ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ-ಕುಡಚಿ ಆದೀತೇ ಹೊಸ ರೈಲು ಮಾರ್ಗ?

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆಯ ಕುಡಚಿಗೆ ರೈಲು ಸೌಲಭ್ಯಬೇಕು ಎಂಬುದು ಈ ಭಾಗದ ಜನರ ಬೇಡಿಕೆ.  ಈ ಕುರಿತು ರೈಲ್ವೆ ಇಲಾಖೆ ಬಹಳ ಹಿಂದೆಯೇ ಸಮೀಕ್ಷೆ ನಡೆಸಿದೆ. ರೈಲು ಸಂಚಾರದಿಂದ ಶೇ 20 ಆದಾಯ ಬರುತ್ತದೆ ಎಂದು ಸಮೀಕ್ಷಾ ವರದಿ ಹೇಳಿದೆ. ಹೊಸ ಮಾರ್ಗ ನಿರ್ಮಾಣದಿಂದ ಇಲಾಖೆಗೆ ಶೇ 8 ಆದಾಯ ಬರುವಂತಿರಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2010ರ ರೈಲ್ವೆ ಮುಂಗಡ ಪತ್ರದಲ್ಲಿ ಬಾಗಲಕೋಟೆ -ಕುಡಚಿ ರೈಲು ಮಾರ್ಗ ನಿರ್ಮಾಣಕ್ಕೆ 816 ಕೋಟಿ ರೂ.ಗಳ ಅಂದಾಜು ಯೋಜನೆಗೆ ಒಪ್ಪಿಗೆ ನೀಡಿತ್ತು.

ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ ತಗಲುವ ವೆಚ್ಚದ ಅರ್ಧದಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕು ಮತ್ತು ರೈಲು ಮಾರ್ಗಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರವೇ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ನೀಡಬೇಕು ಎಂಬ ಷರತ್ತುಗಳನ್ನು ಕೇಂದ್ರ ಸರ್ಕಾರ ಹಾಕಿದೆ. ಅದಕ್ಕೆ ಒಪ್ಪಿರುವ ರಾಜ್ಯ ಸರ್ಕಾರ ಈ ಯೋಜನೆಗೆ 408 ಕೋಟಿ ರೂಪಾಯಿ ಕೊಡಬೇಕು ಮತ್ತು ಕುಡಚಿಯಿಂದ ಬಾಗಲಕೋಟೆವರೆಗೆ ಸುಮಾರು 782 ಎಕರೆ  ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಕುಡಚಿ -ಬಾಗಲಕೋಟೆ ನಡುವಿನ ಅಂತರ 141 ಕಿ ಲೋ ಮೀಟರ್‌ಗಳು. ರೈಲು ಮಾರ್ಗಕ್ಕೆ ಬೇಕಾದ ಭೂಮಿಗಾಗಿ ದಕ್ಷಿಣ-ಮಧ್ಯ ರೈಲ್ವೆ ಅಧಿಕಾರಿಗಳು ಬಾಗಲಕೋಟೆ, ಬಾದಾಮಿ, ಮುಧೋಳ, ಜಮಖಂಡಿ ತಾಲ್ಲೂಕುಗಳಲ್ಲಿ ಮೊದಲ ಹಂತದ 40 ಕಿ.ಮೀ.ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಪ್ರಸ್ತಾವನಾ ಪತ್ರವನ್ನು ಬಾಗಲಕೋಟೆ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದಾರೆ.
 
ಈ ತಾಲ್ಲೂಕುಗಳ ಹದಿನೇಳು ಗ್ರಾಮಗಳಲ್ಲಿ ಸುಮಾರು 677 ಎಕರೆ ಹಾಗೂ ಅರಣ್ಯ ಇಲಾಖೆಗೆ ಸೇರಿದ 36.34 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡು ಅದನ್ನು ರೈಲ್ವೆ ಇಲಾಖೆಗೆ ನೀಡಬೇಕು. ರೈಲ್ವೆ ಇಲಾಖೆ ಆರಂಭದ ವೆಚ್ಚಗಳಿಗೆ ಹತ್ತು ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 7 ಕೋಟಿ ರೂ.ಗಳನ್ನು ಬಾಗಲಕೋಟೆ ಉಪ ವಿಭಾಗಾಧಿಕಾರಿಯವರಿಗೂ, 3 ಕೋಟಿ ರೂ.ಗಳನ್ನು ಜಮಖಂಡಿ ಉಪ ವಿಭಾಗಾಧಿಕಾರಿಯವರಿಗೆ ನೀಡಿದೆ.

 ಭೂ ಸ್ವಾಧೀನ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿಲ್ಲ. ರೈಲು ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ನೀಡುವವರೆಗೆ ಕಾಮಗಾರಿ ಆರಂಭವಾಗುವುದಿಲ್ಲ. ಭೂಸ್ವಾಧೀನಕ್ಕೆ ರೈತರ ಮನವೊಲಿಸಿ ಅವರಿಗೆ ಪರಿಹಾರ ನೀಡಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕು. ರೈಲು ಮಾರ್ಗ ನಿರ್ಮಾಣದಿಂದ ಇಡೀ ಸಮುದಾಯಕ್ಕೆ ಅನುಕೂಲವಾಗುವುದರಿಂದ ಈ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಕಡಿಮೆ. ಆದರೆ ಈ ರೈಲು ಮಾರ್ಗ ಯೋಜನೆ ಬಗ್ಗೆ ಈ ಭಾಗದ ಜನ ಪ್ರತಿನಿಧಿಗಳಿಗೆ ಕನಿಷ್ಠ ಆಸಕ್ತಿಯೂ ಇದ್ದಂತಿಲ್ಲ.

ಬಾಗಲಕೋಟೆ- ಕುಡಚಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಕುಡಚಿಯಿಂದ ಹಾರೂಗೇರಿ, ತೇರದಾಳ, ಬನಹಟ್ಟಿ, ರಬಕವಿ, ಸಿದ್ದಾಪೂರ ಕ್ರಾಸ್, ಮುಧೋಳ, ಯಾದವಾಡ, ಕಜ್ಜಿಡೊಣಿ, ಕಲಾದಗಿ, ಶೆಲ್ಲಿಕೇರಿ, ವಜ್ರಮಟ್ಟಿ ಮೂಲಕ ಬಾಗಲಕೋಟೆಗೆ ಹೋಗುವ ಮತ್ತು ಬರುವವರಿಗೆ ಅನುಕೂಲ ಆಗಲಿದೆ. ಈ ಮಾರ್ಗದಲ್ಲಿ ಹನ್ನೆರಡು ಸಕ್ಕರೆ ಮತ್ತು ಏಳು ಸಿಮೆಂಟ್ ಕಾರ್ಖಾನೆಗಳಿವೆ. ಈ ಭಾಗದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ದಾಳಿಂಬೆ, ಚಿಕ್ಕು ಮತ್ತಿತರ ಹಣ್ಣುಗಳನ್ನು ಬೇರೆಡೆಗೆ ಕಳುಹಿಸಿ ಮಾರಾಟ ಮಾಡಲು ರೈತರಿಗೆ ಸಹಾಯವಾಗಲಿದೆ. ಸಕ್ಕರೆ ಹಾಗೂ ಸಿಮೆಂಟ್ ಸಾಗಣೆಗೆ ಹೆಚ್ಚಿನ ಅನುಕೂಲ ಆಗಲಿದೆ.

ಈ ರೈಲು ಮಾರ್ಗ ನಿರ್ಮಾಣಕ್ಕೆ ಸಂಸದರು, ಶಾಸಕರು ಮತ್ತು ಈ ಭಾಗದ ಸಚಿವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯುವ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಕುಡಚಿ- ಬಾಗಲಕೋಟೆ ರೈಲು ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ಆರೋಪಿಸುತ್ತಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಹೋರಾಟ ಸಮಿತಿ ಇತ್ತೀಚೆಗೆ ಕುಡಚಿಯಲ್ಲಿ ರೈಲು ತಡೆ ಚಳವಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT