ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರೂಪಿಗೆ ವರ್ಣರಂಜಿತ ತೆರೆ

Last Updated 23 ಜನವರಿ 2012, 6:15 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣವು ಜ. 14 ರಿಂದ 22 ರ ವರೆಗೆ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಭಾನುವಾರ ಸಂಜೆ ವರ್ಣರಂಜಿತವಾಗಿ ತೆರೆ ಕಂಡಿತು.

ಉತ್ಸವದ  ಕೊನೆಯ ದಿನವಾದ ಭಾನುವಾರ ರಂಗಾಸಕ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ  ಜಮಾಯಿಸಿದ್ದರು. ರಂಗಾಯಣದ ಇಡೀ ಆವರಣದಲ್ಲಿ ಹಬ್ಬದ ವಾತಾವಾರಣ ನಿರ್ಮಾಣವಾಗಿತ್ತು.

ಮಂದ ಗಾಳಿ, ಮಾಗಿಯ ಚಳಿ, ಕುರುಕುಲು ತಿಂಡಿ-ತಿನಿಸುಗಳು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣಗಾಯಿ ಪಲ್ಯ ರಂಗಾಸಕ್ತರ ರುಚಿ ತಣಿಸಿದವು. ಪುಸ್ತಕ ಹಾಗೂ ವಸ್ತು ಪ್ರದರ್ಶನದಲ್ಲಿ ಜನ ಮುಗಿಬಿದ್ದು ಖರೀದಿಸಿದರು. ಕಲಾಮಂದಿರ, ಭೂಮಿಗೀತ ಹಾಗೂ ವನರಂಗದಲ್ಲಿ ಪ್ರದರ್ಶಿತಗೊಂಡ ನಾಟಕಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ಸಮಾರೋಪ: `ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಮುಂದಾಗಿರುವುದು ಅನಗತ್ಯ. ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದು ಬಿಟ್ಟು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿರುವ ಸರ್ಕಾರದ ನಿರ್ಧಾರ ಸರಿಯಲ್ಲ~ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ರಂಗಾಯಣದ ವನರಂಗದಲ್ಲಿ ಭಾನುವಾರ ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಭಗವದ್ಗೀತೆಯ ಬಗ್ಗೆ ನನಗೆ ಗೌರವವಿದೆ. ಭಗವದ್ಗೀತೆ ಬದಲು ಎಲ್ಲ ಧರ್ಮಗಳ ಸಾರವನ್ನು ಒಳಗೊಂಡ ಕಿರುಹೊತ್ತಿಗೆಯನ್ನು ತಂದು ಅದನ್ನು ಪಠ್ಯದಲ್ಲಿ ಅಳವಡಿಸಬಹುದು.

ವ್ಯಾವಹಾರಿಕ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಆದರೆ, ಮುಖ್ಯವಾಗಿ ನಮಗೆ ಬೇಕಿರುವುದು ನೈತಿಕ ಶಿಕ್ಷಣ. ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು~ ಎಂದು ಸಲಹೆ ನೀಡಿದರು.

`ಇಂದಿನ ಸರ್ಕಾರಕ್ಕೆ ಮೌಢ್ಯಗಳ ನಿವಾರಣೆಗೆ ಬಗ್ಗೆ ಆಸಕ್ತಿ ಇಲ್ಲ. ಮಡೆಸ್ನಾನ, ಬೆತ್ತಲೆ ಸೇವೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಹೋಗಲಾಡಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಬುದ್ಧಿಜೀವಿಗಳು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ.
 
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅನಿಷ್ಟ ಪದ್ಧತಿ ಹೋಗಲಾಡಿಸುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ. ದೃಶ್ಯ ಮಾಧ್ಯಮ ಏಕರೂಪಿಯಾಗಿದ್ದು ಹಾನಿಕರವಾಗಿದೆ. ನಾಟಕ ಕ್ಷೇಮಕರ ಮಾಧ್ಯಮವಾಗಿದೆ. ಭಿನ್ನ ಭಿನ್ನ ಅಭಿರುಚಿಯುಳ್ಳ ಜನರಿಗೆ ನಾಟಕ ಹಲವು ಬಗೆಯಲ್ಲಿ ತೃಪ್ತಿ ನೀಡುತ್ತದೆ. ಆದ್ದರಿಂದ ರಂಗಭೂಮಿಗೆ ಪರಿಪೂರ್ಣ ಕಲೆಯಾಗಿ ನಿಂತಿದೆ. ಕಾವ್ಯ ಕಲಿತವರ ಕಾಮಧೇನುವಾದರೆ, ನಾಟಕ ಅಥವಾ ರಂಗಭೂಮಿ ಕಲಿಯದವರ ಕಲ್ಪವೃಕ್ಷವಾಗಿದೆ. ನಾಟಕ ಬದುಕಿಸುವ ಕಲೆಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖ್ಯ ಕಾರ್ಯದರ್ಶಿ ಬಸವರಾಜು ಮಾತನಾಡಿ, `ಶಿವಮೊಗ್ಗ, ಧಾರವಾಡದಲ್ಲಿ ರಂಗಾಯಣ ಘಟಕ ಆರಂಭಿಸಲಾಗಿದೆ. ಗುಲ್ಬರ್ಗಾದಲ್ಲೂ ಇನ್ನೊಂದು ಘಟಕ ಆರಂಭಿಸುವ ಯೋಜನೆ ಸರ್ಕಾರದ ಮುಂದಿದೆ~ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, `ಭೂಮಿಯೇ ರಂಗಭೂಮಿ. ಇಲ್ಲಿ ಎಲ್ಲರೂ ಕಲಾವಿದರು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಮಹತ್ವದ್ದಾಗಿದೆ. ಸಮಾಜದ ಅಂಕು-ಡೊಂಕು ತಿದ್ದಲು ರಂಗಭೂಮಿ ಸಹಕರಿಯಾಗಿದೆ~ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸದಾರಮೆ ರಂಗಗೀತೆ ಸಿ.ಡಿ ಬಿಡುಗಡೆ ಮಾಡಲಾಯಿತು. ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ರಂಗಾಯಣ ನಿರ್ದೇಶಕ ಡಾ. ಬಿ.ವಿ.ರಾಜಾರಾಂ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT