ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಾಂಗ್ಲಾ ಅಕ್ರಮ ಅಡಿಕೆಗೆ ಕಡಿವಾಣ'

ಕೃಷಿ ಸಾಲ ಮನ್ನಾಕ್ಕೆ ರಾಜ್ಯ ನಿಯೋಗದ ಆಗ್ರಹ
Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಬಾಂಗ್ಲಾದೇಶದ ಗಡಿ ಮೂಲಕ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಅಕ್ರಮ ರವಾನೆ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ತಿಳಿಸಿದರು.

ಕಾನೂನು ಸಮ್ಮತ ರೀತಿಯಲ್ಲಿ ಬಾಂಗ್ಲಾದೇಶದಿಂದ ದೇಶದ ಮಾರುಕಟ್ಟೆಗೆ ಅಡಿಕೆ ಆಮದಾಗುತ್ತಿದೆ. ಇದರ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಆದರೆ, ಅಕ್ರಮ ಸಾಗಣೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ(ಡಿಜಿಎಫ್‌ಟಿ) ಕೂಡ ಈ ಕುರಿತು ಈಗಾಗಲೇ ಸೀಮಾಸುಂಕ ಇಲಾಖೆಗೆ ಸೂಚನೆ ನೀಡಿದೆ ಎಂದರು.

ಕರ್ನಾಟಕದ ನಿಯೋಗ
`ಎಐಸಿಸಿ' ಪ್ರಧಾನ ಕಾರ್ಯದರ್ಶಿ  ಆಸ್ಕರ್ ಫರ್ನಾಂಡಿಸ್ ನೇತೃತ್ವದ ಕರ್ನಾಟಕ ಸಂಸದರ ನಿಯೋಗ ಮಂಗಳವಾರ ಇಲ್ಲಿ ಕೃಷಿ ಸಚಿವ ಶರದ್ ಪವಾರ್ ಮತ್ತು ವಾಣಿಜ್ಯ ಸಚಿವ ಆನಂದ ಶರ್ಮಾ ಅವರನ್ನು ಭೇಟಿಯಾಗಿ ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಿತು.

ಭಾರತ 2011ರ ನವೆಂಬರ್‌ನಿಂದ ಬಾಂಗ್ಲಾ ಸೇರಿದಂತೆ `ಸಾರ್ಕ್' ಒಕ್ಕೂಟದ ಅತ್ಯಲ್ಪ ಅಭಿವೃದ್ಧಿ ಹೊಂದಿದ ದೇಶಗಳಿಂದ ತೆರಿಗೆ ಮುಕ್ತ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಅವಕಾಶ ಬಳಸಿಕೊಂಡು ಇಂಡೊನೇಷ್ಯಾದಿಂದ ಅಂದಾಜು ರೂ. 500 ಕೋಟಿ ಮೌಲ್ಯದ ಕಳಪೆ ಅಡಿಕೆ ಬಾಂಗ್ಲಾ ಗಡಿ ಮೂಲಕ ಪ್ರತಿ ವರ್ಷ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಇದು ದೇಶದ ಅಡಿಕೆ ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ನಿಯೋಗ ಮನವರಿಕೆ ಮಾಡಿಕೊಟ್ಟಿತು. ಅಲ್ಪಾವಧಿವರೆಗೆ ಅಡಿಕೆ ಆಮದು ಮೇಲೆ ನಿಷೇಧ ಹೇರಬೇಕು. ಆಮದು ಅಡಿಕೆ ಗುಣಮಟ್ಟ ಪರೀಕ್ಷಿಸಿ ಖಾತರಿ ಪಡಿಸಲು ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಬೇಕು. ಮುಖ್ಯವಾಗಿ ಹಳದಿ ಎಲೆ ರೋಗದಿಂದ ಹಾನಿಗೊಳಗಾಗಿರುವ 4 ಹೆಕ್ಟೇರ್‌ವರೆಗಿನ ಭೂಮಿ ಹೊಂದಿರುವ ರಾಜ್ಯದ ಅಡಿಕೆ ಬೆಳೆಗಾರರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಹಾಗೂ ವಿಶೇಷ ಹಣಕಾಸಿನ ಪ್ಯಾಕೇಜ್ ಘೋಷಿಸಬೇಕು ಎಂದೂ ನಿಯೋಗ ಆಗ್ರಹಿಸಿತು.

ಅಡಿಕೆ ಅಕ್ರಮ ಆಮದು ತಡೆಯಲು ಕಳೆದ ವರ್ಷ ಕನಿಷ್ಠ ಆಮದು ಶುಲ್ಕ ಹೆಚ್ಚಿಸಲಾಗಿದೆ. ವ್ಯಾಪಾರಿಗಳನ್ನು ಅಡಿಕೆ ಆಮದು ವಹಿವಾಟಿನಿಂದ ಹೊರಗಿರಿಸಲಾಗಿದೆ ಎಂದು ಶರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ನಿಯೋಗ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿತು. ಸಚಿವ ಕೆ.ಎಚ್. ಮುನಿಯಪ್ಪ, ಸಂಸದರಾದ ಜಯಪ್ರಕಾಶ್ ಹೆಗಡೆ, ಎಚ್. ವಿಶ್ವನಾಥ್ ಮತ್ತಿತರರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT