ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯಿಂದ ಹಣ ಕೀಳಲು ಯತ್ನಿಸಿದವನಿಗೆ ಏಟು

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಕಿಯಿಂದ ಹಣ ಕಿತ್ತುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಅಪಹರಣಕಾರನೆಂದು ಭಾವಿಸಿದ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬ್ಯಾಟರಾಯನಪುರದ ಬಾಪೂಜಿನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

`ಚಿಂದಿ ಆಯುವ ಶ್ರೀನಿವಾಸ್ ಸಾರ್ವಜನಿಕರಿಂದ ಏಟು ತಿಂದ ವ್ಯಕ್ತಿ. ಬೆಳಿಗ್ಗೆ ಬಾಪೂಜಿನಗರದಲ್ಲಿ ಚಿಂದಿ ಆಯುತ್ತಿದ್ದ ಶ್ರೀನಿವಾಸ್, ಮನೆಯ ಹೊರಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಸಯೀದಾ ಎಂಬ ಬಾಲಕಿಯ ಕೈಯಲ್ಲಿದ್ದ ಐದು ರೂಪಾಯಿ ನೋಟನ್ನು ಕಿತ್ತುಕೊಳ್ಳಲು ಯತ್ನಿಸಿದ.

ಬಾಲಕಿ ಜೋರಾಗಿ ಕೂಗಿಕೊಂಡಾಗ ಅಲ್ಲಿದ್ದ ಜನರು ಶ್ರೀನಿವಾಸ್‌ನನ್ನು ಅಪಹರಣಕಾರನೆಂದು ಭಾವಿಸಿ ಬೆನ್ನಟ್ಟಿ ಹಿಡಿದು ಹೊಡೆದಿದ್ದಾರೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

 `ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣ ಕಿತ್ತುಕೊಳ್ಳಲು ಯತ್ನಿಸಿದ್ದಾಗಿ ಹೇಳಿದ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂದಿ ಆಯುವ ಆತ ಫುಟ್‌ಪಾತ್‌ನಲ್ಲಿ ಮಲಗುತ್ತಾನೆ. ಆತನಿಗೆ ನಿರ್ದಿಷ್ಟ ವಿಳಾಸವಿಲ್ಲ~ ಎಂದು ಅವರು ಹೇಳಿದ್ದಾರೆ.

ಬಂಧನ
ಆನೆ ದಂತ ಮಾರುತ್ತಿದ್ದ ಆರೋಪದ ಮೇಲೆ ಕನಕಪುರ ತಾಲ್ಲೂಕಿನ ಕರಿಯಪ್ಪ (40) ಎಂಬಾತನನ್ನು ಬಂಧಿಸಿರುವ ಸಿಐಡಿ ಅರಣ್ಯ ಘಟಕದ ಪೊಲೀಸರು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಯಲಹಂಕದ ಕೋಗಿಲು ಕ್ರಾಸ್ ಬಳಿ ಆನೆ ದಂತೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಲಾಯಿತು. ಆತನ ಜತೆಗಿದ್ದ ಮತ್ತೊಬ್ಬ ಆರೋಪಿ ತಮಿಳುನಾಡಿನ ತಿಮ್ಮೇಗೌಡ ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಿಮ್ಮೇಗೌಡನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬಂಧಿತನ ವಿರುದ್ಧ ಯಲಹಂಕ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಾಹನ ಡಿಕ್ಕಿ - ಸಾಫ್ಟ್‌ವೇರ್  ಎಂಜಿನಿಯರ್ ಸಾವು
 ವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಕಚೇರಿ ಮುಂದೆ ನಿಂತಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ದಾರುಣ ಘಟನೆ ಮಡಿವಾಳದ ಗಾರ‌್ವೆಬಾವಿಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನಾಗವಾರ ನಿವಾಸಿ ವಿನಯ್ ಕುಮಾರ್ (25) ಮೃತಪಟ್ಟವರು. ಅವರು ಗಾರ‌್ವೆಬಾವಿಪಾಳ್ಯದಲ್ಲಿರುವ ಹಿಂದೂಜಾ ಗ್ಲೋಬಲ್ ಸಲೂಷನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ರಾತ್ರಿ ಹತ್ತು ಗಂಟೆ ಸುಮಾರಿಗೆ ಕೆಲಸ ಮುಗಿಸಿದ ಅವರು ವಾಹನಕ್ಕಾಗಿ ಕಾಯುತ್ತ ಕಚೇರಿಯ ಹೊರಗೆ ನಿಂತಿದ್ದರು. ಅವರ ಗೆಳೆಯರಾದ ಸಾಗರ್ ಮತ್ತು ವೆಂಕಟರಾವ್ ಸಹ ಜತೆಗಿದ್ದರು. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಸರ್ವೀಸ್ ರಸ್ತೆಯಲ್ಲಿ ಬಂದ ಚಾಲಕ, ವಿನಯ್ ಅವರಿಗೆ ವಾಹನ ಗುದ್ದಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ್ ಮತ್ತು ವೆಂಕಟರಾವ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಎಲ್ಲ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಗಿ ಬರುತ್ತೇನೆ ಎಂದಿದ್ದರು: ಬಳ್ಳಾರಿಯ ವಿನಯ್ ಅವರು ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ದೀಪಾವಳಿ ಹಬ್ಬಕ್ಕೆ ಅವರು ಊರಿಗೆ ಹೊರಟಿದ್ದರು. ಕೆಲಸ ಮುಗಿಸಿದ ಅವರು ಕಂಪೆನಿಯಿಂದ ಹೊರಗೆ ಬರುವ ಮುನ್ನ `ದೀಪಾವಳಿಗೆ ಹಬ್ಬಕ್ಕೆ ಹೋಗುತ್ತಿದ್ದೇನೆ.

ಹಬ್ಬದ ನಂತರ ಮರಳುತ್ತೇನೆ~ ಎಂದು ಸಹೋದ್ಯೋಗಿಗಳಿಗೆ ಹೇಳಿದ್ದರು. ಕಚೇರಿಯಿಂದ ಹೊರಗೆ ಬಂದ ಕೆಲ ಹೊತ್ತಿನಲ್ಲಿ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT