ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ತೆರೆಯದ ಗ್ರಂಥಾಲಯ

Last Updated 20 ಜೂನ್ 2011, 8:50 IST
ಅಕ್ಷರ ಗಾತ್ರ

ಕಮಲನಗರ: ಗ್ರಾಮೀಣ ಜನತೆಗೆ ದೇಶ ವಿದೇಶಗಳ ಪ್ರಚಲಿತ ವಿದ್ಯಮಾನಗಳ ಪರಿಚಯವಾಗಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜ್ಞಾನ ಸಂಪಾದನೆಗೆ ಅಕ್ಷರ ಸಂಪತ್ತು ಸಹಕಾರಿಯಾಗಬೇಕೆಂಬ ಸದುದ್ದೇಶದಿಂದ ಸರ್ಕಾರ ಹಳ್ಳಿ ಹಳ್ಳಿಗಳಿಗೆ ಗ್ರಂಥಾಲಯವನ್ನು ಒದಗಿಸಿದೆ.

ಆದರೆ ಔರಾದ್ ತಾಲ್ಲೂಕಿನ ಕಮಲನಗರ ವ್ಯಾಪ್ತಿಯಲ್ಲಿರುವ ತೋರಣಾ, ಡೋಣಗಾಂವ (ಎಂ), ಠಾಣಾಕುಶನೂರ್, ಮುಧೋಳ್ ಹಾಗೂ ಸೋನಾಳ ಗ್ರಾಮಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳು ಕಳೆದ ಹಲವು ವರ್ಷಗಳಿಂದ ತೆರೆಯದಿರುವುದರಿಂದ ಅಲ್ಲಿಯ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ.

ಆರಂಭದಲ್ಲಿ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಗ್ರಂಥಾಲಯಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸದ ಕಾರಣ ಕಳೆದ ವರ್ಷ ಏಪ್ರಿಲ್‌ನಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನಕ್ಕೆ ಸೇರಿಸಲಾಯಿತು ಎನ್ನಲಾಗಿದೆ. ಹೀಗಿದ್ದರೂ ಗ್ರಂಥಾಲಯಗಳ ಸುಧಾರಣೆ ಸಾಧ್ಯವಾಗಿಲ್ಲ.

ಸಮೀಪದ ತೋರಣಾ ಗ್ರಾಮದಲ್ಲಿರುವ ಗ್ರಂಥಾಲಯದ ಬಾಗಿಲು ಕಳೆದ 15 ವರ್ಷಗಳಿಂದ ಮುಚ್ಚಿದೆ. ಹೀಗಾಗಿ ಇಲ್ಲಿಯ ಪುಸ್ತಕ ಪ್ರೇಮಿಗಳು ಜ್ಞಾನಾರ್ಜನೆ ಹಾಗೂ ನಿರಂತರ ಕಲಿಕೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 

ದಿನಪತ್ರಿಕೆಗಳು, ನಿಯತಕಾಲಿಕೆಗಳು, ಹೊಸ ಪುಸ್ತಕಗಳು, ಕಾದಂಬರಿಗಳನ್ನು ಓದುವ ಆಸೆ ಸಾಕಷ್ಟಿದ್ದರೂ. ಗ್ರಂಥಾಲಯ ಸದಾ ಮುಚ್ಚಿರುತ್ತದೆ. ಗ್ರಂಥಾಲಯ ಮೇಲ್ವಿಚಾರಕರು ಬಾಗಿಲನ್ನೇ ತೆರೆಯುವುದಿಲ್ಲ ಎಂಬ ಅಸಮಾಧಾನ ಸ್ಥಳೀಯ ಯುವಕರಾದ ಸಚಿನ್ ಬೇಂಬ್ರೆ, ಅರವಿಂದ್ ಕನಶೆಟ್ಟೆ, ಮುಸ್ತಾಫಾ ಶೇಕ್ ಅವರದ್ದು.

ಗ್ರಂಥಾಲಯ ಸದಾ ತೆರೆದಿರಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜಹಂಸ್ ಶೆಟಕಾರ್ ಹತಾಶೆಯಿಂದ ತಿಳಿಸಿದ್ದಾರೆ.

ವ್ಯಾಪ್ತಿಯ ಡೋಣಗಾಂವ (ಎಂ), ಸೋನಾಳ, ಠಾಣಾಕುಶನೂರ್, ಮುಧೋಳ್ ಗ್ರಾಮಗಳಲ್ಲಿರುವ ಗ್ರಂಥಾಲಯಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಇಲ್ಲಿಯು ಇದೇ ರಾಗ, ಅದೇ ಹಾಡು.

ಗ್ರಾಮೀಣ ಸಮುದಾಯಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಮಾಹಿತಿ ನೀಡುವ ಹಾಗೂ ಬಿಡುವಿನ ವೇಳೆಯಲ್ಲಿ ಮನೋಲ್ಲಾಸಿತ ಕ್ರಿಯೆಗಳಲ್ಲಿ ತೊಡಗಿಸುವ ಸದುದ್ದೇಶದಿಂದ ಆರಂಭಿಸಿದ ಗ್ರಂಥಾಲಯಗಳ ಪರಿಸ್ಥಿತಿ ಅಧೋಗತಿ ಆಗಿರುವುದರಿಂದ ಸರ್ಕಾರದ ಘನ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಗ್ರಂಥಾಲಯ ವರ್ಷದ ಎಲ್ಲ ದಿನಗಳಲ್ಲೂ ತೆರೆದಿರಬೇಕು. ನಾವು ಬಯಸುವ ಎಲ್ಲ ಪುಸ್ತಕಗಳು, ಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಾಗಬೇಕು. ಅಂದಾಗ ಮಾತ್ರ ಹಳ್ಳಿಯಲ್ಲಿರುವ ನಮಗೆ ದಿಲ್ಲಿಯ ವಿಷಯ ತಿಳಿಯಲು ಸಾಧ್ಯ ಎಂಬುದು ಈ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರ ಒಮ್ಮತದ ಅಭಿಪ್ರಾಯವಾಗಿದೆ.

ಜನಸಾಮಾನ್ಯರ ವಿಶ್ವವಿದ್ಯಾಲಯ ಎಂದು ಕರೆಯಲಾಗುವ ಗ್ರಂಥಾಲಯಗಳು, ಜ್ಞಾನ ಪ್ರಸಾರದ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿ ಜನತೆಯ ಜ್ಞಾನ ದಾಹವನ್ನು ತೀರಿಸಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.

ಜನತೆಯ ಆಶೋತ್ತರಗಳಿಗೆ ಸ್ಫಂದಿಸಿ, ಮುಚ್ಚಿದ ಗ್ರಂಥಾಲಯಗಳನ್ನು ಕೂಡಲೇ ತೆರೆಯಲು ಸಂಬಂಧಪಟ್ಟ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT