ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನು ಬೆಂಬಲಕ್ಕೆ ಐಎಎಸ್ ಅಧಿಕಾರಿಗಳ ಸಂಘ

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದವರ ಜೊತೆ ಶಾಮೀಲಾದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿ ಶಮೀಂ ಬಾನು ಅವರ ಬೆಂಬಲಕ್ಕೆ ನಿಲ್ಲಲು ಕರ್ನಾಟಕ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ನಿರ್ಧರಿಸಿದೆ. ಶಮೀಂ ಅವರಿಗೆ ಅಗತ್ಯ ಕಾನೂನು ನೆರವು ಒದಗಿಸುವುದಕ್ಕೂ ಸಂಘ ಮುಂದಾಗಿದೆ.

ಬಳ್ಳಾರಿಯ ದೋಣಿಮಲೈ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪೆನಿಯು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಗುತ್ತಿಗೆ ಪ್ರದೇಶದಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪವನ್ನು ಶಮೀಂ ಎದುರಿಸುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ್ದ ಸಿಬಿಐ, ಜೂನ್ ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಶನಿವಾರ ವಿಚಾರಣೆಗೆ ಹಾಜರಾಗಿದ್ದ ಶಮೀಂ ಅವರನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ಇದೇ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರನ್ನು ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ  ಇರಿಸಲಾಗಿದೆ.

ರಾಜ್ಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ, ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ (ಕೆಎಟಿ) ಹಾಲಿ ಸದಸ್ಯೆಯೂ ಆಗಿದ್ದ ಶಮೀಂ ಬಾನು ಅವರನ್ನು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ರಾಜ್ಯದ ಐಎಎಸ್ ಅಧಿಕಾರಿಗಳಲ್ಲಿ ತಲ್ಲಣ ಸೃಷ್ಟಿಸಿದೆ. ರಾಜ್ಯ ಐಎಎಸ್ ಅಧಿಕಾರಿಗಳ ಸಂಘದ ಸದಸ್ಯರು ಭಾನುವಾರ ತುರ್ತು ಸಭೆ ನಡೆಸಿ ಪ್ರಕರಣದ ಕುರಿತು ದೀರ್ಘಕಾಲ ಚರ್ಚೆ ನಡೆಸಿದರು.
ಸಂಘದ ಅಧ್ಯಕ್ಷ ಕೌಶಿಕ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 100ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಭಾಗವಹಿಸಿದ್ದರು.

ಕಾನೂನು ನೆರವು: `ಸೇವಾ ಅವಧಿಯಲ್ಲಿ ಶಮೀಂ ಬಾನು ಅವರ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದಿರಲಿಲ್ಲ. ರಾಜ್ಯ ಕಂಡ ಅತ್ಯುತ್ತಮ ಐಎಎಸ್ ಅಧಿಕಾರಿಗಳಲ್ಲಿ ಅವರು ಒಬ್ಬರಾಗಿದ್ದರು. ಈ ಪ್ರಕರಣದಲ್ಲಿ ಅವರು ತಪ್ಪು ಮಾಡಿದ್ದಾರೆ ಎಂಬ ಆರೋಪದಲ್ಲಿ ಕೂಡ ಹುರುಳಿಲ್ಲ. ಯಾರೋ ಮಾಡಿದ ತಪ್ಪಿಗೆ ಅವರನ್ನು ಬಲಿಪಶು ಮಾಡಲಾಗಿದೆ.

ಅವರು ಆರೋಪಗಳಿಂದ ಮುಕ್ತರಾಗಿ ಹೊರಬರುವುದು ನಿಶ್ಚಿತ. ಈಗ ಸಂಕಷ್ಟದ ಸ್ಥಿತಿಯಲ್ಲಿ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು' ಎಂದು ಹಲವು ಅಧಿಕಾರಿಗಳು ಸಂಘದ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದಾರೆ.

`ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶ ಹೊರಡಿಸಿರುವ ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಂಗದಲ್ಲಿ ನಾವು ಸಂಪೂರ್ಣ ವಿಶ್ವಾಸವನ್ನು ಹೊಂದಿದ್ದೇವೆ. ಆದರೆ, ಶಮೀಂ ಅವರು ಅಂತಿಮವಾಗಿ ಎಲ್ಲಾ ಆರೋಪಗಳಿಂದಲೂ ಮುಕ್ತರಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ನಮಗೆ ಇದೆ. ಅವರು ಒಬ್ಬ ಒಳ್ಳೆಯ ಅಧಿಕಾರಿ. ಅವರಿಗೆ ಬೇಕಿರುವ ಕಾನೂನು ನೆರವನ್ನು ಸಂಘದಿಂದಲೇ ಒದಗಿಸಲು ತೀರ್ಮಾನಿಸಿದ್ದೇವೆ' ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಮುಖರ್ಜಿ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಸಭೆಯಲ್ಲಿ ಯಾವುದೇ ನಿರ್ಣಯವನ್ನು ಅಂಗೀಕರಿಸಿಲ್ಲ. ಆದರೆ, ಕಾನೂನು ನೆರವು ಒದಗಿಸುವ ಸಂಬಂಧ ಅನೌಪಚಾರಿಕ ತೀರ್ಮಾನ ಕೈಗೊಳ್ಳಲಾಗಿದೆ. ಅದರ ಪ್ರಕಾರ ಅವರಿಗೆ ಕಾನೂನು ನೆರವು ಒದಗಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT