ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಕೋಚ್ ಆಗಿ ಮಮತಾ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಮತಾ ಮಾಬೆನ್ ಬಾಂಗ್ಲಾದೇಶ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಈ ವಿಷಯವನ್ನು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ನ ನಿರ್ದೇಶಕ ಹಾಗೂ ಮುಖ್ಯ ಕೋಚ್ ಇರ್ಫಾನ್ ಸೇಟ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಕೂಡ ತನ್ನ ವೆಬ್‌ಸೈಟ್‌ನಲ್ಲಿ ಈ ವಿಷಯ ಪ್ರಕಟಿಸಿದೆ.

ಬೆಂಗಳೂರಿನ ಮಮತಾ ಕಳೆದ ವಾರವೇ ಢಾಕಾಕ್ಕೆ ತೆರಳಿದ್ದು ತರಬೇತಿ ಆರಂಭಿಸಿದ್ದಾರೆ. ಅವರು ಬಾಂಗ್ಲಾ ಮಹಿಳಾ ತಂಡಕ್ಕೆ ನೇಮಕವಾದ ಮೊದಲ ವಿದೇಶಿ ಕೋಚ್ ಎನಿಸಿದ್ದಾರೆ.

`ಆಟಗಾರ್ತಿ ಹಾಗೂ ಕೋಚ್ ಆಗಿ ಮಮತಾ ಯಶಸ್ವಿಯಾಗಿದ್ದಾರೆ. ಚೀನಾ ಮಹಿಳಾ ತಂಡದ ಕೋಚ್ ಆಗಿ ಕೂಡ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಟೂರ್ನಿಯಲ್ಲಿ ಚೀನಾ ನಾಲ್ಕನೇ ಸ್ಥಾನ ಪಡೆದಿತ್ತು~ ಎಂದು ಇರ್ಫಾನ್ ತಿಳಿಸಿದರು.

ನವೆಂಬರ್‌ನಲ್ಲಿ ಢಾಕಾದಲ್ಲಿ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯಲಿವೆ. 10 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿದ್ದು ಅಗ್ರ ಆರು ಸ್ಥಾನ ಪಡೆದರೆ ವಿಶ್ವಕಪ್‌ಗೆ ಅರ್ಹತೆ ಲಭಿಸಲಿದೆ. ಅದು ಮಮತಾ ಅವರ ಪ್ರಮುಖ ಗುರಿ.

`ಮಮತಾ ಬಿಸಿಸಿಐ ನಡೆಸುವ ಕೋಚಿಂಗ್ ಹಂತ-1ರಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಕೋಚಿಂಗ್‌ನಲ್ಲಿ ನಾಲ್ಕು ವರ್ಷಗಳ ಅನುಭವವಿದೆ~ ಎಂದೂ ಅವರು ಹೇಳಿದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಅವರು ಮಧ್ಯಮ ವೇಗದ ಬೌಲರ್ ಕೂಡ. ಮಮತಾ ಅವರ ಹೆಸರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಫಾರಸು ಮಾಡಿದೆ ಎನ್ನಲಾಗಿದೆ. ಚೀನಾದ ಮಹಿಳೆಯರು ಕ್ರಿಕೆಟ್‌ನತ್ತ ಗಮನ ಹರಿಸಲು ಕಾರಣ 40 ವರ್ಷ ವಯಸ್ಸಿನ ಮಾಬೆನ್.

ರಾಜ್ಯದ ಆಲ್‌ರೌಂಡರ್ ಮಮತಾ 1993ರಿಂದ 2005ರ ಅವಧಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು. 40 ಏಕದಿನ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. 1993ರ ಮಹಿಳಾ ವಿಶ್ವಕಪ್‌ನಲ್ಲೂ ಪಾಲ್ಗೊಂಡಿದ್ದರು. 2003ರಲ್ಲಿ ಅವರು ಭಾರತ ತಂಡ ಮುನ್ನಡೆಸಿದ್ದರು.

ಬಾಂಗ್ಲಾ ತಂಡ ಮುಂದಿನ ಅಕ್ಟೋಬರ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅದು ಮಮತಾ ಅವರಿಗೆ ಮೊದಲ ಸವಾಲು. ಬಳಿಕ ಭಾರತದ ರಾಜ್‌ಕೋಟ್‌ನಲ್ಲಿ ಅಭ್ಯಾಸ ನಡೆಸಲು ಆಗಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT