ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಲ್ಲಿ ಬೆಂಕಿ ಚಿತ್ತಾರ

Last Updated 9 ಫೆಬ್ರುವರಿ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಬಾನಿನಲ್ಲಿ ಬಿಸಿಲೇರುತ್ತಿದ್ದಂತೆ ವೈಮಾನಿಕ ದಿಗ್ಗಜರ `ಪಟಾಕಿ'ಯ ಸದ್ದುಗದ್ದಲ. ಆಗಸದಲ್ಲಿ ವಾರಾಂತ್ಯಕ್ಕೆ ಬೆಂಕಿ ಬಿರುಗಾಳಿಯ ರೌದ್ರಾವತಾರ. ಜನಸಾಗರಕ್ಕೆ ಮೃಷ್ಟಾನ್ನ ಭೋಜನದ ತೃಪ್ತಿ.

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ `ಏರೋ ಇಂಡಿಯಾ-2013' ವೈಮಾನಿಕ ಪ್ರದರ್ಶನಕ್ಕೆ ಶನಿವಾರ ಹೊಸ ಮೆರುಗು ಬಂದಿತ್ತು. ಅಲ್ಲಿ ಝೆಕ್ ರಿಪಬ್ಲಿಕ್‌ನ `ಹಾರುವ ಹೋರಿಗಳ' (ಫ್ಲೈಯಿಂಗ್ ಬುಲ್ಸ್) ಘರ್ಜನೆ ಇತ್ತು. ಜಗತ್ಪ್ರಸಿದ್ಧ ರಷ್ಯಾದ ರಣಹದ್ದುಗಳ (ರಷ್ಯನ್ ನೈಟ್ಸ್ ತಂಡ) ಮೈ ನಡುಗಿಸುವ ಪ್ರದರ್ಶನವಿತ್ತು. ಭಾರತದ ತಂಡಗಳು ಉತ್ಸವದ ಕಳೆಯನ್ನು ಮೂಡಿಸಿದ್ದವು.

ಶನಿವಾರದ ಪ್ರದರ್ಶನಕ್ಕೆ ಸಾಕ್ಷಿಯಾದುದು ಲಕ್ಷಕ್ಕೂ ಅಧಿಕ ಜನರು. ಬೆಳಿಗ್ಗೆಯಿಂದಲೇ ಜನಸಾಗರ ವಿಮಾನಸಂತೆಯ ಕಡೆಗೆ ಹರಿದು ಬಂದಿತ್ತು. 10 ಗಂಟೆಯ ಹೊತ್ತಿಗೆ 40,000ಕ್ಕೂ ಅಧಿಕ ಸಂಖ್ಯೆಯ ಜನರು ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ಜನರ ಸಂಖ್ಯೆ ಲಕ್ಷದ ಗಡಿ ದಾಟಿತ್ತು. 

ಜನಸಾಗರ ಪೈಲೆಟ್‌ಗಳಿಗೆ ಹೊಸ ಸ್ಫೂರ್ತಿಯನ್ನು ತಂದುಕೊಟ್ಟಿತ್ತು. ಆರಂಭದಲ್ಲಿ ಭಾರತದ ತೇಜಸ್, ಸಾರಂಗ್ ಹೆಲಿಕಾಪ್ಟರ್‌ಗಳು ಹಾರಿಬಂದಾಗ ವೀಕ್ಷಕರ ಮುಖದಲ್ಲಿ ಬೇಸರದ ಭಾವ. ವಿದೇಶಿ ತಂಡಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳದ ಕಾರಣ ದೇಸಿ ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡುತ್ತಿವೆ ಎಂಬ ಮಾತು ಪ್ರೇಕ್ಷಕರ ವಲಯದಿಂದ ಕೇಳಿ ಬಂತು.

10.45ರ ವೇಳೆಗೆ ಹಾರುವ ಹೋರಿಗಳ ಆರ್ಭಟ ಸುರುವಾಗುತ್ತಿದ್ದಂತೆ ಜನರ ಮುಖ ಅರಳಿತು. ಸುಮಾರು 20 ನಿಮಿಷಗಳ ಕಾಲ ಈ ತಂಡವು ಆಗಸವನ್ನು ಮೈದಾನವನ್ನಾಗಿ ಮಾಡಿಕೊಂಡವು. ಆರಂಭದಲ್ಲಿ ಜೊತೆ ಜೊತೆಯಾಗಿ ಸಾಗಿದ ಈ ತಂಡವು ಬಳಿಕ ರಣೋತ್ಸಾಹದಿಂದ ಪ್ರದರ್ಶನ ನೀಡಿದವು. ಬಳಿಕ ಭಾರತೀಯ ತಂಡಗಳ ಕಲರವ.

`ಇವತ್ತು ಸಹ ರಷ್ಯನ್ ನೈಟ್ಸ್ ತಂಡವು ಪ್ರದರ್ಶನ ನೀಡುವುದಿಲ್ಲ' ಎಂಬ ಸುದ್ದಿ ಹರಡಲಾರಂಭಿಸಿತು. 11.30ರ ಗಡಿ ದಾಡುತ್ತಿದ್ದಂತೆ ರಷ್ಯಾದ ನಾಲ್ಕು `ರಣಹದ್ದು'ಗಳು ಬಾನಿನಲ್ಲಿ ಪ್ರತ್ಯಕ್ಷವಾದವು. ಶುರುವಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಗಿದ ಈ ತಂಡದ ಆರ್ಭಟ ಹೊತ್ತೇರುತ್ತಿದ್ದಂತೆ ಹೆಚ್ಚಿತು. ತಂಡವು ಭೂಮಿಗೆ ಅತೀ ಹತ್ತಿರಕ್ಕೆ ಸಾಗಿ ಬಂದು ಜನರ ಹೃದಯದ ಬಡಿತವನ್ನು ಹೆಚ್ಚಿಸಿದವು. ಮತ್ತೆ ನಭಕ್ಕೆ ಜಿಗಿದು ನಾಲ್ಕು ದಿಕ್ಕುಗಳಿಗೆ ಚಲಿಸಿದವು. ಎರಡು ವಿಮಾನಗಳು ಪರಸ್ಪರ ಎದುರು ಬದುರಾಗಿ ಸಾಗಿ ಬಂದು ಪರಸ್ಪರ ಡಿಕ್ಕಿ ಹೊಡೆಯುವಂತೆ ಸಾಗಿದಾಗ ಜನರ ಮೊಗದಲ್ಲಿ ಒಂದು ಕ್ಷಣ ಆತಂಕದ ವಾತಾವರಣ. ಉಳಿದ ಎರಡು ವಿಮಾನಗಳು ದೂರದಲ್ಲೇ ಸಾಗುತ್ತಾ ಈ ದೃಶ್ಯಕ್ಕೆ ಸಾಕ್ಷಿಯಾದವು. ತಂಡದ ಪ್ರದರ್ಶನದ ಕೊನೆಗೆ ಒಂದು ವಿಮಾನವು ಪ್ರತ್ಯೇಕಗೊಂಡು ಎತ್ತರಕ್ಕೆ ಸಾಗಿ ಬೆಂಕಿಯ ಮಳೆಯನ್ನೇ ಹರಿಸಿತು. ಮತ್ತೆ ಉಳಿದ ಮೂರು ತಂಡಗಳಿಂದಲೂ ಇದೇ ಮಾದರಿಯ ಪ್ರದರ್ಶನ.

ಸಂಚಾರ ಅಸ್ತವ್ಯಸ್ತ: ಪ್ರದರ್ಶನದ ಆರಂಭಿಕ ಮೂರು ದಿನಗಳಲ್ಲಿ ಜನದಟ್ಟಣೆ ಸಾಮಾನ್ಯವಾಗಿತ್ತು. ಸಂಚಾರ ವ್ಯವಸ್ಥೆ ನಿರ್ವಹಣೆ ಪೊಲೀಸರಿಗೆ ಸವಾಲಿನ ಕೆಲಸ ಆಗಿರಲಿಲ್ಲ. ಶನಿವಾರ ನಿಜವಾದ ಸವಾಲು ಎದುರಾಗಿತ್ತು. ಬೆಳಿಗ್ಗೆಯಿಂದಲೇ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಪೊಲೀಸರು ಪರದಾಡಬೇಕಾಯಿತು. ಕಿ.ಮೀ. ಉದ್ದ ದೂರಕ್ಕೆ ವಾಹನಗಳ ಸರತಿ ಸಾಲು ಕಂಡುಬಂತು. ಸಂಜೆ ಸಂಚಾರ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT