ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಬಸ್: ಪ್ರಯಾಣಿಕರ ಪರದಾಟ

Last Updated 3 ಜನವರಿ 2012, 9:45 IST
ಅಕ್ಷರ ಗಾತ್ರ

ಕೊರಟಗೆರೆ: ಗೌರಿಬಿದನೂರು ಕಡೆಯಿಂದ ಪಟ್ಟಣಕ್ಕೆ ಸಕಾಲಕ್ಕೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಗೌರಿಬಿದನೂರು ಕೆಎಸ್‌ಆರ್‌ಟಿಸಿ ಘಟಕದಿಂದ ಐದು ಬಸ್ ಸೇರಿದಂತೆ ಕೆಲವು ಖಾಸಗಿ ಬಸ್ ಸಂಚರಿಸುತ್ತವೆ. ಆದರೂ ಈ ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರ ಅಧಿಕವಾಗಿರುವ ಕಾರಣ ಬಸ್ ಒಳಭಾಗ ಪೂರ್ತಿ ತುಂಬಿ, ಪ್ರಯಾಣಿಕರು ಮೇಲೆ ಪ್ರಯಾಣಿಸುವುದು ಈ ಭಾಗದಲ್ಲಿ ಮಾಮೂಲಿ ಎನಿಸಿದೆ.

ಈ ಹಿಂದೆ 10ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತುಮಕೂರು, ಗೌರಿಬಿದನೂರು ಮಾರ್ಗವಾಗಿ ಬಿಡಲಾಗಿತ್ತು. ಈಗ ಐದು ಬಸ್ ಸಂಚಾರ ನಿಲ್ಲಿಸಿ ಕೇವಲ ಐದು ಬಸ್ ಮಾತ್ರ ಓಡಿಸಲಾಗುತ್ತದೆ. ಮೊದಲು ನೂತನ ಬಸ್‌ಗಳನ್ನು ರಸ್ತೆಗಿಳಿಸಿದ ಸಾರಿಗೆ ನಿಗಮ ಮಂಡಳಿ, ಈಗೀಗ ಹೊಸ ಬಸ್ ನಿಲ್ಲಿಸಿ ಹಳೆ ಬಸ್‌ಗಳನ್ನು ಈ ಮಾರ್ಗಕ್ಕೆ ಬಿಟ್ಟಿದೆ.

ಹಳೆ ಬಸ್‌ಗಳು ರಸ್ತೆ ಮಾರ್ಗದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಇದರ ಜತೆ ಐದು ಸರ್ಕಾರಿ ಬಸ್‌ಗಳ ಜತೆ ವಿರಳವಾಗಿ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಇವು ಕೆಲವೊಮ್ಮೆ ಬರದಿದ್ದಾಗ ಆಟೊ ಅವಲಂಬಿಸಬೇಕಾಗಿದೆ. ಆಟೊಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬುವ ಕಾರಣ ಈ ಮಾರ್ಗದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮೊದಲು ಸಾಕಷ್ಟು ಖಾಸಗಿ ಬಸ್ ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ ಈಗ ವಿರಳವಾಗಿದೆ. ಇದಕ್ಕೆ ಈ ಭಾಗದ ರಸ್ತೆಗಳ ಸ್ಥಿತಿಯೇ ಕಾರಣ ಎನ್ನಲಾಗಿದೆ. ರಸ್ತೆ ಹದಗೆಟ್ಟಿರುವ ಕಾರಣ ಬಸ್‌ಗಳು ಹಲವು ಬಾರಿ ಅಪಘಾತಕ್ಕೀಡಾಗಿವೆ.

ಶಾಲಾ-ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಗಳು ಬಸ್‌ನ ಬಾಗಿಲಿಗೆ ಜೋತು ಬಿದ್ದು ಪ್ರಯಾಣ ನಡೆಸಬೇಕಿದೆ. ಇದು ಕೇವಲ ಒಂದು ದಿನದ ಕಥೆಯಲ್ಲ ನಿತ್ಯವೂ ಇದೇ ಪ್ರಯಾಸದ ಪ್ರಯಾಣ. ಒಂದು ವೇಳೆ ಈ ಸಮಯದ ಬಸ್ ತಪ್ಪಿದರೆ ಆ ದಿನ ಕಾಲೇಜಿಗೆ ಹೋಗುವಂತಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು ಈ ಭಾಗದಿಂದ ಕೊರಟಗೆರೆ ಪ್ರಥಮ ದರ್ಜೆ ಕಾಲೇಜಿಗೆ ಬರುವ ವಿದ್ಯಾರ್ಥಿ ನವೀನ್.

ಸಿವಿಲ್ ಬಸ್ ಮುಂಚೆ ಸಿಕ್ಕಾಪಟ್ಟೆ ಓಡಾಡುತ್ತಿದ್ವು ಸಾರ್, ಈ ಗೌರ‌್ಮೆಂಟ್ ಬಸ್‌ನೋರು ಫಸ್ಟ್ ಜಾಸ್ತಿ ಒಳ್ಳೊಳ್ಳೆ ಬಸ್‌ಗಳನ್ನ ಬಿಟ್ರು. ಇದ್ರಿಂದ ಸಿವಿಲ್ ಬಸ್‌ನೋರ್‌ಗೆ ಲಾಸ್ ಆಗಿ ಸರ‌್ಯಾಗಿ ಬರ‌್ತಿದ್ದ್ ಬಸ್‌ಗಳೂ ನಿಂತೋದ್ವು. ಈಗ ಗೌರ‌್ಮೆಂಟು ಇಲ್ಲ. ಪ್ರೈವೇಟು ಇಲ್ಲ. ವ್ಯಾಪಾರ‌್ಕೆ ಹೋಗ್ಬೇಕಂದ್ರೆ ಆಗ್ಲೋ ಈಗ್ಲೋ ಒಂದೊಂದೊ ಬರೋ ಬಸ್‌ನಾಗೆ ನೇತಾಡ್ಕಂಡಾದ್ರು ಬರ‌್ಲೇಬೇಕು ಸಾರ್ ಎಂದು ನಿತ್ಯ ವ್ಯಾಪಾರಕ್ಕಾಗಿ ಬೈರೇನಹಳ್ಳಿ ಕಡೆಯಿಂದ ಕೊರಟಗೆರೆ ಕಡೆ ಓಡಾಡುವ ಸೈಯದ್ ನಜೀಂ ಉಲ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT