ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕರ ಶಿಕ್ಷಣ?

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಘಟನೆ 1: 25ನೇ ಜುಲೈ, 2011
ಗುಬ್ಬಿ ತಾಲ್ಲೂಕು ಹೊಸಕೆರೆಯ ರುದ್ರೇಶ್ವರ ಹೋಟೆಲ್‌ನಲ್ಲಿ ತಟ್ಟೆ, ಲೋಟ ತೊಳೆಯುವ ಕೆಲಸಕ್ಕಿದ್ದ ಅರುಣನನ್ನು ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಸಿಬ್ಬಂದಿ ಸಾರ್ವಜನಿಕರ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ರಕ್ಷಿಸಿದರು.

ನಲ್ಲೂರು ಸರ್ಕಾರಿ ಶಾಲೆಯ 2ನೇ ತರಗತಿಗೆ ದಾಖಲಿಸಿದಾಗ ಅರುಣ (8) ಕಣ್ಣಲ್ಲಿ ನೀರು ತುಂಬಿಕೊಂಡು `ನನಗೂ ಕಲಿಯುವ ಆಸೆಯಿದೆ. ದಿನಾಲೂ ಸ್ಕೂಲ್‌ಗೆ ಹೋಗ್ತೀನಿ~ ಎನ್ನುತ್ತಿದ್ದ.

ಘಟನೆ 2:  7ನೇ ಆಗಸ್ಟ್, 2011
ತುಮಕೂರು ನಗರದ ಹೊರವಲಯದ ಊರುಕೆರೆ ಸರ್ವೀಸ್ ರಸ್ತೆಯ ಎಸ್.ಜಿ.ರೈಸ್‌ಮಿಲ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಬಿಹಾರದ ಬಾಲ ಕಾರ್ಮಿಕ ಟಾಸ್ ಭಗತ್ (15) ಅಕ್ಕಿ ರಾಶಿಯಲ್ಲಿ ಮುಳುಗಿ ಅಸು ನೀಗಿದ.

ಹೀಗೆ ಅರುಣನ ಮಾತು ಹಾಗೂ ಭಗತ್‌ನ ದುರಂತ ಸಾವಿನ ಮೂಲಕ ಬಾಲಕಾರ್ಮಿಕರ ಸಮಸ್ಯೆ ಮತ್ತೆ ಪ್ರತಿಧ್ವನಿಸಿದೆ.

ಎಸ್.ಎಂ.ಕೃಷ್ಣ ಅವಧಿಯಲ್ಲಿನ ಸರ್ಕಾರ 2007ರೊಳಗೆ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೊಳಿಸುವುದಾಗಿ ಹೇಳಿತ್ತು. ಈಗಿನ ಸರ್ಕಾರ ಗುರಿ ಮುಟ್ಟುವ ಅಂತಿಮ ಗಡುವನ್ನು 2012ಕ್ಕೆ ವಿಸ್ತರಿಸಿದೆ.

ಈ ಬಾರಿಯಾದರೂ ಸರ್ಕಾರ ನಿಗದಿತ ಅವಧಿಯಲ್ಲಿ ಗುರಿ ತಲುಪಲು ಸಾಧ್ಯವೇ? ಎಂಬ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಾಮಾಜಿಕ ಪರಿವರ್ತನಾ ಆಂದೋಲನದ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಅಡಿ ರಾಜ್ಯದಲ್ಲಿ ಒಟ್ಟು 387 ಶಾಲೆ ತೆರೆಯಲು ಒಪ್ಪಿಗೆ ಸಿಕ್ಕಿದೆ. ಪ್ರಸ್ತುತ 294 ಶಾಲೆಗಳು 17 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೇವಲ ಎಂಟು ಶಾಲೆಗಳು ರಾಜ್ಯ ಬಾಲ ಕಾರ್ಮಿಕ ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಶಾಲೆಗಳು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿವೆ.

ವಿಶೇಷ ಶಾಲೆಗಳು ಒಂದೆಡೆ ಇರಲಿ, ಇದ್ದ  ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದರಿಂದ ಬಡಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ ಎನ್ನುವುದನ್ನು   ಅಧ್ಯಯನವೊಂದು ತಿಳಿಸುತ್ತದೆ.

ಇದೇ ಅಭಿಪ್ರಾಯ ವ್ಯಕ್ತಪಡಿಸುವ ಸಾಮಾಜಿಕ ಪರಿವರ್ತನಾ ಆಂದೋಲನದ ಸದಸ್ಯರು `ಸರ್ಕಾರಿ ಶಾಲೆಗಳು ಮುಚ್ಚುತ್ತಾ ನಡೆದರೆ ಬಹುತೇಕ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ಉಳಿಯಬೇಕಾದ ಪರಿಸ್ಥಿತಿ ಎದುರಾಗಲಿದೆ.

ಈ ಕುರಿತು ಕಳೆದ ಜನವರಿ 28ರಂದು ರಾಜ್ಯ ಮಾನವ ಹಕ್ಕುಗಳ ಆಯೋಗವು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಇಲಾಖೆಗೆ ನೋಟಿಸ್ ನೀಡಿತ್ತು. ಇದರಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಈ ಕುರಿತು ಏನು ಕ್ರಮ ಕೈಗೊಳ್ಳುತ್ತೀರಿ ಎಂದಿದ್ದರು. ಆದರೆ ಶಾಲೆಗಳು ಮಾತ್ರ ಮುಚ್ಚುವುದು ನಿಂತಿಲ್ಲ. ತುಮಕೂರು ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯ ವ್ಯಾಪಕತೆ ಮತ್ತು ಸ್ಥಿತಿಗತಿ ಗಮನಿಸಿದರೆ ಪರಿಸ್ಥಿತಿ ಖಂಡಿತ ಆಶಾದಾಯಕವಾಗಿಲ್ಲ ಎನ್ನುವುದು ಸ್ಲಂ ಸಮಿತಿಯ ಸೈಯದ್ ಅಲ್ತಾಫ್ ಅಭಿಪ್ರಾಯ.

`ಪ್ರತಿದಿನ  ಹತ್ತು ಮಕ್ಕಳಾದರೂ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವುದು ಕಂಡುಬರುತ್ತದೆ. ಆದರೂ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ~ ಇದೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ.ರಾಜಕುಮಾರ್.
 ಬಾಲ ಕಾರ್ಮಿಕರ ರಕ್ಷಣೆಗೆ ನೆಲೆ ಕಲ್ಪಿಸುವ ಜವಾಬ್ದಾರಿ ಪೂರೈಸುವಲ್ಲಿ ಬಹುತೇಕ ಜಿಲ್ಲಾ ಕಾರ್ಮಿಕ ಯೋಜನಾ ಸಂಘ ಹಾಗೂ ಜಿಲ್ಲಾಡಳಿತಗಳು ವಿಫಲವಾಗಿವೆ.ಈ ನಿಟ್ಟಿನಲ್ಲಿ 17 ಜಿಲ್ಲೆಗಳ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಬಾಲಕಾರ್ಮಿಕ ಶಾಲೆಗಳು ತೆರೆಯಬೇಕಾಗಿದೆ.

 ಏನಾಗಬೇಕು? 
*
ಸರ್ವ ಶಿಕ್ಷಣ ಅಭಿಯಾನದಡಿ ಸಮೀಕ್ಷೆ ಆರಂಭಿಸಿ, ಶಾಲೆ ಬಿಟ್ಟ 1.10 ಲಕ್ಷ ಮಕ್ಕಳನ್ನು ಶಾಲೆಗೆ ಸೇರಿಸಬೇಕು.

* ಕೇಂದ್ರ ಸರ್ಕಾರ ಸಹ ಬಾಲ ಕಾರ್ಮಿಕರ ಪದ್ದತಿ ನಿರ್ಮೂಲನೆಗಾಗಿ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಿದೆ. ಇದನ್ನು 12ನೇ ಪಂಚವಾರ್ಷಿಕ ಯೋಜನೆಗೆ ವಿಸ್ತರಿಸಿ ಶಾಲೆಗಳ ಆರಂಭಕ್ಕೆ ಆದ್ಯತೆ ನೀಡಬೇಕು.

* ಜಿಲ್ಲಾಡಳಿತ ಸಂಪೂರ್ಣ ಜವಾಬ್ದಾರಿ ಹೊರಬೇಕು.

* ಶಾಲೆಗಳನ್ನು ಆರಂಭಿಸುವ ಕುರಿತು 17 ಇಲಾಖೆಗಳು ಸಮಗ್ರ ಯೋಜನೆ ರೂಪಿಸಬೇಕು.

* ಬಾಲಕನನ್ನು ಅವಲಂಬಿಸಿರುವ ನಿಶ್ಯಕ್ತ ಅಥವಾ ವೃದ್ಧ ತಂದೆತಾಯಿಯರ ಜೀವನಾಧಾರಕ್ಕಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವ ಉದ್ಯೋಗ ಕಲ್ಪಿಸುವ ಅವಕಾಶವೂ ಇರುತ್ತದೆ.

* ನಿಯಮಗಳ ಪ್ರಕಾರ ಬಾಲ ಕಾರ್ಮಿಕ ಶಾಲೆಗಳು ಎಲ್ಲ ತಾಲ್ಲೂಕಿನಲ್ಲಿಯೂ ಇರಬೇಕು. ಇಂಥ ಶಾಲೆಗಳಿಗೆ ಇಬ್ಬರು ಶಿಕ್ಷಕರು, ಒಬ್ಬ ಆಡಳಿತಾಧಿಕಾರಿ, ಒಬ್ಬ `ಡಿ~ ದರ್ಜೆ ನೌಕರ ನೇಮಕವಾಗಬೇಕು.

* ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ಜಿಲ್ಲಾ ಪಂಚಾಯಿತಿಯ ಹಲವು ಯೋಜನೆಗಳ ಕುರಿತು ಪಂಚಾಯತ್ ರಾಜ್ ಇಲಾಖೆ ಪ್ರಚಾರ ಕಾರ್ಯ ನಡೆಸಬೇಕು.

ಮನೆಗೆಲಸವೂ ಅಪಾಯಕಾರಿ
`ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ~ಯ ಪ್ರಕಾರ ಮನೆ ಕೆಲಸವನ್ನೂ ಅಪಾಯಕಾರಿ ಎಂದು ಘೋಷಿಸಲಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ . ಹೊಟೆಲ್, ಡಾಬಾ, ಮನರಂಜನಾ ಕೇಂದ್ರ, ಬ್ಯೂಟಿ ಪಾರ್ಲರ್‌ಗಳೂ ಕೂಡಾ ಈ ಕಾಯ್ದೆಯಡಿ ಬರುತ್ತವೆ. ಒಟ್ಟು 70 ಕ್ಷೇತ್ರಗಳನ್ನು ಕಾಯ್ದೆ ಅಪಾಯಕಾರಿ ಎಂದು ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT