ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನೆತ್ತರದ ಸಾಧನೆ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಜಿಸ್ಯಾಟ್‌–14 ಸಂವಹನ ಉಪಗ್ರಹವನ್ನು ಹೊತ್ತ ‘ಜಿಎಸ್‌ಎಲ್‌ವಿ–ಡಿ5’ ರಾಕೆಟ್‌ ಉಡಾವಣೆಯ ಯಶಸ್ಸು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಈವರೆಗೆ ಭಾರತದ ಹಲವು ಸಂವಹನ ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡಾವಣೆ ಮಾಡಿತ್ತಾ­ದರೂ ‘ಜಿಎಸ್‌ಎಲ್‌ವಿ–ಡಿ5’ ರಾಕೆಟ್‌ನಲ್ಲಿ ಅತ್ಯಂತ ಸಂಕೀರ್ಣವಾದ ಕ್ರಯೊಜೆನಿಕ್‌ ತಂತ್ರಜ್ಞಾನ­ವನ್ನು ಬಳಸಿ, ಯಶಸ್ಸು ಕಂಡಿದ್ದು ಹೆಗ್ಗಳಿಕೆ.

ಯಾವುದೇ ದೇಶದ ತಾಂತ್ರಿಕ ನೆರವು ಪಡೆಯದೇ ಇಸ್ರೊ ವಿಜ್ಞಾನಿಗಳೇ ಕ್ರಯೊಜೆನಿಕ್‌ ಎಂಜಿನ್‌ ರೂಪಿ­ಸಿದ್ದು ಮತ್ತೊಂದು ಸಾಧನೆ. ಈ ಮೂಲಕ ಭಾರತ ಈ ವಿಶೇಷ ತಂತ್ರ­ಜ್ಞಾನವನ್ನು ಹೊಂದಿರುವ ಅಮೆರಿಕ, ರಷ್ಯಾ, ಜಪಾನ್‌, ಚೀನಾ ಮತ್ತು ಫ್ರಾನ್ಸ್‌ ಸಾಲಿನಲ್ಲಿ ನಿಂತಿದೆ.
ಹಾಗೆಂದು ಈ ಯಶಸ್ಸು ಸುಲಭವಾಗಿ ದಕ್ಕಿಲ್ಲ. ಇಸ್ರೊ ವಿಜ್ಞಾನಿಗಳ ಇಪ್ಪತ್ತು ವರ್ಷಗಳ ತಪಸ್ಸು ಈಗ ಸಿದ್ಧಿಸಿದೆ.

ಎಂಬತ್ತರ ದಶಕದಲ್ಲಿ ಅಮೆರಿಕ ಹಾಗೂ ಸೋವಿಯತ್‌ ಒಕ್ಕೂಟ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಭಾರತ ಕ್ರಯೊಜೆನಿಕ್‌ ತಂತ್ರಜ್ಞಾನ ಹೊಂದುವ, ತನ್ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಕನಸು ಕಂಡಿತ್ತು. ಈ ಕುರಿತು ಸೋವಿಯತ್‌ ಒಕ್ಕೂಟದ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, 1991ರಲ್ಲಿ ಸೋವಿಯತ್‌ ಒಕ್ಕೂಟದ ಪತನದ ನಂತರ ಅಮೆರಿಕದ ಒತ್ತಡಕ್ಕೆ ಮಣಿದ ರಷ್ಯಾ ಭಾರತಕ್ಕೆ ಕ್ರಯೊಜೆನಿಕ್‌ ತಂತ್ರಜ್ಞಾನ ಹಸ್ತಾಂತರಿ­ಸಲು ನಿರಾಕರಿಸಿತು.

2001ರ ನಂತರ ಏಳು ಸಲ ರಷ್ಯಾ ನೆರವಿನಿಂದ ರಾಕೆಟ್‌ ಉಡಾವಣೆ ಮಾಡಲಾಗಿತ್ತಾದರೂ ನಾಲ್ಕು ಸಲ ಮಾತ್ರ ‘ಜಿಎಸ್‌ಎಲ್‌ವಿ’ ಗುರಿ ಮುಟ್ಟಿತ್ತು. 2010ರ ಏಪ್ರಿಲ್‌ನಲ್ಲಿ ಮೊದಲ ಬಾರಿ ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿ ಉಪಗ್ರಹ ಉಡಾ­ವಣೆಗೆ ಇಸ್ರೊ ಪ್ರಯತ್ನಿಸಿತ್ತು. ಆದರೆ ಅದು ವಿಫಲವಾಗಿತ್ತು. ಕಳೆದ ವರ್ಷ ಆಗಸ್ಟ್‌ 19ರಂದು ಕ್ರಯೊಜೆನಿಕ್‌ ರಾಕೆಟ್‌ ಉಡಾವಣೆಗೆ ಸಕಲ ಸಿದ್ಧತೆ ಮಾಡಿ­ಕೊಳ್ಳಲಾಗಿ­ತ್ತಾದರೂ ಇಂಧನ ಸೋರಿಕೆ ಕಂಡುಬಂದಿದ್ದರಿಂದ ಕೊನೆಯ ಕ್ಷಣದಲ್ಲಿ ಉಡಾವಣೆ ಕೈಬಿಡಲಾಗಿತ್ತು. ಭಾನುವಾರದ ಯಶಸ್ಸು ಇಸ್ರೊ ವಿಜ್ಞಾನಿಗಳ ಮುಖದಲ್ಲಿ ನಗು, ಹೆಮ್ಮೆ ಮೂಡಿಸಿದೆ.

ಈವರೆಗೆ ಇಸ್ರೊ ತನ್ನ ಬಹುತೇಕ ಉಪಗ್ರಹ ಉಡಾವಣೆಗಳಿಗೆ ‘ಪಿಎಸ್‌ಎಲ್‌ವಿ’ಯನ್ನೇ (ಧ್ರುವಗಾಮಿ ಉಡಾವಣಾ ವಾಹನ)  ಅವಲಂಬಿಸಿ­ಕೊಂಡಿತ್ತು. ಕ್ರಯೊಜೆನಿಕ್‌ ತಂತ್ರಜ್ಞಾನ ಹೊಂದಿರುವ ‘ಜಿಎಸ್‌ಎಲ್‌ವಿ’ ಯಶಸ್ಸು ಬಾಹ್ಯಾಕಾಶದಲ್ಲಿ ಮುಂದಿನ ಸಾಧನೆಗಳಿಗೆಲ್ಲ ಮುನ್ನುಡಿ ಬರೆದಿದೆ.


2000–4000 ಕೆ.ಜಿ. ತೂಕ ಹೊಂದಿರುವ ಉಪಗ್ರಹಗಳನ್ನು ಈಗ ‘ಜಿಎಸ್‌ಎಲ್‌ವಿ’ ಮೂಲಕ ಉಡಾವಣೆ ಮಾಡಬಹುದಾಗಿದೆ. ಬಾಹ್ಯಾ­ಕಾಶಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ, ಮತ್ತಷ್ಟು ಅಂತರ­ಗ್ರಹೀಯ ಯಾನಗಳನ್ನು ಕೈಗೊಳ್ಳುವ ಇಸ್ರೊ ಕನಸಿಗೆ ಈಗ ಜೀವ ಬಂದಿದೆ. ವಾಣಿಜ್ಯ ಉದ್ದೇಶದಿಂದ ಇತರ ದೇಶಗಳ ಉಪಗ್ರಹ ಉಡಾವಣೆಗೂ ಇದು ಹೆಬ್ಬಾಗಿಲು ತೆರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT