ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ: ಪೋಷಕರ ಪ್ರತಿಭಟನೆ

Last Updated 4 ಡಿಸೆಂಬರ್ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಾಗರಭಾವಿಯ ಸೇಂಟ್ ಸೋಫಿಯಾ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ಬಾಲಕಿಗೆ  ಶಾಲಾ ವಾಹನದ ಕ್ಲೀನರ್ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಮಕ್ಕಳ ರಕ್ಷಣೆಗೆ ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ಅನಾಹುತ ನಡೆದಿದೆ. ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು' ಎಂದು ಆಗ್ರಹಿಸಿ ಮಕ್ಕಳ ಪೋಷಕರು ಮಂಗಳವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಶಾಲೆಯ ಪ್ರಾಂಶುಪಾಲರಾದ ಬಿ.ಕೆ.ಯೋಗೇಶ್ ಅವರ ಮೊಬೈಲ್‌ಗೆ ಸೋಮವಾರ ರಾತ್ರಿಯೇ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದೇನೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದ ಅವರು, ಮೌನಕ್ಕೆ ಶರಣಾಗಿದ್ದಾರೆ ಎಂದು ಮಗುವಿನ ತಾಯಿ ಸ್ಥಳೀಯರೊಂದಿಗೆ ಶಾಲೆ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು. ಈ ವಿಷಯ ತಿಳಿದು ಇತರ ವಿದ್ಯಾರ್ಥಿಗಳ ಪೋಷಕರೂ ಸಹ ಪ್ರತಿಭಟನೆಗೆ ಕೈಜೋಡಿಸಿದರು. `ಯಾವುದೇ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು, ಆತನ ಹಿನ್ನೆಲೆ ತಿಳಿಯುವುದು ಸಂಸ್ಥೆಯ ಕರ್ತವ್ಯ.

ಈ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿರುವುದು ಘಟನೆಗೆ ನೇರ ಕಾರಣ. ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಅಧಿಕಾರಿಗಳು ತಟಸ್ಥ ನಿಲುವು ತಾಳುತ್ತಿರುವುದು ಇತರ ಪೋಷಕರ ಆಘಾತಕ್ಕೆ ಕಾರಣವಾಗಿದೆ' ಎಂದು ಸೇಂಟ್ ಸೋಫಿಯಾ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ತಂದೆ ಮಂಜುನಾಥ್ ಅಭಿಪ್ರಾಯಪಟ್ಟರು.

`ಮಕ್ಕಳ ರಕ್ಷಣೆಗೆ ಆಡಳಿತ ಮಂಡಳಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಆಡಳಿತ ಮಂಡಳಿ ಸಹಕರಿಸಲಿದೆ. ಪೋಷಕರು ಗಾಬರಿಯಾಗುವುದು ಬೇಡ' ಎಂದು ಶಾಲೆಯ ಸಂಚಾಲಕಿ ಮಂಜುಳಾ ಶರ್ಮಾ ಹೇಳಿದರು.

ಮಕ್ಕಳ ನ್ಯಾಯಾಲಯ ಸ್ಥಾಪನೆಯಾಗಬೇಕು
`ಮಕ್ಕಳ ಮೇಲೆ ದೌರ್ಜನ್ಯ ನಡೆಸಿಯೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹದು ಎಂಬ ಮನೋಭಾವದಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳ ಮೇಲೆ ನಡೆಯುವ ಬಹುಪಾಲು ದೌರ್ಜನ್ಯಗಳು ವಿವಿಧ ಕಾರಣಗಳಿಂದಾಗಿ ಬೆಳಕಿಗೆ ಬರುವುದೇ ಇಲ್ಲ. ಇಂತಹ ಪ್ರಕರಣಗಳಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಬೇಕು. ಆರೋಪಿಗಳಿಗೆ ಶಿಕ್ಷೆ ನೀಡಲು ಪ್ರತಿ ಜಿಲ್ಲೆಯಲ್ಲೂ ಮಕ್ಕಳ ನ್ಯಾಯಾಲಯಗಳು ಸ್ಥಾಪನೆಯಾಗಬೇಕು. ಶಿಕ್ಷೆಯ ಭಯದಿಂದಾದರೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬಹುದು' ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಅಧ್ಯಕ್ಷ ವಾಸುದೇವ ಶರ್ಮ ಅಭಿಪ್ರಾಯಪಟ್ಟರು.

`ವ್ಯವಸ್ಥೆಯಲ್ಲಿ ಮಕ್ಕಳ ರಕ್ಷಣಾ ನೀತಿಗಳು ಜಾರಿಯಾಗಬೇಕು. ಮಕ್ಕಳ ಬಗ್ಗೆ ಆತ್ಮೀಯ ಭಾವವೇ ಜನರಲ್ಲಿ ಮರೆಯಾಗುತ್ತಿದೆ. ಮಗುವಿನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ದೃಢಪಟ್ಟರೆ ಕೇವಲ ಆರೋಪಿ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವುದು ಸರಿಯಲ್ಲ. ಶಾಲೆ ಆಡಳಿತ ಮಂಡಳಿ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆತನ ಪೂರ್ವಾಪರ ತಿಳಿಯದೇ ಕೆಲಸಕ್ಕೆ ತೆಗೆದುಕೊಂಡಿರುವುದು ಆಡಳಿತ ಮಂಡಳಿಯ ತಪ್ಪು' ಎಂದು ಹೇಳಿದರು.

ಹಿಂದಿನ ಪ್ರಕರಣಗಳು
* ನಾಗರಾಜ್ ಎಂಬಾತ ಜೂ.16ರಂದು ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ನಗರದ ವೈಟ್‌ಫೀಲ್ಡ್ ಸಮೀಪದ ನೆಲ್ಲೂರಹಳ್ಳಿ ಕೆರೆಗೆ ಎಸೆದಿದ್ದ.

* ಮಂಜುನಾಥ್ ಎಂಬಾತ ಜುಲೈ, 07 ರಂದು ಎಂಟು ವರ್ಷದ ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿರುವ ಘಟನೆ ಬಿಳೇಕಹಳ್ಳಿಯಲ್ಲಿ ನಡೆದಿತ್ತು.

* ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ನ.25, 2011ರಂದು ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗಳ ಮೇಲೆ ಅತ್ಯಾಚಾಕ್ಕೆ ಯತ್ನಿಸಿದ್ದ.

* ಸದಾಶಿವ ನಗರದಲ್ಲಿ ಜುಲೈ 12, 2011 ರಂದು ನೇಪಾಳ ಮೂಲದ ವಿಕ್ರಂ ಜೋಷಿ ಎಂಬಾತ ಹದಿನೈದು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ.

* ಈಸ್ಟ್ ಎಂಡ್ ರಸ್ತೆಯಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ ವಾಹನದ ಚಾಲಕ ರಾಜು ಎಂಬಾತ ಅತ್ಯಾಚಾರ ಎಸಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT