ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಚಪಲದ ಆರೋಪ ಬೇಡ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಅವಧಿಯಲ್ಲಿ ಕಾನೂನು ಚೌಕಟ್ಟಿನಲ್ಲೇ ಡಿನೋಟಿಫೈ ಮಾಡಲಾಗಿದೆ. ಆದರೆ ಬಾಯಿ ಚಪಲದ ಕಾರಣ ಬಿಜೆಪಿ ನಾಯಕರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ~ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ತಿರುಗೇಟು ನೀಡಿದರು.

ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಲು ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
`ನನ್ನ ಅವಧಿಯಲ್ಲಿ ಡಿನೋಟಿಫಿಕೇಷನ್ ಅವ್ಯಾಹತವಾಗಿತ್ತು ಎಂಬುದು ಸುಳ್ಳು. ಅದಕ್ಕೆ ಸಂಬಂಧಿಸಿದ ದಾಖಲೆಗಳು ವಿಧಾನಸೌಧದಲ್ಲಿವೆ. ಬೇಕಿದ್ದರೆ ಅವುಗಳನ್ನು ಪರಿಶೀಲಿಸಲಿ~ ಎಂದು ಸವಾಲು ಹಾಕಿದರು.

`ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಜನಜನಿತವಾಗಿರುವ ಹಿನ್ನೆಲೆಯನ್ನು ಅರಿತುಕೊಂಡು ಭ್ರಷ್ಟಾಚಾರದ ವಿರುದ್ಧ ರಾಜ್ಯದಲ್ಲಿ ರಥಯಾತ್ರೆ ನಡೆಸುವುದರ ಕುರಿತು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಮರುಚಿಂತನೆ ನಡೆಸುವ ಅಗತ್ಯವಿದೆ~ ಎಂದರು.

`ಕಲ್ಲಿದ್ದಲ್ಲು ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ಸೇತರ ರಾಜ್ಯಗಳ ಸಮಸ್ಯೆಗಳಿಗೂ ಸೂಕ್ತವಾಗಿ ಸ್ಪಂದಿಸಿದ್ದಾರೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ~ ಎಂದು ಟೀಕಿಸಿದರು.

ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ರಾಜಕೀಯ ವಿದ್ಯಮಾನಗಳ ಕುರಿತು ಪಕ್ಷದ ವಕ್ತಾರರು ಹೇಳಿಕೆ ನೀಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT