ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿದ ಜೆಸಿಟಿ ಕ್ಲಬ್

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ನಾಲ್ಕು ದಶಕಗಳಿಂದ ಭಾರತದ ಫುಟ್‌ಬಾಲ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಪಂಜಾಬ್‌ನ ಜೆಸಿಟಿ ಕ್ಲಬ್ ಇದೀಗ ಮುಗಿದ ಅಧ್ಯಾಯ ಎನಿಸಿದೆ. ದೇಶದಲ್ಲಿ ಫುಟ್‌ಬಾಲ್ ತಂಡಗಳಿಗೆ ತಕ್ಕ ಪ್ರಚಾರ ಲಭಿಸುತ್ತಿಲ್ಲ ಎಂಬ ಕಾರಣದಿಂದ ಕ್ಲಬ್ ವೃತ್ತಿಪರ ಫುಟ್‌ಬಾಲ್‌ನಿಂದ ಹಿಂದೆ ಸರಿದಿದೆ. ಈ ನಿರ್ಧಾರ ದೇಶದ ಫುಟ್‌ಬಾಲ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಈ ಮೊದಲು ಮಹೀಂದ್ರಾ ಮತ್ತು ಮಹೀಂದ್ರಾ ತಂಡ ಇದೇ ರೀತಿ ತನ್ನ ತಂಡವನ್ನು ವಿಸರ್ಜಿಸಿತ್ತು. ಇದೀಗ ಜೆಸಿಟಿ ಕೂಡಾ ಅಂತಹದೇ ಹೆಜ್ಜೆಯಿಟ್ಟಿದೆ. ಈ ಬೆಳವಣಿಗೆಯು ದೇಶದಲ್ಲಿ ಫುಟ್‌ಬಾಲ್ ಆಡಳಿತವನ್ನು ನೋಡಿಕೊಳ್ಳುವವರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಜೆಸಿಟಿ ತಂಡ ಕಳೆದ ಕೆಲ ವರ್ಷಗಳಿಂದ ಹಣಕಾಸಿನ ತೊಂದರೆ ಎದುರಿಸುತ್ತಿತ್ತು. ಮಾತ್ರವಲ್ಲ ಕಳೆದ ತಿಂಗಳು ಕೊನೆಗೊಂಡ ಐ-ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಹಿಂಬಡ್ತಿ ಪಡೆದಿತ್ತು. ಕ್ಲಬ್ ತನ್ನ ಬಾಗಿಲು ಮುಚ್ಚಲಿದೆ ಎಂಬ ಊಹಾಪೋಹ ಆ ವೇಳೆಗಾಗಲೇ ಎದ್ದಿತ್ತು. ಸೋಮವಾರ ಅದು ನಿಜವೂ ಆಯಿತು.

ಫಗ್ವಾರ ಮೂಲದ ತಂಡ 1971 ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 1996 ರಲ್ಲಿ ನಡೆದ ಚೊಚ್ಚಲ ರಾಷ್ಟ್ರೀಯ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ತಂಡ ಹಲವು ಫುಟ್‌ಬಾಲ್ ಪ್ರತಿಭೆಗಳನ್ನು ಬೆಳೆಸಿದೆ.

ದೇಶದಲ್ಲಿ ನಡೆಯುವ ಫುಟ್‌ಬಾಲ್ ಲೀಗ್‌ಗೆ ತಕ್ಕ ಪ್ರಚಾರ ದೊರೆಯದೇ ಇರುವುದು ಈ ನಿರ್ಧಾರದ ಹಿಂದಿನ ಕಾರಣ ಎಂದು ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. `ಇಂದು ವಿಶ್ವದ ವಿವಿಧೆಡೆ ಫುಟ್‌ಬಾಲ್ ಕ್ಲಬ್‌ಗಳು ಸ್ವಾವಲಂಬಿ ಸಂಸ್ಥೆಗಳಾಗಿ ಬದಲಾಗಿವೆ. ತಂಡಗಳಿಗೆ ಹೆಚ್ಚಿನ ಪ್ರಚಾರ ಲಭಿಸಿದರೆ ಮಾತ್ರ ಕ್ರೀಡಾಂಗಣದಲ್ಲಿ ಜನ ಸೇರುವರು.

1996ರಲ್ಲಿ ಜೆಸಿಟಿ ಚೊಚ್ಚಲ ರಾಷ್ಟ್ರೀಯ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು. ಅಂದು ಟಿವಿಯಲ್ಲಿ ಪಂದ್ಯ ನೋಡಲು ಫುಟ್‌ಬಾಲ್ ಪ್ರಿಯರು ಆಸಕ್ತಿ ತೋರಿದ್ದರು. ಆದರೆ ವರ್ಷ ಕಳೆದಂತೆ ಲೀಗ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಾ ಬಂದಿದೆ. ಮಾತ್ರವಲ್ಲ ಇಲ್ಲಿ ಆಡುವ ತಂಡಗಳನ್ನು ಯಾರೂ ಗುರುತಿಸುತ್ತಿಲ್ಲ~ ಎಂದು ಕ್ಲಬ್‌ನ ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಕಾರ್ಪೊರೇಟ್ ವಲಯ ಫುಟ್‌ಬಾಲ್ ಮೇಲೆ ಆಸಕ್ತಿ ತೋರುವ ತನಕ ಈ ಕ್ರೀಡೆಯಿಂದ ಹಿಂದೆ ಸರಿಯುತ್ತಿರುವುದಾಗಿ ಕ್ಲಬ್ ತಿಳಿಸಿದೆ. ಕ್ಲಬ್‌ನ ಅಧ್ಯಕ್ಷ ಸಮೀರ್ ಥಾಪರ್ ಅವರು ಫುಟ್‌ಬಾಲ್ ಜೊತೆಗಿನ ತಮ್ಮ ನಂಟು ಮುಂದುವರಿಸಲಿದ್ದಾರೆ. ಜೆಸಿಟಿ ಫುಟ್‌ಬಾಲ್ ಅಕಾಡೆಮಿಯ ಮೂಲಕ ಪಂಜಾಬ್‌ನಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.

ಜೆಸಿಟಿಯ ನಿರ್ಧಾರ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಕೆಲವು ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT