ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯ ವೃದ್ಧಿಗೆ ಬಲ

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಾಲ್ಕು ದಿನಗಳ ವಿಯೆಟ್ನಾಂ ಭೇಟಿಯನ್ನು ಮುಗಿಸಿ ಬುಧವಾರ ವಾಪಸಾಗಿದ್ದಾರೆ. ಎರಡು ರಾಷ್ಟ್ರ­­ಗಳ ನಡುವೆ ಏಳು ಒಪ್ಪಂದಗಳಿಗೆ ಸಾಕ್ಷಿಯಾದ ಈ ಪ್ರವಾಸವನ್ನು ಫಲಪ್ರದ ಎಂದೇ ಹೇಳಲಾಗುತ್ತಿದೆ. ಭಾರತವು ವಿಯೆಟ್ನಾಂಗೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ ₨ ೬೦೦ ಕೋಟಿಯ ನೆರವು ನೀಡುವುದು ಕೂಡ ಈ ಒಪ್ಪಂದಗಳಲ್ಲಿ ಒಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ಸೇರಿದಂತೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಲು ನಿರ್ಧರಿಸಿದಾಗಿನಿಂದಲೇ ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಗಳು
ಕಾಣು­ತ್ತಿವೆ. ಪ್ರಾದೇಶಿಕ ವಲಯದಲ್ಲಿ ನೆರೆಹೊರೆ ರಾಷ್ಟ್ರಗಳೊಂದಿಗೆ ಅನುಸ­ರಿ­ಸ­ಬೇಕಾದ ನೀತಿಗೆ ಒತ್ತು ನೀಡುತ್ತಲೇ ಜಾಗತಿಕ ಮಟ್ಟದಲ್ಲಿ ಪ್ರಭಾವ ಕಾಯ್ದು­ಕೊಳ್ಳಲು ಭಾರತ ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಭಾರತ ಭೇಟಿಗೆ ಮುನ್ನ ಮುಖರ್ಜಿ ಅವರ ವಿಯೆಟ್ನಾಂ ಭೇಟಿ ಏರ್ಪಟ್ಟಿದ್ದನ್ನು ಹಲವು ರೀತಿಗಳಲ್ಲಿ ಅರ್ಥೈಸಲಾಗುತ್ತಿದೆ. ಚೀನಾಗೆ ನಿರ್ದಿಷ್ಟ ಸಂದೇಶ ರವಾನಿಸಲೆಂದೇ ಹೀಗೆ ಪ್ರವಾಸವನ್ನು ಆಯೋಜಿ­ಸಲಾಗಿದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ಈ ಭೇಟಿ ಪೂರ್ವ­ನಿಗದಿತ. ಗಣ್ಯರ ಪ್ರವಾಸಗಳು ಮುಂಚಿತವಾಗಿಯೇ ನಿರ್ಧರಿತ­ವಾಗಿ­ರು­ತ್ತವೆ. ಕ್ಸಿ ಜಿನ್‌­ಪಿಂಗ್‌ ಅವರ ಭಾರತ ಭೇಟಿ ನಿರ್ಧಾರಕ್ಕೆ ಮುನ್ನವೇ ಪ್ರಣವ್‌ ಮುಖರ್ಜಿ ಅವರ ವಿಯೆಟ್ನಾಂ ಭೇಟಿ ನಿಗದಿಯಾಗಿತ್ತು ಎಂಬು­ದನ್ನು ಗಮನಿಸ­­ಬೇಕು. ಭಾರತ–ವಿಯೆಟ್ನಾಂ ಬಾಂಧವ್ಯವನ್ನು ಚೀನಾ ದೃಷ್ಟಿ­ಕೋನ­ದಿಂದ ವಿಶ್ಲೇಷಿಸು­ವುದು  ಸರಿಯಲ್ಲ. ವಿಯೆಟ್ನಾಂ ಕರಾವಳಿಯಲ್ಲಿ ತೈಲ ಶೋಧನೆ, ಭಾರತ–ವಿಯೆಟ್ನಾಂ ನಡುವೆ ವಿಮಾನ ಸೇವೆ ಸುಧಾರಿಸುವ ಒಪ್ಪಂದಗಳಿಗೂ ಸಹಿ ಬಿದ್ದಿರುವುದು ಪ್ರಮುಖ ಹೆಜ್ಜೆ.

ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವುದು ಇದರ ಉದ್ದೇಶ ಎನ್ನಲಾಗಿದ್ದರೂ ಇದಕ್ಕೆ ಕಾರ್ಯತಂತ್ರದ ಆಯಾಮವೂ ಇದೆ.  ತೈಲ ಶೋಧನೆಗೆ ನಿಗದಿ ಮಾಡಿರುವ ಜಾಗದ ಬಗ್ಗೆ ಚೀನಾ ತಕರಾರು ಎತ್ತಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿರುವ ಈ ಪ್ರದೇಶವು ತನ್ನ ಸರ­ಹದ್ದಿಗೆ ಸೇರಿದ್ದು, ಅಲ್ಲಿ ತೈಲ ಶೋಧನೆಗೆ ವಿಯೆಟ್ನಾಂ ಮುಂದಾಗಬಾರದು ಎಂಬುದು ಚೀನಾ ಆಕ್ಷೇಪ. ಈ ಕಾರ್ಯದಲ್ಲಿ ಭಾರತದ ಸಹಭಾಗಿತ್ವದ ಬಗ್ಗೆ ಚೀನಾಗೆ ಅಸಮಾಧಾನ ಇದೆ.

ಭಾರತ– ಚೀನಾ–ವಿಯೆಟ್ನಾಂ ಈ ಮೂರು ರಾಷ್ಟ್ರಗಳ ವಿದೇಶಾಂಗ ನೀತಿಗೆ ೧೯೭೮ರಿಂದಲೂ ಪರಸ್ಪರ ಸಂಬಂಧ ಇದ್ದೇ ಇದೆ. ಈಗಲೂ ಅದು ಮುಂದುವರಿದೇ ಇದೆ. ಚೀನಾವು ಹೇಗೆ ಭಾರತ­ದೊಂದಿಗೆ ಬಾಂಧವ್ಯ ಬಯಸುತ್ತಲೇ ಅತ್ತ ಪಾಕಿಸ್ತಾನಕ್ಕೆ ನೆರವು ನೀಡುತ್ತಾ ಬಂದಿ­ದೆಯೋ ಅದೇ ತಂತ್ರವನ್ನು ಭಾರತವು ಚೀನಾದ ಮೇಲೆ ಪ್ರಯೋಗಿ­ಸಲು ಹೊರಟಿದೆ ಎನ್ನಬಹುದು. ಅಂದರೆ, ಚೀನಾ ಜತೆಗಿನ ಬಾಂಧವ್ಯ ವೃದ್ಧಿಗೆ ತಾನು ಬದ್ಧವಾಗಿದ್ದರೂ ವಿಯೆಟ್ನಾಂ ಜತೆಗಿನ ತನ್ನ ಬಾಂಧವ್ಯವನ್ನು ನಿರ್ಧರಿಸುವ ಉಸಾಬರಿ ಚೀನಾಗೆ ಬೇಕಿಲ್ಲ ಎಂದೇ ಭಾರತ ಹೇಳಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT