ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಆದೇಶ: ಕೇಂದ್ರದ ಬೆಲೆಯೇ ಗತಿ!

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರವು ~ಅಳೆದು-ತೂಗಿ~ ಜೂನ್ 10ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಬತ್ತಕ್ಕೆ ರೂ 100 ಪ್ರೋತ್ಸಾಹಧನ ನೀಡಿ, ಖರೀದಿ ಕೇಂದ್ರದ ಮೂಲಕ ಬತ್ತ ಖರೀದಿಸುವ ಭರವಸೆ ನೀಡಿತ್ತು. ಆದರೆ, ಪ್ರೋತ್ಸಾಹಧನದ ಆದೇಶ ಮಾತ್ರ ಇನ್ನೂ ಜಿಲ್ಲಾಡಳಿತದ ಕೈಸೇರಿಲ್ಲ! ಇದರಿಂದ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಬತ್ತವನ್ನು ಖರೀದಿ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರವು ಈಚೆಗೆ ಗ್ರೇಡ್-ಎ ಬತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ರೂ 1,030 ಹಾಗೂ ಗ್ರೇಡ್-ಬಿ ಬತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ರೂ 1,000 ಬೆಂಬಲ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಕೇಂದ್ರದ ಬೆಲೆಯ ಜತೆಗೆ ರಾಜ್ಯ ಸರ್ಕಾರವೂ ಪ್ರತಿ ಕ್ವಿಂಟಲ್‌ಗೆ ರೂ 100 ಪ್ರೋತ್ಸಾಹಧನ ಘೋಷಣೆ ಮಾಡಿದ್ದು, ಬೇಸಿಗೆ ಹಂಗಾಮಿನಲ್ಲಿ ಬತ್ತ ಬೆಳೆದ ರಾಜ್ಯದ ಅನ್ನದಾತನಿಗೆ ಸಂಪೂರ್ಣ ನೆಮ್ಮದಿ ತರದಿದ್ದರೂ ಕೊಂಚ ಸಮಾಧಾನ ಉಂಟುಮಾಡಿತ್ತು.

ಆದರೆ, ಜಿಲ್ಲೆಯಲ್ಲಿ ಬತ್ತದ ಖರೀದಿ ಕೇಂದ್ರಗಳು ಆರಂಭವಾಗಿದ್ದು, ರೂ 1,030 ಹಾಗೂ ರೂ 1,000 ದರದಲ್ಲಿ ಬತ್ತವನ್ನು ಖರೀದಿ ಮಾಡಲಾಗುತ್ತಿದೆ. ಸರ್ಕಾರ ಸೋಮವಾರ ಜಿಲ್ಲಾಡಳಿತಕ್ಕೆ ಕಳುಹಿಸಿದ ಆದೇಶದಲ್ಲಿ ~ಪ್ರೋತ್ಸಾಹಧನ~ದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬತ್ತದ ಬೆಲೆ ಕುಸಿತದಿಂದ ಕಂಗಾಲಾಗಿರುವ ದಾವಣಗೆರೆ, ಕೊಪ್ಪಳ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬತ್ತದ ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಬೇಕು ಎಂದಷ್ಟೆ ಇದೆ. ಹೀಗಾಗಿ, ಪ್ರೋತ್ಸಾಹಧನ ನೀಡಲಾಗುತ್ತಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ಸ್ಪಷ್ಟಪಡಿಸುತ್ತವೆ.

ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡುವುದು ರೈತರಿಗೆ ಮತ್ತಷ್ಟು ತ್ರಾಸದಾಯಕವಾಗಿದೆ. ಬಾಡಿಗೆ, ಕೂಲಿ, ಚೀಲ... ಎಂದೆಲ್ಲಾ ಪ್ರತಿ ಕ್ವಿಂಟಲ್‌ಗೆ ರೂ 50 ಖರ್ಚಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲೂ ಇದೇ ಧಾರಣೆಯಿದೆ. ಇದರಿಂದ ಮುಂಗಾರು ಕೃಷಿ ಚಟುವಟಿಕೆಗೆ ಹಣಕಾಸು ಹೊಂದಿಸಲು ರೈತ ಅಲ್ಲೇ ಮಾರಾಟ ಮಾಡುತ್ತಿದ್ದಾನೆ.

ರಾಜ್ಯದಲ್ಲಿ ಬೇಸಿಗೆ ಹಂಗಾಮಿನಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ. ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, 50 ಸಾವಿರ ಹೆಕ್ಟೇರ್‌ನಷ್ಟು ಕಟಾವು ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ತೇವಾಂಶಗೊಂಡ ಬತ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

~ಪ್ರೋತ್ಸಾಹಧನ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿ ವಂಚಿಸುತ್ತಿದೆ. ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಇವರಲ್ಲಿ ಯಾವ ನೈತಿಕತೆಯಿದೆ. ಗೊಂದಲ ಸೃಷ್ಟಿಸುವುದು ಬಿಟ್ಟು, ಕೂಡಲೇ ಆದೇಶ ನೀಡಬೇಕು. ಆದೇಶವೇ ಬಂದಿಲ್ಲದ ಮೇಲೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ.
 
ಈಗಾಗಲೇ ವಿಳಂಬವಾಗಿದ್ದು, ಜಿಲ್ಲೆಯಲ್ಲಿ ಶೇ. 50ರಷ್ಟು ಬತ್ತ ಮಾರಾಟವಾಗಿದೆ. ಸರ್ಕಾರದ ನಿರ್ಧಾರ ರೈತರ ಕಣ್ಣೊರೆಸುವ ತಂತ್ರ~ ಎಂದು ದೂರುತ್ತಾರೆ ಜಿಲ್ಲಾ ಜೆಡಿಎಸ್ ಮುಖಂಡ ಬಿ.ಎಂ. ಸತೀಶ್.

ಐದು ಕೇಂದ್ರ ಸ್ಥಾಪನೆ:~ರೂ 100 ಪ್ರೋತ್ಸಾಹಧನ ನೀಡಬೇಕು ಎಂಬ ಆದೇಶ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಆದೇಶ ಬರಬಹುದು. ಅದುವರೆಗೂ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದಲ್ಲೇ ಖರೀದಿಸಲಾಗುವುದು.

ಒಟ್ಟು 5 ಬತ್ತದ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ~ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ~ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT