ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಯ್ಯ ಬೆಳದಿಂಗಳೆ: ಚಿರಂತನ ಸಾಂಸ್ಕೃತಿಕ ಹಬ್ಬ

Last Updated 28 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್ ಚಿರಂತನ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ವೃದ್ಧಾಶ್ರಮದ ವಠಾರದಲ್ಲಿ ಮೂರು ದಿನಗಳ ‘ಬಾರಯ್ಯ ಬೆಳದಿಂಗಳೆ’ ಸಾಂಸ್ಕೃತಿಕ ಹಬ್ಬ ಇತ್ತೀಚೆಗೆ ನಡೆಯಿತು.ಮೊದಲ ದಿನ ಕಾಟಿಪಳ್ಳ ಬಾಲಗಣಪತಿ ಮಕ್ಕಳ ಯಕ್ಷಗಾನ ಮೇಳದ ಕಲಾವಿದರು ‘ಸುದರ್ಶನ ವಿಜಯ’ ಯಕ್ಷಗಾನ ಕಥಾ ಪ್ರಸಂಗ ನಡೆಸಿಕೊಟ್ಟರು. ಜಿ.ಕೆ ನಾವುಡ ಭಾಗವತಿಕೆ, ಬಾಯಾರು ರಮೇಶ್ ಶೆಟ್ಟಿ ಹಾಗೂ ಶೇಣಿ ಸುಬ್ರಹ್ಮಣ್ಯ ಭಟ್ ಚೆಂಡೆ ಮದ್ದಳೆಯೊಂದಿಗೆ ಪೂರ್ಣಿಮಾ ಯತೀಶ್ ರೈ ಹಾಗೂ ರಮೇಶ್ ಶೆಟ್ಟಿ ಬಾಯಾರು ನಿರ್ದೇಶನದಲ್ಲಿ ಮಕ್ಕಳು ಸೊಗಸಾಗಿ ಅಭಿನಯಿಸಿದರು. ಯಕ್ಷಗಾನ ಕಲಾವಿದ ಕೋಳ್ಯೂರು ನಾರಾಯಣ ಭಟ್ ಸಂಸ್ಮರಣೆಯನ್ನು  ವಿದ್ವಾಂಸ ಸೇರಾಜೆ ಸೀತಾರಾಮ್ ಭಟ್ ನಡೆಸಿಕೊಟ್ಟರು. ನಾರಾಯಣ ಭಟ್ಟರ ತಮ್ಮ ಗಣಪತಿ ಭಟ್ ಚಿರಂತನದ  ಸಿಬ್ಬಂದಿಗೆ ಹೊಸವಸ್ತ್ರ ವಿತರಿಸಿದರು.

ಎರಡನೆಯ ದಿನ  ಸಾಗರದ ಸೌಮ್ಯ ಅರುಣ ಹಾಗೂ ಯಲ್ಲಾಪುರ ಸದಾಶಿವ ಭಟ್ ಅವರಿಂದ ಕಾಳಿದಾಸ ಮಹಾಕವಿಯ ‘ಮೇಘದೂತ’ ಕಥಾ ಪ್ರಸಂಗದ ಯುಗಳ ಯಕ್ಷಗಾನ ನಡೆಯಿತು. ಹೊಸ್ತೋಟ ಮಂಜುನಾಥ ಭಾಗವತರು ರಚಿಸಿ ನಿರ್ದೇಶಿಸಿದ ನೂತನ ಕಥಾ ಪ್ರಸಂಗದಲ್ಲಿ ರವೀಂದ್ರ ಭಟ್ ಅಚವೆ ಅವರ ಸುಮಧುರ ಭಾಗವತಿಕೆ, ನಾಗಭೂಷಣ ಹೆಗ್ಗೋಡು ಮದ್ದಳೆ ಹಾಗೂ ಸಂಪ ಲಕ್ಷ್ಮಿನಾರಾಯಣರ ಚೆಂಡೆಯ  ಹಿಮ್ಮೆಳ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರನ್ನು ಮಂಗಳೂರಿನ ವಕೀಲ ರಾಮಚಂದ್ರ ಭಟ್  ಸ್ವಾಗತಿಸಿದರು.

ಮೂರನೆಯ ದಿನ ಧಾರವಾಡದ ಪ್ರಸನ್ನ ಗುಡಿಯವರ ಹಿಂದೂಸ್ಥಾನಿ ಸಂಗೀತ ಹಾಗೂ ಭಜನ್ ಕಾರ್ಯಕ್ರಮ ನಡೆಯಿತು. ತಬಲದಲ್ಲಿ ಭಾರವಿ ದೇರಾಜೆ ಹಾಗೂ ಹಾರ್ಮೋನಿಯಂನಲ್ಲಿ ಉಡುಪಿಯ ಬಾಲ ಕಲಾವಿದ ಪ್ರಸಾದ್ ಕಾಮತ್ ಸಾಥ್ ನೀಡಿದರು. ಕಾರ್ಯಕ್ರಮಕ್ಕೆ ಮೊದಲು ಭಾರತರತ್ನ ಪಂಡಿತ್ ಭೀಮಸೇನ ಜೋಷಿಯವರ ಸಂಸ್ಮರಣಾ ಕಾರ್ಯಕ್ರಮವನ್ನು ನಿತ್ಯಾನಂದ ರಾವ್ ಸುರತ್ಕಲ್ ನಡೆಸಿಕೊಟ್ಟರು. ಮೈಥಿಲಿ ಜೂನಿಯರ್ ಶಂಕರ್ ಇದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT