ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಇಶೋಣ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರಾವಳಿ ಭಾಗದ ಜನರ ನಿತ್ಯದ ಆಹಾರವಾದ ಮೀನಿಗೆ ತಾತ್ಕಾಲಿಕ ಬರ ಉಂಟಾದರೂ ದೊಡ್ಡ ದೊಡ್ಡ ಪಟ್ಟಣಗಳ ಜನಕ್ಕೇನೂ ತೊಂದರೆಯಿಲ್ಲ. ಏಕೆಂದರೆ ಅವರು ವರ್ಷದುದ್ದಕ್ಕೂ ಇಲ್ಲಿಯ ರುಚಿಕರ ಮೀನಿನ ಸವಿ ಮೆಲ್ಲುತ್ತಲೇ ಇರುತ್ತಾರೆ.

ಕರಾವಳಿ ಭಾಗದಲ್ಲಿ ದೊಡ್ಡ, ಉತ್ತಮ ಜಾತಿಯ ಮೀನು ಹಿಡಿದರೆ ಅದಕ್ಕೆ ಸ್ಥಳೀಯ ಬೇಡಿಕೆ ಅಷ್ಟಕಷ್ಟೇ. ಮೀನನ್ನು ಹೆಚ್ಚು ಕಾಲ ಸಂರಕ್ಷಿಸಿಡಲು ಮಂಜುಗಡ್ಡೆ ಬಳಕೆ ಆರಂಭವಾದ ಬಳಿಕವೇ ಮೀನು ರಪ್ತು ಉದ್ಯಮ ಗರಿಬಿಚ್ಚಿಕೊಂಡಿದ್ದು. ಅದಕ್ಕೂ ಮುನ್ನ ಮೀನು ಕೆಡುವ ಮೊದಲೇ ಅದನ್ನು ಬಳಸುವ ಪದ್ಧತಿಯಿತ್ತು. ಆಗ ಎಲ್ಲ ವರ್ಗದ ಜನರಿಗೂ ತಾಜಾ ಮೀನೇ ಸಿಗುತ್ತಿತ್ತು.

ಒಂದು ಕಾಲದಲ್ಲಿ  ಸಮುದ್ರ, ನದಿ ಮೀನುಗಳನ್ನು ಸರಿಯಾಗಿ ನೋಡದ, ಅವುಗಳ ರುಚಿ ಗೊತ್ತಿಲ್ಲದ್ದ ಬೆಂಗಳೂರು, ಮೈಸೂರು ಮುಂತಾದ ನಗರಗಳ ಜನರು ಇಂದು ಕರಾವಳಿಯ `ಇಶೋಣ, ಇಶೋಣ ಪೊಪ್ಲೆಟ್~ ಮೊದಲಾದ ರುಚಿಕರ, ದುಬಾರಿ ಮೀನಿಗೆ ಕಾತರಿಸಿ ಕಾದಿರುತ್ತಾರೆ.
 
ಈಗ ಪರಿಸ್ಥಿತಿ ಹೇಗೆ ಬದಲಾಗಿದೆ ಎಂದರೆ ಕರಾವಳಿ ಪ್ರದೇಶದಲ್ಲಿ ಮತ್ಸ್ಯ ಕ್ಷಾಮ ಉಂಟಾದರೂ ಮೀನಿಲ್ಲದೆ ಅನ್ನ ಗಂಟಲಲ್ಲಿಳಿಯದ ಜನ ಒಣ ಮೀನಿನ ಸಾರು ಉಣ್ಣುತ್ತಿದ್ದರೆ (ತಾಜಾ ಮೀನು ದೊರೆಯದ ಅನಿವಾರ್ಯ ಪರಿಸ್ಥಿತಿಯಲ್ಲಿ ಹೆಚ್ಚಾಗಿ ಒಣ ಮೀನಿನ ಸಾರೇ ಗತಿ) ರಾಜ್ಯದ ನಗರ ಪ್ರದೇಶಗಳ  ಜನರು ಹೆಚ್ಚು ಖರ್ಚು ಮಾಡಿಯಾದರೂ ರುಚಿಕರ ಮೀನು ತಿನ್ನುತ್ತಾರೆ.

ದುಬಾರಿ ಫ್ರೈ
ಹೊರಗಡೆ ಮೀನಿಗೆ ಇರುವ ಬೇಡಿಕೆಯಿಂದ ಮೀನಿನ ದರ ಆಕಾಶಕ್ಕೇರುತ್ತಿದೆ. `ಒಂದು ಸಾಧಾರಣ ತೂಕದ, ಅಂದರೆ  ಐದು ಕಿಲೊಗಿಂತ ಅಧಿಕ ತೂಕದ ಇಶೋಣ ಮೀನುಗಳು ಸಿಕ್ಕವೆಂದರೆ ಅವು ಏಜೆಂಟರ ಕೈ ಸೇರಿ ರಫ್ತಾಗುತ್ತವೆ. ಒಮ್ಮಮ್ಮೆ 25- 30 ಕಿಲೊ ತೂಕದವರೆಗಿನ ಇಶೋಣ ಮೀನುಗಳೂ ಸಿಗುತ್ತವೆ. ಏಜೆಂಟರು ಇವನ್ನು ಕಡಿಮೆ ದರಕ್ಕೆ ಖರೀದಿಸಿ ದೊಡ್ಡ ನಗರಗಳ ಹೋಟೆಲ್‌ಗಳಿಗೆ ಒಂದಕ್ಕೆ  200-240  ರೂ. ವರೆಗೆ   ಮಾರಾಟ ಮಾಡುತ್ತರೆ. 

20 ಕಿಲೊ ತೂಕದ ಇಶೋಣ ಮೀನನ್ನು ಸರಿಯಾಗಿ ಕತ್ತರಿಸಿದರೆ ಸುಮಾರು 35 ರಿಂದ 40 ತುಂಡುಗಳಾಗುತ್ತವೆ. ಬೆಂಗಳೂರಿನಂಥ ಹೋಟೆಲ್‌ಗಳಲ್ಲಿ ಒಂದು ತುಂಡು ಇಶೋಣ ಫ್ರೈಗೆ ಕನಿಷ್ಠ 300- 400 ರೂ~ ಎಂದು ಕುಮಟಾ ಮೀನುಗಾರ ಸಂಘದ ಮುಖಂಡ ಸುಧಾಕರ ತಾರಿ ತಿಳಿಸುತ್ತಾರೆ. ಇಷ್ಟು ದುಬಾರಿ ಮೀನು ಸ್ಥಳೀಯರ ಕೈಗೆಟಕಲು ಹೇಗೆ ಸಾಧ್ಯ?

ವ್ಯವಸ್ಥಿತ ಸಾಗಾಟ :
ಸಮುದ್ರದಲ್ಲಿ ರಾತ್ರಿ ಹಿಡಿಯುವ  ದೊಡ್ಡ ದೊಡ್ಡ ಇಶೋಣ ಮೀನುಗಳನ್ನು ತಡಮಾಡದೆ ತಂದು ಮಂಜುಗಡ್ಡೆಯಲ್ಲಿ ಸಂರಕ್ಷಿಸಿಡುತ್ತಾರೆ. ಬೆಳಿಗ್ಗೆ ಅವುಗಳನ್ನು ತೆಗೆದು ಅಳತೆಗೆ ತಕ್ಕಂತೆ ಬೇರೆ ಬೇರೆ ಮಂಜುಗಡ್ಡೆ ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸುತ್ತಾರೆ. ಮೀನುಗಳು ಹೆಚ್ಚಿಗೆ ಪ್ರಮಾಣದಲ್ಲಿದ್ದರೆ ಅವುಗಳನ್ನು ವಿಶೇಷ ವಾಹನದಲ್ಲಿ, ಇಲ್ಲದಿದ್ದರೆ ಬಸ್‌ನಲ್ಲಿ ಬೆಂಗಳೂರಿಗೆ ಕಳಿಸುತ್ತಾರೆ.

ಹೋಟೆಲ್‌ಗಳಲ್ಲಿ ಅವುಗಳನ್ನು ವಾರಕ್ಕಿಂತ ಹೆಚ್ಚು ಕಾಲ ಕೆಡದಂತೆ ಇಡಲಾಗುತ್ತದೆ. ಒಮ್ಮಮ್ಮೆ ದೊಡ್ದದು ಸಿಗದಿದ್ದರೆ ಒಂದೆರಡು ಕಿಲೊ ತೂಕದ ಇಶೋಣಗಳು ಸಿಕ್ಕರೂ ರಪ್ತು ಮಾಡಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕರಾವಳಿಗರಿಗೆ ಒಣ ಮೀನಿನ ಸಾರೇ ಗತಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT