ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರಾಷ್ಟ್ರೀಯ ಕಂಪೆನಿಗಳ ಉತ್ಸಾಹ

Last Updated 21 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಮಂಗಳೂರು: ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಲಾದ ಮಹತ್ವಾಕಾಂಕ್ಷಿ ಯೋಜನೆ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝೆಡ್) ಪೂರ್ಣಗೊಂಡ ತನ್ನ ಮೊದಲ ಹಂತದಲ್ಲಿ ಉತ್ಪಾದನಾ ಕಾರ್ಯಕ್ಕೆ ಅಣಿಯಾಗುತ್ತಿದ್ದು ಈ ದಿಸೆಯಲ್ಲಿ ಸುಮಾರು 50ರಷ್ಟು ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ತಳವೂರಲು ಆಸಕ್ತಿ ತೋರಿಸಿವೆ.

ಯೋಜನೆ ಎರಡು ಹಂತ ಹೊಂದಿದ್ದು ಈಗ ಪೂರ್ಣಗೊಂಡ ಮೊದಲ ಹಂತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸಲಾಗುವುದು. ಎರಡನೆ ಹಂತದಲ್ಲಿ ಸಾಮಾನ್ಯ ಉದ್ದೇಶದ ಇಲ್ಲವೆ ಬಹೂಪಯೋಗಿ ಉತ್ಪನ್ನಗಳ ಘಟಕಗಳು ಅಸ್ತಿತ್ವಕ್ಕೆ ಬರಲಿವೆ.

ಎರಡನೇ ಹಂತದ ಭೂಸ್ವಾಧೀನಕ್ಕೆ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೂರೆಂಟು ವಿಘ್ನಗಳು ತಲೆದೋರಿರುವುದರಿಂದ ಈಗ ಪೂರ್ಣಗೊಂಡಿರುವ ಮೊದಲ ಹಂತದಲ್ಲೆ ಏನೆಲ್ಲ ಘಟಕಗಳು ಬರಬಹುದು, ಇವುಗಳಿಗೆ ಪೂರಕ ಪರಿಸರ ನಿರ್ಮಿಸುವುದು ಹೇಗೆ ಎನ್ನುವುದರ ಕುರಿತು ಕಂಪೆನಿಯ ಅಧಿಕಾರಿಗಳು ತಮ್ಮ ಗಮನ ಕೇಂದ್ರಿಕರಿಸಿದ್ದಾರೆ.

ಮೊದಲ ಹಂತದ ಯೋಜನೆಯಲ್ಲಿ ಸುಮಾರು 500 ಎಕರೆ ಜಾಗ ಪೆಟ್ರೋಕೆಮಿಕಲ್ಸ್ ಉದ್ದಿಮೆಗಳಿಗೆ ಮೀಸಲಿಟ್ಟಿದ್ದು ಪ್ರಮುಖ ಬಹುರಾಷ್ಟ್ರೀಯ ತೈಲ ಕಂಪೆನಿಗಳಾದ ಬ್ರಿಟಿಷ್ ಪೆಟ್ರೋಲಿಯಂ, ಏರ್ ಲಿಕ್ವಿಡ್, ಅಕ್ಜೊನೊಬಲ್, ಡೌನ್‌ಸ್ಟ್ರೀಮ್ ಪೆಟ್ರೋಲಿಯಂ ಹೀಗೆ ಹಲವು ಕಂಪೆನಿಗಳು ಎಂಎಸ್‌ಇಝೆಡ್‌ನಲ್ಲಿ ಸ್ಥಾನ ಪಡೆಯಲು ಆಸಕ್ತಿ ತೋರಿಸಿದ್ದು ಇಷ್ಟರಲ್ಲೆ ಸ್ಥಳ ಸಮೀಕ್ಷೆಗೆ ಸಂಬಂಧಿಸಿದ ಕಂಪೆನಿಗಳ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಎಸ್‌ಇಝೆಡ್ ಮೂಲಗಳು ತಿಳಿಸಿವೆ.

ಈಗಾಗಲೆ ನಮ್ಮ ಕಂಪೆನಿಯ ಜಾಗಕ್ಕೆ ಆವರಣ ಗೋಡೆ ನಿರ್ಮಿಸುವ ಕಾಮಗಾರಿ ಮುಗಿಯುತ್ತ ಬಂದಿದೆ. ಕುಳಾಯಿಯಲ್ಲಿರುವ 48 ಎಕರೆ ಹಾಗೂ 18 ಎಕರೆ ಜಾಗದ ವ್ಯಾಪ್ತಿಯಲ್ಲಿ ಸಂತ್ರಸ್ತ ಕುಟುಂಬಗಳಿಗಾಗಿ ಪುನರ್ವಸತಿ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು ಮುನ್ನೂರು ಜನ ಈಗಾಗಲೆ ಹೊಸ ಕಾಲೊನಿಯಲ್ಲಿ ವಾಸವಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಸಹ ಇಷ್ಟರಲ್ಲೆ ಆರಂಭವಾಗುತ್ತಿದೆ.

ಭಾರಿ ಸಂಖ್ಯೆಯಲ್ಲಿ ಉದ್ಯೋಗ ಲಭ್ಯವಾಗುವ ಎರಡನೇ ಹಂತದಲ್ಲಿ ಔಷಧಿ ಕಂಪೆನಿ, ಆಭರಣ ಉದ್ಯಮ, ಹಣಕಾಸು ಸೇವೆ, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಘಟಕಗಳು ಅಸ್ತಿತ್ವಕ್ಕೆ ಬರಲಿದ್ದು ವಿಶಾಲ ರಸ್ತೆಗಳನ್ನು ಒದಗಿಸಲಾಗುವುದು.

ಉದ್ಯಮಗಳಿಗೆ ಅಗತ್ಯವಾದ ನಿರಂತರ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು ಕೆಪಿಟಿಸಿಎಲ್‌ನಿಂದ 190 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ಇದರೊಂದಿಗೆ ಎಂಎಸ್‌ಇಝೆಡ್ ತನ್ನ ಪರಿಸರದಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರವನ್ನೂ ಸ್ಥಾಪಿಸುತ್ತಿದೆ.

ಯೋಜನೆಯ ವಿವಿಧ ಘಟಕಗಳಿಗೆ ಅಗತ್ಯವಾದ ನೀರು ಸರಬರಾಜಿಗೆ ಹತ್ತಿರದ ನೇತ್ರಾವತಿ ಹಾಗೂ ಗುರುಪುರ ನದಿಗೆ ಅಡ್ಡಲಾಗಿ ನಾಲ್ಕು ಬ್ಯಾರೇಜ್‌ಗಳನ್ನು ನಿರ್ಮಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ ಇಡೀ ಯೋಜನೆಗೆ ಪ್ರತಿದಿನ 35 ದಶಲಕ್ಷ ಗ್ಯಾಲನ್ (ಎಂಜಿಡಿ) ಅಗತ್ಯವಿದೆ.

ದೂರವಾದ ವಿಘ್ನ: ಕೃಷಿ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಆಕ್ಷೇಪವ್ಯಕ್ತಪಡಿಸಿ ಎಂಎಸ್‌ಇಝೆಡ್ ವಿರುದ್ಧ ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದ ಗ್ರೆಗರಿ ಪತ್ರಾವೊ ಸಹ ಜಮೀನು ನೀಡಲು ಇತ್ತೀಚೆಗೆ ಸಹಮತ ವ್ಯಕ್ತಪಡಿಸಿರುವುದರಿಂದ ವಿಸ್ತರಣಾ ಯೋಜನೆಗೆ ಉಂಟಾಗಿದ್ದ ದೊಡ್ಡ ವಿಘ್ನ ಇದೀಗ ದೂರವಾದಂತಾಗಿದೆ.

ಈ ಸಂಬಂಧ ಕೃಷಿಕ ಪತ್ರಾವೊ ಕುಟುಂಬದವರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಇತ್ತೀಚೆಗೆ ಸಮಾಲೋಚನಾ ಸಭೆ ನಡೆಸಿದ್ದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ವಾರದೊಳಗೆ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ಅಧಿಕಾರಿಗಳು ಆ ದಿನ ಸಭೆ ಕೊನೆಗೊಳಿಸಿದ್ದರು.

ತನ್ನ ಭೂಮಿ ಸ್ವಾಧೀನ ಸಂಬಂಧ ಪತ್ರಾವೊ ಎಸ್‌ಇಝೆಡ್ ಹಾಗೂ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದರಿಂದ ಮೊದಲು ಈ ಪ್ರಕರಣ ಇತ್ಯರ್ಥವಾಗಬೇಕು ಇಲ್ಲವೆ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂಬ ಷರತ್ತನ್ನು ಜಿಲ್ಲಾಡಳಿತ ಮುಂದಿಟ್ಟಿರುವುದರಿಂದ ಪರಿಹಾರ ಕಂಡುಕೊಳ್ಳುವುದರಲ್ಲಿ ತುಸು ವಿಳಂಬವಾಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT