ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಭಕ್ತನ ಕಥೆ

Last Updated 3 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಉದ್ಯಮಿಗಳು ಬಣ್ಣ ಹಚ್ಚಿಕೊಂಡು ನಟಿಸುವುದು ಬೆಳ್ಳಿತೆರೆಯಲ್ಲಿ, ಕಿರುತೆರೆಯಲ್ಲಿ ಹೊಸತೇನಲ್ಲ. ಈ ಸಾಲಿಗೆ ಹೊಸ ಸೇರ್ಪಡೆ ಶರವಣನ್. ಬೆಂಗಳೂರಿನ ‘ಸಾಯಿ ಗೋಲ್ಡ್ ಪ್ಯಾಲೇಸ್’ ಮಾಲೀಕರಾದ ಶರವಣನ್ ಉದ್ಯಮಿಯಾಗಿ ಗುರ್ತಿಸಿಕೊಂಡವರು. ಈಗ ಕಿರುತೆರೆ ಧಾರಾವಾಹಿಯಲ್ಲಿ ಬಣ್ಣಹಚ್ಚುವ ಮೂಲಕ ಹೊಸತೊಂದು ಜಗತ್ತಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ.

ಶರವಣನ್ ಅವರಿಗೆ ನಟನೆ ಆಸಕ್ತಿಯ ಕ್ಷೇತ್ರವೇನಲ್ಲ. ಅವರು ನಟಿಸಲು ಒಪ್ಪಿಕೊಂಡಿದ್ದು ನಾಟಕೀಯ ಪ್ರಸಂಗವೊಂದರಲ್ಲಿ. ಹದಿನಾರಾಣೆ ಆಸ್ತಿಕರಾದ ಶರವಣನ್ ಪ್ರತಿವರ್ಷ ಶಬರಿಮಲೆಗೆ ಹೋಗುತ್ತಾರೆ. ಈ ಸಲವೂ ಶಬರಿಮಲೆಗೆ ಹೋಗಿಬಂದಿದ್ದರು. ವ್ರತಾಚರಣೆ ಕುರುಹಾಗಿ ಮುಖದ ಮೇಲೆ ಗಡ್ಡವಿತ್ತು. ಇದೇ ಸಮಯದಲ್ಲಿ ಕಿರುತೆರೆ ಧಾರಾವಾಹಿಗಳ ನಿರ್ದೇಶಕ ಬುಕ್ಕಾಪಟ್ಣ ವಾಸು ಯಾವುದೋ ಕೆಲಸದ ಮೇಲೆ ಶರವಣನ್ ಅವರನ್ನು ಭೇಟಿಯಾದರು. ಶರವಣನ್ ಅವರನ್ನು ನೋಡಿದ್ದೇ ತಡ- ತಾವು ನಿರ್ದೇಶಿಸುತ್ತಿದ್ದ ‘ಭಗವಾನ್ ಶಿರಡಿ ಸಾಯಿಬಾಬಾ’ ಧಾರಾವಾಹಿಯಲ್ಲಿನ ಬಾಬಾ ಭಕ್ತನ ಪಾತ್ರಕ್ಕೆ ಇವರೇ ಸೂಕ್ತ ಎಂದು ವಾಸು ಅವರಿಗೆ ಅನ್ನಿಸಿದೆ. ತಮ್ಮ ಅನಿಸಿಕೆಯನ್ನು ಶರವಣನ್ ಅವರಲ್ಲಿ ಹೇಳಿ, ಪಟ್ಟುಹಿಡಿದು ಒಪ್ಪಿಸಿಯೂ ಇದ್ದಾರೆ. ಶರವಣನ್ ನಟರಾದುದು ಹೀಗೆ.

ನಟನೆಯ ಅವಕಾಶವನ್ನು ಶರವಣನ್ ಮುಜುಗರದಿಂದಲೇ ಒಪ್ಪಿಕೊಂಡಿದ್ದಾರೆ. ಅವರು ಸಾಯಿಬಾಬಾ ಅವರ ಭಕ್ತರಂತೆ. ಹಾಗಾಗಿ, ಭಕ್ತನ ಪಾತ್ರದಲ್ಲಿ ನಟಿಸುವ ಕೋರಿಕೆಯನ್ನು ನಿರಾಕರಿಸಲು ಅವರಿಗೆ ಸಾಧ್ಯವಾಗಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಸಾಯಿಪೂಜೆಯಲ್ಲಿ ತೊಡಗಿರುವ ಅವರೀಗ ಕಿರುತೆರೆಯಲ್ಲಿ ತಮ್ಮ ಆರಾಧನೆ ಮುಂದುವರಿಸಿದ್ದಾರೆ. ತಮ್ಮ ನಟನೆ ಕೂಡ ಬಾಬಾನ ಕರುಣೆ-ಪವಾಡ ಎನ್ನುವುದು ಅವರ ನಂಬಿಕೆ.

ಧಾರಾವಾಹಿಯಲ್ಲಿ ಶರವಣನ್ ಅವರದು ವಿಠ್ಠಲ್‌ರಾವ್ ದೇಶಮುಖ್ ಎನ್ನುವ ಭಕ್ತನ ಪಾತ್ರ. ಈ ಪಾತ್ರ ಅವರಿಗೆ ಎಷ್ಟರಮಟ್ಟಿಗೆ ಖುಷಿ ಕೊಟ್ಟಿದೆಯೆಂದರೆ, ಮುಂದಿನ ದಿನಗಳಲ್ಲಿ ಸಾಯಿಬಾಬಾ ಬಗ್ಗೆ ಚಿತ್ರವೊಂದನ್ನು ನಿರ್ಮಿಸುವ ಯೋಚನೆಯೂ ಅವರಿಗೆ ಬಂದಿದೆ. ‘ಕೃಷ್ಣಲೀಲೆ’ ಎನ್ನುವ ಮತ್ತೊಂದು ಪೌರಾಣಿಕ ಕಥನದ ಧಾರಾವಾಹಿ ರೂಪಿಸುವ ಆಸೆಯೂ ಅವರಲ್ಲಿದೆ.

ಅಂದಹಾಗೆ, ‘ಭಗವಾನ್ ಶಿರಡಿ ಸಾಯಿಬಾಬಾ’ ಕಸ್ತೂರಿ ವಾಹಿನಿಯಲ್ಲಿ ಪ್ರತಿ ಶನಿವಾರ-ಭಾನುವಾರ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಸದ್ಯದಲ್ಲೇ ದೈನಿಕ ಧಾರಾವಾಹಿಯಾಗಿ ರೂಪಾಂತರ ಆಗಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT