ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ತಳಮಳಕ್ಕೆ ಸ್ಪಂದಿಸಿದ ಹೈಕೋರ್ಟ್

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಈ ಪಕ್ಕ ಅಮ್ಮನ ಮನೆ, ಆ ಪಕ್ಕ ಅಪ್ಪನ ಮನೆ. ನಾನ್ಯಾವ ಮನೆಗೆ ಹೋಗಲಿ~ ಎಂಬ ಗೊಂದಲದಲ್ಲಿದ್ದ ಬಾಲಕನೊಬ್ಬನನ್ನು ಅಮ್ಮನ ಮನೆಗೆ ತಲುಪಿಸಿ, ಅಪ್ಪನಿಗೂ ಮಗನನ್ನು ಕಾಣುವ ಅವಕಾಶ ಕಲ್ಪಿಸಿರುವ ಕುತೂಹಲದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ನಡೆದಿದೆ.

ಅಮ್ಮನ ಮುಖ ನೋಡಿದರೆ ಅಪ್ಪನಿಗಾಗದು, ಅಪ್ಪನ ಬಳಿ ಹೋಗಲು ಅಮ್ಮ ಒಲ್ಲಳು. ಅಕ್ಕಪಕ್ಕದಲ್ಲಿನ ಪ್ರತ್ಯೇಕ ಮನೆಯಲ್ಲಿ ಇವರ ವಾಸ. ಅಮ್ಮನ ಆಸರೆ ಬಯಸಿದರೂ ಅಪ್ಪ ಬಿಡಲೊಲ್ಲ. ಅಮ್ಮನ ಬಳಿ ಉಳಿದರೆ ಅಪ್ಪ ಸಿಗಲ್ಲ. ಈ ತಳಮಳದಲ್ಲಿದ್ದ 15 ವರ್ಷದ ಬಾಲಕನ ಮನದಾಳ ಅರಿತ ನ್ಯಾಯಾಲಯ, ಅವನ ಸಮಸ್ಯೆಗೆ ಪರಿಹಾರ ನೀಡಿದೆ.

ಪಕ್ಕದ ಮನೆಯಲ್ಲಿಯೇ ವಾಸವಾಗಿರುವ ತಾಯಿಗೆ ಸ್ನೇಹಿತನ ಮೂಲಕ ಪತ್ರ ಕಳುಹಿಸಿ ಸಮಸ್ಯೆ ತೋಡಿಕೊಳ್ಳುತ್ತಿದ್ದ ಈ ಬಾಲಕನಿಗೆ ಈಗ ತಾಯಿಯ ಆಸರೆ ಸಿಕ್ಕಿದೆ. ಮಗನನ್ನು ಹಾಜರು ಪಡಿಸಲು ಪತಿಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಕಾನೂನು ಸಮರ ಸಾರಿದ್ದ ಅಮ್ಮನಿಗೆ ಸದ್ಯ ಜಯ ದೊರಕಿದೆ.

ಅಪ್ಪನ ಬಳಿ ಇದ್ದ ಬಾಲಕನನ್ನು ಅಮ್ಮನ ಬಳಿಗೆ ಕಳುಹಿಸಿರುವ ನ್ಯಾಯಮೂರ್ತಿಗಳು, ಮಗನನ್ನು ಕಾಣಲು ಅಪ್ಪನಿಗೆ ವಾರಕ್ಕೆರಡು ಬಾರಿ ಅನುಮತಿ ನೀಡಿ ಆದೇಶಿಸಿದ್ದಾರೆ.

ನಾಲ್ಕು ಪ್ರತ್ಯೇಕ ಅರ್ಜಿ: ಬೆಂಗಳೂರಿನ 37 ವರ್ಷದ ರಮೇಶ್, ಸವಿತಾ ದಂಪತಿ ಹಾಗೂ ಅವರ ಪುತ್ರ 9ನೇ ತರಗತಿಯಲ್ಲಿ ಓದುತ್ತಿರುವ ಸತೀಶ್ (ಮೂವರ ಹೆಸರು ಬದಲಾಯಿಸಲಾಗಿದೆ) ನಡುವಿನ ಪ್ರಕರಣ ಇದು.
ಪತಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿ ಸವಿತಾ ವಿಚ್ಛೇದನ ಕೋರಿ ಒಂದು ಅರ್ಜಿ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಇನ್ನೊಂದು ಅರ್ಜಿ ಹಾಗೂ ಪರಿಹಾರಕ್ಕೆ ಕೋರಿ ಮತ್ತೊಂದು ಅರ್ಜಿ ಸಂಬಂಧಿತ ಕೋರ್ಟ್‌ಗಳಲ್ಲಿ ದಾಖಲು ಮಾಡಿದ್ದಾರೆ. ಪತ್ನಿಯ ವಿರುದ್ಧ ರಮೇಶ್, ಕೌಟುಂಬಿಕ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ.

ಅಪ್ಪನ ಬಳಿ ಮಗ: ದಂಪತಿ ನಡುವೆ ವಿರಸ ಬಂದ ಕಾರಣ, ಸವಿತಾ 2010ರಲ್ಲಿ ಮನೆ ಬಿಟ್ಟು ಹೋಗಿದ್ದಾರೆ. ಮಗ ಅಪ್ಪನ ಬಳಿಯೇ ಇದ್ದ. ಆತನನ್ನು ಭೇಟಿಯಾಗಲು ತಾಯಿಗೆ ಬಿಡಬಾರದು ಎಂದು ಶಾಲೆಯ ಆಡಳಿತ ಮಂಡಳಿಗೆ ರಮೇಶ್ ಹೇಳಿದ್ದ ಕಾರಣ, ಮಗನನ್ನು ನೋಡಲು ತಾಯಿ ಹೋಗುವಂತಿರಲಿಲ್ಲ. ಅಮ್ಮನ ಜೊತೆ ಏನೇನೋ ಮಾತನಾಡುವ ಹಂಬಲ ಈ ಮಗನಿಗೆ.

ಸ್ನೇಹಿತರ ಮೂಲಕ ಪತ್ರ ಬರೆದು ತನ್ನ ಮನದಾಳವನ್ನು ಆತ ತಿಳಿಸತೊಡಗಿದ (ಈ ಪತ್ರದ ವಿವರಗಳನ್ನು ಬಹಿರಂಗಗೊಳಿಸದಂತೆ ಆತ ವಿಚಾರಣೆ ವೇಳೆ ನ್ಯಾಯಮೂರ್ತಿಗಳನ್ನು ಕೋರಿಕೊಂಡಿದ್ದ. ಆದುದರಿಂದ ಆತ ಪತ್ರದಲ್ಲಿ ಏನು ಹೇಳಿದ್ದ ಎಂಬುದನ್ನು ನ್ಯಾಯಮೂರ್ತಿಗಳು ಆದೇಶದಲ್ಲಿ ಕೂಡ ಉಲ್ಲೇಖಿಸಿಲ್ಲ). ಪತ್ರಗಳನ್ನು ಓದಿದ ಸವಿತಾ ಅವರಿಗೆ ಗಾಬರಿಯಾಯಿತು. ಆದುದರಿಂದ ಮಗನನ್ನು ಹಾಜರುಪಡಿಸಲು ಪತಿಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅವರು ಅರ್ಜಿ ಸಲ್ಲಿಸಿದರು.

ನ್ಯಾಯಮೂರ್ತಿಗಳಾದ ದಿಲೀಪ್ ಬಿ. ಭೋಸ್ಲೆ ಹಾಗೂ ಬಿ.ವಿ.ಪಿಂಟೊ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಆದೇಶದಂತೆ ಪೊಲೀಸರು  ತಂದೆ-ಮಗನನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಮಗನ ಅಂತರಂಗ ತಿಳಿಯಬಯಸಿದ ನ್ಯಾಯಮೂರ್ತಿಗಳು ಬಹಿರಂಗವಾಗಿ ಆತನನ್ನು ವಿಚಾರಣೆಗೆ ಒಳಪಡಿಸದೆ, ತಮ್ಮ ಕೊಠಡಿಯಲ್ಲಿಯೇ ಸರ್ಕಾರದ ಪರ ವಕೀಲ ಎನ್.ಎಸ್.ಸಂಪಂಗಿರಾಮಯ್ಯ ಅವರ ಎದುರು ವಿಚಾರಣೆ ನಡೆಸಿದರು.

ನ್ಯಾಯಮೂರ್ತಿಗಳ ಎದುರು ಮನಸ್ಸಿನ ನೋವನ್ನು ತೋಡಿಕೊಂಡ ಬಾಲಕ, ಇದ್ಯಾವ ಮಾಹಿತಿಯನ್ನೂ ಯಾರಿಗೂ ತಿಳಿಸದಂತೆ ಕೋರಿಕೊಂಡ. ಅಮ್ಮನ ಬಳಿ ಇರಲು ಇಚ್ಛೆ ತೋರಿರುವ ಬಾಲಕ, ಅಪ್ಪನನ್ನೂ ಕಾಣಲು ಬಯಸಿದ್ದಾನೆ ಎಂದು ಅವನ ಮಾತಿನಿಂದ  ನ್ಯಾಯಮೂರ್ತಿಗಳಿಗೆ ತಿಳಿಯಿತು.

`ಸತೀಶ್, ಯಾರ ಬಳಿ ಇರಬೇಕು ಎಂದು ಕೌಟುಂಬಿಕ ಕೋರ್ಟ್ ಆದೇಶ ಹೊರಡಿಸುವವರೆಗೆ ಅಮ್ಮನ ಬಳಿಯೇ ಇರಲಿ~ ಎಂದ ನ್ಯಾಯಮೂರ್ತಿಗಳು, ವಾರಕ್ಕೆರಡು ದಿನ ಎರಡು ಗಂಟೆ ಕಾಲ ಆತನನ್ನು ಕರೆದುಕೊಂಡು ಹೋಗುವ ಅವಕಾಶವನ್ನು ತಂದೆಗೆ ಕಲ್ಪಿಸಿದ್ದಾರೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣವನ್ನು ನಾಲ್ಕು ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ಮುಖ್ಯಾಂಶಗಳು
 ಅಪ್ಪನ ಬಳಿ ಇದ್ದ ಬಾಲಕ

 ಪಕ್ಕದ ಮನೆಯಲ್ಲೇ ಇದ್ದ ಅಮ್ಮನಿಗೆ ಪತ್ರ ಮುಖೇನ ಮಾಹಿತಿ

 ದಾಂಪತ್ಯ ವಿರಸ- ನಾಲ್ಕು ಅರ್ಜಿ ಬಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT