ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

Last Updated 18 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಕ್ವಾರ್ಟರ್‌ಫೈನಲ್ ತಲುಪುವ ಲೆಕ್ಕಾಚಾರದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಬೇಕು. ಇದೇ ಬಾಂಗ್ಲಾದೇಶ ತಂಡದ ಮುಂದಿರುವ ಸವಾಲು. ಆದ್ದರಿಂದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿರುವ ಅದು ‘ಮಾಡು ಇಲ್ಲವೇ ಮಡಿ’ ಎನ್ನುವಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದೆ.

ವಿಶ್ವಕಪ್ ಕ್ರಿಕೆಟ್ ಆತಿಥೇಯ ದೇಶಗಳಲ್ಲಿ ಒಂದಾಗಿರುವ ಬಾಂಗ್ಲಾ ತಂಡವು ಎಂಟರ ಘಟ್ಟದಲ್ಲಿ ಆಡಬೇಕೆಂದು ದೇಶದ ಕ್ರಿಕೆಟ್ ಪ್ರೇಮಿಗಳು ಬಯಸಿರುವುದು ಸಹಜ. ಆದರೆ ಇಂಗ್ಲೆಂಡ್ ತಂಡವು 18 ರನ್‌ಗಳ ಅಂತರದಿಂದ ವೆಸ್ಟ್ ಇಂಡೀಸ್ ವಿರುದ್ಧ ವಿಜಯ ಸಾಧಿಸಿದ ನಂತರ ಬಾಂಗ್ಲಾದವರು ಕ್ವಾರ್ಟರ್‌ಫೈನಲ್‌ನಲ್ಲಿ ಆಡುವ ಆಸೆ ಕರಗುವಂಥ ಆತಂಕ!

ಆದರೂ ಬಾಂಗ್ಲಾ ಕೈಚೆಲ್ಲಿಲ್ಲ. ಇನ್ನೂ ಅವಕಾಶ ಇದೆ ಎಂದು ಸಕಾರಾತ್ಮಕವಾಗಿ ಯೋಚಿಸುತ್ತಿದೆ. ದಕ್ಷಿಣ ಆಫ್ರಿಕಾ ಎದುರು ಅಚ್ಚರಿಯ ವಿಜಯ ಸಾಧಿಸಿದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಪಾಯಿಂಟುಗಳ ಪಟ್ಟಿಯಲ್ಲಿ ಕೆಳಗೆ ತಳ್ಳಲು ಸಾಧ್ಯವೆಂದು ಶಕೀಬ್ ಅಲ್ ಹಸನ್ ನೇತೃತ್ವದ ತಂಡದವರು ಯೋಚಿಸುತ್ತಿದ್ದಾರೆ. ಚೆನ್ನೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯಿಸಲೆಂದು ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳು ಹಾರೈಸಿದ್ದರು. ಆದರೆ ಅವರ ಪ್ರಾರ್ಥನೆ ಫಲಿಸಲಿಲ್ಲ. ಈಗ ತಮ್ಮ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಲೆಂದು ಪ್ರಾರ್ಥಿಸತೊಡಗಿದ್ದಾರೆ.

ಶನಿವಾರ ಇಲ್ಲಿನ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿನ ಫಲಿತಾಂಶವು ‘ಬಿ’ ಗುಂಪಿನಲ್ಲಿನ ಲೆಕ್ಕಾಚಾರಗಳಿಗೆ ಸಾಕಷ್ಟು ಮಹತ್ವ ಬರುವಂತೆ ಮಾಡಿದೆ. ಬಾಂಗ್ಲಾ ಗೆದ್ದು ವೆಸ್ಟ್ ಇಂಡೀಸ್ ತಂಡದವರು ಭಾರತದ ಎದುರು ನಿರಾಸೆ ಹೊಂದಿದರೆ ಪಾಯಿಂಟುಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸ ಆಗಲಿದೆ. ಆಗ ಇಂಗ್ಲೆಂಡ್ ಅಪಾಯದ ಕತ್ತಿ ಮೊನೆಯಿಂದ ರಕ್ಷಿಸಿಕೊಳ್ಳುತ್ತದೆ. ಆದರೂ ಬಾಂಗ್ಲಾ-ದಕ್ಷಿಣ ಆಫ್ರಿಕಾ ನಡುವಣ ಹಣಾಹಣಿಯ ಪರಿಣಾಮ ಏನಾಗಿರುತ್ತದೆ ಎನ್ನುವುದು ಆಸಕ್ತಿ ಕೆರಳುವಂತೆ ಮಾಡಿದೆ.

ಸದ್ಯಕ್ಕೆ ‘ಬಿ’ ಗುಂಪಿನಿಂದ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ ಎಂದು ಸ್ಪಷ್ಟವಾಗಿ ಗುರುತಿಸಲು ಇರುವುದು ದಕ್ಷಿಣ ಆಫ್ರಿಕಾ ಮಾತ್ರ. ಆದ್ದರಿಂದ ಅದಕ್ಕೆ ಶನಿವಾರದ ಪಂದ್ಯವು ನಾಕ್‌ಔಟ್ ಹಂತಕ್ಕೆ ಮೊದಲಿನ ತಾಲೀಮು ಮಾತ್ರ.
ಭಾರತ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಈಗ ಒತ್ತಡದಲ್ಲಿವೆ. ಒಂದು ಪಂದ್ಯದಲ್ಲಿ ಆಡುವ ತಂಡವು ಇನ್ನೊಂದು ಪಂದ್ಯದ ಕಡೆಗೆ ಆಸಕ್ತಿಯಿಂದ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT