ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯದ ಅನುಬಂಧ ರಕ್ಷಾ ಬಂಧನ

Last Updated 1 ಆಗಸ್ಟ್ 2012, 9:20 IST
ಅಕ್ಷರ ಗಾತ್ರ

ಗಜೇಂದ್ರಗಡ:  ಅಣ್ಣ-ತಂಗಿಯರ ಸಂಭ್ರಮದ `ರಕ್ಷಾಬಂಧನ~ ಕ್ಕೆ ಪಸಕ್ತ ವರ್ಷ ವಿಶೇಷ ಮೆರಗು ದೊರೆತಿದೆ. ಪ್ರೀತಿಯ ಸಹೋದರರಿಗಾಗಿ ಅಂದ, ಚೆಂದದ ರಾಖಿಗಳ ಹುಡುಗಾಟ, ಖರೀದಿ ಪ್ರಕ್ರಿಯೆಯಲ್ಲಿ ಸಹೋದರಿಯರು ತೊಡಗಿದ್ದಾರೆ. ಶುದ್ಧ ಶ್ರಾವಣ ಮಾಸದ ನೂಲ ಹುಣ್ಣಿಮೆಯಂದು ಬರುವ ರಕ್ಷಾ ಬಂಧನ ಅಣ್ಣ-ತಂಗಿಯರಿಗೆ ಸಂಭ್ರಮದ ಹಬ್ಬ. ಜೊತೆಗೆ ಸಹೋದರತ್ವದ ವಾತ್ಸಲ್ಯವನ್ನು ಭದ್ರಗೊಳಿಸುತ್ತದೆ. ಪ್ರೀತಿ, ಬಾಂಧವ್ಯವನ್ನು ಇಮ್ಮಡಿಗೊಳಿಸುವ ಹಬ್ಬ ಇದಾಗಿದೆ.

 ಐತಿಹಾಸಿಕ ಹಿನ್ನೆಲೆ: ಒಮ್ಮೆ ಇಂದ್ರ ತಾನು ಸೋಲುವ ಲಕ್ಷಣ ಕಂಡಾಗ ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರಾಣಿ ಶ್ರಾವಣದ ನೂಲ ಹುಣ್ಣಿಮೆಯಂದು ಬೃಹಸ್ಪತಿಯ ಸಲಹೆಯಂತೆ ರೇಷ್ಮೆಯ ದಾರವನ್ನು ರಕ್ಷಣೆ ಹಾಗ ಜಯದ ಸಂಕೇತವಾಗಿ ಇಂದ್ರನ ಕೈಗೆ ಕಟ್ಟುತ್ತಾಳೆ. ಬಳಿಕ ಇಂದ್ರ ರಾಕ್ಷಸ ರಾಜನನ್ನು ಸೋಲಿಸಿ ತನ್ನ ಇಂದ್ರ ಲೋಕವನ್ನು ಉಳಿಸಿಕೊಳ್ಳುತ್ತಾನೆ ಎಂಬ ಕಥೆ ಚಾಲ್ತಿಯಲ್ಲಿದೆ.

ಹೀಗಾಗಿ ರಜಪೂತರು ಯುದ್ಧಕ್ಕೆ ಹೊರಟ ಗಂಡು ಮಕ್ಕಳಿಗೆ ಹಣೆಗೆ ಕುಂಕುಮ ಹಚ್ಚಿ ರಕ್ಷಣೆಯ ಸಂಕೇತವಾಗಿ ರೇಷ್ಮೆದಾರ ಕಟ್ಟಿ ಜಯವಾಗಲೆಂದು ಹಾರೈಸುತ್ತಿದ್ದರು. ಹಿಂದೂ ರಾಣಿಯರು ರಾಜರಿಗೆ ರಾಖಿ ಕಟ್ಟಿ ಸಹೋದರತೆಯ ಸಂಬಂಧ ಬೆಳೆಸುತ್ತಿದ್ದರು. ಆಗ ರಾಜ ಸಹೋದರಿಯರ ರಕ್ಷಣೆಗೆ ಸದಾ ನಿಲ್ಲುತ್ತಿದ್ದರು. ಈ ಸಾಂಪ್ರದಾಯವೇ ಈಗಲೂ ರಕ್ಷಾ ಬಂಧನ ರೂಪದಲ್ಲಿ ಉಳಿದುಕೊಂಡು ಬಂದಿದೆ.

300 ವರ್ಷಗಳ ಇತಿಹಾಸ: ರಾಖಿಗೆ ಕ್ರಿಸ್ತ ಪೂರ್ವ 300 ವರ್ಷಗಳ ಇತಿಹಾಸವಿದೆ. ಗ್ರೀಕ್ ವೀರ ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ, ಅಂದಿನ ಭರತ ಖಂಡದ ಪುರೂರವ ಎಂಬ ರಾಜ ಮೊದಲ ಯುದ್ಧದಲ್ಲೇ ಭಾರಿ ಪೆಟ್ಟು ನೀಡಿದ್ದ.

ಇದರಿಂದ ಧೃತಿಗೆಟ್ಟ ಅಲೆಗ್ಸಾಂಡರ್‌ನ ಪತ್ನಿ ರಾಖಿ ಮಹತ್ವವನ್ನು ಮನಗಂಡು ಆತನಿಗೆ ರಾಖಿ ಕಟ್ಟಿದಳು. ಇದರ ಪರಿಣಾಮ ಯುದ್ಧದ ಸಮಯದಲ್ಲಿ ಅಲೆಗ್ಸಾಂಡರ್‌ನನ್ನು ಕೊಲ್ಲುವ ಸಂದರ್ಭ ಎದುರಾದಾಗ ಪುರೂರವ ಆತನನ್ನು ಕೊಲ್ಲದೆ ಸುಮ್ಮನಾಗಿದ್ದ ಎನ್ನಲಾಗುತ್ತಿದೆ.

ಹೈಟೆಕ್ ರಾಖಿಗಳ ಅಬ್ಬರ: ಸಾವಿರ ರೂಪಾಯಿ ಮುಖಬೆಲೆ ವರೆಗಿನ ರಾಖಿಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಕೇವಲ ನೂಲು ಅಥವಾ ಉಲನ್ ಗುಚ್ಛದಂತಿರುವ ರಾಖಿಗಳು ಇಂದು ಕಡಿಮೆ. ಬದಲಿಗೆ ಇವುಗಳ ಸ್ಥಾನದಲ್ಲಿ ಕಸೂತಿ, ಮಣಿ, ಥಾರ್ಮಾಕೋಲ್‌ಗಳಿಂದ ಅಲಂಕರಿಸಿರುವ ರಾಖಿಗಳು ಗೋಚರಿಸುತ್ತವೆ. ದಾರದ ಎಳೆಯ ಬದಲು ಬಂಗಾರದ ಹಾಗೂ ಬೆಳ್ಳಿಯ ಎಲೆಯು ರಾಖಿಗಳಲ್ಲಿ ಕಾಣಸಿಗುತ್ತವೆ. ಇಂದು ಹೈಟೆಕ್ ಟಚ್‌ನಲ್ಲಿ ರಾಖಿಗಳು ಮೆರೆಯುತ್ತಿವುದು ವಿಶೇಷ.

ಬಾಂಧವ್ಯಗಳೇ ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಸಹೋದರತ್ವವನ್ನು ಈ ರಕ್ಷಬಂಧನ ಜೀವಂತವಾಗಿರಿಸಿದೆ. ಬೇರೆ-ಬೇರೆ ಊರುಗಳಲ್ಲಿ ನೆಲೆಸಿ ಬದುಕು ಸಾಗಿಸುತ್ತಿರುವ ಸಹೋದರ-ಸಹೋದರಿಯರು ಹಬ್ಬದ ಪ್ರಯುಕ್ತ ಒಂದೆಡೆ ಸೇರುತ್ತಾರೆ.

ಸಹೋದರಿಯರು ಸಹೋದರರ ಹಣೆಗೆ ಕುಂಕುಮ ಹಚ್ಚಿ, ಆರತಿ ಬೆಳಗಿ ರಾಖಿ ಕಟ್ಟಿ ಸಿಹಿ ತಿನ್ನಿಸುತ್ತಾರೆ. ಸಹೋದರರು ಸಹೋದರಿಯರು ಒಂದುಗೂಡಿ ತಮ್ಮ ಹಳೆಯ ನೆನಪುಗಳ ಬುತ್ತಿಬಿಚ್ಚಿ ಬೆಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾರೆ.

ನಮ್ಮ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಎಷ್ಟೋ ಸ್ತ್ರೀಯರು ಪುರುಷರ ಕೈಗೆ ರಾಖಿ ಕಟ್ಟಿ ಹೋರಾಟಕ್ಕೆ ಕಳುಹಿಸುತ್ತಿದ್ದರು. ಆಗಲೇ ಸುರೇಂದ್ರನಾಥ ಬ್ಯಾನರ್ಜಿ ಎಂಬ ಬಂಗಾಳದ ನಾಯಕರು ರಾಖಿಗೆ ರಾಷ್ಟ್ರೀಯ ಹಬ್ಬದ ಸ್ಥಾನಮಾನ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT