ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾತ್‌ರೂಂನಲ್ಲಿ ಹಾಡು-ಪಾಡು

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಇದು ಪ್ರತಿ ಮನೆಗೂ ಇದು ಬಹಳ ಮುಖ್ಯವಾದ ಅಂಶವೇ ಆಗಿದ್ದರೂ ಹೆಚ್ಚಿನವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕನಸಿನ ಮನೆಗೆ ಪ್ಲಾನ್ ಬರೆಸುವಾಗಲೂ ಈ ಕೋಣೆಯ ಬಗ್ಗೆ `ನಕ್ಷೆ~ ಮಾಡಿರುವುದಿಲ್ಲ. ಮಧ್ಯಮವರ್ಗದವರಂತೂ ಮನೆಯ ಹಜಾರ, ಅಡುಗೆ ಕೋಣೆ, ಪೂಜಾಗೃಹದ ಬಗ್ಗೆ ಆಲೋಚಿಸುತ್ತಾರೆಯೇ ಹೊರತು ಬಹಳ ಅಗತ್ಯ ಹಾಗೂ ಅನಿವಾರ್ಯವೂ ಆಗಿರುವ ಈ `ಕೊಠಡಿ~ಯನ್ನು ಮನೆ ಕಟ್ಟುವಾಗ ಮೂಲೆಗಿಡುತ್ತಾರೆ. ಬಹುತೇಕರಿಂದ ಹೀಗೆ ನಿರ್ಲಕ್ಷ್ಯಕ್ಕೊಳಗಾಗಿರುವುದು `ಸ್ನಾನದ ಕೋಣೆ~!

ಬಹಳಷ್ಟು ಮಂದಿಗೆ ಬಾತ್ ರೂಂ ಎಂದರೆ ಬೆಳಿಗ್ಗೆ ಹೀಗೆ ಹೋಗಿ ಹಾಗೆ ಬಂದುಬಿಡುವಂತಹ ಜಾಗ. ಕೆಲವರಿಗೆ ಅವರ ಸೌಂದರ್ಯದ ಆರಾಧನೆಗೆ, ದೇಹದ ಅಲಂಕಾರಕ್ಕೆ ಅವಕಾಶ ನೀಡುವ ಅಮೂಲ್ಯವಾದ ಸ್ಥಳ.

ಇನ್ನಷ್ಟು ಮಂದಿಗೆ ಹಾಡು ಹೇಳುತ್ತಾ, ಬೆಚ್ಚಗಿನ ನೀರನ್ನು ಮೈಮೇಲೆ ಸುರಿದುಕೊಳ್ಳುತ್ತಾ, ಯಾರ ತಂಟೆಯೂ ಇಲ್ಲದೆ ಒಂದರ್ಧ ಗಂಟೆ ಆರಾಮವಾಗಿ ಇರಲು ಸಾಧ್ಯವಾಗಿಸುವ ಏಕಾಂತ!

ಈಗ ಕಾಲ ಬದಲಾಗಿದೆ. ಬಾತ್ ರೂಂ ಕುರಿತ ಬಾತ್‌ಚೀತ್ (ಚರ್ಚೆ) ಸಹ ಹೆಚ್ಚಾಗಿದೆ. ಗೃಹಿಣಿಯರು, ಅವರ ಪುತ್ರಿಯರ ಆಲೋಚನೆಯೂ ಈಗ ... `ಬಾತ್ ರೂಂ~ ಹೀಗೇ ಇರಬೇಕು ಎನ್ನುವಂತಿದೆ.

`ಬೆಳಿಗ್ಗೆ ಏಳುತ್ತಿದ್ದಂತೆಯೇ ಅಗತ್ಯವಾಗಿ ಬಳಸಲೇಬೇಕಾದ ಬಾತ್ ರೂಂ ಈ ವಿನ್ಯಾಸದಲ್ಲಿಯೇ ಇರಬೇಕು. ಇಂಥ ಟಬ್, ವಾಷ್‌ಬೇಸಿನ್, ಫಿಟ್ಟಿಂಗ್ಸ್ ಬೇಕೇಬೇಕು. ವಾಲ್-ಪ್ಲೋರ್ ಟೈಲ್ಸ್ ಅಂತೂ ಈ ಬಣ್ಣ-ವಿನ್ಯಾಸ-ಅಳತೆಯದೇ ಆಗ ಬೇಕು~ ಎಂದು ಬಹಳವಾಗಿ ಚರ್ಚಿಸಿ ಅದಕ್ಕೊಂದು ರೂಪುರೇಷೆ ಕೊಡುವ ಮಟ್ಟಕ್ಕೂ ಜನರ ಆಲೋಚನೆಯಲ್ಲಿ ಬದಲಾವಣೆಯಾಗಿದೆ. ಮನೆ ನಿರ್ಮಾಣ, ನಕ್ಷೆ ತಯಾರಿ ವೇಳೆಯೇ ಈ ಬಗ್ಗೆ ಗಹನ ಚರ್ಚೆ ನಡೆಯುತ್ತಿದೆ.

ವಾಸ್ತುಶಿಲ್ಪಿ ಬಳಿ ಕನಸಿನ ಮನೆಯ ನಕ್ಷೆ ತಯಾರಿಸಿಕೊಳ್ಳುವ ಮುನ್ನವೇ ಬಾತ್‌ರೂಂ ಅರ್ತಾಥ್ ಶೌಚಗೃಹದ ಪ್ಲಾನಿಂಗ್ ಸಹ ನಿರ್ಧಾರವಾಗಬೇಕಾದ್ದು ಮುಖ್ಯ. ಮನೆಯ ಯಾವ ಭಾಗದಲ್ಲಿ ಸ್ನಾನದ ಕೋಣೆ ಇರಬೇಕು, ಆಕಾರ, ಅಳತೆ, ಯಾವ ಬಗೆ ಪರಿಕರ ಅಳವಡಿಸಿಕೊಳ್ಳಬೇಕು... ಎಲ್ಲದರ ಬಗ್ಗೆ ವಾಸ್ತುಶಿಲ್ಪಿ ಬಳಿ `ಮನೆ ಮಂದಿಯೆಲ್ಲ~ ಮುಕ್ತವಾಗಿ ಚರ್ಚಿಸಿ ಆ ರೀತಿಯೇ ನಕ್ಷೆ ಬರುವಂತೆ ನೋಡಿಕೊಳ್ಳಬೇಕು.

ಸ್ನಾನಗೃಹ ಮಲಗುವ ಕೊಠಡಿಗೆ ಅಂಟಿಕೊಂಡಂತೆ(ಅಟ್ಯಾಚ್ಡ್) ಇರಬೇಕೇ? ಬೆಡ್‌ರೂಂಗೆ ಸಮೀಪವಾಗಿ ಇದ್ದೂ ಉಳಿದ ರೂಂಗಳಲ್ಲಿ ಇರುವವರಿಗೂ ಬಳಸಲು ಅನುಕೂಲವಾಗುವಂತೆ `ಕಾಮನ್~ ಆಗಿರಬೇಕಾ? ಈ ಬಗ್ಗೆ ಮೊದಲೇ ಯೋಜಿಸಿಕೊಳ್ಳಿ.

ಶೌಚಗೃಹ ಸಾಮಾನ್ಯವಾಗಿ ಚಚ್ಚೌಕ ಮತ್ತು ಆಯತಾಕಾರದಲ್ಲಿರುತ್ತದೆ. ಕೆಲವರು ವೃತ್ತಾಕಾರ ಅಥವಾ ಓವಲ್ ಷೇಪ್(ಮೊಟ್ಟೆ ಅಕಾರ) ಇರುವಂತೆ ವಿಶೇಷ ವಿನ್ಯಾಸ ಬಯಸುತ್ತಾರೆ. ಇಂಥ ಆಕಾರ ಅಪರೂಪ ಎನಿಸಿದರೂ ಗೋಡೆ ಮತ್ತು ನೆಲಕ್ಕೆ ಟೈಲ್ಸ್ ಅಳವಡಿಸುವಾಗ ಕಷ್ಟವಾಗುತ್ತದೆ.

ಶೌಚಗೃಹದ ಬಗ್ಗೆ ಹೀಗೆ ಮೊದಲೇ ನಿರ್ಧರಿಸುವುದರಿಂದ ತಳಪಾಯ ಮತ್ತು ಗೋಡೆ ನಿರ್ಮಾಣದ ವೇಳೆ ಕೆಲಸ ಸಲೀಸಾಗುತ್ತದೆ. ಎರಡು ಬೆಡ್‌ರೂಂ ಅಕ್ಕಪಕ್ಕವೇ ಇದ್ದರೆ ಮಧ್ಯದ ಗೋಡೆ ಬರುವಲ್ಲಿ ಬಾತ್ ರೂಂ ನಿರ್ಮಿಸಬಹುದು.

ಕೆಲವು ಮನೆಗಳಲ್ಲಿಯಂತೂ ಮಹಡಿ ಮೆಟ್ಟಿಲ ಕೆಳಗಿನ ಕಿಷ್ಕಿಂದೆಯಂಥ ಜಾಗದಲ್ಲಿ ತುರುಕಿದಂತೆ ಬಾತ್ ರೂಂ ಇರುತ್ತದೆ. ಹಾಗಿದ್ದಾಗ ಸಾಬೂನಿನಿಂದ ಮೈಕೈ ಉಜ್ಜಿಕೊಳ್ಳುವ ಬದಲು ಗೋಡೆಗೆ ಬೆನ್ನು-ಭುಜ ತಾಗಿಸಿಕೊಂಡು ಗಾಯ ಮಾಡಿಕೊಳ್ಳಬೇಕಾಗುತ್ತದೆ. ಕನಿಷ್ಠ 6-8 ಅಡಿಯಾದರೂ ಬಾತ್‌ರೂಂ ಅಗಲ-ಉದ್ದ ಇರಬೇಡವೇ?

ಪ್ಲಂಬಿಂಗ್ ಕೆಲಸ ಆರಂಭಿಸುವ ಮುನ್ನವೇ ಷವರ್ ಯುನಿಟ್, ಡಬ್ಲ್ಯುಸಿ, ವಾಷ್ ಸಿಂಕ್.. ವಾಷ್‌ಬೇಸಿನ್ ಮಿಕ್ಸರ್... ನಲ್ಲಿ ಫಿಟ್ಟಿಂಗ್‌ಗಳನ್ನು ನಿಮ್ಮ ಆಸಕ್ತಿಗೆ ತಕ್ಕಂತೆ ಖರೀದಿಸಿಟ್ಟುಕೊಳ್ಳುವುದು ಉತ್ತಮ.

ಕಮೋಡ್‌ಗಳಿಗೆ(ಡಬ್ಲ್ಯುಸಿ) ಈಗ ಲಭ್ಯವಿರುವ ಆಧುನಿಕ ಶೈಲಿ `ಫೈಬರ್ ಕನ್ಸೀಲ್ಡ್ ಟ್ಯಾಂಕ್~ ಬಳಸಬಹುದು. ಇದಾದರೆ ಗೋಡೆಯೊಳಗೆ ಅಳವಡಿಸಬಹುದು. ಹಾಗೆ ಮಾಡುವುದರಿಂದ ಯಾವ ತೊಂದರೆಯೂ ಇಲ್ಲ. ಬಾತ್ ರೂಂ ಒಳಭಾಗದ ಜಾಗವೂ ಉಳಿಯುತ್ತದೆ.

ಮೊದಲೆಲ್ಲ ಸೆರಾಮಿಕ್ ಟ್ಯಾಂಕ್ ಕಮೋಡ್ ಬಳಸಲಾಗುತ್ತಿತ್ತು. ಇದರಿಂದ ಕೆಲವು ಸಮಸ್ಯೆ ಇದ್ದವು. ಫೈಬರ್ ಕನ್ಸೀಲ್ಡ್ ಟ್ಯಾಂಕ್ ಬಳಸುವುದರಿಂದ ಸಮಸ್ಯೆ ಇರುವುದಿಲ್ಲ.

ಷವರ್‌ನಲ್ಲಿ ಟೂ ಇನ್ ಒನ್, ತ್ರೀ ಇನ್ ಒನ್ ಅಥವಾ ಷವರ್ ಪ್ಯಾನೆಲ್ ವಿತ್ ಸೈಡ್ ಜೆಟ್ಸ್ ಅಳವಡಿಕೆ ಅವಕಾಶವಿದೆ. ಅತ್ಯಾಧುನಿಕ ಫಿಟ್ಟಿಂಗ್‌ಗಳೂ ಲಭ್ಯವಿವೆ. ಆದರೆ, ಜೇಬು ಭರ್ತಿ ಇರಬೇಕು ಅಷ್ಟೆ.

ಬಾತ್‌ಟಬ್ ಬೇಕಿದ್ದರೆ ಸ್ನಾನಗೃಹ ನಿರ್ಮಾಣಕ್ಕೂ ಮೊದಲೇ ಆಯ್ಕೆ ಮಾಡಿಕೊಳ್ಳಬೇಕು. ವಿವಿಧ ವಿನ್ಯಾಸ-ಕಾರ್ಯವಿಧಾನದ ಬಾತ್ ಟಬ್‌ಗಳೂ ಈಗ ಲಭ್ಯವಿವೆ.

ವಾಷ್ ಬೇಸಿನ್ `ಬೋಗುಣಿ~ (ಬೌಲ್) ಆಕಾರದಲ್ಲಿಯೂ ಬಂದಿವೆ. ಇವನ್ನು ಗ್ರಾನೈಟ್ ಅಥವಾ ಮಾರ್ಬಲ್ ಕೌಂಟರ್ ಮೇಲೆ ಬರುವ ಹಾಗೆ ಮಾಡಿಕೊಳ್ಳಬಹುದು... ಇದರಿಂದಲೂ ಜಾಗದ ಸದ್ಬಳಕೆ ಸಾಧ್ಯ.

ವಾಲ್ ಮೌಂಟೆಡ್ ಬೇಸಿನ್ ಸಹ ಇವೆ. ವಾಷ್ ಬೇಸಿನ್ ಫಿಕ್ಸರ್‌ಗಳಲ್ಲಿ ತಣ್ಣೀರು-ಬಿಸಿನೀರು ಪ್ರತ್ಯೇಕವಾಗಿ ಬರುವಂತಹ ಅಥವಾ ಎರಡೂ ಒಂದೇ ನಲ್ಲಿಯಲ್ಲಿ ಬರುವಂತೆಯೂ ಇರುವಂತಹುದೂ ಇದ್ದು, ಆಯ್ಕೆ ನಿಮ್ಮದು.

ಮೇಲಿನ ಮಹಡಿಯಲ್ಲಿ ಬಾತ್ ನಿರ್ಮಿಸುವುದಾದರೆ ಅದಕ್ಕೆ ಸ್ಕೈಲೈಟ್ಸ್ (ಸೂರ್ಯನ ಸಹಜ ಬೆಳಕು ಬರುವಂಥ) ಪಾರದರ್ಶಕ ಛಾವಣಿ ಅಳವಡಿಸಿಕೊಳ್ಳಬಹುದು. ಇಡೀ ಬಾತ್‌ರೂಂಗೆ ಬೇಡ ಎನಿಸಿದರೆ ಕೆಲವೆಡೆಯಷ್ಟೇ ಇಣುಕು ಬೆಳಕು ಬರುವಂತೆ ಮಾಡಿಕೊಳ್ಳಬಹುದು. ಆದರೆ, ಅಕ್ಕಪಕ್ಕದ ಕಟ್ಟಡ ನಿಮ್ಮ ಮನೆಗಿಂತ ಎತ್ತರದ್ದಾಗಿದ್ದರೆ ಸ್ಕೈಲೈಟ್ ಬಾತ್‌ರೂಂ ಸೂಕ್ತವಲ್ಲ.

ಮನೆ ಪ್ಲಾನಿಂಗ್ ಸಂದರ್ಭದಲ್ಲಿಯೇ ಬಾತ್ ರೂಂನಲ್ಲಿ `ಡ್ರೈ ಎರಿಯಾ~ ಮತ್ತು `ವೆಟ್ ಏರಿಯಾ~ ವಿನ್ಯಾಸ ಖಚಿತಪಡಿಸಿಕೊಳ್ಳಬೇಕು. ಡ್ರೈ ಏರಿಯಾ ಎಂದರೆ ಅಲ್ಲಿ ಕಮೋಡ್ ಮತ್ತು ಹ್ಯಾಂಡ್ ವಾಷ್ ಬರುತ್ತವೆ.

ಸ್ನಾನದ ಜಾಗವನ್ನು ಗಾಜಿನ ಗೋಡೆ ಬಳಸಿ ಪ್ರತ್ಯೇಕಿಸುವ (ಪಾರ್ಟಿಷನ್) ಅವಕಾಶವೂ ಇರುತ್ತದೆ. ಇದರಿಂದ `ಡ್ರೈ ಎರಿಯಾ~ಗೆ ನೀರು ಚಿಮ್ಮಿ ಕೊಳಕಾಗುವುದಿಲ್ಲ.

ಬಾತ್ ರೂಂ ಕಿಟಕಿಗಳಿಗೆ `ಯುಪಿವಿಸಿ~ (ಪ್ಲಾಸ್ಟಿಕ್) ಬಳಸಿಕೊಳ್ಳಬಹುದು. ಇದರಲ್ಲಿಯೇ ಎಕ್ಸಾಸ್ಟ್ ಫ್ಯಾನ್‌ಗೂ ಸ್ಥಳಾವಕಾಶ ಮಾಡಿಕೊಳ್ಳಬಹುದು.

ಬಾತ್ ರೂಂ ಬಾಗಿಲಿಗೆ ಮರ ಅಥವಾ ಪ್ಲೈವುಡ್ ಬಳಸಿದ್ದರೆ ಒಳಭಾಗದಲ್ಲಿ ಲ್ಯಾಮಿನೇಟ್ ಮಾಡಿಸುವುದು ಅಗತ್ಯ. ಇಲ್ಲವಾದರೆ ನೀರು ಬಿದ್ದು ಬಾಗಿಲು ಬೇಗ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಾತ್‌ರೂಂಗೆ ಪಿವಿಸಿ ಬಾಗಿಲು ಬಳಕೆಯೂ ಹೆಚ್ಚಿದೆ.

ಬಾತ್‌ರೂಂ ಟೈಲ್ಸ್‌ಗಳಲ್ಲಿ ಹಲವು ಬಗೆ. ಇಟಾಲಿಯನ್ ಮಾರ್ಬಲ್ ಪ್ಯಾಟ್ರನ್ ಟೈಲ್ಸ್(ಡಿಜಿಟಲ್ ಟೈಲ್ಸ್) ಬಳಕೆ ಇತ್ತೀಚೆಗೆ ಹೆಚ್ಚಿದೆ. ಅದರ ಅಳತೆಯೂ ದೊಡ್ಡದಿರುತ್ತದೆ. 1-2 ಅಡಿ ಉದ್ದಗಲ, 1-3 ಅಡಿ ಅಥವಾ 1.5-2.5 ಅಡಿ ಅಳತೆಯಲ್ಲಿಯೂ ಸಿಗುತ್ತವೆ. ಇಟಾಲಿಯನ್ ಮಾರ್ಬಲ್ ಟೈಲ್ಸ್ ಬಳಸುವುದರಿಂದ ಜಾಯಿಂ ಟ್ಸ್ ಪ್ರಮಾಣ ಕಡಿಮೆ ಇರುತ್ತದೆ.

ನಿಮ್ಮನ್ನು ಜಾರಿ ಬೀಳಿಸದಂತಹ (ಆಂಟಿ ಸ್ಕಿಡ್) ಟೈಲ್‌ಗಳನ್ನು ಬಾತ್‌ರೂಂ ನೆಲಕ್ಕೆ ಬಳಸಬೇಕು. ಷವರ್ ಕೆಳಗಿನ ಭಾಗಕ್ಕೆ ಒರಟಾದ ಗ್ರಾನೈಟ್ ಅಥವಾ ಡ್ರೆಸ್ ಮಾಡಿಸಿರುವ ತೆಳುವಾದ ಕಲ್ಲಿನ ಚಪ್ಪಡಿ (ಸೆರಾ ಟೈಲ್ಸ್) ಅಳವಡಿಸಬೇಕು.

ಬಾತ್‌ರೂಂನಲ್ಲಿ ಈಗ ಕನ್ನಡಿ ಬಳಕೆಯೂ ಹೆಚ್ಚಿದೆ. ಷೇವಿಂಗ್ ನುಕೂಲವಾದ ಪುಟ್ಟ ಕನ್ನಡಿ, ದೊಡ್ಡ ನಿಲುವುಗನ್ನಡಿ... ಇವು ಬಳಸುವವರ ಆಯ್ಕೆಗೆ-ಅಭಿರುಚಿಗೆ ಬಿಟ್ಟಿದ್ದು.

ಗೋಡೆಗೆ ಲೈಟ್ ಷೇಡ್ ಟೈಲ್ಸ್ ಮತ್ತು ಸಣ್ಣ ಪ್ರಮಾಣದಲ್ಲಿ ಹೈಲೈಟರ್ ಬಳಸಿ ವಿನ್ಯಾಸಗೊಳಿಸಿದರೆ ಬಾತ್ ರೂಂ ಅಂದ ಹೆಚ್ಚುತ್ತದೆ.

ಕಡೆ ಮಾತು: ಮನೆ ಬೇಕಿದ್ದರೆ ದೊಡ್ಡದೇ ಇರಲಿ, ಕೊಠಡಿಗಳ ಸಂಖ್ಯೆಯೂ ಹೆಚ್ಚೇ ಇರಲಿ. ಆದರೆ ಬಾತ್ ರೂಂ ಮಾತ್ರ ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲವಾದರೆ ಶುಚಿಗೊಳಿಸುವ ಕೆಲಸ ಹೊರೆ ಎನಿಸುತ್ತದೆ.

(ರಾಧಾ ರವಣಂ ಮೊ: 9845393580)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT