ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ನೂತನ ಸಾರಥ್ಯ:ಶಾಂತವ್ವ ಅಧ್ಯಕ್ಷೆ, ಕೃಷ್ಣ ಉಪಾಧ್ಯಕ್ಷ

Last Updated 20 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಶಾಂತವ್ವ ಭೂಷಣ್ಣವರ ಮತ್ತು ಉಪಾಧ್ಯಕ್ಷರಾಗಿ ಕೃಷ್ಣ ಓಗೆಣ್ಣವರ ಆಯ್ಕೆಯಾದರು.ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮುಧೋಳ ತಾಲ್ಲೂಕಿನ ಮಂಟೂರ ಜಿ.ಪಂ.ಕ್ಷೇತ್ರದ ಬಿಜೆಪಿ ಸದಸ್ಯೆ ಶಾಂತವ್ವ ಭೂಷಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಜಿ.ಪಂ. ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲುಗೊಳಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಮೀಸಲಾತಿ ಹೊರಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಸ್ಥಾನಕ್ಕೆ ಅರ್ಹ ಏಕೈಕೆ ಮಹಿಳಾ ಅಭ್ಯರ್ಥಿ ಶಾಂತವ್ವ ಭೂಷಣ್ಣವರ ಮಾತ್ರವಾಗಿದ್ದ ಕಾರಣ ಅವರ ಆಯ್ಕೆ ಈ ಹಿಂದೆಯೆ ನಿಶ್ಚಿತವಾಗಿತ್ತು.

ಉಪಾಧ್ಯಕ್ಷರಾಗಿ ಓಗೆಣ್ಣವರ: ಹಿಂದುಳಿದ `ಅ~ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕೃಷ್ಣ ಓಗೆಣ್ಣವರ, ಕಾಂಗ್ರೆಸ್‌ನಿಂದ ಫಕೀರಗೌಡ ಪಾಟೀಲ, ಬಸವಂತಪ್ಪ ಮೇಟಿ ಮತ್ತು ಅರ್ಜುನ ದಳವಾಯಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಬಸವಂತಪ್ಪ ಮೇಟಿ ಮತ್ತು ಅರ್ಜುನ ದಳವಾಯಿ ನಾಮಪತ್ರ ಹಿಂತೆಗೆದುಕೊಂಡರು.

ಬಳಿಕ ನಡೆದ ಚುನಾವಣೆಯಲ್ಲಿ ಬಾದಾಮಿ ತಾಲ್ಲೂಕಿನ ಅನವಾಲ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಕೃಷ್ಣ ಓಗೆಣ್ಣವರ ಪರವಾಗಿ 18 ಮತ್ತು ಕಾಂಗ್ರೆಸ್ ಸದಸ್ಯ ಫಕೀರಗೌಡ ಪಾಟೀಲ ಅವರ ಪರವಾಗಿ 14 ಮತಗಳು ಚಲಾವಣೆಯಾದವು.

32 ಚುನಾಯಿತ ಸದಸ್ಯರನ್ನು ಒಳಗೊಂಡ ಬಾಗಲಕೋಟೆ ಜಿ.ಪಂ.ನಲ್ಲಿ ಬಿಜೆಪಿ 18 ಮತ್ತು ಕಾಂಗ್ರೆಸ್ 14 ಸದಸ್ಯರನ್ನು ಒಳಗೊಂಡಿದೆ.

10 ತಿಂಗಳು ಮಾತ್ರ: ಚುನಾವಣೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಮುಂದಿನ 20 ತಿಂಗಳು ಅಧ್ಯಕ್ಷರಾಗಿ ಶಾಂತವ್ವ ಭೂಷಣ್ಣವರ ಮುಂದುವರಿಯಲಿದ್ದಾರೆ. ಆದರೆ, ಉಪಾಧ್ಯಕ್ಷ ಸ್ಥಾನದ ಅಧಿಕಾರವಧಿಯನ್ನು 10 ತಿಂಗಳಿಗೆ ಸೀಮಿತಗೊಳಿಸಿ ಆಂತರಿಕ ಒಪ್ಪಂದ ಮಾಡಿ ಕೊಳ್ಳಲಾಗಿದೆ. 10 ತಿಂಗಳ ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗುವುದು ಎಂದರು.

ಆಂತರಿಕ ಒಪ್ಪಂದದ ಪ್ರಕಾರ ಬಿಜೆಪಿ ಜಿ.ಪಂ.ಸದಸ್ಯರು ನಡೆದುಕೊಳ್ಳಬೇಕು, ಈ ಹಿಂದೆ ಆದಂತೆ ಗೊಂದಲ ಬೇಡ. ಮುಂದಿನ 40 ತಿಂಗಳು ಬಿಜೆಪಿಯೇ ಅಧಿಕಾರ ನಡೆಸಲಿದೆ. ನಮ್ಮ ಮೂಗನ್ನು ನಾವೇ ಕತ್ತರಿಸಿಕೊಳ್ಳುವುದು ಬೇಡ ಎಂದು  ಹೇಳಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಂ ಬಡೇರಿಯಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿ.ಪಂ. ಸಿಇಒ ಎಸ್.ಜಿ.ಪಾಟೀಲ ಇದ್ದರು.

ಜಿಲ್ಲಾ ಪಂಚಾತಿ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಸಚಿವ ಕಾರಜೋಳ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿ.ಪಂ.ಸದಸ್ಯರು  ಮತ್ತು ಕಾರ್ಯಕರ್ತರು ಹೂಹಾರ ಹಾಕಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT