ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಕೆಜೆಪಿಗೆ ಅಭ್ಯರ್ಥಿಗಳ ಬರ

ಬೀಳಗಿ: ನಿರಾಣಿ ವಿರುದ್ಧ ಕುತ್ಬ್ದ್ದುದೀನ್ ಖಾಜಿ ಕಣಕ್ಕೆ?
Last Updated 9 ಏಪ್ರಿಲ್ 2013, 9:00 IST
ಅಕ್ಷರ ಗಾತ್ರ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೂತನ ಪಕ್ಷ ಕೆಜೆಪಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳ ಬರ ಕಾಣಿಸಿಕೊಂಡಿದೆ.

ಬಿಎಸ್‌ವೈ ಬಿಜೆಪಿಯಲ್ಲಿದ್ದಾಗ ಬಾಗಲಕೋಟೆ ಜಿಲ್ಲೆಯ ಏಳೂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಯಡಿಯೂರಪ್ಪ ಕೈಬಲಪಡಿಸಿದ್ದ ಜಿಲ್ಲೆಯಲ್ಲೆಗ ಕೆಜೆಪಿಯಿಂದ ಸ್ಪರ್ಧಿಸಲು ಯಾರೊಬ್ಬರೂ ಮುಂದೆ ಬಾರದಿರುವುದು ಪರಿಸ್ಥಿತಿಯ ವ್ಯಂಗ್ಯ ವಾಗಿದೆ.
ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಕಾಣಿಸಿಕೊಂಡಿದ್ದ ಜಿಲ್ಲೆಯ ಮುಖಂಡರಾದ ಬಿಟಿಡಿಎ ಮಾಜಿ ಅಧ್ಯಕ್ಷ ಲಿಂಗರಾಜ ವಾಲಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ.ಸದಸ್ಯ ಹೂವಪ್ಪ ರಾಠೋಡ, ಉಮೇಶ ಮಹಾಬಳ ಶೆಟ್ಟಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ ಜಾಧವ ಮತ್ತಿತರರಲ್ಲಿ ಜಮಖಂಡಿಯ ಉಮೇಶ ಮಹಾ ಬಳಶೆಟ್ಟಿ ಅವರನ್ನು ಹೊರತು ಉಳಿದ ವರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿ ಕೊಂಡಿದ್ದಾರೆ. ಲಿಂಗರಾಜ ವಾಲಿ ಎಲ್ಲಿದ್ದಾರೆ ಎಂದು ವಿಳಾಸ ತಿಳಿಯ ದಾಗಿದೆ.

ಕೆಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಪ್ರಕಾಶ ತಪಶೆಟ್ಟಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಜೆಪಿ ಭಜಿಸುತ್ತಿದ್ದ ಜಿ.ಪಂ.ಸದಸ್ಯ ಹೂವಪ್ಪ ರಾಠೋಡ ಸಚಿವ ನಿರಾಣಿ ಅವರೊಂದಿಗೆ  ಬಿಜೆಪಿಯಲ್ಲೇ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯ ಮುಖಂಡರು ಬಿಎಸ್‌ವೈ ಅವರನ್ನು ಬಾಗಲಕೋಟೆಗೆ ಕರೆತಂದು ಪೌರಸನ್ಮಾನ ಮಾಡಿದ್ದರು. ಅಲ್ಲದೇ ಕೆಜೆಪಿಯಿಂದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಬಿಎಸ್‌ವೈಗೆ ದುಂಬಾಲು ಬಿದ್ದಿದ್ದರು. ಇದೀಗ ಬಿಎಸ್‌ವೈ ದುಂಬಾಲು ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಕೆಜೆಪಿ ಸೇರಲಿದ್ದಾರೆ ಎಂದೇ ನಂಬ ಲಾಗಿದ್ದ ಬಿಎಸ್‌ವೈ ಪರಮಾಪ್ತ ಸಚಿವ ಮುರುಗೇಶ ನಿರಾಣಿ ಅವರು ಕೊನೆಗಳಿಗೆಯಲ್ಲಿ ಕೈಕೊಟ್ಟ ಬಳಿಕ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಜೀವಂತವಿದ್ದ ಕೆಜೆಪಿ ಇದೀಗ ಹೇಳ ಹೆಸರಿಲ್ಲದಂತ ಸ್ಥಿತಿ ತಲುಪಿದೆ.

ಜಮಖಂಡಿಯಿಂದ ಮುರುಗೇಶ ನಿರಾಣಿ, ಬೀಳಗಿಯಿಂದ ಅವರ ಸಹೋದರ ಹನುಮಂತ ನಿರಾಣಿ ಸ್ಪರ್ಧಿಸುವುದು ಖಚಿತ ಎಂದು ಪ್ರತಿದಿನ  ಮಾಧ್ಯಮಗಳಲ್ಲಿ ಸುದ್ದಿ ಮಾಡಿ ಕೊನೆಗೆ ತಮ್ಮ ನಿಲುವನ್ನು ಬದಲಾಯಿಸಿದ ಕೆಜೆಪಿಗೆ ದೊಡ್ಡ ಆಘಾತ ನೀಡಿದರು.
ಮುರುಗೇಶ ನಿರಾಣಿ ಕೆಜೆಪಿಯಿಂದ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯಿಂದ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಮಖಂಡಿ ನಗರಸಭೆಗೆ ನಾಲ್ಕು ಕೆಜೆಪಿ ಸದಸ್ಯರು ಮತ್ತು ಒಬ್ಬರು ಕೆಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು.

ನಿರಾಣಿ ವಿರುದ್ಧ ಖಾಜಿ: ಕೆಜೆಪಿಗೆ ಕೊನೆಗಳಿಗೆಯಲ್ಲಿ ಕೈಕೊಟ್ಟು ಬಿಜೆಪಿಯಲ್ಲೇ ಉಳಿದುಕೊಂಡಿರುವ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ವಿರುದ್ಧ ಕೆಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಕುತ್ಬುದ್ದಿನ್ ಖಾಜಿ, `ಕೆಜೆಪಿ ಕಟ್ಟುವಾಗ ಜೊತೆಗೆ ಬರುವು ದಾಗಿ ಬಿಎಸ್‌ವೈಗೆ ಭರವಸೆ ನೀಡಿದ್ದ ಸಚಿವ ನಿರಾಣಿ ನಂಬಿಕೆ ದ್ರೋಹ ಮಾಡಿದ್ದಾರೆ. ವಿಶ್ವಾಸ ದ್ರೋಹ ಎಸಗಿ ರುವ ನಿರಾಣಿ ವಿರುದ್ಧ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೇಳಿದ್ದೇನೆ. ಬಿಎಸ್‌ವೈ ಕೂಡ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ' ಎಂದರು.

`ನನ್ನನ್ನು ಅಲ್ಪಸಂಖ್ಯಾತ ಎಂದು ಪರಿಗಣಿಸುವ ಅಗತ್ಯವಿಲ್ಲ, ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಮುಳು ಗಡೆ ಹೋರಾಟ, ರೈಲ್ವೆ ಯೋಜನೆ ಗಳಿಗಾಗಿ ಹೋರಾಡಿದ್ದೇನೆ.  ಸಾಮಾ ಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಜನತೆ ನನ್ನನ್ನು ಬೆಂಬಲಿ ಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೈಕೊಟ್ಟವರೇ ಅಧಿಕ: ಬಿಎಸ್‌ವೈ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸುವ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಶಾಸಕರಾದ ಬಾದಾಮಿಯ ಎಂ.ಕೆ.ಪಟ್ಟಣಶೆಟ್ಟಿ, ತೇರದಾಳದ ಸಿದ್ದು ಸವದಿ ಅವರು ಬಿಎಸ್‌ವೈ ಜೊತೆ ಹೆಜ್ಜೆ ಹಾಕಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶ ಶಾಸಕರು ಬಿಜೆಪಿಯಲ್ಲೇ ಉಳಿಯುವಂತೆ ಮಾಡಿದೆ.

ಇಬ್ಬರಿಗೆ ಟಿಕೆಟ್: ಅಭ್ಯರ್ಥಿಗಳ ಕೊರತೆ ನಡುವೆಯೂ ಹುನಗುಂದ ಕ್ಷೇತ್ರದಿಂದ ಜಿ.ಪಿ.ಪಾಟೀಲ ಮತ್ತು ತೇರದಾಳ ಕ್ಷೇತ್ರದಿಂದ ಬಸವರಾಜ ಬಾಳಿಕಾಯಿ ಅವರಿಗೆ ಕೆಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.

ಜಮಖಂಡಿಯಿಂದ ಬಹುತೇಕವಾಗಿ ಉಮೇಶ ಮಹಾಬಳಶೆಟ್ಟಿ ಕಣಕ್ಕಿಳಿ ಯುವ ಸಾಧ್ಯತೆ ಇದೆ. ಈ ನಡುವೆ ಜೆಡಿಎಸ್‌ನ ಟಿಕೆಟ್ ವಂಚಿತ ಕಾಡು ಮಾಳಿ, ಕಾಂಗ್ರೆಸ್‌ನ ಫಕೀರಸಾಬ ಭಾಗ ವಾನ ಅವರು ಕೆಜೆಪಿಯಿಂದ ಜಮಖಂಡಿ ಯಿಂದ ಸ್ಪರ್ಧಿಸಲು ಯತ್ನ ನಡೆದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT