ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರೂಪಿ ಸುನಾಮಿ! (ಚಿತ್ರ: ಸುನಾಮಿ)

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಸುನಾಮಿ ಕಡಲ ಕಿನಾರೆಗಳನ್ನು ಹುರಿದು ಮುಕ್ಕುತ್ತದೆ. ಮುಂಬೈನಲ್ಲಿ ಅಲೆಗಳ ಮಧ್ಯೆ ಉದ್ಯಮಿ ದಂಪತಿಗೆ ಬಾಲಕನೊಬ್ಬ ದಕ್ಕುತ್ತಾನೆ. ಅನಾಮಿಕ ಬಾಲಕನ ಹೆಸರು ಸುನಾಮಿ ಎಂದಾಗುತ್ತದೆ. ಹುಡುಗ ಬೆಳೆದು ರೌಡಿಯಾಗುತ್ತಾನೆ.

ತನ್ನ ಕೆಲಸಕ್ಕೆ ಅಡ್ಡ ಬಂದವರನ್ನೆಲ್ಲಾ ಕೊಚ್ಚುತ್ತಾ ಹೋಗುತ್ತಾನೆ. ತನ್ನ ಮಲ ತಂದೆ,ತಾಯಿಯರನ್ನು ಕೊಂದವರನ್ನೂ ಬಿಡುವುದಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ಕರ್ನಾಟಕಕ್ಕೆ ಗಡಿಪಾರಾಗುತ್ತಾನೆ.
 
ಅಲ್ಲಿ ದಂಧೆಯೊಂದರಲ್ಲಿ ತೊಡಗಿದ್ದ ಅವನಿಗೆ ಸಮಾಜ ಘಾತುಕ ಶಕ್ತಿಗಳ ಪರಿಚಯವಾಗುತ್ತದೆ. ಅವರು ನಗರವನ್ನು ಸ್ಫೋಟಿಸಲು ಸಂಚು ರೂಪಿಸುತ್ತಾರೆ. ಆದರೆ ಆತ ಅದನ್ನು ವಿಫಲಗೊಳಿಸಿ ಅವರನ್ನೆಲ್ಲಾ ಬಲಿ ಪಡೆಯುತ್ತಾನೆ, ತಾನೂ ಬಲಿಯಾಗುತ್ತಾನೆ.

ಸುನಾಮಿಯ ದುರಂತ ಚಿತ್ರಣವನ್ನು ಕಟ್ಟಿಕೊಡುತ್ತ, ವಿಜ್ಞಾನ ತನ್ನ ಗಡಿ ಮೀರಿದರೆ ಆಗಬಹುದಾದ ಅನಾಹುತಗಳನ್ನು ಸ್ಮರಿಸುತ್ತ, ಪ್ರಕೃತಿಯ ಧೀಶಕ್ತಿಗೆ ಕೈ ಮುಗಿಯುತ್ತ ಆರಂಭವಾಗುತ್ತದೆ ಚಿತ್ರ.
 
ಪ್ರೇಮಕ್ಕಿಂತ ವಾಸ್ತವ ದೊಡ್ಡದು ಎನ್ನುತ್ತ, ಮತ್ತೊಂದು ದೃಶ್ಯದಲ್ಲಿ ಕನ್ನಡಿಗರ ಔದಾರ್ಯವನ್ನು ಬಿಂಬಿಸುತ್ತ ಮಿಂಚುತ್ತಾರೆ ನಿರ್ಮಾಪಕರೂ ಆಗಿರುವ ಚಿತ್ರದ ನಾಯಕ ರಾಜ. ಮಾತು ಮಾತಿಗೆ `ಸಮ್ಜೇ~ ಎನ್ನುವ ಅವರ ಮಾತು ಪ್ರೇಕ್ಷಕರಿಗೆ ಮುದ ನೀಡಬಲ್ಲದು. ನಾಯಕ ದುರಂತ ಅಂತ್ಯ ಕಾಣುವುದು ಸಹಜತೆಯನ್ನು ಹೆಚ್ಚಿಸಿದೆ.

ಅದೆಲ್ಲ ಸರಿ. ಆದರೆ ಅನಾಥ ಬಾಲಕನೊಬ್ಬ ರೌಡಿಯೇ ಆಗಬೇಕು ಎಂಬುದು ಎಷ್ಟು ಸರಿ? ಹೀಗೆಂದು ಪ್ರೇಕ್ಷಕರು ಪ್ರಶ್ನಿಸಲಾಗದು. ಕಾರಣ ಇದು ಹೊಡೆದಾಟ ಬಡಿದಾಟದ ಚಿತ್ರಗಳ ಸಾಲಿಗೆ ಸೇರುವ ಮತ್ತೊಂದು ಚಿತ್ರ. `ಕೈಗೆ ಕೈ, ಕಣ್ಣಿಗೆ ಕಣ್ಣು~ ಎಂಬ ನೀತಿ ಚಿತ್ರದ ಕೊನೆಯವರೆಗೂ ಕಾಣುತ್ತದೆ.

ಪ್ರೇಯಸಿಯಾಗಿ ನಟಿಸಿರುವ ಸೋನಿಯಾ ಕೇವಲ ಬಂದು ಹೋಗುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಚಿತ್ರವೊಂದಕ್ಕೆ `ಎಲ್ಲಾ ಇರಬೇಕು~ ಎಂಬ ಕಾರಣಕ್ಕೆ ನಿರ್ದೇಶಕ ಮಾಕಂ ಮನೋಹರ್ ನಾಯಕಿಯ ಪಾತ್ರವನ್ನು ಸೃಷ್ಟಿಸಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ.
 
ದೊಡ್ಡಣ್ಣ, ಬುಲೆಟ್ ಪ್ರಕಾಶ್, ಟೆನಿಸ್ ಕೃಷ್ಣ, ಡಿಂಗ್ರಿ ನಾಗರಾಜ್, ಬಿರಾದಾರ್ ಅವರಂತಹ ಹಾಸ್ಯ ಕಲಾವಿದರ ದಂಡೇ ಇದ್ದರೂ ನಗಿಸುವ ಯತ್ನ ಫಲ ನೀಡಿಲ್ಲ. ದ್ವಂದ್ವಾರ್ಥಗಳಿಗೆ, ಕೀಳು ಅಭಿರುಚಿಗೆ ಸೀಮಿತವಾಗಿ ಹಾಸ್ಯ ನರಳುತ್ತದೆ.

ಇನ್ನು ಚಿತ್ರದಲ್ಲಿ `ಹಿಂದಿ ಹೇರಿಕೆ~ ಹೇರಳವಾಗಿ ನಡೆದಿದೆ. ಒಂದು ಹಂತದಲ್ಲಿ ಇದು ಕನ್ನಡ ಚಿತ್ರವೇ ಎಂಬ ಅನುಮಾನ ಮೂಡಿದರೂ ಅಚ್ಚರಿಯಿಲ್ಲ. ಎಲ್ಲೆಂದರಲ್ಲಿ ಹಾಡುಗಳು ನುಗ್ಗುವುದು, ಮಸಾಲೆ ಹಾಡುಗಳೇ ಮೆರೆದಿರುವುದು ಚಿತ್ರದ ಮತ್ತೊಂದು ದೋಷ.

ನಾಯಕಿ ಸೋನಿಯಾಗೆ ಹೋಲಿಸಿದರೆ ಐಟಂ ಗರ್ಲ್ ಪೂನಂ ಗೋಸ್ವಾಮಿ ಚೇತೋಹಾರಿಯಾಗಿ ಕಾಣುತ್ತಾರೆ. ರಂಗಾಯಣ ರಘು, ಬ್ಯಾಂಕ್ ಜನಾರ್ದನ್ ಅಭಿನಯ ಕೊಂಚ ಸಮಾಧಾನ ತರಬಲ್ಲದು.

ಹಾಡೊಂದರಲ್ಲಿ ಕಾಣುವ ಕನ್ನಡ ಪ್ರೇಮ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಕಾಣುವುದಿಲ್ಲ. ಹೆಸರುಗಳನ್ನು ತೋರಿಸುವಾಗ ಅಕ್ಷರ ದೋಷ ರಾರಾಜಿಸುತ್ತದೆ. ಸಂಕಲನಕಾರ ಬಲರಾಮ್ ದೃಶ್ಯವೊಂದರಲ್ಲಿ ಕರ್ನಾಟಕ ಭೂಪಟ ಪದೇ ಪದೇ ಉಲ್ಟಾ ಆಗುವುದನ್ನು ಗಮನಿಸಿಲ್ಲ.

ಜನಪರವಾಗಿ ಹೋರಾಡುವವರನ್ನು ಕೂಡ ಭಯೋತ್ಪಾದಕರೆಂಬಂತೆ ಬಿಂಬಿಸಿರುವುದು ಬಾಲಿಶವಾಗಿ ತೋರುತ್ತದೆ. ಸಶಸ್ತ್ರ ಹೋರಾಟಗಳೆಲ್ಲವೂ ಜನರ ವಿರುದ್ಧವಾಗಿಯೇ ನಡೆದಿವೆ ಎಂಬ ತೀರ್ಪನ್ನು ಕಥೆ ಚಿತ್ರಕತೆ ಬರೆದಿರುವ ನಿರ್ದೇಶಕರು ನೀಡಲು ಹೊರಟು ವಿಫಲವಾಗುತ್ತಾರೆ. ಹೀಗಾಗಿ ಸೆನ್ಸಾರ್ ಕತ್ತರಿಗೂ ಚಿತ್ರದ ಸಂಭಾಷಣೆಗಳು ತುತ್ತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT