ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕರ ಸಂಖ್ಯೆ ದ್ವಿಗುಣ

Last Updated 7 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಹಳೇಬೀಡು: ಬಾಲ ಕಾರ್ಮಿಕರ ದುಡಿತಕ್ಕೆ ಕಡಿವಾಣ ಹಾಕಬೇಕು ಎಂದು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಅಪ್ರಾಪ್ತ ಬಾಲಕರನ್ನು ಪೋಷಕರೇ ಕೂಲಿ ಕೆಲಸಕ್ಕೆ ದೂಡುತ್ತಿರುವ ಪ್ರವೃತ್ತಿ ಎಗ್ಗಿಲ್ಲದೆ ಸಾಗುತ್ತಿದೆ.

ಹಳೇಬೀಡಿನ ದೇವಾಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಸೋಮ ವಾರ ದುಡಿಯುತ್ತಿದ್ದ ಇಬ್ಬರೂ ಬಾಲಕಾರ್ಮಿಕರು ಇದಕ್ಕೆ ಸಾಕ್ಷಿಯಾದರು. ನರಸೀಪುರ ಭೋವಿ ಕಾಲೋನಿಯ ಇಬ್ಬರು ಬಾಲಕರು ತಾಯಿಯೊಂದಿಗೆ ರಸ್ತೆ ಕೆಲಸದಲ್ಲಿ ಕೂಲಿ ಆಳುಗಳಾಗಿ  ದುಡಿಯು ತ್ತಿದ್ದರು. ಇವರ ವಯಸ್ಸಿನ ಇತರ ಮಕ್ಕಳು ಶಾಲೆಯಲ್ಲಿ ಆಟದೊಂದಿಗೆ ಪಾಠ ಕಲಿಯುತ್ತಿದ್ದರೆ, ಭವಿಷ್ಯದ ಅರಿವಿಲ್ಲದ ಮಕ್ಕಳು ದುಡಿಮೆಯಲ್ಲಿಯೇ ಸುಖ ಕಾಣುತ್ತಿದ್ದರು.

ತಲೆ ಮೇಲೆ ಭಾರವಾದ ಜಲ್ಲಿ ಕಲ್ಲು ತುಂಬಿದ ಮಂಕರಿ ಹೊರುತ್ತಿದ್ದ ಬಾಲಕರನ್ನು ನೋಡಿದವರಿಗೆ ಕಣ್ತುಂಬಿ ಬರುತ್ತಿತ್ತು. ಕೆಲಸದಲ್ಲಿ ನಿರತನಾಗಿದ್ದ ಬಾಲಕ ಪತ್ರಕರ್ತರ ಕ್ಯಾಮರಕ್ಕೆ ಸಿಕ್ಕಿ ಬಿದ್ದ ತಕ್ಷಣ ಮಕ್ಕಳನ್ನು ಊರಿಗೆ ಕಳುಹಿಸಿದ ಘಟನೆಯೂ ನಡೆಯಿತು.

ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯ ಗ್ರಾಮದಲ್ಲಿ 7ನೇ ತರಗತಿ ಓದುತ್ತಿದ್ದರೆ, ಆತನ ಸಹೋದರಿ ಕಾವ್ಯ 6 ನೇ ತರಗತಿ ಓದುತ್ತಿದ್ದಾಳೆ. ಒಟ್ಟಾರೆ ಇಬ್ಬರಿಗೂ ದುಡಿಮೆಯ ವಯಸ್ಸು 14 ತುಂಬಿಲ್ಲ. ಕೆಲಸ ಮಾಡುವಷ್ಟ ಬಲಶಾಲಿಗಳೂ ಆಗಿಲ್ಲ.

`ಅಪ್ಪ ವೆಂಕಟೇಶ ನಮ್ಮಂದಿಗೆ ಇಲ್ಲ ಬೇರೆ ಹೋಗಿದ್ದಾನೆ. ಅಮ್ಮ ಸೌಮ್ಯ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದಾಳೆ. ಬಡತನ ಇರುವುದರಿಂದ ಒಬ್ಬರೇ ದುಡಿದರೆ ಹೊಟ್ಟೆಗಾದರೆ ಬಟ್ಟೆಗೆ ಆಗುವುದಿಲ್ಲ. ಕೂತು ತಿನ್ನುವುದಕ್ಕೆ ನಮಗೆ ತಾತ ಮುತ್ತಾತ ಮಾಡಿದ ಆಸ್ತಿಪಾಸ್ತಿ ಇಲ್ಲ. ಅವ್ವನ ಜೊತೆ ಕೂಲಿ ಮಾಡಿದರೆ ಅಸಿವು ನಿಗಿಸಿಕೊಳ್ಳುವುದರೊಂದಿಗೆ ಮಾನ ಕಾಪಾಡಿಕೊಳ್ಳಬಹುದು~ ಎಂದು ಬಾಲಕರು ಗ್ರಾಮ್ಯ ಭಾಷೆಯಲ್ಲಿಯೇ ಹೇಳುತ್ತಾರೆ.

ಮಕ್ಕಳ ಕೈಯಲ್ಲಿ ಕೂಲಿ ಮಾಡಿಸಬೇಕೆ, ಬೇಡವೇ ಎನ್ನುವ ಗೊಂದಲದಲ್ಲಿರುವ ತಾಯಿ ಯಾವುದೇ ಪ್ರಶ್ನೆ ಕೇಳಿದರೂ  ಮೌನಳಾಗುತ್ತಾಳೆ.

ಉಚಿತ ಶಿಕ್ಷಣದೊಂದಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ನೀಡಿ ಪೋಷಕರಿಗೆ ಹೊರೆಯಾಗದಂತೆ ಸರ್ಕಾರ ಮಕ್ಕಳ ಕಲಿಕೆಗೆ ನೆರವು ನೀಡಿದೆ. ಆದರೂ ಗ್ರಾಮೀಣ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲ್ಯದಿಂದಲೇ ದುಡಿಮೆ ಮಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT