ­ದ್ದರು. ತಾಲೂಕು ಮಂಡಳಿಗೆ ನಾಲ್ಕು ಮಂದಿ ಹಿಡುವಳಿ­ದಾರ­ರನ್ನು ಚುನಾಯಿಸಿ ಆರಿಸಬಹುದಿತ್ತು. ಕೊನೆಯ ಹಂತದ ಪಂಚಾ­ಯಿತಿ ಸಂಘಟನೆಯ ಎಲ್ಲಾ ಸದಸ್ಯರು ಮತ್ತು ಅಧ್ಯಕ್ಷರನ್ನು ಜಿಲ್ಲಾ ಕಲೆಕ್ಟರ್ ಸಲಹೆಯ ಮೇರೆ ನಾಮ ನಿರ್ದೇಶನ ಮಾಡಲಾಗುತ್ತಿತ್ತು.

1919:  ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾ­ಯಿತ್ ಕಾಯ್ದೆ-2. ಇದು 1918ರಲ್ಲಿ ರೂಪುಗೊಂಡಿತಾ­ದರೂ ಜಾರಿಗೆ ಬಂದದ್ದು 1919ರಲ್ಲಿ. ಈ ಕಾಯ್ದೆನ್ವಯ ಜಿಲ್ಲಾ ಮಂಡಳಿಯ ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಮೂರನೇ ಎರಡ­ರಷ್ಟನ್ನು ಚುನಾವಣೆಯ ಮೂಲಕ ಆರಿಸಬೇಕಾಗಿತ್ತು. ತಾಲೂಕು ಮಂಡಳಿಯ 20 ಸದಸ್ಯರಲ್ಲಿ 10 ಮಂದಿ ಚುನಾಯಿತ ಸದಸ್ಯರಿ­ರಲು ಅವಕಾಶ ದೊರೆಯಿತು. ಗ್ರಾಮಪಂಚಾಯಿತಿಗೆ ಇರಬಹು­ದಾ­ಗಿದ್ದ ಗರಿಷ್ಠ 12 ಸದಸ್ಯರಲ್ಲಿ ಅರ್ಧದಷ್ಟು ಮಂದಿ ಚುನಾಯಿತ­ರಾಗ­ಬೇಕಿತ್ತು. ಊರಿನ ಪಟೇಲ ಸರ್ಕಾರದ ಪ್ರತಿನಿಧಿಯಾಗಿ ಸದಸ್ಯನಾಗಿರುತ್ತಿದ್ದ.

1926: ಈ ವರ್ಷ ಕಾರ್ಯರೂಪಕ್ಕೆ ಬಂದ ಕಾಯ್ದೆ 1952ರ ತನಕವೂ ಅಸ್ತಿತ್ವದಲ್ಲಿತ್ತು. ಈ ಕಾಯ್ದೆ ಮಹಿಳೆಯರನ್ನು ಚುನಾ­ವಣೆಯ ಸ್ಪರ್ಧಿಸದಂತೆ ಹೊರಗಿಟ್ಟಿತ್ತು. ಪಂಚಾಯತ್ ಕಾರ್ಯ­ದರ್ಶಿ­ಗಳು ನೇಮಕವಾದದ್ದು ಈ ಕಾಯ್ದೆಯ ಅನ್ವಯ. ಗ್ರಾಮ ಪಂಚಾಯಿತಿ­ಗಳು ತೆರಿಗೆಯ ಪ್ರಮಾಣವನ್ನು ಮೂರನೇ ಎರಡು ಬಹುಮತದ ಮೂಲಕ ನಿರ್ಧರಿಸಬಹುದಿತ್ತು.

1952: ದಿ ಮೈಸೂರು ವಿಲೇಜ್ ಪಂಚಾಯತ್ ಮತ್ತು ಡಿಸ್ಟ್ರಿಕ್ಟ್ ಬೋರ್ಡ್ ಆಕ್ಟ್-1952 ಅನುಷ್ಠಾನಕ್ಕೆ ಬಂತು. ವೆಂಕಟಪ್ಪ ಸಮಿತಿ ನೀಡಿದ್ದ ಅನೇಕ ಕ್ರಾಂತಿಕಾರಿ ಸಲಹೆ­ಗಳನ್ನು ಅಳವಡಿಸಿಕೊಂಡು ಈ ಕಾಯ್ದೆ ರೂಪುಗೊಂಡಿತ್ತಾ­ದರೂ ಅವುಗಳ್ಯಾವೂ ಕಾರ್ಯರೂಪಕ್ಕೆ ಬರಲಿಲ್ಲ.

1959: ಬಲವಂತರಾಯ್ ಮೆಹ್ತಾ ವರದಿ ಆಧಾರದಲ್ಲಿ ದಿ ಮೈಸೂರು ವಿಲೇಜ್ ಪಂಚಾಯತ್ ಅಂಡ್ ಲೋಕಲ್ ಬೋರ್ಡ್ ಆಕ್ಟ್-1959 ಜಾರಿಗೆ ಬಂತು. ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ನೇರವಾಗಿ ಚುನಾಯಿತ ಸದಸ್ಯರು ಹಾಗೂ ಜಿಲ್ಲಾ ಮಟ್ಟದಲ್ಲಿ ಪರೋಕ್ಷವಾಗಿ ಆಯ್ಕೆಯಾಗಿರುವ ಸದಸ್ಯರಿ­ರುವ ಮೂರು ಹಂತದ ವ್ಯವಸ್ಥೆ ಇದಾಗಿತ್ತು. ಜಿಲ್ಲಾ ಅಭಿವೃದ್ಧಿ ಪರಿಷತ್ತಿ­ನಲ್ಲಿ ಸಂಸದರು, ಶಾಸಕರು, ತಾಲೂಕು ಅಭಿವೃದ್ಧಿ ಮಂಡಳಿ­ಗಳ ಅಧ್ಯಕ್ಷರು ಇರುತ್ತಿದ್ದರು. ಇವುಗಳಿಗೆ ಆರ್ಥಿಕ ಸ್ವಾಯತ್ತತೆ ಇರಲಿಲ್ಲ.

1985: ಕೇಂದ್ರದ ಜನತಾ ಪಕ್ಷ ಸರ್ಕಾರ ನೇಮಿಸಿದ ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸುಗಳ (1978) ಹಿನ್ನೆಲೆಯಲ್ಲಿ ಕರ್ನಾ­ಟಕ ಜಿಲ್ಲಾ ಪರಿಷತ್, ತಾಲೂಕು ಪಂಚಾಯಿತ್ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯಾ ಪಂಚಾಯತಿ ಕಾಯ್ದೆ-–1983. ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್ ನಜೀರ್ ಸಾಬ್ ಅವರ ಪ್ರಯತ್ನದ ಫಲವಾಗಿ ರೂಪುಗೊಂಡ ಈ ಕಾಯ್ದೆಗೆ 1985ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯಿತು. 1987ರಲ್ಲಿ ಚುನಾವಣೆಗಳು ನಡೆದವು. ಇದು ಎರಡು ಹಂತದ ಚುನಾಯಿತ ಸದಸ್ಯರಿರುವ ವ್ಯವಸ್ಥೆ. ಇದರಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡಲಾಯಿತು. ಸಂವಿಧಾನದ 73ನೇ ತಿದ್ದುಪಡಿಗೆ ಪ್ರೇರಕವಾದ ಕಾಯ್ದೆಯೆಂಬ ಹೆಗ್ಗಳಿಕೆಯೂ ಇದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT