ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯಗೀತ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇಂದೂರಿನಲ್ಲಿ ಮೊಕ್ಕಾಂ ಹೂಡಿದ್ದಾಗ `ಶಿವರಾಜ ಸಂಗೀತ ನಾಟಕ ಮಂಡಳಿ~ ಕಾರಣಾಂತರಗಳಿಂದ ನಿಂತುಹೋಯಿತು. ಇದರಿಂದ ಇಂದೂರಿನ ದೊರೆ ತುಕೋಜಿರಾವ ಹೋಳಕರ ಬಹಳ ವ್ಯಸನಪಟ್ಟರು.

ನಂತರ ಗೋವಿಂದರಾವ ಟೇಂಬೆಯವರ ಪ್ರಯತ್ನದಿಂದ 1919-20ರಲ್ಲಿ `ಯಶವಂತ~ ಕಂಪನಿ ಪ್ರಾರಂಭವಾಯಿತು. ಸ್ವತಃ ತುಕೋಜಿರಾವ ಹೋಳಕರರೇ ಅದರ ಮಾಲೀಕರಾಗಿದ್ದರು. ಈ ಕಂಪನಿಯಲ್ಲಿ ಘಟಾನುಘಟಿಗಳೆಲ್ಲ ಗಾಯಕ ನಟರಾಗಿದ್ದರು.

ಸವಾಯಿಗಂಧರ್ವ, ಶಂಕರರಾವ ಸರನಾಯಿಕ, ಕೃಷ್ಣರಾವ ಗೋರೆ, ವಾಮನರಾವ ಸಡೋಲಿಕರ ಹೀಗೆ. ಅವರೊಂದಿಗಿದ್ದ ಹದಿನೈದು ಹದಿನಾರು ವರ್ಷದ ತರುಣನೊಬ್ಬ ಇವರೆಲ್ಲರ ನಟನೆ, ಹಾಡುಗಾರಿಕೆಗಳನ್ನು ಅತ್ಯಂತ ಕುತೂಹಲ ಮತ್ತು ಚಿಕಿತ್ಸಕ ಬುದ್ಧಿಯಿಂದ ಗಮನಿಸುತ್ತ ಬೆಳೆಯುತ್ತಿದ್ದ.

ಅವಕಾಶ ಸಿಕ್ಕಾಗಲೆಲ್ಲ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ. ಈತ ಅಭಿನಯಿಸಿದ `ಸತ್ಯಾಗ್ರಹಿ~ ನಾಟಕದ ನಾರದನ ಪಾತ್ರ ಜನಪ್ರಿಯವಾಗಿತ್ತು. ಈ ನಾಟಕದಲ್ಲಿ ಅವನು ಹಾಡುತ್ತಿದ್ದ `ದೇವಾ ಕುಠೆ ಗುಂತಲಾ~ ರಂಗಗೀತೆ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಮಹಾರಾಜ ತುಕೋಜಿರಾವ ಹೋಳಕರ ಅವನಿಗೆ 800 ರೂಪಾಯಿಗಳ ಬಹುಮಾನ ನೀಡಿದ್ದರು! ಆ ತರುಣನೇ ನಿವೃತ್ತಿಬುವಾ ಸರನಾಯಿಕ.

1927ರಲ್ಲಿ ಯಶವಂತ ಕಂಪನಿಯಲ್ಲಿ ಉಸ್ತಾದ್ ಅಬ್ದುಲ್ ಕರೀಂಖಾನರ ಆಗಮನವಾಯಿತು. ಈಗಾಗಲೇ ಆ ಕಂಪನಿಯಲ್ಲಿ ಖಾನಸಾಹೇಬರ ಶಿಷ್ಯರಾದ ಸವಾಯಿ ಗಂಧರ್ವರು ಮತ್ತು ನಿವೃತ್ತಿಬುವಾನ ಕಾಕಾ ಶಂಕರರಾವ ಸರನಾಯಿಕರು ಗಾಯಕ-ನಟರಾಗಿ ಸೇರ್ಪಡೆಯಾಗಿದ್ದರು. ಸವಾಯಿ ಗಂಧರ್ವರ ಆಗಮನದಿಂದ ಕಂಪನಿಯಲ್ಲಿ ಸಂಚಲನ ಉಂಟಾಯಿತು. ಅಲ್ಲಿದ್ದ ಗಾಯಕ ನಟರಿಗೆಲ್ಲ ಖಾನಸಾಹೇಬರಿಂದ ಹಾಡುಗಾರಿಕೆಯಲ್ಲಿ ವಿಶೇಷ ತರಬೇತಿ ಕೊಡಿಸುವುದು ಮಹಾರಾಜರ ಯೋಚನೆಯಾಗಿತ್ತು.

ಖಾನಸಾಹೇಬರು ಕಂಪನಿಗೆ ಬಂದ ಮೇಲೆ ಅವರ ಬೈಠಕ್ ಆಗದಿದ್ದರೆ ಹೇಗೆ? ಒಂದು ದಿನ ಬೈಠಕ್ ಆಯೋಜಿಸಲಾಯಿತು. ಅವರೊಂದಿಗೆ ತಂಬೂರಿ ಸಾಥಿಗೆ ಸ್ವತಃ ಸವಾಯಿ ಗಂಧರ್ವರು ಮತ್ತು ಶಂಕರರಾವ ಸರನಾಯಿಕ ಅವರೇ ಕುಳಿತುಕೊಂಡರು.

ಖಾನ ಸಾಹೇಬರು ಕಿರಾಣಾ ಘರಾಣೆಯ ಟ್ರಂಪ್‌ಕಾರ್ಡ್ ಎಂದೇ ಪ್ರಖ್ಯಾತವಾಗಿರುವ `ಪೂರಿಯಾ~ ರಾಗ ಪ್ರಸ್ತುತ ಪಡಿಸಲಾರಂಭಿಸಿದರು. ಅಂದಿನ ಅವರ ರಾಗಪ್ರಸ್ತುತಿ ಅಪ್ರತಿಮವಾಗಿತ್ತು. ಪೂರಿಯಾ ರಾಗಗಳ ಜೀವಾಳವಾಗಿರುವ ತೀವ್ರ ಮಧ್ಯಮ, ಗಂಧಾರ, ನಿಷಾದ ಸ್ವರಗಳನ್ನು ಅದ್ಭುತವಾಗಿ ಪ್ರಯೋಗಿಸಿದರು. ಶೋತೃಗಳು ಖಾನಸಾಹೇಬರು ಮಾತ್ರ ಈ ರೀತಿ ಹಾಡಲು ಸಾಧ್ಯವೆಂದು ಮಾತನಾಡಿಕೊಂಡರು.

ತರುಣ ನಿವೃತ್ತಿಬುವಾರ ಮೇಲೆ ಈ ಹಾಡುಗಾರಿಕೆ ಮಾಡಿದ ಪರಿಣಾಮವಂತೂ ಅಗಾಧವಾಗಿತ್ತು. ಇದರ ಜೊತೆಗೆ ಆ ತರುಣನನ್ನು ಇನ್ನೊಂದು ಪ್ರಶ್ನೆ ಕಾಡತೊಡಗಿತ್ತು.

ಖಾನ ಸಾಹೇಬರು ಇಷ್ಟೊಂದು ಅಪ್ರತಿಮವಾಗಿ ಹಾಡುವಾಗ ಸವಾಯಿ ಗಂಧರ್ವರು ಮತ್ತು ತಮ್ಮ ಕಕ್ಕ ಹಿನ್ನೆಲೆಯಲ್ಲಿ ಸಹಗಾಯನವನ್ನು ಮಾಡದೇ ಸುಮ್ಮನೆ ಕುಳಿತದ್ದೇಕೆ? ಬೈಠಕದಲ್ಲಿ ಗುರುಗಳು ಹಾಡುವಾಗ, ಹಿಂದೆ ತಂಬೂರಿ ಮೀಂಟುತ್ತ ಕುಳಿತ ಶಿಷ್ಯರು ಆಗಾಗ ಸ್ವರಗಳನ್ನು ಹಚ್ಚುವುದು ಸಾಮಾನ್ಯ.

ಅಂದಿನ ಕಾರ್ಯಕ್ರಮದಲ್ಲಿ ಇದಾವುದೂ ಘಟಿಸಲಿಲ್ಲ. ಯಾಕೆ? ತರುಣನ ಮನಸ್ಸು ಇದನ್ನು ಅರಿತುಕೊಳ್ಳಲು ಚಡಪಡಿಸತೊಡಗಿತು. ಆದರೆ ಕೇಳುವುದು ಯಾರನ್ನು? ಕಕ್ಕ ಶಂಕರರಾವರನ್ನು ಕೇಳಲು ಹೆದರಿಕೆ. ಕೇಳಿದರೆ ಸವಾಯಿಗಂಧರ್ವರನ್ನೇ ಕೇಳಬೇಕು. ಅವರದು ಸಿಟ್ಟಿನ ಸ್ವಭಾವ. ಏನಾದರಾಗಲಿ, ಸವಾಯಿಗಂಧರ್ವರನ್ನೇ ಕೇಳುವುದೆಂದು ನಿವೃತ್ತಿಬುವಾ ನಿರ್ಧರಿಸಿದರು.

ಮರುದಿನ ಗಂಧರ್ವರು ಒಬ್ಬರೇ ಕುಳಿತಾಗ ಅಲ್ಲಿಗೆ ತೆರಳಿ ಅವರನ್ನು ಪ್ರಶ್ನಿಸಿದರು. `ನಿನ್ನೆ ಖಾನ ಸಾಹೇಬರು ಹಾಡುವಾಗ ನೀವೇಕೆ ಸ್ವರ ಹಚ್ಚಲಿಲ್ಲ?~ ನಿವೃತ್ತಿಬುವಾ ಅವರ ಈ ಪ್ರಶ್ನೆ ಸವಾಯಿಗಂಧರ್ವರ ಮುಖದ ಮೇಲೆ ಮುಗುಳ್ನಗೆ ಮೂಡಿಸಿತು. ಅವರೆಂದರು-
`ಅದೆಲ್ಲ ಈಗ ನಿನಗೆ ತಿಳಿಯುವುದಿಲ್ಲ~.
`ಮತ್ತೆ ಯಾವಾಗ ತಿಳಿಯುತ್ತದೆ?~
`ಹೇಳಲೇಬೇಕೇನು?~
`ಹೌದು~
`ಖಾನ ಸಾಹೇಬರ ಹಾಡಿನ ಸೌಂದರ್ಯವನ್ನು ನಮ್ಮ ಸ್ವರಗಳಿಂದ ಕೆಡಿಸುವುದು ಬೇಕಾಗಿರಲಿಲ್ಲ. ಅವರ ಹಾಡು ಉತ್ಕೃಷ್ಟವಾಗಿತ್ತು. ನಾನು ಮತ್ತು ಶಂಕರ ಕಣ್ಣಲ್ಲೇ ಮಾತನಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೆವು~.

ಈ ಉತ್ತರದಿಂದ ನಿವೃತ್ತಿಬುವಾ ಮೌನವಾದರು. ಸವಾಯಿ ಗಂಧರ್ವರು ಮತ್ತೆ ಹೇಳಿದರು-

`ಸಾಮಾನ್ಯವಾಗಿ ಖಾನಸಾಹೇಬರ ಹಾಡೇ ಬೇರೆ ಮತ್ತು ಅವರು ನಿನ್ನೆ ಹಾಡಿದ ಹಾಡೇ ಬೇರೆ. ನಿನ್ನೆಯ ಅವರ ಹಾಡಿಗೆ ಮೌನವೇ ಸರಿಯಾದ ಪ್ರತಿಕ್ರಿಯೆ~.

ಈ ಉತ್ತರ ನಿವೃತ್ತಿಬುವಾರನ್ನು ಇನ್ನಷ್ಟು ವಿಚಾರಕ್ಕೆ ಹಚ್ಚಿತು. ಖಾನಸಾಹೇಬರ ಇಂಥ ದರ್ಜೆದಾರ ಹಾಡನ್ನು ಕೇಳಿ ಅರ್ಥೈಸಿಕೊಳ್ಳುವುದಕ್ಕೂ ಅರ್ಹತೆ ಬೇಕಲ್ಲವೆ? ಇಂಥ ಅರ್ಹತೆಯುಳ್ಳ ಗವಾಯಿಗಳ ಹತ್ತಿರ ನಾನೇಕೆ ಕಲಿಯಬಾರದು? ತಕ್ಷಣ ಅವರು ಸವಾಯಿಗಂಧರ್ವರಿಗೆ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ವಿನಂತಿಸಿದರು.

ಸವಾಯಿ ಗಂಧರ್ವರೂ ಇಂಥ ಚಿಕಿತ್ಸಕ ಬುದ್ಧಿಯ ತರುಣನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು.

ಅಬ್ದುಲ್‌ಕರೀಂಖಾನ ಸಾಹೇಬರ ಹಾಡು ಗುರು-ಶಿಷ್ಯರ ಬಾಂಧವ್ಯಕ್ಕೆ ಪರೋಕ್ಷವಾಗಿ ಕಾರಣವಾಗಿತ್ತು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT