ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿ ಒಪ್ಪಂದಕ್ಕೆ ಅನುಮೋದನೆ

ಭಾರತದ ಆಹಾರ ಭದ್ರತಾ ಯೋಜನೆ ಸಬ್ಸಿಡಿಗೆ ತಡೆ ಇಲ್ಲ
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನೂಸಾ ದುವಾ (ಇಂಡೋನೇಷ್ಯಾ) (ಐಎಎನ್‌ಎಸ್‌): ಜಾಗತಿಕ ವಾಣಿಜ್ಯ ವಹಿವಾಟು ನಿಯಮಾವಳಿಗಳನ್ನು ಇನ್ನಷ್ಟು ಉದಾರೀಕರಣಗೊಳಿಸುವ ಹಾಗೂ ಅಂತರ ರಾಷ್ಟ್ರೀಯ ಆರ್ಥಿಕತೆಗೆ ಸುಮಾರು 1 ಲಕ್ಷ ಕೋಟಿ ಡಾಲರ್‌ ಹಣ (ಸುಮಾರು ₨ 62 ಲಕ್ಷ ಕೋಟಿ) ಹರಿಸಲಿದೆ ಎಂದು ಅಂದಾಜಿಸಲಾಗಿರುವ ಒಪ್ಪಂದಕ್ಕೆ ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲುಟಿಒ) 159 ಸದಸ್ಯ ರಾಷ್ಟ್ರಗಳು ಶನಿವಾರ ಅನುಮೋದನೆ ನೀಡಿವೆ.

‘ಬಾಲಿ ಪ್ಯಾಕೇಜ್‌’ ಎಂದು ಕರೆಯಲಾಗಿರುವ ಈ ಒಪ್ಪಂದದಿಂದಾಗಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರವು ಆಹಾರ ಭದ್ರತೆ ಯೋಜನೆಗೆ ಅಡೆತಡೆ ಯಿಲ್ಲದೆ ಸಬ್ಸಿಡಿ ನೀಡಬಹುದಾಗಿದೆ.

ಡಬ್ಲುಟಿಒ 1995ರಲ್ಲಿ ಸ್ಥಾಪನೆಯಾದ ನಂತರ ಯಶಸ್ವಿಯಾಗಿ ಏರ್ಪಟ್ಟಿರುವ ಮೊತ್ತಮೊದಲ ಒಪ್ಪಂದ ಇದಾಗಿದೆ. ‘ನಮ್ಮ ಕಾಲಘಟ್ಟದಲ್ಲಿ ಡಬ್ಲುಟಿಒ ಮೊದಲ ಬಾರಿಗೆ ನಿಜವಾದ ಯಶಸ್ಸು ಸಾಧಿಸಿದೆ’ ಎಂದು ಸಂಘಟನೆಯ ಮಹಾ ನಿರ್ದೇಶಕ ರಾಬರ್ಟೊ ಅಜೆವ್ಯಾಡೊ ಸಂತಸ ವ್ಯಕ್ತಪಡಿಸಿದ್ದಾರೆ.

‘ಡಬ್ಲುಟಿಒ ಸ್ಥಾಪನೆ ಹಿಂದಿನ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವಂತೆ ನಾನು ಸದಸ್ಯ ರಾಷ್ಟ್ರಗಳಿಗೆ ಸವಾಲು ಹಾಕಿದ್ದೆ. ನೀವು ಇಚ್ಛಾಶಕ್ತಿ ಪ್ರದರ್ಶಿಸಿದ್ದೀರಿ. ಇದಕ್ಕಾಗಿ ನಿಮಗೆಲ್ಲಾ ಧನ್ಯವಾದಗಳು’ ಎಂದು ಅಜೆವ್ಯಾಡೊ 9ನೇ ಸಚಿವರ ಸಮಾವೇಶದ ಸಮಾರೋಪ ಸಮಾ ರಂಭದಲ್ಲಿ ಹೇಳಿದರು.

ಭಾರತ ಸೇರಿದಂತೆ ಬಹುತೇಕ ಸದಸ್ಯ ರಾಷ್ಟ್ರಗಳು ಶುಕ್ರವಾರದ ಸಭೆಯಲ್ಲೇ ಈ ಒಪ್ಪಂದಕ್ಕೆ ಅನು ಮೋದನೆ ನೀಡಿದ್ದವು. ಆದರೆ, ಕ್ಯೂಬಾ ನೇತೃತ್ವದಲ್ಲಿ ಕೆಲವು ರಾಷ್ಟ್ರಗಳು ಒಪ್ಪಂದಕ್ಕೆ ತಡೆಯೊಡ್ಡುವ ಬೆದರಿಕೆ ಹಾಕಿದ್ದವು.

ಹೀಗಾಗಿ ಶುಕ್ರವಾರ ಮುಗಿಯಬೇಕಿದ್ದ ಸಭೆಯನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿ, 15 ಗಂಟೆಗಳ ಕಾಲ ಮಾತುಕತೆ ನಡೆಸಿದ ನಂತರ ಕ್ಯೂಬಾ ಕೂಡ ಅನುಮೋದನೆ ನೀಡಿತು.

ಭಾರತದ ನಿಯೋಗದ ನೇತೃತ್ವ ವಹಿಸಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್‌ ಶರ್ಮಾ ಅವರು ಮಾತನಾಡಿ, ‘ಬಾಲಿ ಒಪ್ಪಂದವು ಸಕಾರಾತ್ಮಕ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಈ ಮುಂಚೆ ದೋಹಾದಲ್ಲಿ ನಡೆದಿದ್ದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಕೆಲವು ವಿಷಯಗಳನ್ನಷ್ಟೇ ಆಯ್ದು ಅದಕ್ಕೆ ‘ಬಾಲಿ ಒಪ್ಪಂದ’ದಲ್ಲಿ ಅಂಗೀಕಾರ ನೀಡಲಾಗಿದೆ.

‘ಈಗ ಮೊದಲ ಸುತ್ತಿನ ಒಪ್ಪಂದ ಯಶಸ್ವಿಯಾಗಿದೆ. ಇನ್ನು, ಮುಂದೆ ಏರ್ಪಡಬೇಕಿರುವ ಒಪ್ಪಂದಗಳ ಬಗ್ಗೆ ಗಮನಹರಿಸೋಣ’ ಎಂದೂ ಡಬ್ಲುಟಿಒ ಮುಖ್ಯಸ್ಥ ಅಜೆವ್ಯಾಡೊ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇಂಡೋನೇಷ್ಯಾ ವಾಣಿಜ್ಯ ಸಚಿವರಾದ ಗೀತಾ ವೀರ್‌ಜವಾನ್‌ ಅವರೂ ಒಪ್ಪಂದ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಯಾವುದನ್ನು ಸಾಧಿಸ ಲಾಗದು ಎಂದು ಹಲವರು ಅಂದುಕೊಂಡಿದ್ದರೋ ಅದನ್ನು ಸಾಧಿಸಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಡಿ.4ರಿಂದ ಹಗಲಿರುಳೂ ನಡೆದ ಸತತ ಮಾತುಕತೆಗಳ ನಂತರ ಈ ಒಪ್ಪಂದ ಏರ್ಪಟ್ಟಿದೆ ಎಂದು ಡಬ್ಲುಟಿಒ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT