ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಲೋಕಕ್ಕೆ ಬಹುಮತದ ಹಾಲಪ್ಪ

Last Updated 16 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಶಿವಮೊಗ್ಗ: `ಬಹುಮತ~ದ ಹಾಲಪ್ಪ ಎಂದೇ ಹೆಸರಾಗಿದ್ದ ಎಚ್. ಹಾಲಪ್ಪ ಹಿಂದುಳಿದ ವರ್ಗಗಳಿಗೆ ದನಿಯಾಗಿದ್ದರು. ಹೋರಾಟ, ಸಂಘಟನೆ ಎಂದು ಜೀವನದ ಕೊನೆಯವರೆಗೂ ಕ್ರಿಯಾಶೀಲರಾಗಿದ್ದರು. ಅಲ್ಪ ಕಾಲದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಸೋಮವಾರ ಸಂಜೆ ನಗರದ ನಂಜಪ್ಪ ಲೈಫ್‌ಕೇರ್‌ನಲ್ಲಿ ಕೊನೆ ಉಸಿರೆಳೆದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಹಿಂದುಳಿದ ವರ್ಗಗಳ ಬಗೆಗಿನ ಅವರ ಕಾಳಜಿ ಗುರುತಿಸಿ ಜಿಲ್ಲಾಡಳಿತ ಈಚೆಗೆ ದೇವರಾಜ ಅರಸು ದಿನಾಚರಣೆಯಲ್ಲಿ ಸನ್ಮಾನಿಸಿತ್ತು. ಅನಾರೋಗ್ಯದಿಂದ ಸ್ವಲ್ಪ ಮೆದುವಾಗಿದ್ದ ಅವರು, ಸನ್ಮಾನದ ನಂತರ ಹುರುಪುಗೊಂಡಿದ್ದರು. ಆಪ್ತರೊಂದಿಗೆ ಮತ್ತೆ ಹೋರಾಟದ ಮಾತುಗಳನ್ನೂ ಆಡಿದ್ದರು. 

ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಬೇಕೆಂದು ಈಗ ಹೊರಟಿದೆ. ಆದರೆ, ಜಾತಿ ಜನಗಣತಿದಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಹಾಲಪ್ಪ ಎಂದೋ  ಪ್ರತಿಪಾದಿಸಿದ್ದರು. ಜಾತಿ ಜನಗಣತಿಯಾದರೆ ಚರಿತ್ರೆಯೇ ಬದಲಾಗುತ್ತದೆ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಲು ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆಲ್ಲ ಫೋನ್ ಮಾಡಿ ಒತ್ತಾಯಿಸುತ್ತಿದ್ದರು. ಪ್ರತಿಭಟನೆ, ಧರಣಿ, ಸತ್ಯಾಗ್ರಹ, ಸುದ್ದಿಗೋಷ್ಠಿ ಮೂಲಕವೂ ಸರ್ಕಾರಕ್ಕೆ ಆಗಾಗ್ಗೆ ಚುರುಕು ಮುಟ್ಟಿಸುತ್ತ ಬಂದಿದ್ದರು.

ಇದುವರೆಗೂ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಪ್ರತಿ ವರ್ಷವೂ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತಾ ಬಂದಿವೆ. ಆದರೂ, ಅವರ ಅಭಿವೃದ್ಧಿಯಾಗಿಲ್ಲ; ಹಾಗಾದರೆ ಹಣ ಏನಾಗುತ್ತಿದೆಂಬ ಮಾಹಿತಿ ಇಲ್ಲ. ಈ ಬಗ್ಗೆ ಸರ್ಕಾರದಲ್ಲೂ ಮಾಹಿತಿ ಇಲ್ಲ. ಜಾತಿ ಜನಗಣತಿವೊಂದರಿಂದಲೇ ಇದಕ್ಕೆಲ್ಲಾ ಕಡಿವಾಣ ಹಾಕಲು ಸಾಧ್ಯ ಎಂಬುದು ಅವರ ಎಂದಿನ ಪ್ರತಿಪಾದನೆಯಾಗಿತ್ತು.

ಹಾಲಪ್ಪ ಅವರ ಊರು ಹೊನ್ನಾಳಿಯ ಬುಳ್ಳಾಪುರ. ಕಡುಬಡತನದ ಹಿನ್ನೆಲೆ. ಕಷ್ಟದಲ್ಲಿ ಊರಿನಲ್ಲಿ ನಾಲ್ಕನೇ ತರಗತಿವರೆಗೆ ಓದಿ, ತದನಂತರದ ಓದನ್ನು ಗಾಜನೂರಿನ ವಿದ್ಯಾಪೀಠದಲ್ಲಿ ಮುಗಿಸಿದ್ದರು. ಊರಿಗೆ ಬಂದು ಟೈಲರ್ ಆದರು. ಜೊತೆ ಸಾಹಿತ್ಯ, ಸಂಘಟನೆಯಲ್ಲೂ ತೊಡಗಿಸಿಕೊಂಡರು. ಸ್ವಂತ ಪುಸ್ತಕ ಪ್ರಕಾಶನ ಆರಂಭಿಸಿ, ತಮ್ಮದೇ ಎರಡು ಕಥಾಸಂಕಲನ ಹೊರತಂದರು. ಜನಸಾಮಾನ್ಯರೆಡೆಗೆ ಸಾಹಿತ್ಯ ಎನ್ನುವ ಧೋರಣೆಯಲ್ಲಿ `ಜನಸಂಪರ್ಕ~ ವೇದಿಕೆ ರೂಪಿಸಿದರು. ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚಿಸುವ ಜನಸಂಪರ್ಕ ಚಾವಡಿ ಆಗಿ ಮಾರ್ಪಟ್ಟಿತು.

ಈ ಹಂತದಲ್ಲೇ ಹಾಲಪ್ಪರಿಗೆ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಅವರ ಪರಿಚಯವಾಯಿತು. ಹೊನ್ನಾಳಿಯ ಡಿಎಸ್‌ಎಸ್ ಸಂಚಾಲಕನಾಗಿ ಹಾಲಪ್ಪ ಎಂಟು ವರ್ಷಗಳ ಕಾಲ ಹಲವು ಹೋರಾಟ ರೂಪಿಸಿದರು. ಹೋರಾಟಗಳ ವಿಸ್ತರಣೆ ಜಾಸ್ತಿಯಾಗುತ್ತಿದ್ದಂತೆ ಕುಟುಂಬ ಸಮೇತ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡರು. 1997ರಲ್ಲಿ `ಬಹುಮತ~ ಸಂಘಟನೆ ಕಟ್ಟಿದರು. ವಿಚಾರ ಸಂಕಿರಣ, ಸಂವಾದಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು.

ಹಾಲಪ್ಪ ಅವರಿಗೆ ಪತ್ನಿ ಸೇರಿದಂತೆ ಎರಡು ಗಂಡು, ಒಬ್ಬರು ಹೆಣ್ಣುಮಗಳಿದ್ದಾರೆ. ಅಂತ್ಯಕ್ರಿಯೆ ಅ. 16ರಂದು ಬೆಳಿಗ್ಗೆ 11ಗಂಟೆ ಸುಮಾರಿಗೆ ನಗರದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಂತಾಪ: ಹಾಲಪ್ಪ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ವೇದಿಕೆ ಸಂಚಾಲಕ ಎಸ್.ಬಿ. ಅಶೋಕಕುಮಾರ್, ಕೃಷಿಕ ದಿವಾಕರ ಹೆಗ್ಡೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT