ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಹಣ: ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿ ಪೂರೈಸಿ 15 ತಿಂಗಳು ಕಳೆದರೂ ಅನುದಾನ ಬಿಡುಗಡೆ ಮಾಡದೆ ಹಣ ಬಾಕಿ ಉಳಿಸಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮದ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಜಿ.ಎಂ. ರವೀಂದ್ರ, `ಕಾಮಗಾರಿಗಳನ್ನು ಮುಗಿಸಿ 15 ತಿಂಗಳ ಹಿಂದೆಯೇ ಬಿಬಿಎಂಪಿಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಹಲವು ಬಾರಿ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಕೂಡಾ ನಗರದಲ್ಲಿರುವ ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರ ಸುಮಾರು ರೂ. ಒಂದು ಸಾವಿರ ಕೋಟಿಗಳಿಗೂ ಹೆಚ್ಚು ಹಣವನ್ನು ಮಂಜೂರು ಮಾಡದೇ ಉಳಿಸಿಕೊಳ್ಳಲಾಗಿದೆ. ಹಲವು ಬಾರಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು~ ಎಂದು  ಒತ್ತಾಯಿಸಿದರು.

`ಸಾಲ ಮಾಡಿ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರು ಬಿಲ್‌ಗಳ ಹಣ ಬಿಡುಗಡೆಯಾಗದೇ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ. ಬಿಬಿಎಂಪಿ ಇದೇ ಧೋರಣೆ ಮುಂದುವರೆಸಿದಲ್ಲಿ ಕಾಮಗಾರಿಗಳನ್ನು ನಿಲ್ಲಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು~ ಎಂದು ಎಚ್ಚರಿಸಿದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಜೆ. ಶ್ರೀನಿವಾಸ್ ಮಾತನಾಡಿ, `ಗುತ್ತಿಗೆದಾರರಿಗೆ ಬರಬೇಕಾಗಿದ್ದ ಹಣ ಬಿಡುಗಡೆಯಾಗದೇ ಕಾಮಗಾರಿಗಳನ್ನು ಮುಗಿಸಲು ಹಾಗೂ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಬಾಕಿ ಉಳಿಸಿರುವ ಹಣವನ್ನು ಆದಷ್ಟು ಬೇಗ  ಬಿಡುಗಡೆ ಮಾಡಬೇಕು~ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಣ ಮಂಜೂರು ಮಾಡದ ಬಿಬಿಎಂಪಿ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಪ್ರತಿಪಕ್ಷದ ನಾಯಕ ಎಂ.ಉದಯಶಂಕರ್, ಕಾಮಗಾರಿಗಳು ನಡೆದ ನಂತರವೂ ಗುತ್ತಿಗೆದಾರರಿಗೆ ಬಿಡುಗಡೆ ಮಾಡದೇ ಇರುವ ಕ್ರಮ ಸರಿಯಲ್ಲ. ಬಿಲ್‌ಗಳ ಹಣ ಪಾವತಿಗೆ ಬಿಬಿಎಂಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿಗೆ ಕೋಟ್ಯಂತರ ರೂಪಾಯಿಗಳ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದ ವಿಶೇಷ ಅನುದಾನಕ್ಕಾಗಿ ಮೇಯರ್, ಆಯುಕ್ತರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಇನ್ನೊಂದು ವಾರದಲ್ಲಿ 200 ಕೋಟಿ  ಬಿಡುಗಡೆಮಾಡಿ, ಕಾಮಗಾರಿಗಳ ಹಿರಿತನದ ಆಧಾರದ ಮೇಲೆ ಹಣ ಪಾವತಿಸಲಾಗುವುದು. ಆರ್ಥಿಕ ಸಂಕಷ್ಟದ ಕಾರಣದಿಂದ ಗುತ್ತಿಗೆದಾರರ ಬಿಲ್‌ಗಳ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದಾಗಿ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಭರವಸೆ ನೀಡಿದರು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT