ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ ಒಂದರಲ್ಲಿ...

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಆರ್ಟಿಸ್ಟ್ಸ್ ರೆಸಿಡೆನ್ಸಿ (ಬಾರ್ ಒಂದು) ಕಳೆದ ಹನ್ನೆರಡು ವರ್ಷಗಳಿಂದ ಕಲಾವಿದರ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಯುವ ಕಲಾವಿದರಿಗೆ ಸನಿವಾಸ ಕಲಾ ಶಿಬಿರ ಏರ್ಪಡಿಸುವುದು ಸಂಘಟನೆಯ ಉದ್ದೇಶ. ಹಿರಿಯ ಕಲಾವಿದರು ಆಯ್ಕೆ ಮಾಡಿದ ಇಬ್ಬರು ಯುವ ಕಲಾವಿದರಿಗೆ ಆರು ವಾರಗಳ ಫೆಲೋಶಿಪ್ ನೀಡಿ ಕಲಾಕೃತಿಗಳ ರಚನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇಂಥ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಂಘಟನೆ ಇದೇ ಮೊದಲ ಬಾರಿಗೆ ರಾಜ್ಯದ ಕಲಾವಿದರಿಗಾಗಿಯೇ  ಕರ್ನಾಟಕ- ಕರ್ನಾಟಕ ಹೆಸರಿನ ಯೋಜನೆ ರೂಪಿಸಿದೆ. ಈ ಸಾಲಿನ ಕಲಾ ಶಿಬಿರಕ್ಕೆ ಆಯ್ಕೆಯಾದವರು ಧಾರವಾಡದ ರಾಧಿಕಾ ಉಳ್ಳೂರು ಹಾಗೂ ಚಿಕ್ಕಮಗಳೂರಿನ ಡಿ.ಜಿ.ರೂಪಾ. ಅವರ ಮಾರ್ಗದರ್ಶನಕ್ಕೆ ಮತ್ತೊಬ್ಬ ಯುವ ಕಲಾವಿದೆ ವರ್ಷಾ ದೇಶಿಕರ್ ಅವರನ್ನು ನಿಯೋಜಿಸಲಾಗಿದೆ. ರಾಧಿಕಾ ಹಾಗೂ ರೂಪಾ ಇಬ್ಬರೂ ಈಗಷ್ಟೇ ದೃಶ್ಯಕಲಾ ಪದವಿ ಪಡೆದವರು. ಪ್ರತಿಭಾನ್ವಿತರಾದರೂ ಹಣಕಾಸಿನ ಆಸರೆ ಇಲ್ಲದವರು. ಈಗಷ್ಟೇ ಕಲಾಲೋಕಕ್ಕೆ ತೆರೆದುಕೊಳ್ಳುತ್ತಿರುವವರು.

ರಾಧಿಕಾ ಮೊದಲು ಬಿಎ ಓದಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೂ ಕಲೆಯ ಬಗ್ಗೆ ಅವರಿಗೆ ಅಪಾರ ತುಡಿತ. ಆ ತುಡಿತವೇ ಅವರನ್ನು ಕಲಾ ಪದವಿ ಪಡೆಯುವಂತೆ ಮಾಡಿತು. ಸಂಸ್ಥೆಯಿಂದ ಆಹ್ವಾನ ಬಂದಾಗ ಅವರು ತಮ್ಮ ಕಲಾಕೃತಿಗಳನ್ನು ಆಯ್ಕೆ ಸಮಿತಿಯ ಎದುರು ಪ್ರದರ್ಶಿಸಿದರು.

ಕಲಾವಿದೆಯ ಹಿನ್ನೆಲೆ, ಆಕೆಯ ಕಲಾಕೃತಿಗಳನ್ನು ಗಮನಿಸಿದ ಸಮಿತಿ ಅವರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಿತು. ಈವರೆಗೆ ನೂರಾರು ಕಲಾಕೃತಿಗಳನ್ನು ರಚಿಸಿರುವ ಅವರು ಶಿಬಿರದಲ್ಲಿ ನಗರವನ್ನು ವಸ್ತುವಾಗಿರಿಸಿಕೊಂಡು ಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ. ನಗರದ ಬದುಕು, ಸದ್ದಿಲ್ಲದೆ ನಾಶವಾಗುತ್ತಿರುವ ಪರಿಸರ ಇವರ ಕಲಾಕೃತಿಗಳಲ್ಲಿ ಹಾಸುಹೊಕ್ಕಾಗಿವೆ.

ರೂಪಾ ಅವರ ಕಲಾಕೃತಿಗಳಲ್ಲಿ ನಗರದ ಬದುಕಿನ ಜತೆಗೆ ಹಳ್ಳಿಗಳನ್ನು ನೆನಪಿಸಿಕೊಳ್ಳುವ ವಸ್ತುವಿದೆ. ಜತೆಗೆ ಲಿಂಗ ತಾರತಮ್ಯದ ಕುರಿತು ತೀಕ್ಷ್ಣ ಒಳನೋಟಗಳನ್ನು ಅವರ ಇತರ ಕಲಾಕೃತಿಗಳಲ್ಲಿ ಕಾಣಬಹುದು. ಪೇಂಟಿಂಗ್ ಹಾಗೂ ಇನ್‌ಸ್ಟಲೇಷನ್ ರೂಪದಲ್ಲಿ ಇಬ್ಬರ ಕಲಾಕೃತಿಗಳು ಮೂಡಿಬಂದಿವೆ.

ಮಾರ್ಗದರ್ಶಕಿಯಾಗಿ ಭಾಗವಹಿಸಿರುವ ವರ್ಷಾ ದೇಶಿಕರ್ ಕೂಡ ಶಿಬಿರದಲ್ಲಿ ಕಲಾಕೃತಿಗಳನ್ನು ರೂಪಿಸುತ್ತಿದ್ದಾರೆ. ಮೂಲತಃ ಶಿಲ್ಪ ಕಲಾವಿದೆಯಾದ ಇವರು ನಗರದ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿ. ಕಾಲೇಜಿನ ವಾರ್ಷಿಕ ಪ್ರದರ್ಶನ, ಮುಂಬೈನಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಇವರು ಭಾಗಿ. ಈಗಾಗಲೇ ಯುವ ಕಲಾವಿದರ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಈಕೆ ಇನ್‌ಸ್ಟಲೇಶನ್ ಕಲಾಕೃತಿಗಳ ಪ್ರದರ್ಶನದ ಜತೆಗೆ ಈ ಬಾರಿ ವೀಡಿಯೊ ಆರ್ಟ್ ರೂಪಿಸುವ ಹುಮ್ಮಸ್ಸಿನಲ್ಲಿದ್ದಾರೆ.

ರಾಧಿಕಾ ಅವರ ಪ್ರಕಾರ `ಗ್ರಾಮೀಣ ಪ್ರದೇಶದ ಕಲಾ ಶಿಕ್ಷಣ ಇನ್ನೂ ಕುಂಚಕಲೆಗೆ ಸೀಮಿತವಾಗಿದೆ. ನವ ಮಾಧ್ಯಮ ಕಲಾಕೃತಿಗಳ ಪರಿಚಯವಾದದ್ದು ಇಲ್ಲಿಗೆ ಬಂದ ನಂತರವೇ. ಶಿಬಿರದ ವೇಳೆ ಹಲವಾರು ದೊಡ್ಡ ದೊಡ್ಡ ಕಲಾವಿದರ ಪರಿಚಯವಾಯಿತು. ಪುಸ್ತಕಗಳಿಂದ ಮಾತ್ರ ಪರಿಚಯವಿದ್ದ ಅವರನ್ನು ಕಣ್ಣಾರೆ ಕಂಡು ಮಾತನಾಡಿಸುವ ಅವಕಾಶ ದೊರೆಯಿತು~ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

`ಶಿಬಿರದಲ್ಲಿ ಪಾಲ್ಗೊಂಡ ನಂತರ ನನ್ನೊಳಗಿನ ಕಲಾ ಪರಿಕಲ್ಪನೆ ಬದಲಾಗಿದೆ. ಇದುವರೆಗೆ ಸಾಂಪ್ರದಾಯಿಕ ಕಲೆಗೆ ಒತ್ತು ನೀಡಿದ್ದ ನನಗೆ ಈಗ ಕಲಾ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿದೆ. ಕಾಲೇಜಿನ ರಜೆ ದಿನಗಳನ್ನು ಅರ್ಥ ಪೂರ್ಣವಾಗಿ ಕಳೆಯುತ್ತಿರುವ ಖುಷಿ ಇದೆ~ ಎನ್ನುತ್ತಾರೆ ರೂಪಾ. 

ನಗರವಾಸಿಯಾಗಿರುವ ವರ್ಷಾ ಅವರಿಗೆ ತನಗಿಂತ ಚಿಕ್ಕ ಕಲಾವಿದೆಯರೊಂದಿಗೆ ಕೆಲಸ ಮಾಡುವುದು ಹೊಸ ಅನುಭವವಾಗಿ ಕಂಡಿದೆ. `ಗ್ರಾಮೀಣ ಪ್ರದೇಶಗಳಲ್ಲಿ ಕಲೆಗಿಂತಲೂ ಹೆಚ್ಚಾಗಿ ಕರಕುಶಲ ಕಲೆಗಳು ಅಸ್ತಿತ್ವದಲ್ಲಿವೆ. ಆ ಜನರಿಗೆ ಕಲಾಲೋಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಿಕೊಡಲಾಗುತ್ತಿದೆ. ಅಲ್ಲದೆ ವೈಯಕ್ತಿಕವಾಗಿ ನನಗೂ ಇದರಿಂದ ಲಾಭವಾಗಿದೆ. ಅವರ ಬದುಕಿನ ರೀತಿಯನ್ನು ಹತ್ತಿರದಿಂದ ಪರಿಚಯ ಮಾಡಿಕೊಳ್ಳುವ ಅವಕಾಶ ದೊರೆತಿದೆ~ ಎಂಬ ತೃಪ್ತಿಯ ಮಾತು ಅವರಿಂದ.
`ಬಾರ್-1~ನ ಸಂಸ್ಥಾಪಕರಲ್ಲಿ ಒಬ್ಬರಾದ ಕಲಾವಿದ ಜಿ.ಸುರೇಶ್ ಕುಮಾರ್ ಹೇಳುವಂತೆ ರಾಜ್ಯದ ಕಲಾವಿದರಿಗೆ ಇಂಥದ್ದೊಂದು ವೇದಿಕೆ ಕಲ್ಪಿಸುವ ತುರ್ತು ಇತ್ತು.

ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಶಿಬಿರ ಏರ್ಪಡಿಸುವುದಕ್ಕಿಂತ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಬೇಕು ಎಂಬ ಆಶಯದೊಂದಿಗೆ ಈ ಕೆಲಸಕ್ಕೆ ಕೈ ಹಾಕಲಾಗಿದೆ.

ಇದೇ 21ರಂದು ಮೂವರು ಕಲಾವಿದೆಯರ ಕಲಾಕೃತಿಗಳು ನಗರದ ಮಿಷನ್ ರಸ್ತೆಯಲ್ಲಿರುವ `ಬಾರ್ 1 ಸ್ಟುಡಿಯೋಸ್~ನಲ್ಲಿ ಪ್ರದರ್ಶನ ಕಾಣಲಿವೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ಇ-ಮೇಲ್: bar1studio@gmail.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT