ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಹರಾಜಿಗೆ ಆದೇಶ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಕಳೆದ ಆರು ತಿಂಗಳಿಂದ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದೆ ಸತಾಯಿಸುತ್ತಿದ್ದ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆ ಮತ್ತು ಅಲ್ಲಿ ದಾಸ್ತಾನಿದ್ದ ಸಕ್ಕರೆಯನ್ನು ಹರಾಜು ಹಾಕಿ ರೈತರಿಗೆ ಹಣ ಪಾವತಿಸುವಂತೆ ಕಬ್ಬು ಅಭಿವೃದ್ಧಿ ಮಹಾಮಂಡಳಿಯ ಆಯುಕ್ತ ಕೆ.ಎಸ್. ಸತ್ಯಮೂರ್ತಿ ಅವರು ಬಾಗಲಕೋಟೆ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದ್ದಾರೆ.

ಬೆಳಗಾವಿ, ವಿಜಾಪುರ ಮತ್ತು ಬಾಗಲಕೋಟೆ ಸೇರಿದಂತೆ ಇತರ ಜಿಲ್ಲೆಗಳ ರೈತರಿಂದ ಕಬ್ಬು ಖರೀದಿಸಿದ್ದ ಕೇದಾರನಾಥ ಸಕ್ಕರೆ ಕಾರ್ಖಾನೆಯು ರೈತರಿಗೆ ರೂ 34.46 ಕೋಟಿ  ಪಾವತಿಸಬೇಕಾಗಿತ್ತು. ಆದರೆ ಪದೇಪದೇ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿ ಕುಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಒಂದು ವಾರದೊಳಗೆ ರೈತರಿಗೆ ಹಣ ಪಾವತಿಸದಿದ್ದಲ್ಲಿ ಹರಾಜು ಹಾಕುವ ಪ್ರಕ್ರಿಯೆ ಪ್ರಾರಂಭಿಸುವಂತೆ ಸೂಚನೆ ನೀಡಿದ್ದಾರೆ.

ಇದೇ 14ರಂದು ಬಾದಾಮಿ ತಹಸೀಲ್ದಾರ ಮಹೇಶ ಕರ್ಜಗಿ ಅವರು ಕಾರ್ಖಾನೆ ಆಡಳಿತ ಮಂಡಳಿಗೆ ಮೊದಲ ನೋಟಿಸ್ ಜಾರಿ ಮಾಡಲಿದ್ದು, ಒಂದು ವಾರದ ಬಳಿಕ ಕಾರ್ಖಾನೆಯ ಆಡಳಿತ ಮಂಡಳಿಗೆ ಹರಾಜು ಹಾಕುವ ಕುರಿತು ಅಂತಿಮ ನೋಟಿಸ್ ಜಾರಿ ಮಾಡಲಿದೆ.

ಕಾರ್ಖಾನೆಯಿಂದ ರೂ 34.46  ಕೋಟಿ ಮತ್ತು ವಾರ್ಷಿಕ ಶೇ 15ರ ಬಡ್ಡಿಯನ್ನು ವಸೂಲಿ ಮಾಡಬೇಕು. ಕಾರ್ಖಾನೆಯಿಂದ ವಶಪಡಿಸಿಕೊಳ್ಳಲಾಗುವ ಸಕ್ಕರೆಯನ್ನು ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಪರವಾನಗಿಯನ್ನು ಜಿಲ್ಲಾಧಿಕಾರಿ ಅವರು ಪಡೆದು ಮುಂದಿನ ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾರ್ಖಾನೆಯ ಚರಾಸ್ತಿಗಳ ಹರಾಜಿಗೆ ಸಂಬಂಧಿಸಿದಂತೆ ಇದೇ 14ರಂದು ಮೊದಲನೇ ನೋಟಿಸನ್ನು ಕಾರ್ಖಾನೆ ಮಾಲೀಕ ವಿಕ್ರಂ ಸಿಂಗ್ ಅಪರಾದಿ ಅವರಿಗೆ ಜಾರಿಗೊಳಿಸಲಾಗುವುದು. 

ಕಾನೂನಿನ ಪ್ರಕಾರ 7 ದಿನಗಳ ಒಳಗಾಗಿ ಕಾರ್ಖಾನೆ ಮಾಲೀಕರು ಬಾಕಿ ಪಾವತಿಸದಿದ್ದರೆ ಇದೇ 22ರಂದು ಸಕ್ಕರೆ ಮತ್ತು ಇತರ ವಸ್ತುಗಳನ್ನು ಹರಾಜು ಹಾಕಿ, ರೈತರಿಗೆ ಬಾಕಿ ಹಣ ಪಾವತಿಸಲಾಗುತ್ತದೆ. ಬಾದಾಮಿ ತಹಸೀಲ್ದಾರ ಅವರು ವಸೂಲಿ ಅಧಿಕಾರಿಯಾಗಿ ಕಾಂುರ್ು ನಿರ್ವಹಿಸಲಿದ್ದಾರೆ ಎಂದು  ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ತಿಳಿಸಿದರು.

`ಕಬ್ಬು ಅಭಿವೃದ್ದಿ ಮಹಾಮಂಡಳದ ಅದೇಶವನ್ನು ರೈತರ ಪರವಾಗಿ ಸ್ವಾಗತಿಸುತ್ತೇನೆ, ನಮ್ಮ ಬಹುದಿನದ ಹೋರಾಟಕ್ಕೆ ಜಯ ಸಿಕ್ಕಿದೆ` ಎಂದು  ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಟಿ.ಬಿ. ತುಪ್ಪದ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT