ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಶಂಕಾಸ್ಪದ ಸಾವು

Last Updated 17 ಡಿಸೆಂಬರ್ 2012, 20:03 IST
ಅಕ್ಷರ ಗಾತ್ರ

ಬೆಂಗಳೂರು: ಒಂಬತ್ತು ವರ್ಷದ ಹರಿಣಿ ಎಂಬ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಎಚ್‌ಎಎಲ್ ಸಮೀಪದ ರಮೇಶ್‌ನಗರದಲ್ಲಿ ಸೋಮವಾರ ನಡೆದಿದೆ.

ರಮೇಶ್‌ನಗರ ನಿವಾಸಿ ಶ್ರೀಧರ್ ಮತ್ತು ಸರಸ್ವತಿ ಎಂಬುವರ ಪುತ್ರಿ ಹರಿಣಿ ವಿಮಾನಪುರದ ಈಸ್ಟ್ ಪ್ರೈಮರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು. ಶ್ರೀಧರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಪಾಠಕ್ಕೆ ಹೋಗಿದ್ದ ಹರಿಣಿಯ ಅಣ್ಣ ಸುಭಾಷ್ ತಿರುಗಿ ಮನೆಗೆ ಬಂದಾಗ, ಕೊಠಡಿಯಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ಸಂಜೆ ಆರು ಗಂಟೆ ಸುಮಾರಿಗೆ ನಾನು ಸಮೀಪದ ಅಂಗಡಿಗೆ ಹೋಗಿದ್ದೆ. ಮರಳಿ ಬರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಮಗ ಸುಭಾಷ್ ತಿಳಿಸಿದ. ವಿಷಯ ತಿಳಿದ ತಕ್ಷಣ ನನ್ನ ಎದೆ ಒಡೆದಂತಾಯಿತು. ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಕೊಠಡಿಯಲ್ಲಿ ದಿಂಬಿನ ಮೇಲೆ ನಿಂತು, ಕತ್ತಿಗೆ ವೇಲು ಸುತ್ತಿದ ಸ್ಥಿತಿಯಲ್ಲಿ ಶವವಿತ್ತು. ವೇಲ್‌ನ ಮತ್ತೊಂದು ತುದಿಯನ್ನು ಫ್ಯಾನ್‌ಗೆ ಕಟ್ಟಲಾಗಿತ್ತು. ಇದನ್ನು ನೋಡಿದರೆ ಆಕೆಯನ್ನು ಯಾರೋ ಕೊಲೆ ಮಾಡಿ ನಂತರ ನೇಣು ಹಾಕಲು ಯತ್ನಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ' ಎಂದು ತಾಯಿ ಸರಸ್ವತಿ ಹೇಳಿದರು.

`ಆಕೆ ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುತ್ತಿದ್ದಳು. ಮಂಗಳವಾರ ಶಾಲೆಯಲ್ಲಿ ಆಕೆಗೆ ಕಿರು ಪರೀಕ್ಷೆಯಿತ್ತು. ಆದರೆ, ಈಗ ಆಕೆ ಶವವಾಗಿ ಮಲಗಿದ್ದಾಳೆ. ಮುದ್ದು ಮಗಳನ್ನು ಕಳೆದುಕೊಂಡು ಮನಸ್ಸಿಗೆ ನೋವಾಗಿದೆ' ಎಂದು ಅವರು ತಮ್ಮ ದುಃಖ ತೋಡಿಕೊಂಡರು.

`ಮನೆಯ ಮುದ್ದಿನ ಮಗಳಾಗಿದ್ದ ಹರಿಣಿ ಸಾವಿನ ನೋವನ್ನು ತಡೆಯಲಾಗುತ್ತಿಲ್ಲ. ಆಕೆ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದಳು. ಆಕೆಯ ಸಾವಿನಿಂದ ಜೀವನದ ಸಂತೋಷವೇ ಕಳೆದಂತಾಗಿದೆ' ಎಂದು ಹರಿಣಿಯ ಅಜ್ಜಿ ಜಯಮ್ಮ ತಿಳಿಸಿದರು.

ಬಾಲಕಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ನಂತರ ಪ್ರಕರಣದ ಸತ್ಯ ಹೊರಬೀಳಲಿದೆ ಎಂದು ಎಚ್‌ಎಎಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT