ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ವರುಣ; ಬಿತ್ತನೆ ಕ್ಷೀಣ

Last Updated 30 ಆಗಸ್ಟ್ 2011, 8:10 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ಬಹುತೇಕ ರೈತರು ಮಳೆಯನ್ನೇ ಆಧರಿಸಿದ ಕೃಷಿ ಅವಲಂಭಿಸಿದ್ದು, ಈಗ ಕಳೆದ 20 ದಿನಗಳಿಂದ ವರುಣನ ಅವಕೃಪೆ ಆರಂಭವಾಗಿದೆ. ಇದು ರೈತರ ಚಿಂತೆ ಹೆಚ್ಚಿಸಿದೆ.

ಮಳೆಯಿಲ್ಲದ ಪರಿಣಾಮ ಈ ಬಾರಿ ಎಲ್ಲೆಡೆ ಸಮರ್ಪಕವಾಗಿ ಬಿತ್ತನೆಯೇ ಆಗಿಲ್ಲ. ಎಲ್ಲಿ ನೋಡಿದರೂ ಬಿತ್ತನೆಗೆ ಸಿದ್ಧವಾಗಿರುವ ಭೂಮಿ ಕಂಡು ಬರುತ್ತಿದೆ. ಆದ್ದರಿಂದ ಸರ್ಕಾರ ಈ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಕೂಡಲೇ ಘೋಷಿಸಲಿ ಎಂಬುದು ರೈತರ ವಾದ.

ಅರಸೀಕೆರೆ ತಾಲ್ಲೂಕು ಒಣ ಭೂಮಿ ಕೃಷಿ ವಲಯಕ್ಕೆ ಸೇರಿದ ಪ್ರದೇಶವಾಗಿದ್ದು, ವಾರ್ಷಿಕ ವಾಡಿಕೆ ಮಳೆ 325ಮಿ.ಮೀ. ಆದರೆ ಇದುವರೆವಿಗೂ ಬಿದ್ದ ಮಳೆ ಕೇವಲ 260 ಮಿ.ಮೀ. ಮಳೆಯಾಧರಿತ ಕೃಷಿ ಅವಲಂಭಿಸಿರುವ ರೈತರೊಡನೆ ಪ್ರಕೃತಿಯೂ ಸಹ ಚೆಲ್ಲಾಟವಾಡುತ್ತಿದೆ. ಒಂದು ವರ್ಷ ಮಳೆ ಉತ್ತಮವಾಗಿ ಬಂದರೆ ಮಾರನೇ ವರ್ಷ ಸಮರ್ಪಕವಾಗಿ ಮಳೆ ಬರುವುದಿಲ್ಲ.

ಆದರೆ, ಈ ಬಾರಿ ಅವಧಿಗೆ ಮುನ್ನವೇ ಇಳೆಗೆ ಮಳೆ ಸಿಂಚನವಾದ್ದರಿಂದ ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಹುಸಿಯಾಗಿದೆ.

ಸದಾ ಬರದ ಚಾಯೆಗೆ ಸಿಲುಕುವ ಅರಸೀಕೆರೆ ತಾಲ್ಲೂಕಿಗೆ ಯಾವುದೇ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಯಿಂದಾಗಿ ಈ ಭಾಗ ಎಲ್ಲ ರೀತಿಯ ಅಭಿವೃದ್ಧಿಯಿಂದಲೂ ವಂಚಿತವಾಗಿದೆ. ಜನ ಸಾಮಾನ್ಯರ ಕಷ್ಟ ಹೇಳ ತೀರದಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ಐದು ಹೋಬಳಿಗಳಿದ್ದು, 79,900 ಹೆಕ್ಷೇರ್ ಕೃಷಿ ಭೂಮಿಯಿದೆ. ತಾಲ್ಲೂಕಿನ ಕಸಬಾ, ಬಾಣಾವರ ಕಣಕಟ್ಟೆ ಹೋಬಳಿ ಯಲ್ಲಿ ಹೆಸರು, ಉದ್ದು, ಅಲಸಂದೆ, ರಾಗಿ ಹರಳು ಸೂರ್ಯಕಾಂತಿ ಪ್ರಮುಖ ಬೆಳೆಯಾಗಿದ್ದು, ಈವರೆಗೆ 16,185 ಹೆಕ್ಟೇರ್ ಬಿತ್ತನೆಯಾಗಿದ್ದು,  ಮಳೆ  ಅಲ್ಲಲ್ಲಿ ಬಿದ್ದಿರುವುದರಿಂದ ಬಿತ್ತನೆಯಾದ ಬೆಳೆ ತೇವಾಂಶವಿಲ್ಲದೆ ಹಾನಿಯಾಗಿದೆ.

ಗಂಡಸಿ ಹಾಗೂ ಜಾವಗಲ್ ಹೋಬಳಿಯಲ್ಲಿ ಮುಸುಕಿನ ಜೋಳ ಆಲೂಗಡ್ಡೆ, ಸೂರ್ಯಕಾಂತಿ ಹಾಗೂ ತರಕಾರಿ ಮೆಣಸಿನಕಾಯಿ ಹೂವು ವಾಣಿಜ್ಯ ಬೆಳೆಗಳಾಗಿವೆ. ಶೇಕಡ 35ರಿಂದ 40ರಷ್ಟು ಬಿತ್ತನೆಯಾಗಿದೆ. ಉಳಿಕೆ ಶೇ.60ರಷ್ಟು ಬಿತ್ತನೆಯಾಗದೇ ಕೃಷಿ ಉತ್ಪಾದನೆ ಕುಂಠಿತ ಗೊಂಡಿದೆ.

`ಕೃಷಿಯನ್ನೇ ನಂಬಿರುವ ರೈತರು ಮಳೆಯಿಲ್ಲದೆ ಬೆಳೆಯಿಲ್ಲದೆ ಕಂಗಾಲಾಗಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಅರಸೀಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ನೆರವಿಗೆ ಬರಬೇಕು. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಕಾಮಗಾರಿ ನಿರ್ಮಿಸಬೇಕು. ರೈತರಿಗೆ ಬೆಳೆ ವಿಮೆ, ಪರಿಹಾರ, ಜಾನುವಾ ರುಗಳಿಗೆ ಮೇವು ಶೇಖರಣೆಯಂತಹ ಕಾರ‌್ಯಗಳಿಗೆ ಒತ್ತು ನೀಡಬೇಕು~ ಎಂದು ಜನತೆ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT