ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಾಡಿಗೆ' ಕಾರ್ಯಕರ್ತರು ಪ್ರಚಾರಕ್ಕೆ ಜೀವಾಳ!

Last Updated 25 ಏಪ್ರಿಲ್ 2013, 7:11 IST
ಅಕ್ಷರ ಗಾತ್ರ

ಹಾವೇರಿ: ರಾಜಕೀಯ ಪಕ್ಷಗಳಿಗೆ ಆ ಪಕ್ಷದ ಕಾರ್ಯಕರ್ತರೇ ಜೀವಾಳ. ಯಾವುದೇ ಒಂದು ಪಕ್ಷಕ್ಕೆ ಬಲಿಷ್ಠ ಕಾರ್ಯಕರ್ತರ ಪಡೆಯೊಂದು ಇದ್ದುಬಿಟ್ಟರೆ, ಆ ಪಕ್ಷದ ಅಭ್ಯರ್ಥಿ ಅರ್ಧ ಗೆದ್ದಂತೆಯೇ ಸರಿ ಎಂಬ ಮಾತಿದೆ. ಆದರೆ ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಅಂತಹ ಬಲಿಷ್ಠ ಕಾರ್ಯಕರ್ತರ ಪಡೆ ಕಾಣಸಿಗುತ್ತಿಲ್ಲ. ಸ್ಪರ್ಧೆಯಲ್ಲಿರುವ ಬಹುತೇಕ ಅಭ್ಯರ್ಥಿಗಳ ಪ್ರಚಾರಕ್ಕೆ `ಬಾಡಿಗೆ ಕಾರ್ಯಕರ್ತ'ರೇ ಜೀವಾಳವಾಗಿದ್ದಾರೆ.

ಹೌದು, ಪಕ್ಷದ ಕಾರ್ಯಕರ್ತರು ಕೆಲಸ ಮಾಡುವ ಜಾಗದಲ್ಲಿ ಕೂಲಿ ಪಡೆದು ಕೆಲಸ ಮಾಡುವ ಬಾಡಿಗೆ ಕಾರ್ಯಕರ್ತರು ತುಂಬಿಕೊಂಡಿದ್ದು, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಹುತೇಕ ಅಭ್ಯರ್ಥಿಗಳು ಈ ವ್ಯವಸ್ಥೆಯನ್ನು ನಂಬಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ಕಾರಣಕ್ಕೆ ಬಾಡಿಗೆ ಕಾರ್ಯಕರ್ತರ ದಂಡು ಎಲ್ಲ ಕಡೆಗಳಲ್ಲಿಯೂ ದೊಡ್ಡದಾಗಿಯೇ ಕಾಣಸಿಗುತ್ತಿದೆ.

ಬೆಳಿಗ್ಗೆ ಹಾಜರ್: ಪ್ರಚಾರ ಕಾರ್ಯಕ್ಕೆ ಬರುವ ಬಾಡಿಗೆ ಕಾರ್ಯಕರ್ತರು ಇಷ್ಟೇ ಸಮಯ ಕೆಲಸ ಮಾಡಬೇಕೆಂಬ ನಿಯಮವಿಲ್ಲ. ಆದರೆ, ಬೆಳ್ಳಂಬೆಳಗ್ಗೆ ಅಭ್ಯರ್ಥಿಗಳ ಮನೆ ಎದುರು ಹಾಜರಾಗುವುದು ಕಡ್ಡಾಯ. ಪಕ್ಷದ ಮುಖಂಡನೊಬ್ಬನ ನೇತೃತ್ವದಲ್ಲಿ 15 ರಿಂದ 20 ಜನ ಕಾರ್ಯಕರ್ತರ ತಂಡ ಮಾಡಲಾಗುತ್ತದೆ.

ಅವರ ಕೈಯಲ್ಲೊಂದಿಷ್ಟು ಕರಪತ್ರ ಹಾಗೂ ಕೊರಳಿಗೆ ಹಾಕಿಕೊಳ್ಳಲು ಪಕ್ಷದ ಚಿಹ್ನೆಯ ವಸ್ತ್ರ ನೀಡಿ ಗ್ರಾಮೀಣ ಇಲ್ಲವೇ ಶಹರ ಪ್ರದೇಶದಲ್ಲಿ ಪ್ರಚಾರ ಮಾಡಬೇಕೆಂದು ನಿರ್ದೇಶನ ನೀಡಲಾಗುತ್ತದೆ. ನಂತರ ವಾಹನಗಳಲ್ಲಿ ಅವರನ್ನು ನಿಗದಿ ಪಡಿಸಿ ಪ್ರದೇಶಕ್ಕೆ ಕಳುಹಿಸಿಕೊಡಲಾಗುತ್ತದೆ. ಅವರು ತಮಗೆ ನಿಗದಿ ಪಡಿಸಿದ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚುತ್ತಾರೆ. 

ಕಾರ್ಮಿಕರಿಗೆ ಸುಗ್ಗಿ: ಚುನಾವಣೆ ಕೆಲಸ ಮಾಡುವ ಕಾರ್ಮಿಕರಿಗೆ ಸುಗ್ಗಿಯಾಗಿ ಮಾರ್ಪಟ್ಟಿದೆ. ಕಟ್ಟಡ ಕಾರ್ಮಿಕರು, ರೈತರು, ಅಂಗಡಿ, ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರಲ್ಲಿ ಬಹುತೇಕ ಜನರು ತಮ್ಮ ಮೂಲ ಕೆಲಸವನ್ನು ಕೈಬಿಟ್ಟು, ಅತ್ಯಂತ ಆರಾಮದಾಯಕ ಹಾಗೂ ಹೆಚ್ಚಿನ ವೇತನ ಬರುವ ಬಾಡಿಗೆ ಕಾರ್ಯಕರ್ತರ ಕೆಲಸಕ್ಕೆ ಸೇರುತ್ತಿದ್ದಾರೆ. ಹೊಟೆಲ್ ಹಾಗೂ ಅಂಗಡಿಗಳಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿದೆ ಎಂದು ಹೋಟೆಲ್ ಮಾಲೀಕ ಗಣೇಶ ಹೇಳುತ್ತಾರೆ.

ರೂ  500 ವರೆಗೆ ಕೂಲಿ: ಚುನಾವಣಾ ಪ್ರಚಾರ ನಡೆಸುವ ಬಾಡಿಗೆ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಟಿಫಿನ್, ಊಟ, ಕುಡಿಯಲು ನೀರು ಕೊಟ್ಟು ದಿನವೊಂದಕ್ಕೆ ರೂ 200ಯಿಂದ ರೂ 500 ರೂಪಾಯಿವರೆಗೆ ಕೂಲಿ ಕೊಡಲಾಗುತ್ತದೆ. ಇದರಲ್ಲಿ ಸ್ವಲ್ಪ ಅಸ್ತವ್ಯಸ್ತವಾದರೂ ಈ ಅಭ್ಯರ್ಥಿಗೆ ಕೈಕೊಟ್ಟು ಇನ್ನೊಂದು ಅಭ್ಯರ್ಥಿಯತ್ತ ಸಾಗಿಬಿಡುತ್ತಾರೆ ಎಂದು ಹೇಳಲಾಗಿತ್ತದೆ.

ಏಜೆಂಟರು: ಚುನಾವಣಾ ಪ್ರಚಾರ ಸಭೆ, ಸಮಾರಂಭಗಳಿಗೆ ಕಾರ್ಯಕರ್ತರನ್ನು ಒದಗಿಸುವುದು ಒಂದು ಏಜೆನ್ಸಿಯಾಗಿ ಮಾರ್ಪಟ್ಟಿದೆ. ಕೆಲವರು ತಮ್ಮ ಮಾತು ಕೇಳುವ ಒಂದು ಓಣಿಯ ಇಲ್ಲವೇ ಕೇರಿಯ ನೂರು, ಇನ್ನೂರು ಜನರನ್ನು ಒಂದೆಡೆ ಸೇರಿಸಿ ಆ ಗುಂಪಿನ ಏಜೆಂಟ್‌ರಾಗಿ ಕಾರ್ಯನಿರ್ವಹಿಸುವವರು ಇದ್ದಾರೆ. ಇವರ ಬಳಿ ಬಂದು ಪಕ್ಷದ ಮುಖಂಡರು, ಇಂತಿಷ್ಟು ಜನರನ್ನು ಇಂತಹ ದಿನ ಕಳುಹಿಸಬೇಕು ಎಂದರೆ, ಅವರು ಅಷ್ಟು ಜನರನ್ನು ವ್ಯವಸ್ಥೆ ಮಾಡುತ್ತಾರೆ.

ಈ ಏಜೆಂಟ್‌ರು ಬಾಡಿಗೆ ಕಾರ್ಯಕರ್ತರಿಗೆ ಮೊದಲೇ ಕೂಲಿ ನಿಗದಿ ಮಾಡಿರುತ್ತಾರೆ. ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆ ನಿತ್ಯ ತಮ್ಮ ಪರ ಕೆಲಸ ಮಾಡುವ ಕಾರ್ಯಕರ್ತರಿಗೆ ಒಂದೆಡೆ ಊಟ, ಉಪಹಾರದ ವ್ಯವಸ್ಥೆ ಮಾಡುವುದು ಕಷ್ಟದ ಕೆಲಸ ಎಂದು ಕೆಲ ಅಭ್ಯರ್ಥಿಗಳು ಊಟ, ಉಪಹಾರ ವ್ಯವಸ್ಥೆಯನ್ನ ಏಜೆಂಟರಿಗೆ ನೀಡಿ ದಿನವೊಂದಕ್ಕೆ ಇಂತಿಷ್ಟು ಹಣ ಎಂದು ಗುತ್ತಿಗೆ ನೀಡುತ್ತಿದ್ದಾರೆ ಎಂದು ಬಾಡಿಗೆ ಕಾರ್ಯಕರ್ತರ ತಂಡದ ಮುಖಂಡರೊಬ್ಬರು ಹೇಳುತ್ತಾರೆ.

ಮನಪೂರ್ವಕವಲ್ಲ: ಬಾಡಿಗೆ ಕಾರ್ಯಕರ್ತರು ಪ್ರಚಾರವನ್ನು ಒಂದು ಕೆಲಸವೆಂದು ಭಾವಿಸಿ ಬೇಕಾಬಿಟ್ಟಿಯಾಗಿ ಕರಪತ್ರಗಳನ್ನು ನೀಡಿ ತಮ್ಮಲ್ಲಿರುವ ಕರಪತ್ರ ಖಾಲಿ ಮಾಡುತ್ತಾರೆಯೇ ಹೊರತು. ಅವರು ಅಭ್ಯರ್ಥಿ ಪರವಾಗಿ ಮನಃಪೂರ್ವಕ ಕೆಲಸ ಮಾಡುವುದಿಲ್ಲ ಎಂಬ ಸತ್ಯಗೊತ್ತಿದೆ. ಆದರೆ, ನಮ್ಮ ಕರಪತ್ರ ಜನರ ಕೈಗೆ ತಲುಪುತ್ತದೆಯಲ್ಲ ಎಂಬ ಸಮಾಧಾನಕ್ಕಾಗಿ ಅವರಿಗೆ ಕೆಲಸ ಒಪ್ಪಿಸಬೇಕಾಗಿದೆ ಎಂದು ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರು ತಿಳಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರ ಕೆಲಸ ಮಾಡಲೆಂದೆ ಸಮಿತಿಗಳನ್ನು ರಚನೆ ಮಾಡುತ್ತವೆ. ಆದರೆ, ಚುನಾವಣೆಯಲ್ಲಿ ಅದಾವುದು ಪ್ರಯೋಜನಕ್ಕೆ ಬರುತ್ತಿಲ್ಲ. ಬಹುತೇಕರಿಗೆ ಪದಾಧಿಕಾರಿಗಳ ಹುದ್ದೆ ಬೇಕು. ಕೆಲಸ ಬೇಡ ಎಂದು ಬಹಳಷ್ಟು ಕಾರ್ಯಕರ್ತರು ಚುನಾವಣಾ ಕೆಲಸದಿಂದ ದೂರ ಉಳಿಯುತ್ತಾರೆ. ಆಗ ಅಭ್ಯರ್ಥಿಗಳು ಬಾಡಿಗೆ ಕಾರ್ಯಕರ್ತರನ್ನು ನೇಮಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT