ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಇತಿಹಾಸ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮರಿಗಾಂಧಿ ಹಜಾರೆಯ ಬೆನ್ನ ಹಿಂದೆ ಬಿದ್ದ ಹಜಾರು ಹೈಕಳ ತಲೆ ಮುಸುಕಿದ ಟೊಪ್ಪಿಗೆ ಈಗ ಕೇಮಿಲ್ಲದೆ ಅವರವರ ಮನೆಯ ಹಜಾರದಲ್ಲಿ ಕೇರಾಫ್ ಭಗಿನಿಗೂಟ.

ಮತ್ತೊಂದು ಚಳವಳಿ ತಲೆಯೆತ್ತುವವರೆಗೆ ಅವಕ್ಕೆ ವಿರಾಮ. ಮತ್ತೆ ಧೂಳು ಕೊಡವಿ ತಲೆಯೊಡ್ಡುವ ದಿನಕ್ಕೆ `ಕಾಯಬೇಕಯ್ಯ ಕಂಡವರ ಬಾಗಿಲಲಿ ನಾಯಿಕುನ್ನಿಗಳಂತೆ ನರರ ಪೀಡಿಸುತ~.  ರಾಮ್‌ಲೀಲಾ ಮೈದಾನಕ್ಕೆ ದಾಳಿ ಇಟ್ಟವರಲ್ಲಿ ಎಷ್ಟು ಜಳ್ಳೋ ,ಎಷ್ಟು ಕಾಳೋ ಯಾರೆಲ್ಲಿ ಹೋದರೋ?

ಈಗ, ಬೇಡಿ, ಕ್ರೇಜಿವಾಲ್, ರಾಮದೇವರ ನಾಮಾವಳಿಯಷ್ಟೆ ಲೋಕಸಭೆಯಲ್ಲಿ ರಿಂಗಣಿಸುತ್ತಿದೆ. ಮಿಕ್ಕಂತೆ ಇತ್ತ ಪ್ರಣಬ್‌ಮುಖರ್ಜಿ, ಅತ್ತ ಆಲೂಸಮೋಸಾ ಜೋಕರ್ ಲಾಲೂಪ್ರಸಾದ ಯಾದವ, ಅಲ್ಲಿ ಜನ ನೆರೆದರೆ ಹುಸಿ ಬಾಂಬಿನ ಬೆದರಿಕೆ. ಇಲ್ಲಿ ಕಿಸೆಗಳ್ಳರ ಕೈಚಳಕ.
 
ಇಷ್ಟಕ್ಕೂ ಬೆಂಗಳೂರಿನಲ್ಲಿ ಸ್ವಾತಂತ್ರ್ಯೋದ್ಯಾನ ತಲೆಎತ್ತಿರುವುದು, ಮಾಜಿ ಸೆಂಟ್ರಲ್ ಜೈಲಿನ ಕೆನ್ನೀರಿನ ಮಣ್ಣಿನ ಮೇಲಲ್ಲವೆ? ಇಲ್ಲಿ ಏನೇ ಪುಣ್ಯಾಹವಾಚನ, ಪಂಚಗವ್ಯಪ್ರಾಶನ, ಸಂಪ್ರೋಕ್ಷಣೆ ನಡೆದರೂ ಹಳೆ ವಾಸನೆ ಹೋಗದು. ಇದೊಂದು ಮಾಟಗಾತಿ ನೆಲ, ಮಾಂತ್ರಿಕರಿಗೇ ಚಳ್ಳೆಹಣ್ಣು ತಿನ್ನಿಸುತ್ತದೆ.

ಇಲ್ಲಿ ಸಭೆ ಕೂಡಿಸಿ ಜೈಕಾರ ಮಾಡುತ್ತ ಕೈ ಎತ್ತುವುದೇ ತಡ, ಹಾದಿ ಬದಿಯಲ್ಲಿ ಕಿಸೆಯೊಳಗೆ ಕೈ ತೂರಿಸಿ ಕದ್ದು ಕಾಣೆಯಾಗುವ ಕಲಾವಿದರೂ ಮೇಳೈಸುತ್ತಾರೆಂದರೆ ಅದು ಚೋದ್ಯವೋ? ಕುಚೋದ್ಯವೋ? ತಿಳಿಯದು.

ಇಲ್ಲಿ ಮಿಂಚಿದ ನಾಯಕರು ಅಲ್ಲಿ ಲೋಕಾಯುಕ್ತದ ಕಟಕಟೆಯೇರಿ, ಪಂಚೆಯಲ್ಲಿ ಬೆವರು ಒರೆಸಿಕೊಳ್ಳುತ್ತಾರೆಂದರೆ ಅದು ಕ್ಷೇತ್ರ ಮಹಿಮೆ ತಾನೆ! ಅಥವಾ ವಾಸ್ತುದೋಷವೋ? ಮಹಾನಗರ ಪಾಲಿಕೆಯ ಆವರಣದಲ್ಲಿ ಕಟ್ಟಿದ ಭವ್ಯ ಭವನದಲ್ಲಿ ಸಭೆ ಸೇರಲು ಇಂದಿಗೂ ಪುರಪತಿಗಳು ಅಂಜುತ್ತಾರೆ, ಸರ್ಕಾರ ನಡೆಯುತ್ತಿರುವುದೇ ವಾಸ್ತು, ಮಂತ್ರ, ತಂತ್ರ, ಯಂತ್ರಗಳ ಭದ್ರಬೇಲಿಯೊಳಗೆ.

ಸಚಿವರು, ಪಕ್ಷ ಬಿಡುತ್ತಾರೆಂದರೆ ಸಮಸ್ಯೆಯನ್ನು ಬಗೆಹರಿಸಲು ಸಂಖ್ಯಾಶಾಸ್ತ್ರಜ್ಞರು ಓಡಿಬರಬೇಕು. ಆ ಮಾತು ಅಂತಿರಲಿ. ಇಂತಹ ಪುಟಗೋಸಿ ಬಾಬುಗಳಿಗೆಲ್ಲ ತಲೆಕೆರೆದು ಹುಣ್ಣಾಗಿ ಸೆಪ್ಟಿಕ್ ಆಗುವುದು ಬೇಡ. ಒಂದಿಷ್ಟು ನಕ್ಕು ಹಗುರಾಗಲು ಸಾಧ್ಯವಾಗುವುದಾದರೆ ಪಕ್ಕೆ ಬಿರಿಯ ನಕ್ಕುಬಿಡೋಣವೆ? ಬನ್ನಿ. ಸ್ವಲ್ಪ ಸೀರಿಯಸ್ಸಾಗಿಯೇ ನಕ್ಕರೆ ವಾಸಿ, ಎನಿಸುತ್ತದೆ. ಇಲ್ಲವಾದರೆ ಖೋಟಾ ದೇಶಭಕ್ತರು ಕುತ್ತಿಗೆಯ ಮೇಲೆ ಕುಂತಾರು.

ಏನೇ ಮಾಡಿದರೂ ಚಳವಳಿಗಳನ್ನು ತಡೆಯಲಾಗದು. ಕಡಲ ಅಲೆಗಳನ್ನು ಹಿಮ್ಮೆಟ್ಟಲಾಗದು ಅವು ನಡೆಯಬೇಕು. ಹಿಂದುಗುಂಟ, ಟೊಮೇಟೊ ಸೌತೆಕಾಯಿ, ಪಪಾಯಾ, ಸಪೋಟಾ, ಪಾನಿಪೂರಿ, ಭೇಲ್‌ಪೂರಿ, ಗಾಳಿಪಟ, ಹಾವು ಹಲ್ಲಿಗಳ ಬಲೂನ್ ಆಟ ಕುದುರಬೇಕು.

ಮರುದಿನ ರಾಗಿಮುದ್ದೆ ಕಾಲುಸೂಪಿನ ಅಡ್ಡೆಗಳು ದಿಢೀರ್ ಡೇರೆಯೊಳಗೆ ಗರಿಗೆದರಬೇಕು. ಮೊಬೈಲ್ ಕಂಪೆನಿಗಳ ಮೇಜು, ಕುರ್ಚಿಗಳು ಸಾಲುಗಟ್ಟಿ ಸಿಮ್‌ಗಳನ್ನು ಸಿಹಿತಿಂಡಿಗಳಂತೆ, ಬಿಸಿ ಬೋಂಡದಂತೆ ಬಿಕರಿ ಮಾಡಬೇಕು. ಒಟ್ಟಿನಲ್ಲಿ ಒಂದು ಖಾಸಗಿ ಆಹಾರ ಮತ್ತು ನಾಗರಿಕ ಅಗತ್ಯ ಪೂರೈಕೆ ಇಲಾಖೆ ಮೊಕ್ಕಾಂ ಹೂಡಬೇಕು.

 ಈ ನಡುವೆ ಕಾಲೇಜು ಹುಡುಗೇರು ಕ್ಲಾಸು ಕಟಾಯಿಸಿ, ಗೆಣೆಕಾರರ ಮೈಗೆ ಕೈ ಹೆಣೆದು ಬಿರಿದ ತುಟಿ, ಅರೆತೆರೆದ ಎದೆ ಕುಣಿಸುತ್ತ, ನುಗ್ಗೆಕಾಯಿ ಜಸಮ್ಮನ್ನು ಪಡುವಲಕಾಯಿಯಂತೆ ಬಾಗಿ ಬಳುಕಿಸುತ್ತ, ಇತ್ತ ಚಾಟ್ ಮೆದ್ದು ಅತ್ತ ಕೋಕ್ ಸುರುವಿ ಸುಳಿದಾಡುವ ನಕಲಿ ದೇಶಪ್ರೇಮದ, ಅಸಲಿ ಸೊಗಲಾಡಿತನದ ನೋಟ ಕಂಡು ಬೆಕ್ಕಸ ಬೆರಗಾಗಬೇಕು. ಇದು ಚಳವಳಿಯ ಪರಿಧಿಯ ಹೊರಗಣ, ಮೂರ್ತ ಆಯಾಮಗಳು. ಏಕೆ ಎಂದು ಕೇಳಲಾಗದು `ನೋಡಿ ಸ್ವಾಮೀ ನಾವಿರೋದೆ ಹೀಗೆ~ ಎಂದು ಸೆಟೆದು ನಿಲ್ಲುವವರಿಗೆ ಏನೆನ್ನೋಣ?

ಅಕೋ! ಮಾದೇವನ ಪತ್ರ ಕೊರಿಯರ್‌ನಲ್ಲಿ ಬರುತ್ತಿದೆ. ಒಡೆದು ನೋಡುವ `ಆನೆಮಲೆ, ಜೇನುಮಲೆ ಗುಲಗಂಜಿಮಲೆ, ಎಪ್ಪತ್ತೇಳು ಮಲೆ ಮಾದೇವನಿಗೆ ಉಘೇ! ಸಿವಾಯ ನಮಃ ಸದ್ಗುರು ಆಚಾರ‌್ಯರಿಗೆ ಅಡ್ಡಬಿದ್ದೆ, ಯಾಕಾದರೂ ಈ ಚಳವಳಿಗೆ ನುಗ್ಗಿದೆವೋ! ದನಗೂರಿನಲ್ಲಿ ದನಬಡಿದಂತೆ ಬಡಿದು, ಪೊಲೀಸರು ನಮ್ಮನ್ನು ಹಿಂದಕ್ಕೆ ಅಟ್ಟಿದರು ನನ್ನೊಡೆಯಾ ಸೊಂಟ ಮುರಿದಿದೆ. ಮೂಳೆ ಪಲ್ಟಾಯಿಸಿದೆ.

ಮುಳ್ಳೂರು ಆಸ್ಪತ್ರೆಯಲ್ಲಿ ಹಾಸಿಗೆಯ ಅಭಾವ. ಮಾದಾಪುರದ ಹೆರಿಗೆ ಆಸ್ಪತ್ರೆಯಲ್ಲಿ ಖಾಲಿ ಮಂಚದ ಮೇಲೆ ಮಲಗಿದ್ದೇನೆ. ಯಾರೋ ಕೇಳಿದರು- `ಡೆಲಿವರಿ ನಾರ್ಮಲ್ಲೋ, ಇಲ್ಲ ಸಿಜ್ಜರೀನೋ?~ `ಇಲ್ಲ! ಹೆರಿಗೆಗೆ ಬಂದಿಲ್ಲ~ ಎಂದು ಬಾಯಿಮುಚ್ಚಿಸಿದೆ. ಅದು ಬಿಡಿ, ಅಲ್ಲಿ ಯಾರೋ ಪ್ರೊಫೆಸರರ ಕಿಸೆಯಿಂದ ಮೊಬೈಲ್ ಕದ್ದರಂತೆ ಹೌದೆ? ಸ್ವಾತಂತ್ರ್ಯೋದ್ಯಾನದ ಮುಂಬಾಗಿಲಿನಲ್ಲಿ `ಮೊಬೈಲ್ ಕಳ್ಳರಿದ್ದಾರೆ ಎಚ್ಚರಿಕೆ!~ ಬೋರ್ಡ್ ಹಾಕಿಲ್ಲವೆ?

 ಇಲ್ಲಿ ಈರಭದ್ರ ವೀರಾಂಜನೇಯ ಸ್ವಾಮಿಯ ಗುಡಿಯಲ್ಲಿ ಕಳ್ಳತನ ಹೆಚ್ಚುತ್ತಿದೆ. `ಸ್ತ್ರೀಗಳ್ಳರಿದ್ದಾರೆ ಎಚ್ಚರಿಕೆ~- ಫಲಕ ಹಾಕಿಸೋಣವೆಂದರೆ ವ್ಯಾಕರಣ ದೋಷ ಇದೆಯಂತೆ. ಹೌದೆ ಗುರುವೇ! ಸ್ತ್ರೀಯನ್ನು ಕದಿಯುವ ಕಳ್ಳರು~ ಎಂದಾಗುತ್ತದೆ. ಅದು `ಸ್ತ್ರೀಗಳ್ಳಿಯರು. ಇದ್ದಾರೆ~ ಅಂತ ತಿದ್ದುಪಡಿ ಸೂಚಿಸುತ್ತಾರೆ. ಅದರಲ್ಲೂ ದ್ವಿರುಕ್ತಿದೋಷ ಇದೆಯಲ್ಲವೆ? ಕೇವಲ `ಕಳ್ಳಿಯರು ಇದ್ದಾರೆ ಎಚ್ಚರಿಕೆ~ ಎಂದು ಬರೆಸಲೆ?

ಮತ್ತೆ, ಮುಂದಿನ ಚಳವಳಿಯ ದಿನಕ್ಕೆ ಕಾಯದೆ ಬೇಗ ಮದುವೆ ಮಾಡಿಕೋ ಅಂತ ಅಪ್ಪ-ಅಮ್ಮ ದುಂಬಾಲು ಬಿದ್ದಿದ್ದಾರೆ. ಮಾಡಿಕೊಳ್ಳಲೆ? ಹುಡುಗಿ ಬೆಂಗಳೂರಿನವಳು. ಹೆಸರು `ಸ್ನಿಗ್ಧೋಜ್ವಲ ಜ್ಯೋತ್ಸ್ನಾ~ ಅಂತ. ಕಂಪೂಟರ್ ಬಿ.ಇ. ಎಂ.ಬಿ.ಎ. ಮಾಡಿದ್ದಾಳೆ. ಸಾಫ್ಟ್‌ವೇರ್ ತಮ್ಮ ಅಭಿಪ್ರಾಯವೇನು? ಹುಡುಗಿಯೇನೋ ಕತ್ರೀನಾಳಂತೆ ಜಗಮಗಾಯಿಸುತ್ತಿದ್ದಾಳೆ~ ಇಂತು ಮಾದೇವ.

ನನ್ನ ಉತ್ತರ `ಮಾದೇವು, ಹುಡುಗಿಯ ಸಂಸ್ಕೃತ ನಾಮಧೇಯಕ್ಕೆ ಬೆರಗಾಗಬೇಡ. ಅವಳು ಕತ್ರೀನಾ ಅಲ್ಲ, ಛತ್ರಿ ಸ್ನಿಗ್ಧೆಯಲ್ಲ ಸಿಡಿಲುಮರಿ. ಮುಳ್ಳೂರಿನಲ್ಲಿ ಅವಳು ಕೆತ್ತುವುದೇನು? ಮೊದಲ ಮಧುಚಂದ್ರ ಮುಗಿಯುತ್ತಿದ್ದಂತೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾಳೆ. ತೀರ್ಪು ಬರುವ ವೇಳೆಗೆ ಮಗು ಹುಟ್ಟಿರುತ್ತೆ. ಜೀವನಾಂಶ ಕೇಳುತ್ತಾಳೆ.

ಮಗಳು ಹದಿನೆಂಟು ತುಂಬುವ ಹೊತ್ತಿಗೆ ನಿನಗೆ `ಏಳು ಹನ್ನೊಂದು~ ತುಂಬಿರುತ್ತಾಳೆ. ಕೊನೆಯ ತಿಂಗಳ ಚೆಕ್ ಪಾವತಿ ಮಾಡಿ ನೀನು ಬಿಸಿಯುಸಿರ್ಗರೆಯುತ್ತಿದ್ದಾಗಲೆ ಆ ಹುಡುಗಿ ಹೇಳುತ್ತಾಳೆ- `ಡ್ಯಾಡಿ, ಮಾಮ್ ಹೇಳುತ್ತಾಳೆ, ನೀನು ನನ್ನ ಅಸಲಿ ಅಪ್ಪನಲ್ಲವಂತೆ!~ ಹಾಗಿದ್ದರೆ ಅಸಲಿ ಅಪ್ಪನೇ ಜೀವನಾಂಶ ಯಾಕೆ ಕೊಡಲಿಲ್ಲ ಎಂಬ ನಿನ್ನ ಹಲವು ಪ್ರಶ್ನೆಗಳಿಗೆ ಒಂದೇ ಉತ್ತರ- `ಹೀಗೂ ಉಂಟೆ~! ಸಾಧ್ಯವಾದರೆ, ನಿನ್ನ ಅಪ್ಪನಂತೆ, ಅಜ್ಜನಂತೆ, ಆ ಜನ್ಮಬ್ರಹ್ಮಚಾರಿಯಾಗಿಯೇ ಉಳಿಯುವುದು ಲೇಸು ಇಂತು ನಿಮ್ಮವ ಸಿ.ಎನ್.ಕೆ. (ವಿ.ಸೂ: ಅಪ್ಪಟ ಕನ್ನಡ ಹೆಸರಿನ ಹಳ್ಳಿಯ `ಚೆಲುವಿ~ `ದ್ಯಾವೀರಿ~ `ಲಕುಮಿ~ಯರನ್ನೇ ವರಿಸು. ಸೈ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT