ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯ ಬೆಸೆಯುವ ‘ಭಾವೈಕ್ಯ ಗವಿ’

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಈ ಗವಿ ಮತ್ತು ಗವಿಯಲ್ಲಿರುವ ಪ್ರತಿಮೆ ನೋಡಿದ ತಕ್ಷಣ ಎಲ್ಲೋ ನೋಡಿದ ನೆನಪು ನಿಮಗೆ ಬಂದರೂ ಅಚ್ಚರಿಯಿಲ್ಲ.
ಏಕೆಂದರೆ ‘ಶ್ರೀರಾಮಚಂದ್ರ’, ‘ಯುಗಪುರುಷ’, ‘ನಲಿನಲಿಯುತಾ ...’ ಸೇರಿದಂತೆ ಅನೇಕ ಚಲನ ಚಿತ್ರಗಳಲ್ಲಿ ಈ ಗವಿಯನ್ನು ಚಿತ್ರೀಕರಿಸಲಾಗಿದೆ. ಈ ಗವಿಯು ಕ್ರೈಸ್ತ ಜನರು ಪೂಜಿಸುವ ಮಾತೆ ಮರಿಯಮ್ಮನವರ ಗವಿ.

‘ಭಾವೈಕ್ಯದ ಗವಿ’ ಎಂದೇ ಪ್ರಸಿದ್ಧಿ ಪಡೆದಿರುವ ಈ ಗವಿ ಕೊಟ್ಟಗೆಹಾರದಿಂದ ಕಳಸಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುವ, ಹೆದ್ದಾರಿ ಪಕ್ಕದಲ್ಲಿರುವ ಕೆಳಗೂರು ಕಾಫಿ ಮತ್ತು ಟೀ ತೋಟದ ಶಾಂತ ಪರಿಸರದ ಮಧ್ಯೆ ನಿಂತಿದೆ.

ಅನೇಕ ವರ್ಷದ ಹಿಂದೆ ಕೆಳಗೂರು ಕಾಫಿ ಮತ್ತು ಟೀ ತೋಟದ ಮಾಲೀಕರು ಲೂರ್ದ್‌ ನಗರದಲ್ಲಿ ಮೂರು ಜನ ಮಕ್ಕಳಿಗೆ ದರ್ಶನವಿತ್ತ ಸವಿ ನೆನಪಿಗಾಗಿ ಮಾತೆ ಮಾರಿಯಮ್ಮನವರ ಗವಿಯನ್ನು ಕಟ್ಟಿಸಿದರು ಎನ್ನುತ್ತಾರೆ ಇಲ್ಲಿನ ಹಿರಿಯರು.

‘ಸುಮಾರು 60– 70 ವರ್ಷಗಳ ಹಿಂದೆ ಆಸ್ಪತ್ರೆಗಳು, ವೈದ್ಯರು ಇರಲಿಲ್ಲ. ನಮಗೆ ನಮ್ಮ ಮಕ್ಕಳಿಗೆ ಹಾಗೂ ದನಕರುಗಳಿಗೆ ಕಾಯಿಲೆಗಳು ಬಂದಾಗ ಈ ತಾಯಿಗೆ ಹರಕೆ ಹೊತ್ತರೆ ರೋಗ ರುಜಿನಗಳು ಗುಣವಾಗುತ್ತಿದ್ದವು’ ಎನ್ನುವುದು ಇಲ್ಲಿಯ ಜನರ ಮಾತು.
ಜಾತಿ – ಧರ್ಮ ಭೇದ ಭಾವವಿಲ್ಲದೆ ತೋಟದ ಜನರು ಅಲ್ಲದೆ ನೆರೆಯ ಗ್ರಾಮಸ್ಥರು, ಅಕ್ಕಪಕ್ಕದವರು ಹರಕೆ ಕಟ್ಟಿಕೊಳ್ಳುವುದು, ಪ್ರಾರ್ಥನೆ ಮಾಡುವುದು, ಮೇಣದ ಬತ್ತಿ ಉರಿಸುವುದು, ಹೂವು ಇಡುವ ಹರಕೆಗಳು ಇಲ್ಲಿ ದಿನಂಪ್ರತಿ ನಡೆಯುತ್ತದೆ.

ತೋಟದಲ್ಲಿ ಕೆಲಸ ಮಾಡುವ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರು ತಮ್ಮ ಮನೆಗಳಲ್ಲಿ ಬೆಳೆದ ಬೆಳೆ, ತರಕಾರಿಗಳನ್ನು ಮೊದಲ ಫಲವನ್ನು ಮಾತೆಗೆ ಅರ್ಪಿಸುತ್ತಾರೆ. ಯಾರ ಮನೆಯಲ್ಲಿ ಮದುವೆ ಹಾಗೂ ಇನ್ನಿತರ ಶುಭ ಕಾರ್ಯ ನಡೆಯುವ ಮೊದಲು ಭಕ್ತರು ಈ ಗವಿಯಲ್ಲಿರುವ ಮಾತೆ ಮರಿಯಮ್ಮನವರಿಗೆ ಹೂ, ಮೇಣ ಬತ್ತಿ ಇತ್ಯಾದಿಗಳನ್ನು ತಮ್ಮ ಭಕ್ತಿಯ ಸಂಕೇತವಾಗಿ ಅರ್ಪಿಸುವ ಪರಿಪಾಠ ಇದೆ.

ಭಕ್ತರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆಯಾದರೆ ಮಾತೆಯ ಪ್ರತಿಮೆಗೆ ಹೂವಿನ ಶೃಂಗಾರ ಮಾಡುವುದಾಗಿ ಹರಕೆ ಕಟ್ಟಿಕೊಂಡು ಅದನ್ನು ಪಾಲಿಸುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುವ ಭಕ್ತರ ಸಂಖ್ಯೆ ಅಪಾರ, ಭಕ್ತರಿಗೆ ಮಾತೆ ಮರಿಯಮ್ಮ ಅಭಯ ಹಸ್ತ ಚಾಚಿ ರಕ್ಷಿಸುತ್ತಾರೆ, ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಇಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸಿಕೊಳ್ಳಲು ಹಲವು ಹರಕೆಗಳನ್ನು ಮಾಡಿಕೊಳ್ಳುತ್ತಾರೆ.

ಉದಾಹರಣೆಗಾಗಿ ಸಂತಾನವಿಲ್ಲದ ದಂಪತಿಗಳು ಸಂತಾನ ಭಾಗ್ಯಕ್ಕಾಗಿ, ಪರದೇಶದಲ್ಲಿ ಉದ್ಯೋಗ ಸಿಗುವಂತೆ, ಮಕ್ಕಳ ಮದುವೆಗೋಸ್ಕರ, ಚರ್ಮವ್ಯಾಧಿಯಿಂದ ನರಳುತ್ತಿರುವ ಅನೇಕರು ಕುಟುಂಬದ ಸಮಸ್ಯೆಗಳು ನೀಗಿಸಲು ಗುಣವಾಗದ ವ್ಯಾಧಿಗಳ ಬಗ್ಗೆ ಜಾತಿ ಭೇದವಿಲ್ಲದೆ ಈ ತಾಯಿಗೆ ಮೊರೆ ಹೋಗುತ್ತಾರೆ.

ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಪವಾಡದಿಂದ ಇತಿಹಾಸ ಪಡೆದಿರುವ ಈ ಗವಿಯ ಮಹೋತ್ಸವವನ್ನು ಪ್ರತೀ ವರ್ಷ ಫೆಬ್ರುವರಿ 12ನೇ ತಾರೀಖಿನಂದು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಈ ತೋಟದ ಜನರಿಗೆ ಹಬ್ಬದ ವಾತಾವರಣ, ಸಂಜೆ 6ಕ್ಕೆ ದಿವ್ಯ ಬಲಿ ಪೂಜೆ.

ಈ ಬಲಿ ಪೂಜೆಗೆ ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮದವರು ಭಾಗವಹಿಸಿ, ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಆಚರಣೆ ಮುಗಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಇದೆ.

ಹೀಗೆ ಬನ್ನಿ
ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ 16 ಕಿ.ಮೀ. ಕಳಸ ರಸ್ತೆಯಲ್ಲಿ ಕೆಳಗೂರು ಎಂಬ ಊರು. ಇಲ್ಲಿಂದ 1 ಕಿ.ಮೀ. ಎಡ ರಸ್ತೆಗೆ ತಿರುಗಿದರೆ ‘ಕೆಳಗೂರು ಟೀ ಫ್ಯಾಕ್ಟರಿ’ಗೆ ಹೋಗುವ ದಾರಿಯಲ್ಲಿ ಈ ಗವಿಯು ಸಿಗುತ್ತದೆ. ಕೆಳಗೂರಿನಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ನಿಲುಗಡೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT