ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಪ್ಪ ಮಳಿರಾಯ; ಬದುಕಿಸು

ಬರ ಬದುಕು ಭಾರ -13
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗದಗ: ‘ಎರಡ್ ವರ್ಸ್‌ದಿಂದ ಮಳೀ ಇಲ್ಲ, ಬೆಳಿ ಇಲ್ಲ. ಈ ವರ್ಸಾನೂ ಮಳೀ ಬರವಲ್ದು. ಹಿಂಗ್ ಆದ್ರ ಬದುಕು ನಡೆಸೋದ ಕಷ್ಟ. ನೀಲಂ ಚಂಡಮಾರುತಾ ಬಂದಿದ್ದಕ್ಕ ತಿನ್ನಾಕ ಜೋಳಾ ಆದ್ರೂ ಸಿಕ್ಕೈತಿ. ಇಲ್ದಿದ್ರ ಹೊಟ್ಟಿಗೇನೂ ಇರತಿರಲಿಲ್ಲಾ...'.

ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದ ಹೊಲದಲ್ಲಿ ಹತ್ತಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುತ್ತಿದ್ದ ರೈತ ಸುರೇಶ ನಾಯ್ಕರ ಅವರನ್ನು `ಪ್ರಜಾವಾಣಿ' ಮಾತಿಗೆಳೆದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ. ‘ಬ್ಯಾರೆ ಕಡೆ ಮಳೀ ಸುರಿಯಾಕತ್ತೈತಿ. ಇಲ್ಲಿ ಮಳೀ ದೇವ್ರ ಕೃಪೆ ತೋರವಲ್ಲಾ, ಮೋಡ ಆಗತೈತಿ ಮಳೀ ಸುರಿವಲ್ದು. ಬಿತ್ತಿದ ಬೆಳಿ ಬಾಡಾಕತ್ತೈತಿ. ಹತ್ತಿಗೆ ಹುಳ ಹತ್ತೈತಿ. ಏನ್ ಮಾಡೋದಾ ತಿಳಿವಲ್ದು' ಎಂದು ಅಳಲು ತೋಡಿಕೊಂಡರು.

ಎರಡು ವರ್ಷದಿಂದ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಈ ವರ್ಷವಾದರೂ ಉತ್ತಮ ಮುಂಗಾರು ಆಗಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಮೂರನೇ ವರ್ಷವೂ ಬರದ ಛಾಯೆ ಆವರಿಸಿದೆ. ಜೂನ್ ಮೊದಲ ವಾರ ಅಲ್ಪ ಮಳೆಯಾದ್ದರಿಂದ ರೈತರು ಹೆಸರು, ಶೇಂಗಾ, ಮೆಕ್ಕೆಜೋಳ ಬಿತ್ತನೆ ಪೂರೈಸಿದರು. ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೇ ಬಿತ್ತನೆ ಆಗಿರುವ ಬೆಳೆಗಳು ಒಣಗುತ್ತಿವೆ. ಬೆಳೆ ಉಳಿಸಿಕೊಳ್ಳಲು ಆಕಾಶದತ್ತ ಮುಖ ಮಾಡಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 2.41 ಲಕ್ಷ ಹೆಕ್ಟೇರ್ ಬದಲಿಗೆ 2.19 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ಇದರಲ್ಲಿ 1.37 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. 55 ಸಾವಿರ ಹೆಕ್ಟೇರ್ ಹೆಸರು ಮತ್ತು 39 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಶೇಂಗಾ ಹಾಳಾಗಿದೆ.  343 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 255 ಮಿ.ಮೀ. ಮಳೆಯಾಗಿದೆ. ಅಸಮರ್ಪಕ ಮಳೆಯಿಂದ ವಿವಿಧ ತಾಲ್ಲೂಕಿನಲ್ಲಿ ಹೆಸರು, ಶೇಂಗಾ, ಮೆಕ್ಕೆಜೋಳ, ಹತ್ತಿ ನೆಲಕಚ್ಚಿವೆ.

ಜಿಲ್ಲೆಯ ಒಟ್ಟು ಕೃಷಿ ಪ್ರದೇಶದಲ್ಲಿ ಶೇಕಡಾ 25ರಷ್ಟು ನೀರಾವರಿ ಇದ್ದರೆ, ಶೇಕಡಾ 75ರಷ್ಟು ಭಾಗ ಮಳೆಯನ್ನೇ ಆಶ್ರಯಿಸಿದೆ. ಬೃಹತ್ ಉದ್ದಿಮೆಗಳು ಇಲ್ಲದಿರುವುದರಿಂದ ಕೃಷಿಯೇ ಜೀವನಾಧಾರ. ಮಳೆಯಾಗದೆ ತೊಂದರೆಗೆ ಸಿಲುಕಿರುವ ರೈತರು ಕೂಲಿ ಅರಸಿಕೊಂಡು ದೂರದ ಪಟ್ಟಣಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಾಲ್ಕ ಎಕರೆ ಹೊಲ್ದಾಗ ಶೇಂಗಾ, ಅಲಸಂದೆ ಹಾಕಿದೆ. ಮಳೀ ಇಲ್ಲದ ಬೆಳಿ ಒಣಗತೈತಿ. ಸಾಲ ಹೆಚ್ಚಾಗಾಕತ್ತೈತಿ. ನೂರ್ ಕಾಯಿ ಹಿಡೀಬೇಕಾದ ಶೇಂಗಾ 12 ಕಾಯಿ ಬಿಟ್ಟೈತಿ. ಸಂಸಾರ ನಡಿಬೇಕಲ್ಲ. ಅದ್ಕ ಕೂಲಿ ಕೆಲಸಕ್ಕೂ ಹೋಗ್ತಿವಿ. ದಿನಾ ನೂರು ರೂಪಾಯಿ ಸಿಗತೈತಿ' ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾಗಾವಿಯ ನೀಲಮ್ಮ ಕುರಿ ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷವೂ ಬರಗಾಲದ ಕೆನ್ನಾಲಿಗೆ ಚಾಚಿದ್ದರಿಂದ ರೈತರ ಜೀವನಾಡಿಯಾಗಿರುವ ಕೆರೆ ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗಿದೆ. ನರಗುಂದ ಮತ್ತು ಮುಂಡರಗಿ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ತೇವಾಂಶದಿಂದ ಬೆಳೆಗಳು ಬಾಡುತ್ತಿವೆ. ಇದರಿಂದಾಗಿ ಕುಡಿಯುವ ನೀರು ಮತ್ತು ಮೇವಿಗೆ ಹಾಹಾಕಾರ ಉಂಟಾಗಿದೆ.

ಸೆಪ್ಟೆಂಬರ್‌ ಮೊದಲ ವಾರ ಸುರಿದ ಅಲ್ಪ ಮಳೆಯಿಂದ ಹಬ್ಬು ಶೇಂಗಾ, ತಡವಾಗಿ ಬಿತ್ತಿದ ಮೆಕ್ಕೆಜೋಳ, ಬಿ.ಟಿ. ಹತ್ತಿಗೆ ಸ್ವಲ್ಪ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು  ದಿನ ದೂಡುತ್ತಿದ್ದಾರೆ.

ಅರ್ಧಕ್ಕರ್ಧ ಬೆಳೆ ಇಲ್ಲ
‘ಮಳೆ ಕಡಿಮೆ ಆಗಿರುವುದರಿಂದ ಬೆಳೆಗಳಿಗೆ ಕೀಟಬಾಧೆ ಇದೆ. ರೈತರು ಆತಂಕ ಪಡುವುದು ಬೇಡ. ರೈತ ಸಂಪರ್ಕ ಕೇಂದ್ರ ಮತ್ತು ಭೂ ಚೇತನಾ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ಔಷಧಿ ಮತ್ತು ಸಲಕರಣೆ ನೀಡಲಾಗುತ್ತಿದೆ. ಶೇ 50ರಷ್ಟು ಬೆಳೆ ನಷ್ಟವಾಗಿರುವ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿವೆ.’
ಪ್ರಹ್ಲಾದ ರಾವ್, ಸಹಾಯಕ ಕೃಷಿ ನಿರ್ದೇಶಕ

ನಷ್ಟ ನೂರಾರು ಕೋಟಿ
ಐದು ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಸಾಕಷ್ಟು ಕಡೆ ಬೆಳೆ ನಷ್ಟವಾಗಿದೆ. ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಮತ್ತು ಉದ್ಯೋಗ ಖಾತ್ರಿಯಲ್ಲಿ ಕೈಗೊಳ್ಳಬಹುದಾದ ಕೆಲಸಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. 2011-12ರ ಮುಂಗಾರಿನಲ್ಲೂ ಬರದಿಂದ 1,28,891 ಲಕ್ಷ ಹೆಕ್ಟೇರ್‌ನಲ್ಲಿ  ರೂ. 264.36 ಕೋಟಿ ಹಾಗೂ ಹಿಂಗಾರಿನಲ್ಲಿ 1,58,830 ಹೆಕ್ಟೇರ್‌ನಿಂದ ರೂ. 214.97 ಕೋಟಿ ಬೆಳೆ ಹಾನಿಯಾಗಿತ್ತು. 2012-13ರಲ್ಲಿ ರೂ. 120 ಕೋಟಿ ಬೆಳೆ ಹಾನಿಯಾಗಿತ್ತು.
ಜಿಲ್ಲಾಧಿಕಾರಿ

ಹುಲಿಗುಡ್ಡ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿ
ಗದಗ ಜಿಲ್ಲೆಯ ಐದು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತರು ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಅವಕಾಶ ಮಾಡಿಕೊಡಬೇಕು. ಎಕರೆಗೆ ನೀಡುವ ನಾಲ್ಕು ನೂರು ರೂಪಾಯಿ ಪರಿಹಾರ ಯಾವುದಕ್ಕೂ ಸಾಲದು. ಹುಲಿಗುಡ್ಡ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಂಡರೆ ರೈತರ ಜಮೀನಿಗೆ ನೀರು ಸಿಗುತ್ತದೆ.
-ಮಲ್ಲಿಕಾರ್ಜುನ ಸಂಕನಗೌಡರ, ರೈತ ಸಂಘದ ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT