ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಬೆಸ್ಕಾಂ ಕಚೇರಿಗೆ ಬೀಗ

Last Updated 22 ಅಕ್ಟೋಬರ್ 2011, 11:20 IST
ಅಕ್ಷರ ಗಾತ್ರ

ಬಾಗೇಪಲ್ಲಿ:  ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಂಘದ ಮುಖಂಡರು ಮತ್ತು ಮರಗೆಲಸ ಕೂಲಿಕಾರ್ಮಿಕರು ಶುಕ್ರವಾರ ಬೆಸ್ಕಾಂ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಚ್.ಎನ್ ವೃತ್ತದಿಂದ ಬೆಸ್ಕಾಂ ಇಲಾಖೆಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, `ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಇಲ್ಲವೇ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ಬಿಡುಗಡೆ ಮಾಡಬೇಕು~ ಎಂದು ಒತ್ತಾಯಿಸಿದರು.

ಮುಖಂಡ ಕ್ರಿಕೆಟ್ ಮೂರ್ತಿ ಮಾತನಾಡಿ, `ಪಟ್ಟಣ ಪ್ರದೇಶಗಳಲ್ಲಿ ಮೂರು ಗಂಟೆ ಮಾತ್ರ ಲೋಡ್‌ಶೆಡ್ಡಿಂಗ್ ಮಾಡಲಾಗುವುದು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಆದರೆ ಬಾಗೇಪಲ್ಲಿಯಲ್ಲಿ 15 ಗಂಟೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರ ಪರಿಣಾಮ ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನಸಾಮಾನ್ಯರು ಸಂಕಷ್ಟಪಡುವಂತಾಗಿದೆ. ಗೃಹೋಪಯೋಗಿ ಕೆಲಸಕ್ಕೆ ತೊಂದರೆಯಾಗಿದ್ದು, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ~ ಎಂದರು.

`ವಿದ್ಯುತ್ ಪೂರೈಕೆ ಮತ್ತು ಕಡಿತಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ನೀಡಿದ್ದಲ್ಲಿ, ಕೆಲಸ ಕಾರ್ಯ ನಿಭಾಯಿಸಲು ಸಹಕಾರಿಯಾಗುತ್ತದೆ. ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟ-ಸಮಸ್ಯೆಗಳನ್ನು ಬೆಸ್ಕಾಂ ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳಿಗೆ ಸ್ಪಂದಿಸಬೇಕು~ ಎಂದು ಆಗ್ರಹಿಸಿದರು.

ವಾಲ್ಮೀಕಿ ಸಂಘದ ಮುಖಂಡರಾದ ನಾಗೇಶ, ರಾಜು, ಆನಂದ, ವೆಂಕಟೇಶ, ಬಾಲು, ಪೆಟ್ರೋಲ್ ಜಬೀವುಲ್ಲಾ, ಮರಗೆಲಸ ಕೂಲಿಕಾರ್ಮಿಕರಾದ ಸುಧಾಕರ, ಶಬ್ಬೀರ್, ಅನ್ವರ್, ಸುಭಾಷ್, ನೂರುಲ್ಲಾ, ಮುಜೀಬ್ ಇತರರು ಪಾಲ್ಗೊಂಡಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT