ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಸ್ಫೋಟ, ಅಶ್ರುವಾಯು ಪ್ರಯೋಗ..!

Last Updated 29 ನವೆಂಬರ್ 2011, 7:00 IST
ಅಕ್ಷರ ಗಾತ್ರ

ತುಮಕೂರು: ಒಮ್ಮೆಲೆ ಚಿಮ್ಮಿ ಬಂದ ಅಶ್ರುವಾಯು, ಇನ್ನೊಂದು ಮೂಲೆಯಿಂದ ಅಂಬುಲೆನ್ಸ್ `ಕೂಗು~... ಹೀಗೆ ಒಂದರ ಹಿಂದೆ ಮೂಡಿ ಬಂದ ಪ್ರಾತ್ಯಕ್ಷಿಕೆಗಳು ಚಿಣ್ಣರು ಹಾಗೂ ಹಿರಿಯರಲ್ಲಿ ವಿಪತ್ತು ಪರಿಣಾಮ, ತಡೆಯುವ ಕುರಿತು ಜಾಗೃತಿ ಮೂಡಿಸಿದವು.

ರಾಷ್ಟ್ರೀಯ ವಿಪತ್ತು ಶಮನ ದಿನಾಚರಣೆ ಅಂಗವಾಗಿ ಸೋಮವಾರ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗೃಹರಕ್ಷಕ ದಳ, ಪೌರರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ನಗರದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ, ತುರ್ತು ಸೇವೆಗಳು, ಗೃಹರಕ್ಷಕ ದಳದ ಸಿಬ್ಬಂದಿ ವಿಪತ್ತು ನಿರ್ವಹಣೆ ಪಾತ್ಯಕ್ಷಿಕೆ ನಡೆಸಿಕೊಟ್ಟರು.

ಜನಸಂದಣಿಯಲ್ಲಾಗುವ ಬಾಂಬ್ ಸ್ಫೋಟದ ಪರಿಣಾಮವನ್ನು ಮಕ್ಕಳು ವೀಕ್ಷಿಸಿದರು. ಸ್ಫೋಟದಿಂದ ಉಂಟಾಗುವ ಸಾವು, ನೋವು, ಆಕ್ರಂದನ ಈಚಿನ ಬಾಂಬ್ ಸ್ಫೋಟದ ಭೀಕರತೆ ನೆನಪಿಸಿತು. ವಿಪತ್ತು ಉಂಟಾದಾಗ ಅದರ ನಿರ್ವಹಣೆ, ಯೋಜನಾ ವಿಧಾನ, ಸಾರ್ವಜನಿಕರ ಪಾತ್ರ, ಅಗ್ನಿಶಾಮಕ ದಳದ ಜವಾಬ್ದಾರಿ, ಕಾರ್ಯನಿರ್ವಹಣೆ ಅಣಕು ಪ್ರದರ್ಶನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಪ್ರಾಚಾರ್ಯರಾದ ಮರುಳಯ್ಯ, ಚಿಕ್ಕಹನುಮಯ್ಯ, ರಾಜಣ್ಣ, ಐ ಪಾಯಿಂಟ್ ನಿರ್ದೇಶಕ ಸಿ.ವಿ.ಕೇಶವಮೂರ್ತಿ ಹಾಜರಿದ್ದರು.

ಇದಕ್ಕೂ ಮೊದಲು ಬೆಳಿಗ್ಗೆ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಆವರಣದ ಎದುರು ರ‌್ಯಾಲಿ, ಪಥಸಂಚಲನ ನಡೆಯಿತು. ನಗರದ ವಿವಿಧ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

 ವಿಪತ್ತು ನಿರ್ವಹಣೆ ಸ್ಪರ್ಧೆ: ವಿಪತ್ತು ನಿರ್ವಹಣೆ ಹಾಗೂ ತಡೆಯುವಿಕೆ ಕುರಿತು ಈಚೆಗೆ  ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆಯಲ್ಲಿ ಕಾಳಿದಾಸ ಪ್ರೌಢಶಾಲೆ ವಿದ್ಯಾಕುಮಾರ್ (ಪ್ರಥಮ), ಸರ್ವೋದಯ ಪ್ರೌಢಶಾಲೆಯ ಎಚ್.ಜಿ.ಭಾರತಿ (ದ್ವಿತೀಯ),  ಸೇಂಟ್ ಮೆರಿಸ್ ಆಂಗ್ಲ ಪ್ರೌಢಶಾಲೆ ರೈಚಲ್ ಫಿಲಿಪ್ (ತೃತೀಯ), ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಮೆರಿಸ್ ಆಂಗ್ಲ ಪ್ರೌಢಶಾಲೆಯ ಕಾರ್ತಿಕ್ (ಪ್ರಥಮ) ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಲೋಕೇಶ್ (ದ್ವಿತೀಯ), ಸೇಂಟ್ ಮೆರಿಸ್ ಆಂಗ್ಲ ಪ್ರೌಢಶಾಲೆ ಪೃಥ್ವಿ (ತೃತೀಯ) ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT