ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪು ಬೆಂಗಳೂರ ನೆನಪು

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಸೇನಾನಿ ಮಹಾತ್ಮ ಗಾಂಧಿ ಭಾರತದುದ್ದಕ್ಕೂ ನಿರಂತರವಾಗಿ ಓಡಾಡುತ್ತಲೇ ಇದ್ದರು. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕು ಎಂಬ ಪ್ರಮುಖ ಉದ್ದೇಶದೊಂದಿಗೆ ಭಾರತೀಯ ಸಮಾಜದ ಅಭ್ಯುದಯ ಕಾರ್ಯಕ್ರಮಗಳನ್ನು ಬಾಪು ಹಮ್ಮಿಕೊಂಡಿದ್ದರು.

ಒಂದಿಲ್ಲೊಂದು ಕಾರಣಕ್ಕೆ ಅಡ್ಡಾಡುತ್ತಿದ್ದ ಮಹಾತ್ಮರು ಕರ್ನಾಟಕಕ್ಕೆ ಸಾಕಷ್ಟು ಸಲ ಬಂದಿದ್ದರು. ಆ ಸಂದರ್ಭಗಳಲ್ಲಿ ಅವರು ಬೆಂಗಳೂರಿಗೆ ಬಂದಿದ್ದು ಐದು ಸಲ (1915, 1920, 1927, 1934 ಮತ್ತು 1936).

1915ರಲ್ಲಿ ರಾಷ್ಟ್ರನೇತಾರ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರ ಅನಾವರಣಕ್ಕಾಗಿ ಬಾಪೂಜಿ ಬೆಂಗಳೂರಿಗೆ ಮೊದಲ ಬಾರಿ ಬಂದಿದ್ದರು. ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಗಾಂಧೀಜಿ ಅನಾವರಣ ಮಾಡಿದ್ದ ಭಾವಚಿತ್ರ ಈಗ ಬಸವನಗುಡಿ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿದೆ.

ದೇಶದುದ್ದಕ್ಕೂ ಬಾಪೂಜಿ ಎಲ್ಲೇ ಓಡಾಡಿದರೂ ಯಾವುದಾದರೊಂದು ರಚನಾತ್ಮಕ ಕಾರ್ಯಸೂಚಿ ಅದರಲ್ಲಿರುತ್ತಿತ್ತು. ಸ್ವಾತಂತ್ರ್ಯ ಆಂದೋಲನಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದ ಗಾಂಧೀಜಿ ಖಾದಿ ಪ್ರಚಾರ, ಮಹಿಳಾ ಜಾಗೃತಿ, ಕೋಮು ಸಾಮರಸ್ಯ, ದಲಿತರ ಏಳಿಗೆ, ಹಿಂದಿ ಪ್ರಚಾರ. ದೇವಿ ತತ್ವಗಳ ಚಿಂತನೆ ಹೀಗೆ ಹತ್ತಾರು ಸಮಾಜದ ಸರ್ವಾಂಗೀಣ ಏಳಿಗೆಯ ಯೋಜನೆಗಳನ್ನು ಜೊತೆಯಲ್ಲಿಟ್ಟುಕೊಂಡೇ ಇರುತ್ತಿದ್ದರು.

ಬೆಂಗಳೂರಿಗೆ ಬಾಪು ನೀಡಿದ ಭೇಟಿಗಳಲ್ಲಿ ಮೂರು ಭೇಟಿಗಳು ಇಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಒಳಗೊಂಡಿದ್ದರೆ ಇನ್ನೆರಡು ಭೇಟಿಗಳು ಅವರ ವಿಶ್ರಾಂತಿಗೆ ಸಂಬಂಧಿಸಿದ್ದಾಗಿತ್ತು.

ಆರೋಗ್ಯ ಸುಧಾರಣೆಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದ ಬಾಪು ಬೆಂಗಳೂರಿಗೆ ಬಂದಿಳಿದು ಕುಮಾರಕೃಪ ಅತಿಥಿಗೃಹದಲ್ಲಿ ಬಿಡಾರ ಹೂಡಿದ್ದರು. ವಿಶ್ರಾಂತಿಗೆಂದು ಇಲ್ಲಿ ಉಳಿದಿದ್ದರೂ ಆಗಲೂ ಅವರೇನು ಸುಮ್ಮನಿರಲಿಲ್ಲ. ಬಹಿರಂಗ ಸಭೆ, ಗಣ್ಯರ ಭೇಟಿ ಪ್ರತಿನಿತ್ಯ ಪ್ರಾರ್ಥನೆ, ಖಾದಿ ಸಂಬಂಧಿ ಸಂಸ್ಥೆಗಳಿಗೆ ಭೇಟಿ ಇರುತ್ತಿತ್ತು. ವಸ್ತುಪ್ರದರ್ಶನಗಳಲ್ಲಿ ಭಾಗಿಯಾಗಿದ್ದ ಬಾಪು ಪಂಡಿತ ತಾರಾನಾಥರು ರಚಿಸಿದ್ದ ಕಬೀರ ನಾಟಕವನ್ನು ವೀಕ್ಷಿಸಿದ್ದರು.

ದಿವಾನರಾಗಿದ್ದ ಸರ್. ಎಂ.ವಿಶ್ವೇಶ್ವರಯ್ಯ, ಬರಹಗಾರ ಡಿ.ವಿ.ಗುಂಡಪ್ಪ, ಕಲಾವಿದ ಅ.ನ.ಸುಬ್ಬರಾವ್, ದಿವಾನ್ ಮಿರ್ಜಾ ಇಸ್ಮಾಯಿಲ್ ಮೊದಲಾದವರು ಬೆಂಗಳೂರಿನಲ್ಲಿ ಬಾಪು ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.

ಬೆಂಗಳೂರಿಗೆ ಬಾಪು ನೀಡಿದ ಭೇಟಿಗಳ ನೆನಪಾಗಿ ಇಂದೂ ಕೆಲವು ಸ್ಥಳಗಳು ನಮ್ಮ ಮುಂದಿವೆ. ಕುಮಾರಕೃಪ ಅತಿಥಿಗೃಹ, ಅಶೋಕ ಹೋಟೆಲ್ ಈಜು ಕೊಳದ ಸಮೀಪವಿರುವ ಪ್ರಾರ್ಥನಾ ವೇದಿಕೆ, ಕೆಂಗೇರಿಯ ಗುರುಕುಲಾಶ್ರಮ, ದಂಡುಪ್ರದೇಶದ ರೈಲ್ವೆ ನಿಲ್ದಾಣ ಹಿಂಭಾಗದಲ್ಲಿ ಬಾಪು ಭಾಷಣ ಮಾಡಿದ ಈದ್‌ಗಾ ಮೈದಾನ. ನ್ಯಾಷನಲ್ ಕಾಲೇಜಿನ ವ್ಯಾಯಾಮ ಶಾಲೆ ಇವೇ ಮೊದಲಾದವು ಬಾಪು ನೆನಪಿನ ತಾಣಗಳು.

ವಿಶ್ರಾಂತಿ ಸಮಯವನ್ನೂ ಸದುಪಯೋಗ ಪಡಿಸಿಕೊಂಡ ಗಾಂಧೀಜಿ ಆಡಗೋಡಿಯ ಹೈನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ರಾಸುಗಳ ಪಾಲನೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.

ಹಿಂದಿ ಭಾಷೆ ಬರುತ್ತದೆಯೇ ಎಂಬ ಬಾಪು ಪ್ರಶ್ನೆಗೆ `ಥೋಡಾ ಥೋಡಾ ಆತಾಹೈ~ ಎಂದು ಉತ್ತರಿಸಿದ್ದ ಬಾಲಕ ಎಚ್. ನರಸಿಂಹಯ್ಯನವರ ಹೆಗಲ ಮೇಲೆ ಕೈಹಾಕಿದ್ದ ಬಾಪು ಛಾಯಾಚಿತ್ರ ಶಿಕ್ಷಣ ತಜ್ಞ ಡಾ. ಎಚ್.ಎನ್. ಅವರ ನ್ಯಾಷನಲ್ ಕಾಲೇಜು ಹಾಸ್ಟೆಲ್ ಕೋಣೆಯಲ್ಲಿತ್ತು. ಇದು ಬೆಂಗಳೂರು ಬಾಪು ಭೇಟಿಯ ಸ್ಮರಣೆಯ ಚಿತ್ರ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT