ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ

ಅತ್ಯಾಚಾರ ಪ್ರಕರಣ: ರಾಜಧಾನಿಯಲ್ಲಿ ಮುಂದುವರಿದ ಪ್ರತಿಭಟನೆ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಅತ್ಯಾಚಾರಕ್ಕೊಳಗಾಗಿದ್ದ ಐದು ವರ್ಷದ ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಕೆ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾಳೆ ಎಂದು  ವೈದ್ಯರು ತಿಳಿಸಿದ್ದಾರೆ.

`ಬಾಲಕಿಯ ದೇಹದಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ರೋಗನಿರೋಧಕ ಔಷಧಕ್ಕೆ ಆಕೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾಳೆ. ಇನ್ನೆರಡು ವಾರದಲ್ಲಿ ಆಸ್ಪತ್ರೆಯಿಂದ ಆಕೆಯನ್ನು ಬಿಡುಗಡೆಗೊಳಿಸುತ್ತೇವೆ' ಎಂದು ಎಐಐಎಂಎಸ್‌ನ ವೈದ್ಯಕೀಯ ಅಧೀಕ್ಷಕ ಡಾ. ಡಿ.ಕೆ.ಶರ್ಮಾ ಹೇಳಿದ್ದಾರೆ.

`ಬಾಲಕಿಗೆ ಪ್ರಜ್ಞೆ ಬಂದಿದೆ. ತಂದೆ-ತಾಯಿಯರು, ದಾದಿಯರು, ವೈದ್ಯರೊಂದಿಗೆ ಮಾತನಾಡುತ್ತಾಳೆ. ಇಡೀ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದಾಳೆ. ಸ್ವಲ್ಪ ಜ್ವರ ಇದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ' ಎಂದು ಶರ್ಮಾ ವಿವರಿಸಿದ್ದಾರೆ.

ಮುಂದುವರಿದ ಪ್ರತಿಭಟನೆ: ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರತಿಭಟಿಸಿ ರಾಜಧಾನಿಯ ಬೀದಿಗಳಲ್ಲಿ ಎರಡನೇ ದಿನವೂ ಪ್ರತಿಭಟನೆ ನಡೆಯಿತು.

  ಅತ್ಯಾಚಾರ ಪ್ರಕರಣ ವಿರೋಧಿಸಿ ಹಾಗೂ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಏಮ್ಸ ಮತ್ತು ಪೊಲೀಸ್ ಕೇಂದ್ರ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಕಾರ್ಯಕರ್ತೆಯರ ಬಂಧನ: ಬಾಲಕಿ ಮೇಲಿನ ಅತ್ಯಾಚಾರ ವಿರೋಧಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯ ಮಹಿಳಾ ಮೋರ್ಚಾದ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿದರು. ಅಶೋಕ ರಸ್ತೆಯಿಂದ ಜನಪಥ ರಸ್ತೆಯವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ಸೋನಿಯಾ ನಿವಾಸದ ಎದುರು ಧರಣಿ ಕುಳಿತಿದ್ದರು.

ರಸ್ತೆಯಲ್ಲೇ ಕುಳಿತು ಪ್ರತಿಭಟನೆ: ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಯುವ ಕಾರ್ಯಕರ್ತರು ಬ್ಯಾನರ್ ಹಿಡಿದು, ಘೋಷಣೆ ಕೂಗುತ್ತಾ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಕೇಂದ್ರ ಪೊಲೀಸ್ ಕಚೇರಿ ಎದುರು ಅಡ್ಡಗಟ್ಟೆಗಳನ್ನು ನಿಲ್ಲಿಸಲಾಯಿತು. ಇದಕ್ಕೂ ಬಗ್ಗದ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಬಾಲಕಿಯ ಪೋಷಕರು ದೂರು ನೀಡಿದ ನಂತರವೂ, ತನಿಖೆಗೆ ವಿಳಂಬ ಮಾಡಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಮಾನತು: ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಪೊಲೀಸ್ ಇಲಾಖೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಮತ್ತೊಬ್ಬ ವ್ಯಕ್ತಿಯ ಕೈವಾಡ ಶಂಕೆ: ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವ ಕುರಿತು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಆದರೆ ಅತ್ಯಾಚಾರ ಪ್ರಕರಣದಲ್ಲಿ ಎರಡನೇ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂಬ ಗಾಳಿ ಸುದ್ದಿಯನ್ನು ದೆಹಲಿ ಪೊಲೀಸ್ ವಕ್ತಾರ ರಾಜನ್ ಭಗತ್ ತಳ್ಳಿ ಹಾಕಿದ್ದಾರೆ.

ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ಮಾಡಿರುವ ಅಥವಾ ಆರೋಪಿ ಮನೋಜ್ ಕುಮಾರ್‌ಗೆ ನೆರವಾಗಿರುವ ಕುರಿತು ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಶನಿವಾರ ಬಿಹಾರದಲ್ಲಿ ಬಂಧಿಸಲಾಗಿರುವ ಆರೋಪಿ ಮನೋಜ್ ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವ ಕುರಿತು ಆತ ಯಾವುದೇ ಮಾಹಿತಿ ನೀಡಿಲ್ಲ. ವಿಚಾರಣೆ ಮುಂದುವರಿದಿದೆ' ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.

ಸುಷ್ಮಾ ಬೆಂಬಲಿಸಿದ ಸಿಪಿಎಂ

ನವದೆಹಲಿ (ಪಿಟಿಐ): ಅಪ್ರಾಪ್ತೆಯರ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಒತ್ತಾಯವನ್ನು ಬೆಂಬಲಿಸಿರುವ ಸಿಪಿಎಂ, ಇದು ಭವಿಷ್ಯದಲ್ಲಿ `ಮುಕ್ತ ಮಾದರಿ'ಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ ಈ ಶಿಕ್ಷೆಯನ್ನು ಪರಿಗಣಿಸುವ ಜೊತೆಗೆ, ಚರ್ಚೆಯನ್ನು ನಡೆಸಬೇಕಿದೆ. `ಕಾನೂನಿನ ಬಗ್ಗೆ ಸಮಾಜದಲ್ಲಿ ಭಯವಿಲ್ಲದಂತಾಗಿದ್ದು, ಎಲ್ಲೋ ಒಂದು ಕಡೆ ಸಮಾಜ ದಾರಿ ತಪ್ಪುತ್ತಿದೆ' ಎಂದು ಸಿಪಿಎಂ ನಾಯಕ ಸೀತಾರಾಂ ಯಚೂರಿ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

`ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಸಂಬಂಧ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯುವಂತೆ' ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಒತ್ತಾಯಿಸಿದ್ದರು.

ಆದಿವಾಸಿ ಮಹಿಳೆ ಮೇಲೆ ಅತ್ಯಾಚಾರ

ಛಾತ್ರ (ಜಾರ್ಖಂಡ್) (ಪಿಟಿಐ): 19 ವರ್ಷದ ಆದಿವಾಸಿ ಮಹಿಳೆ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ಇಲ್ಲಿನ ಛಾತ್ರಾ ಜಿಲ್ಲೆಯಲ್ಲಿ ನಡೆದಿದೆ.

ರಾಮನವಮಿ ಮೆರವಣಿಗೆ ನೋಡಲು ಶುಕ್ರವಾರ ಛಾತ್ರಾ ಪಟ್ಟಣಕ್ಕೆ ಬಂದಿದ್ದ ಗೃಹಿಣಿಯನ್ನು ಮೂವರು ಯುವಕರು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಬಿರ್ತೆರಿ ಅವರು ತಿಳಿಸಿದ್ದಾರೆ.

ಆದಿವಾಸಿ ಮಹಿಳೆಯ ಹೇಳಿಕೆ ಅನ್ವಯ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT