ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ ಎಳೆದಿದೆ ಬರೆ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಲ್ಲಿ ಹೂವು ಅರಳಿದವು ಎಂದರೆ ಇಡೀ ಬದುಕೇ ಹೂವು ಎತ್ತಿದಷ್ಟು ಹಗುರ. ಹೂವು ಮುದುಡಿದರೆ ಬದುಕೆಲ್ಲಾ ಭಾರ!
ಹೂವು ಬೆಳೆದ ಇಲ್ಲಿನ ಹೂಮನದ ರೈತರ ಮನಸ್ಸುಗಳು ಈಗ ಬಾಡಿವೆ. ಕಡುಬಿಸಿಲಿಗೆ ಹೂವಿನ ಕಂಪು ಮಾಯವಾಗಿದೆ. ಅಂತರ್ಜಲ ಬತ್ತಿ ಹೂವಿನ ತೋಟಗಳೆಲ್ಲಾ ಒಣಗಿ ತರಗೆಲೆಗಳಾಗಿವೆ. ಪಾತಾಳದವರೆಗೂ ಕೊರೆದಿರುವ ಕೊಳವೆಬಾವಿಗಳ ಕುರುಹುಗಳು ಇಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುತ್ತವೆ.
ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಪುಟ್ಟ ಗ್ರಾಮ. ಇಲ್ಲಿನ ರೈತರ ಬದುಕಿಗೆ ಹೂವಿನ ತೋಟಗಳೇ ಆಧಾರ. ಜೀವನೋತ್ಸಾಹ ತುಂಬುವ ಹೂ ತೋಟಗಳು ಈಗ ಬದುಕನ್ನೇ ಕಿತ್ತುಕೊಂಡಿವೆ. ಇದರಿಂದ ಇಡೀ ಗ್ರಾಮಕ್ಕೆ ಗರಬಡಿದಿದೆ.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳಿಗೆ ಪ್ರತಿನಿತ್ಯ ಈ ಗ್ರಾಮದಿಂದಲೇ ಹೂವು ರವಾನೆ ಆಗುವುದು. ಸೇವಂತಿಗೆ, ಕನಕಾಂಬರದ ಕಂಪು ಗ್ರಾಮದ ರೈತರ ಜೀವಸೆಲೆಯಾಗಿತ್ತು. ಆದರೆ, ಸತತ ಮೂರು ವರ್ಷಗಳ ಬರ ರೈತರ ಬದುಕಿಗೆ ಕಂಟಕವಾಗಿದೆ.

ಮಳೆ ಇಲ್ಲದೆ ಅಂತರ್ಜಲ ಪಾತಾಳಕ್ಕೆ ತಲುಪಿದೆ, ನೂರಾರು ಹೂವಿನ ತೋಟಗಳು ಒಣಗಿ ನಿಂತಿವೆ. ಅಲ್ಲಲ್ಲಿ ಜೀವ ಹಿಡಿದುಕೊಂಡಿರುವ ಗಿಡಗಳಲ್ಲಿ ಬಲವಂತವಾಗಿ ಅರಳುತ್ತಿರುವ ಹೂವುಗಳು ಬಾಡುವ ಸ್ಥಿತಿಗೆ ತಲುಪಿವೆ. ರೈತರ ಬದುಕು ನಿಸ್ತೇಜಗೊಂಡಿದೆ. ಛಲ ಬಿಡದ ತ್ರಿವಿಕ್ರಮರಂಥ ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ತಮ್ಮ ಜಮೀನುಗಳಲ್ಲಿ ಸಿಕ್ಕಸಿಕ್ಕಲ್ಲಿ ಕೊಳವೆಬಾವಿ ಕೊರೆಸಿದ್ದರೂ ಹನಿ ನೀರೂ ಒಸರುತ್ತಿಲ್ಲ.

ದಯನೀಯ ಸ್ಥಿತಿ
ಸುಮಾರು 600 ಮನೆಗಳಿರುವ ಈ ಊರಲ್ಲಿ ಪ್ರತಿಯೊಬ್ಬ ರೈತ ಹೂವಿನ ತೋಟದ ಮಾಲೀಕ. ಚಾಂದನಿ, ಕನಕಾಂಬರ, ಸೇವಂತಿ, ಗುಲಾಬಿ, ಬಟನ್ ರೋಸ್ ಹೀಗೆ ನಾನಾ ತರಹದ ಹೂವಿನ ಕೃಷಿ ದಶಕಗಳ ಕಾಲಗಳಿಂದ ನಡೆಯುತ್ತಿದೆ ಇಲ್ಲಿ. ಮೂರ‌್ನಾಲ್ಕು ಹಳ್ಳಿಗಳ ನೂರಾರು ಮಹಿಳೆಯರಿಗೆ ಉದ್ಯೋಗವೂ ದೊರೆತಿದೆ. ಆದರೆ ಈ ಗ್ರಾಮದ ಜನರೀಗ ತುತ್ತು ಗಂಜಿಗೂ ತತ್ವಾರ ಪಡುವ ದಯನೀಯ ಸ್ಥಿತಿ ತಲುಪಿದ್ದಾರೆ. ಗ್ರಾಮದ ಕೆ. ಮಹಾಂತೇಶ್, ತಾವು ಬೆಳೆದಿರುವ ಎಲೆ ಬಳ್ಳಿ ಮತ್ತು ಕನಕಾಂಬರ ಉಳಿಸಲು 14 ಕೊಳವೆಬಾವಿ ಕೊರೆಯಿಸಿದರು. ಹನಿ ನೀರು ದೊರೆಯಲಿಲ್ಲ.

ಈಗ ಹೂವಿನ ತೋಟ, ಎಲೆ ಬಳ್ಳಿ, ಮೇವು ಎಲ್ಲ ಒಣಗಿ ನಿಂತಿವೆ. ಇದರ ನಡುವೆಯೂ 1ಕಿ.ಮೀ. ದೂರದ ಕೂನಬೇವು ಗ್ರಾಮದ ರೈತರೊಬ್ಬರ ಜಮೀನಿನಿಂದ ಪೈಪ್‌ಲೈನ್ ಮೂಲಕ ನೀರು ತಂದು ಎಷ್ಟು ಸಾಧ್ಯವೋ ಅಷ್ಟನ್ನು ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದಾರೆ.
ಇದೇ ಪರಿಸ್ಥಿತಿ ಗೌರಿಗೋಪಾಲಪ್ಪ ಅವರದ್ದು. 5 ಎಕರೆಯಲ್ಲಿ 5 ಕೊಳವೆಬಾವಿ ಕೊರೆಯಿಸಿದರೂ ಭೂತಾಯಿ ಕೃಪೆ ತೋರಲಿಲ್ಲ. ಇನ್ನೂ ಇದೇ ಗ್ರಾಮದ ಕಿಟ್ಟಪ್ಪ ನೀರಿಗಾಗಿ ಪರಿತಪಿಸಿ ಒಂದೂವರೆ ಎಕರೆಯಲ್ಲಿ ಕೊರೆಯಿಸಿದ 15 ಕೊಳವೆಬಾವಿ ವಿಫಲವಾದವು.

ಇದೇ ಗ್ರಾಮದ ರೈತ ಕೃಷ್ಣಪ್ಪ ಅವರದ್ದು ಇನ್ನೊಂದು ರೀತಿಯ ಕರುಣಾಜನಕ ಕಥೆ. ಮಳೆಗಾಲದಲ್ಲಿ ನಾಲ್ಕು ಎಕರೆಯಲ್ಲಿ ಭರ್ಜರಿಯಾಗಿ ಬೆಳೆದ ಈರುಳ್ಳಿ ಬುಡದಲ್ಲಿ ಬಾಲ ಬೆಳೆದು ಸಂಪೂರ್ಣ ನಷ್ಟವಾಯಿತು. ಸುಮಾರು ಏಳೆಂಟು ಲಕ್ಷ ಹಣ ಕಳೆದುಕೊಂಡಿದ್ದ ಕೃಷ್ಣಪ್ಪ, ಎರಡೂವರೆ ಎಕರೆಯಲ್ಲಿ ಕೊರೆಸಿದ 14 ಕೊಳವೆಬಾವಿಗಳಲ್ಲಿ 13 ವಿಫಲವಾಗಿವೆ. ಒಂದು ಕೊಳವೆಬಾವಿಯಲ್ಲಿ ದೊರೆಯುವ ಅರ್ಧ ಇಂಚು ನೀರಿನಲ್ಲಿ ಒಂದಷ್ಟು ಹೂವಿನ ಗಿಡಗಳಿಗೆ ನೀರು ಪೂರೈಸಿ ಒಂದಿಷ್ಟು ಬದುಕುವ ಭರವಸೆ ಮೂಡಿತ್ತು. ಆದರೆ, ಈಗ ಬದುಕುವ ಭರವಸೆಯೇ ಇಲ್ಲದಂತಾಗಿದೆ. ವಿಷ ಕುಡಿಯಲು ಹೋಗಿದ್ದ ಇವರಿಗೆ ಬಂಧು ಬಳಗದವರು ಧೈರ್ಯ ತುಂಬಿದ್ದಾರೆ. ಆದರೂ ಇಂತಹ ಬದುಕು ಏಕೆ ಬೇಕು ಎನ್ನುವುದು ಕೃಷ್ಣಪ್ಪನವರ ಹತಾಶ ಪ್ರಶ್ನೆ.

ಪ್ರತಿಯೊಬ್ಬರದ್ದೂ ವ್ಯಥೆ
ಊರಿನ ಪ್ರತಿ ರೈತರದ್ದೂ ಇದೇ ಕಥೆ ವ್ಯಥೆ. ಬದುಕಿಗೆ ಆಧಾರವಾಗಿರುವ ಹೂವಿನ ತೋಟಗಳನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆ. ಗ್ರಾಮದಲ್ಲಿ ಒಂದು ತಿಂಗಳ ಕಾಲ ಸತತವಾಗಿ ಪ್ರತಿದಿನ ಎರಡು ಕೊಳವೆಬಾವಿ ಕೊರೆಯಲಾಗಿದೆ. ಆದರೆ ನೀರು ದೊರೆತಿದ್ದು ಎರಡರಲ್ಲಿ ಮಾತ್ರ. 600-700 ಅಡಿವರೆಗೂ ಕೊರೆದರೂ ನೀರಿನ ಸೆಲೆ ಸಿಕ್ಕಿಲ್ಲ. ಒಂದು ಕೊಳವೆಬಾವಿಗೆ ಕನಿಷ್ಠ 50 ಸಾವಿರ ರೂಪಾಯಿ ಖರ್ಚು ವೆಚ್ಚವಾಗುತ್ತದೆ.

ಹೀಗಾಗಿ ಹೂವಿನ ತೋಟ ಉಳಿಸಿಕೊಳ್ಳಲು ರೈತರು ಕೊಳವೆಬಾವಿಗೆ ಲಕ್ಷಾಂತರ ರೂಪಾಯಿ ಸುರಿದಿದ್ದಾರೆ. ಇವರ‌್ಯಾರೂ ದೊಡ್ಡ ಹಿಡುವಳಿದಾರರಲ್ಲ. ಐದು ಎಕರೆ ಜಮೀನು ಇರುವವರ ಸಂಖ್ಯೆಯೂ ವಿರಳ. ಎಲ್ಲರೂ ಒಂದೆರಡು ಎಕರೆಯ ಸಣ್ಣ ಸಣ್ಣ ಹಿಡುವಳಿದಾರರೇ. ತರಹೇವಾರಿ ಹೂವಿನ ಕೃಷಿಗೆ ಒಲಿದ ಈ ಗ್ರಾಮದಲ್ಲಿ ಪ್ರತಿ ರೈತ ಕನಿಷ್ಠ ಅರ್ಧ ಎಕರೆ ಹೂವು ಬೆಳೆಯುತ್ತಾನೆ. ಹೀಗಾಗಿ ರೈತರ ಜೀವನವೆಲ್ಲಾ ಹೂಮಯ!

ಒಬ್ಬ ರೈತನಿಗೆ ಕೊಳವೆಬಾವಿಯಲ್ಲಿ ಎರಡು ಇಂಚು ನೀರು ಸಿಕ್ಕರೆ ನಾಲ್ಕು ರೈತರು ಹಂಚಿಕೊಳ್ಳುವ ಅಘೋಷಿತ ಸಹಕಾರ ಮನೋಭಾವವನ್ನು ಗ್ರಾಮದ ರೈತರು ರೂಢಿಸಿಕೊಂಡಿದ್ದಾರೆ. ಈ ಮನೋಭಾವ ಇಲ್ಲಿನ ಜನರನ್ನು ಇದುವರೆಗೂ ಪೊರೆದಿದೆ.

`ಈಗ ಪ್ರತಿದಿನ ಒಂದು ಕ್ವಿಂಟಲ್ ಹೂವು ಚಿತ್ರದುರ್ಗಕ್ಕೆ ಸಾಗಿಸುತ್ತೇವೆ. ಕಳೆದ ವರ್ಷ ಇದೇ ಅವಧಿಯಲ್ಲಿ 10ರಿಂದ 15 ಕ್ವಿಂಟಲ್ ಹೂವು ಪೂರೈಸಲಾಗುತ್ತಿತ್ತು. ಹಬ್ಬದ ದಿನಗಳಲ್ಲಿ ಪ್ರತಿದಿನ 10 ಲಕ್ಷ ರೂಪಾಯಿ ಹೂವಿನ ವಹಿವಾಟು ನಡೆಯುತ್ತದೆ. ಈಗಲೂ ನೀರು ದೊರೆತರೆ ಪ್ರತಿದಿನ ಕನಿಷ್ಠ 2-3 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು. ಆದರೆ, ಹೂವು ಬೆಳೆಯುವುದು ಕಷ್ಟದ ಕೆಲಸ.

ಹೂವು ಬಿಡಿಸಲು ಒಂದು ಕೆ.ಜಿಗೆ ನೂರು ರೂಪಾಯಿ ಮತ್ತು ಹೂವು ಕಟ್ಟಲು ಒಂದು ಕೆ.ಜಿಗೆ ನೂರು ರೂಪಾಯಿ ನೀಡಬೇಕು. ಔಷಧಿ ಗೊಬ್ಬರದ ವೆಚ್ಚ ತಿಂಗಳಿಗೆ 3-4 ಸಾವಿರ ರೂಪಾಯಿ ತಗುಲುತ್ತದೆ. ಹೂವು ಬಿಡಿಸಿದ ತಕ್ಷಣ ಔಷಧಿ ಸಿಂಪಡಿಸಬೇಕು' ಎಂದು ರೈತ ರಾಜಣ್ಣ ಹೂವು ಬೆಳೆಗಾರರ ಕಷ್ಟಗಳನ್ನು ವಿವರಿಸುತ್ತಾರೆ.

ಮೂರು ತಿಂಗಳಿಂದ 150ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿ ಹೈರಾಣಾಗಿದ್ದರೂ ಇನ್ನೂ 100 ಕೊಳವೆಬಾವಿಗಳಿಗೆ ತಲಾ 20 ಸಾವಿರ ರೂಪಾಯಿಗಳಂತೆ ಮುಂಗಡ ಹಣ ನೀಡಿ ಕಾಯುತ್ತಿದ್ದಾರೆ. ಹೇಗಾದರೂ ಮಾಡಿ ಹೂ ತೋಟಗಳನ್ನು ಉಳಿಸಿಕೊಳ್ಳಬೇಕೆಂಬ ಛಲ ರೈತರನ್ನು ಲಕ್ಷಾಂತರ ರೂಪಾಯಿ ಸಾಲಗಾರರನ್ನಾಗಿ ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT