ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಬಡಕರಾದ ದಲಿತ ನಾಯಕರು: ವಿಷಾದ

Last Updated 7 ಡಿಸೆಂಬರ್ 2013, 6:49 IST
ಅಕ್ಷರ ಗಾತ್ರ

ಕೊಪ್ಪಳ: ಪ್ರತಿಗಾಮಿ ಶಕ್ತಿಗಳಾಗಬೇಕಿದ್ದ ದಲಿತ ನಾಯಕರು ರಾಜಕಾರಣಿಗಳ, ಮೇಲ್ಜಾತಿಯವರ ಬಾಲಬುಡಕರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮೂರ್ತಿ ಕಿಡಿಕಾರಿದರು.

ಶುಕ್ರವಾರ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಎನ್‌.ಮೂರ್ತಿ ಸ್ಥಾಪಿತ) ಗುಲ್ಬರ್ಗ ವಿಭಾಗೀಯ ಶಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಡಾ.ಬಿ.ಆರ್‌.ಅಂಬೇಡ್ಕರ್‌ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತರ ಮೀಸಲಾತಿಯಿಂದ ಗೆದ್ದು ಶಾಸಕ, ಸಂಸದರಾದವರು ದಲಿತರ ಧ್ವನಿಯಾಗಬೇಕಿತ್ತು. ಆದರೆ, ಈ ಸಮುದಾಯದ ನಿರೀಕ್ಷೆಗೆ ತಕ್ಕಂತೆ ಅವರು ಇಲ್ಲ. ದಲಿತರ ಧ್ವನಿಗೆ ದಲಿತ ಜನಪ್ರತಿನಿಧಿಗಳು ಹೋರಾಡದಿದ್ದರೆ ಈ ಸಮುದಾಯದ ಜನ ಅವರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಗುಡುಗಿದರು.

ಮಡೆಸ್ನಾನದ ಕುರಿತು ಮಾತನಾಡಿದ ಅವರು, ಒಂದು ವೇಳೆ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳಾಡಿ ಚರ್ಮರೋಗಗಳು ಗುಣವಾಗುವುದಾದರೆ ದಲಿತ ಸಮುದಾಯದ ಶ್ರಮಿಕ ವರ್ಗದ ಎಂಜಲೆಲೆಗಳ ಮೇಲೆ ಉರುಳಾಡಲಿ. ಅದರ ಬದಲು ಮೌಢ್ಯಬಿತ್ತಿ ಎಂಜಲೆಲೆಯ ಮೇಲೆ ಉರುಳಾಡಿಸುವ ಬ್ರಾಹ್ಮಣವರ್ಗದ ಪ್ರವೃತ್ತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಅವರಿಗೆ ಅನ್ನ ಸಿಗದಂತಾದೀತು ಎಂದು ಹೇಳಿದರು.

ಜಾತಿ ವ್ಯವಸ್ಥೆಯನ್ನು ಇಡಿಯಾಗಿ ಸಂಕಲಿಸಿರುವುದೇ ಹಿಂದೂಧರ್ಮ. ಮಠಗಳನ್ನು ಮುಚ್ಚಿದರೆ ಮೂಢನಂಬಿಕೆ ಹೊರಟುಹೋಗುತ್ತದೆ. ಮಡೆಸ್ನಾನ ನಿಲ್ಲಿಸಬೇಕು. ಅದರ ಹೆಸರಿನಲ್ಲಿ ಮಾನವೀಯತೆಯ ಮೇಲಾಗುತ್ತಿರುವ ಅಪಮಾನ ತಡೆಗಟ್ಟಬೇಕು ಎಂದು ಕೋರಿದರು.

ಅಂಬೇಡ್ಕರ್‌ ನಮಗೆ ರಾಜಕೀಯ ಮೀಸಲಾತಿ ನೀಡಿದರು. ಆದರೆ ನಮ್ಮ ಜನರಿಗೆ ಮತ ಜಾಗೃತಿ ಇಲ್ಲದೇ ಹೋಯಿತು. ದಲಿತ ಸಮುದಾಯದ 35 ಜನ ಶಾಸಕರು ಆ ಸಮುದಾಯಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಹಿಂದೂ ಧರ್ಮದ ಮೌಢ್ಯಗಳನ್ನು ಕಂಡು ಬೇಸರಗೊಂಡು ಕೊನೆಗೆ ಬೌದ್ಧಧರ್ಮಕ್ಕೆ ಶರಣಾದರು. ಅವರು ನೀಡಿದ ಸಂವಿಧಾನಕ್ಕೆ ಕೋಮುವಾದಿ, ಜಾತಿವಾದಿ ಶಕ್ತಿಗಳು ತಿದ್ದುಪಡಿತರಲು ಸಾಕಷ್ಟು ಪ್ರಯತ್ನ ಮಾಡಿದವು. ಆದರೆ, ಅಂಬೇಡ್ಕರ್‌ ಚಿಂತನೆ ಪ್ರಕಾರ ಈ ದೇಶದ ಶೋಷಿತರು ಮೇಲೆ ಬಂದರೆ ಇಡೀ ದೇಶ ಉದ್ಧಾರವಾಗುತ್ತದೆ ಎಂಬುದಾಗಿತ್ತು ಎಂದು ಸ್ಮರಿಸಿದರು.

ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್‌ ಎಸ್‌.ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಮುದೇಗೌಡ ನಾಗನಗೌಡ ಪಾಟೀಲ್‌, ಸಂಘಟನೆಯ ಗುಲ್ಬರ್ಗ ವಿಭಾಗೀಯ ಶಾಖೆಯ ಅಧ್ಯಕ್ಷ ಬಸವರಾಜ ಸಾಸಲಮರಿ ಇದ್ದರು. ಹನುಮಂತಪ್ಪ ಹಿರೇಸಿಂಧೋಗಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ಬಗನಾಳ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT