ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ತೆರಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ

Last Updated 22 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಪಾವತಿಸದ ಆಸ್ತಿದಾರರ ಕಟ್ಟಡಗಳ ಮುಂದೆ ತಮಟೆ ಬಾರಿಸುವ ಮೂಲಕ ತೆರಿಗೆ ಸಂಗ್ರಹಿಸುವ ಕಾರ್ಯಕ್ಕೆ ಬಿಬಿಎಂಪಿ ಗುರುವಾರ ಚಾಲನೆ ನೀಡಿದೆ. ಆ ಮೂಲಕ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಸಮರ ಸಾರಿದೆ.

ನಗರದಲ್ಲಿ ಲಕ್ಷಾಂತರ ಆಸ್ತಿದಾರರು ತೆರಿಗೆಯನ್ನೇ ಪಾವತಿಸುತ್ತಿಲ್ಲ. ನೋಟಿಸ್ ನೀಡಿದರೂ ಪ್ರತಿಕ್ರಿಯಿಸದಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿತ್ತು. ಅಲ್ಲದೇ ಕೋಟ್ಯಂತರ ರೂಪಾಯಿ ಆದಾಯ ಕೂಡ ಕೈತಪ್ಪಿತ್ತು.

ಆ ಹಿನ್ನೆಲೆಯಲ್ಲಿ ಆಯುಕ್ತ ಸಿದ್ದಯ್ಯ ಅವರು ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೆ ನೋಟಿಸ್ ನೀಡಿ ದಂಡಸಹಿತ ತೆರಿಗೆ ಸಂಗ್ರಹಿಸಬೇಕು. ಅಗತ್ಯಬಿದ್ದರೆ ಜಫ್ತಿ ವಾರೆಂಟ್ ಜಾರಿ ಮಾಡಿ ತೆರಿಗೆ ವಸೂಲಿ ಮಾಡಬೇಕು ಎಂದು ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದರು.

ಅದರಂತೆ ತೆರಿಗೆ ಬಾಕಿ ಉಳಿಸಿಕೊಂಡಿದ್ದ ರಾಮಚಿತ್ತರಂಜನ್ ದಾಸ್ ಎಂಬುವರಿಗೆ ಸೇರಿದ ವಾಣಿಜ್ಯ ಕಟ್ಟಡದ ಎದುರು ಗುರುವಾರ ತಮಟೆ ಹೊಡೆಯುವ ಕಾರ್ಯಕ್ರಮವನ್ನು ಪಾಲಿಕೆ ಹಮ್ಮಿಕೊಂಡಿತ್ತು.

ಎಚ್‌ಎಎಲ್ 2ನೇ ಹಂತದ 100 ಅಡಿ ರಸ್ತೆಯಲ್ಲಿನ ಆಸ್ತಿ ಸಂಖ್ಯೆ 1,134ರಲ್ಲಿ ರಾಮಚಿತ್ತರಂಜನ್ ದಾಸ್ ಅವರಿಗೆ ಸೇರಿದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವಿದೆ.

ಆದರೆ 2007-08ನೇ ಸಾಲಿನಿಂದ ಈವರೆಗೆ ಅವರು ಪಾಲಿಕೆಗೆ ಆಸ್ತಿ ತೆರಿಗೆಯನ್ನೇ ಪಾವತಿಸದೆ 71.90 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ.

ಆ ಹಿನ್ನೆಲೆಯಲ್ಲಿ ಕಟ್ಟಡದ ಎದುರು ಪಾಲಿಕೆ ತಮಟೆ ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬಳಿಕ ರಾಮ ಚಿತ್ತರಂಜನ್ ದಾಸ್ ಅವರು ಶನಿವಾರದೊಳಗೆ ತೆರಿಗೆ ಪಾವತಿಸುವುದಾಗಿ ಪೂರ್ವ ವಲಯದ ಜಂಟಿ ಆಯುಕ್ತರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಈಗಾಗಲೇ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಹಾಗಿದ್ದರೂ ಸಾಕಷ್ಟು ಮಂದಿ ತೆರಿಗೆ ಪಾವತಿಸಿಲ್ಲ. ಅಂತಹವರ ವಿರುದ್ಧ ಜಫ್ತಿ ವಾರೆಂಟ್ ಜಾರಿ ಮಾಡುವುದರ ಜತೆಗೆ ಅವರ ಕಟ್ಟಡದ ಎದುರು ತಮಟೆ ಹೊಡೆಯುವ ಕಾರ್ಯಕ್ರಮ ನಡೆಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT