ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪೂಜಿಗೆ ದೇಶದ ನಮನ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಎಎನ್‌ಎಸ್):  ರಾಜ್‌ಘಾಟ್‌ನ  `ಹೇ ರಾಮ್~   ಎಂದು ಕೆತ್ತಿರುವ ಕಪ್ಪು ಶಿಲೆಯ ಸ್ಮಾರಕಕ್ಕೆ ಭಾನುವಾರ ನಿರಂತರ ಪುಷ್ಪವೃಷ್ಟಿ. ಗಾಂಧಿ ಜಯಂತಿ ಸಂದರ್ಭದಲ್ಲಿ ಭಾನುವಾರ ಸಹಸ್ರಾರು ಜನರು ಬಾಪುಜಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದರು.

 `ರಘುಪತಿ ರಾಘವ ರಾಜಾ ರಾಂ~ ಮುಂತಾದ ಭಜನೆಗಳು ಸುಶ್ರಾವ್ಯವಾಗಿ ಹೊರಹೊಮ್ಮಿದವು. ಜೊತೆಗೆ ಬೌದ್ಧ, ಕ್ರೈಸ್ತ, ಹಿಂದು, ಇಸ್ಲಾಂ, ಜೈನ, ಸಿಖ್, ಬಹಾಯಿ ಪಂಥ ಸೇರಿ ವಿವಿಧ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು.

ಭಾನುವಾರ ಬೆಳಿಗ್ಗೆಯಿಂದಲೇ ಶಾಲಾ ಮಕ್ಕಳು, ಸಾರ್ವಜನಿಕರೇ ಅಲ್ಲದೆ, ಬಿಜೆಪಿಯ ಮುಖಂಡ ಎಲ್.ಕೆ.ಅಡ್ವಾಣಿ, ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ  ನಗರ ಅಭಿವೃದ್ಧಿ ಸಚಿವ ಕಮಲ್‌ನಾಥ್ ಮುಂತಾದ ರಾಜಕೀಯ ಮುಖಂಡರು ರಾಜ್‌ಘಾಟ್‌ಗೆ ಭೇಟಿ ನೀಡಿದರು.

ಸೋನಿಯಾ ಗಾಂಧಿಯವರು ರಾಜಘಾಟ್ ಭೇಟಿ ಗಮನ ಸೆಳೆಯಿತು. ಅಮೆರಿಕದಿಂದ ಚಿಕಿತ್ಸೆ ಪಡೆದು ಮರಳಿದ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು.

ರಕ್ತದಲ್ಲಿ ಬಾಪು ಚಿತ್ರ
ರಾಜ್‌ಘಾಟ್‌ನಲ್ಲಿ ಪಾಕ್ ಪ್ರಜೆಯೊಬ್ಬ ಭಾನುವಾರ ವಿಶಿಷ್ಟ ಗೌರವ ಸಲ್ಲಿಸಿದ.
ತನ್ನ ನೆತ್ತರಿನಲ್ಲಿ ಕುಂಚವನ್ನು ಅದ್ದಿ, ಗಾಂಧೀಜಿ ಚಿತ್ರ ಬರೆದ. ಲಾಹೋರ್‌ನ `ಪೇಂಟರ್ ಬಾಬು~ ಎಂದು ಹೆಸರಾಗಿರುವ ಅಬ್ದುಲ್ ವಸೀಲ್ ತನ್ನ ಈ ರಕ್ತಕೃತಿಯನ್ನು ಗಾಂಧೀಜಿ ಅವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯಜಿ ಅವರಿಗೆ ಹಸ್ತಾಂತರಿಸುವ ಮೂಲಕ ಗಾಂಧಿ ಸ್ಮೃತಿ ಸಂಸ್ಥೆಗೆ ಸಮರ್ಪಿಸಿದ.

ಎರಡೂ ದೇಶಗಳ ನಡುವೆ ಇನ್ನಾದರೂ ರಕ್ತ ಸುರಿಸುವುದು ಬೇಡ ಎಂಬ ಸಂದೇಶ ನೀಡಲು ಈ ಕೃತಿಯನ್ನು ಸಿದ್ಧಪಡಿಸಿದ್ದೇನೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ ಕೆಲವಾದರೂ ಕಲ್ಲುಹೃದಯ ಕರಗಿಸಬಹುದು ಎಂಬ ಭರವಸೆ ಇದೆ ಎಂಬುದು ವಸೀಲ್ ಬಯಕೆ. ಸಿರಿಂಜ್ ಮೂಲಕ ರಕ್ತ ತೆಗೆದು ಚಿತ್ರ ಬಿಡಿಸಲು ವಸೀಲ್ ಬಳಸಿದ್ದಾರೆ.

ಕಲಾಕೃತಿ ಸ್ವೀಕರಿಸಿದ ತಾರಾಗಾಂಧಿ, ಗಾಂಧೀಜಿ ಅವರ ಸಂದೇಶವನ್ನು ಪರಿಪಾಲಿಸುವಲ್ಲಿ ನಮ್ಮಲ್ಲಿಯೇ ಕೊರತೆ ಇದೆ. ಜಯಂತಿಯು `ಆತ್ಮಾವಲೋಕನದ ಕ್ಷಣ~ ಎಂದು ಪರಿಗಣಿಸಬೇಕು. ಈ ಮೌನದಲ್ಲಿ ನಾವೆಷ್ಟು ಹಿಂಸಾವಾದಿಗಳಾಗಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.  ಗಾಂಧಿ ಸ್ಮಾರಕದ ಮುಂದೆ ಭಾನುವಾರ ಮಧ್ಯಾಹ್ನ 12ಕ್ಕೆ ಎರಡು ನಿಮಿಷಗಳ `ಆತ್ಮಾವಲೋಕನದ ಕ್ಷಣ~ಗಳನ್ನು ಗಾಂಧಿ ಸ್ಮೃತಿ ಸಂಸ್ಥೆಯು ಏರ್ಪಡಿಸಿತ್ತು.

`ಗಾಂಧಿ ಪರೀಕ್ಷೆ~ ಬರೆದ ಕೈದಿಗಳು
ಮುಂಬೈ (ಐಎಎನ್‌ಎಸ್):
ಮಹಾರಾಷ್ಟ್ರದ 13 ಜೈಲಿನ 1100 ಕೈದಿಗಳು ಭಾನುವಾರ ಗಾಂಧಿ ಶಾಂತಿ ಪರೀಕ್ಷೆಯನ್ನು ಬರೆದರು.

ಶಿಕ್ಷೆ ಅನುಭವಿಸುತ್ತಿರುವವರ ಮನೋಭಾವ ಬದಲಾವಣೆಗೆ ಈ ಪರೀಕ್ಷೆ ಸಹಾಯವಾಗುತ್ತದೆ ಎಂದು ಬಿಎಸ್‌ಎಂ ಗಾಂಧಿ ಸಂಸ್ಥೆ ತಿಳಿಸಿದೆ.

ಈ ವರ್ಷ ವಿವಿಧ ಹಂತಗಳಲ್ಲಿ ಇನ್ನೂ 3000 ಕೈದಿಗಳು ಈ ಪರೀಕ್ಷೆಯನ್ನು ಬರೆಯಲಿದ್ದಾರೆ. ಕೈದಿಗಳು ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತಕ್ಕಾಗಿ ಮತ್ತು ಜವಾಬ್ದಾರಿಯುತ ನಾಗರೀಕರಾಗಿ ರೂಪುಗೊಳ್ಳಲು ಸಹಾಯ ಮಾಡುತ್ತವೆ ಎಂಬ ಕಾರಣಕ್ಕಾಗಿ ಈ ಪರೀಕ್ಷೆಗಳನ್ನು ಕಳೆದ ಕೆಲ ವರ್ಷಗಳಿಂದ ಜೈಲಿನಲ್ಲಿ ಏರ್ಪಡಿಸಲಾಗುತ್ತಿದೆ ಎಂದೂ ಆ ಸಂಸ್ಥೆ ವಿವರಿಸಿದೆ.

ಲಕ್ಷ್ಮಣ ಗೋಲೆ ಎಂಬ ದುಷ್ಕರ್ಮಿಗಾಂಧಿಜಿ ಅವರ ಆತ್ಮಚರಿತ್ರೆ ಓದಿದ ನಂತರ ಪರಿವರ್ತನೆಗೊಂಡು ಈಗ ಆಡಳಿತ ನಿರ್ವಹಣೆ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಪಿಂಚಣಿಯಲ್ಲಿ ಹೆಚ್ಚಳ
ಭುವನೇಶ್ವರ್ (ಐಎಎನ್‌ಎಸ್):
ಗಾಂಧೀಜಿ ಜನ್ಮದಿನ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಮಾಸಿಕ  ಪಿಂಚಣಿಯನ್ನು ಒಡಿಶಾ ಸರ್ಕಾರ ದ್ವಿಗುಣಗೊಳಿಸಿದೆ.

ಸ್ವಾತಂತ್ರ್ಯ ಹೋರಾಟದ ವೇಳೆ ಜೈಲು ಶಿಕ್ಷೆಯನ್ನು ಅನುಭವಿಸಿದ ಹೋರಾಟಗಾರರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು 2 ಸಾವಿರದಿಂದ ನಾಲ್ಕು ಸಾವಿರಕ್ಕೆ ಹಾಗೂ ಚಳವಳಿಯಲ್ಲಿ ಪಾಲ್ಗೊಂಡು ಪ್ರತಿಯೊಬ್ಬ  ಹೋರಾಟಗಾರರಿಗೆ 1,500 ರೂಪಾಯಿಯಿಂದ 3,000ಕ್ಕೆ ಹೆಚ್ಚಿಸಲಾಗಿದೆ  ಎಂದು  ಭಾನುವಾರ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT